ಎಲ್ಲರಿಗೂ ಮಾದರಿ ಈ ಚೆಲುವೆಯ ಕತೆ, ಇಂಡೋ-ಟಿಬೇಟಿಯನ್ ಗಡಿ ಪೊಲೀಸ್ ಪಡೆದ ಮೊದಲ ಮಹಿಳೆ ಈಕೆ!

ದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದು ವೇದಿಕೆಗಳ ಮೇಲೆ ರಾರಾಜಿಸಿದ್ದು ಒಂದೇ ಮಾತು… ಮಹಿಳೆ ಇನ್ನೂ ಅಬಲೆಯಾಗಿಯೇ ಉಳಿದಿದ್ದಾಳೆ, ಆಕೆ ನಾಲ್ಕು ಗೋಡೆಯ ಮಧ್ಯದಿಂದ ಹೊರಬರಬೇಕು, ಸಾಮಾಜಿಕ ಸ್ಥಾನಮಾನ, ಸಮಾನತೆ ನೀಡಬೇಕು… ಹೀಗೆ ತರಹೇವಾರಿ ನಕಾರಾತ್ಮಕ ಮಾತುಗಳೇ ಕೇಳಿಬಂದಿವೆ, ಮುಂದೆಯೂ ಬರುತ್ತವೆ.
ಆದರೆ ಇಂತಹ ನಕಾರಾತ್ಮಕ ಹಾಗೂ ಸತ್ಯಕ್ಕೆ ಹತ್ತಿರವಿರುವ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ಮದುವೆ, ಜೀವನದ ಮಧುರ ಕ್ಷಣ ಅನುಭವಿಸುವ ವಯಸ್ಸಿನಲ್ಲಿ, ಅಂದರೆ 25ನೇ ವಯಸ್ಸಿನಲ್ಲೇ ಯುವತಿಯೊಬ್ಬಳು ಎಲ್ಲ ಮಹಿಳೆಯರಿಗೂ ಸ್ಫೂರ್ತಿಯಾಗುವ ಸಾಧನೆ ಮಾಡಿದ್ದಾಳೆ.
ಹೌದು, ಬಿಹಾರದ ಸಮಸ್ತಿಪುರದ ಪ್ರಕೃತಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂಡೋ-ಟಿಬೇಟಿಯನ್ ಗಡಿ ಪೊಲೀಸ್ ಪಡೆಯ ಪ್ರಥಮ ಮಹಿಳಾ ಅಧಿಕಾರಿಯಾಗಿ ಆಯ್ಕೆಯಾಗಿದ್ದು, ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿವೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2016ರಲ್ಲಿ ಭದ್ರತಾ ಪಡೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದು, ಇದೇ ವರ್ಷ ಪ್ರಕೃತಿ ಯುಪಿಎಸ್ ಸಿ ನಡೆಸಿದ ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ದಳ ಪರೀಕ್ಷೆ ಬರೆದಿದ್ದರು. ಅಷ್ಟೇ ಅಲ್ಲ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾದರು. ಗೊತ್ತಿರಲಿ, ಪರೀಕ್ಷೆಯಲ್ಲಿ ತೇರ್ಗಡೆಯಾದ ಏಕೈಕ ಮಹಿಳೆ ಪ್ರಕೃತಿಯೇ!
ಈಗ ನೇಮಕ ಪ್ರಕ್ರಿಯೆ ಎಲ್ಲ ಮುಗಿದಿದ್ದು, ಐಟಿಬಿಪಿ ಪಡೆಯ ಕಂಬಾಟ್ ಅಧಿಕಾರಿಯಾಗಿ ಪ್ರಕೃತಿ ಆಯ್ಕೆಯಾಗಿದ್ದಾಳೆ. ಶೀಘ್ರದಲ್ಲೇ ಡೆಹ್ರಾಡೂನ್ ನಲ್ಲಿರುವ ಅಧಿಕಾರಿಗಳ ತರಬೇತಿ ಕೇಂದ್ರಕ್ಕೆ ಸೇರಲಿದ್ದಾರೆ. ತರಬೇತಿ ಬಳಿಕ ಸಹಾಯಕ ಕಮಾಂಡಂಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆ ಇನ್ನೂ ಅಬಲೆ ಎಂದು ಯೋಚಿಸುವ ಬದಲು ಪ್ರಕೃತಿಯಂತಹ ದಿಟ್ಟೆಯನ್ನು ಮಾದರಿಯಾಗಿಟ್ಟುಕೊಂಡರೆ ನಮ್ಮ ಯುವತಿಯರು ಮಹತ್ ಸಾಧನೆ ಮಾಡಬಲ್ಲರು. ಅದಕ್ಕೆಪ್ರಕೃತಿಯೇ ಸಾಕ್ಷಿ ಹಾಗೂ ನಿದರ್ಶನ.
Leave A Reply