ಹೋರ್ಡಿಂಗ್ಸ್ ಗೆ “ಕೈ” ಹಾಕಿ, ಪಾಲಿಕೆಯ ಆದಾಯ ಹೆಚ್ಚಿಸಿ ನೂತನ ಮೇಯರ್!!
ಪ್ರಚಾರ ಜಾಸ್ತಿ ಮಾಡುತ್ತಾ ಕೆಲಸ ಕಡಿಮೆ ಮಾಡುವುದಾ ಅಥವಾ ಕೆಲಸ ಜಾಸ್ತಿ ಮಾಡಿ ಪ್ರಚಾರ ಕಡಿಮೆ ಮಾಡುವುದಾ ಎನ್ನುವುದನ್ನು ನೂತನ ಮೇಯರ್ ಭಾಸ್ಕರ್ ಮೊಯಿಲಿ ಅವರು ಮೊದಲು ನಿರ್ಧರಿಸಬೇಕು. ನೀವು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋಗಿ ಪ್ರಚಾರ ತನ್ನಿಂದ ತಾನೇ ಆಗುತ್ತದೆ. ಮೀಡಿಯಾದವರನ್ನು “ಚೆನ್ನಾಗಿಟ್ಟು” ಕರೆದುಕೊಂಡು ಹೋಗಿ ದಾಳಿ, ಪರಿಶೀಲನೆ ಮಾಡಿದರೆ ಪೇಪರ್, ಟಿವಿಯಲ್ಲಿ ನೋಡಿದವರು ಆ ಕ್ಷಣಕ್ಕೆ ಹೊಗಳಬಹುದು ಬಿಟ್ಟರೆ ನಗರಕ್ಕೆ ಏನು ಲಾಭ ಆಗುವುದಿಲ್ಲ. ಅದರ ಬದಲು ಭಾಸ್ಕರ್ ಮೊಯಿಲಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಯಾವ ಮೇಯರ್ ಗೆ ಆಗಲಿಲ್ಲ, ಆ ಕೆಲಸವನ್ನು ಮಾಡಬೇಕು.
ಮೊದಲನೇಯದಾಗಿ ಅನಧಿಕೃತ ಕಟ್ಟಡಗಳ ನಿರ್ಮಾಣಗಳಿಗೆ ಒಂದು ಗತಿ ಕಾಣಿಸಬೇಕು. ಪಾರ್ಕಿಂಗ್ ಗಾಗಿ ಮೀಸಲಿಟ್ಟ ಜಾಗದಲ್ಲಿ ಎಲ್ಲಿಯವರೆಗೆ ಅಂದರೆ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲಾಗಿದೆ. ಆದರೂ ಕೂಡ ಪಾಲಿಕೆ ಏನು ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಆ ಕಟ್ಟಡಗಳಿಗೆ ಬರುವ ವಾಹನಗಳು ರಸ್ತೆಯಲ್ಲಿ ನಿಲ್ಲಬೇಕಾಗುತ್ತದೆ. ಪಾರ್ಕಿಂಗ್ ನಲ್ಲಿ ಬಾರ್ ನಿರ್ಮಾಣವಾಗಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಪಾಲಿಕೆಯ ಕಣ್ಣನ್ನು ಭಾಸ್ಕರ್ ಮೊಯಿಲಿ ತೆರೆಯಲೇಬೇಕಾಗಿದೆ. ಹಿಂದಿನ ಮೇಯರ್ ಗಳು ಜಾಣ ಕುರುಡು ಪ್ರದರ್ಶಿಸಿರಬಹುದು ಅಥವಾ ಅವರ ಅನಿವಾರ್ಯತೆಯೂ ಇರಬಹುದು. ಹಾಗೆ ಪಾರ್ಕಿಂಗ್ ಅತಿಕ್ರಮಣ ಮಾಡಿರುವ ಕಟ್ಟಡಗಳ ಮಾಲೀಕರಿಗೆ ಬೇಕಾದರೆ ಮೊದಲು ನೋಟಿಸ್ ಕೊಡಲಿ. ಒಂದಿಷ್ಟು ದಿನ ಸಮಯ ಬೇಕಾದರೆ ಕೊಡಿ. ನಿಮ್ಮ ನೋಟಿಸನ್ನು ಕಟ್ಟಡಗಳ ಮಾಲೀಕರು ತಮ್ಮ ಕಪಾಟಿನ ಎಲ್ಲಿಯಾದರೂ ಮೂಲೆಯಲ್ಲಿ ಬಿಸಾಡುತ್ತಾರೆ ಎನ್ನುವುದು ಕೂಡ ಮೇಯರ್ ಅವರಿಗೆ ಗೊತ್ತಿರಲಿ. ಆದರೂ ಹಿಂಜರಿಯುವುದು ಬೇಡಾ. ಸೀದಾ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಹೋಗಿ ಅಕ್ರಮ ಕಟ್ಟಡಗಳನ್ನು ತೆರವು ಮಾಡಲು ಆದೇಶ ತೆಗೆದುಕೊಂಡು ಬರಬೇಕು. ಬಹುಶ: ಒಂದೆರಡು ಕಟ್ಟಡಗಳ ಅತಿಕ್ರಮಣ ತೆರವಾದರೆ ಉಳಿದವರು ಬಾಲ ಮುದುಡಿ ಒಳಗೆ ಇಡುತ್ತಾರೆ. ಇನ್ನು ಹೀಗೆ ಅತಿಕ್ರಮಣ ಮಾಡಿ ಕಟ್ಟಿದ್ದು, ಮೂರು ಅಂತಸ್ತಿಗೆ ಅನುಮತಿ ಪಡೆದು ನಾಲ್ಕು ಕಟ್ಟಿದ್ದು, ಪಾರ್ಕಿಂಗ್ ಜಾಗದಲ್ಲಿ ಅಂಗಡಿ ಕಟ್ಟಿದ್ದು ಎಲ್ಲದಕ್ಕೂ ಪಾಲಿಕೆಯವರು ತಾತ್ಕಾಲಿಕ ಡೋರ್ ನಂಬರ್ ಕೊಟ್ಟಿದ್ದಾರೆ. ಅದನ್ನು ಹೊಸ ಮೇಯರ್ ಮೊದಲು ರದ್ದು ಮಾಡಬೇಕು. ಒಂದು ವೇಳೆ ಯಾವುದಾದರೂ ಅಧಿಕಾರಿ ಶಾಶ್ವತ ಡೋರ್ ನಂಬ್ರ ಯಾವುದಾದರೂ ಅನಧಿಕೃತ ಕಟ್ಟಡಕ್ಕೆ ಕೊಟ್ಟಿದ್ದರೆ ಅದನ್ನು ರದ್ದು ಮಾಡಿ ಹಾಗೆ ನಿಯಮ ಉಲ್ಲಂಘಿಸಿದ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ಮೇಯರ್ ಒಬ್ಬರಿಗೆ ಏನೆಲ್ಲ ಮಾಡುವ ಅಧಿಕಾರ ಇದೆ ಎನ್ನುವುದನ್ನು ತೋರಿಸಲು ಭಾಸ್ಕರ್ ಮೊಯಿಲಿ ಅವರಿಗೆ ಸಿಕ್ಕಿರುವ ಅವಕಾಶ ಇದಾಗಿದೆ.
ಅಪವಿತ್ರ ಮೈತ್ರಿ ತೊಡೆದು ಹಾಕಬೇಕು….
ಇನ್ನು ಮೂರು ಬಾರಿ ಗೆದ್ದಿರುವ ನಿಮಗೆ ಪಾಲಿಕೆಯ ಒಳಹರಿವು ಹೇಗಿರುತ್ತೆ ಎಂದು ವಿವರಿಸುವ ಅಗತ್ಯ ಇಲ್ಲ. ಆದರೂ ಹೇಳ್ತಿನಿ. ಗುತ್ತಿಗೆದಾರರಿಗೂ ಪಾಲಿಕೆಯ ಇಂಜಿನಿಯರಿಂಗ್ ವಿಭಾಗದವರಿಗೂ ಒಂದೇ ತಟ್ಟೆಯಲ್ಲಿ ಊಟ ಮಾಡಿ ಅಭ್ಯಾಸ ಎನ್ನುವುದು ನಿಮಗೆ ಗೊತ್ತಿರುತ್ತದೆ. ಬೇಕಾದರೆ ಊಟವಾದ ನಂತರ ಕೈ ತೊಳೆಯುವುದು ಬೇಡಾ, ನಿನ್ನ ಕೈ ನಾನು ನೆಕ್ಕುತ್ತೇನೆ, ನನ್ನ ಕೈ ನೀನು ನೆಕ್ಕು, ಕ್ಲೀನ್ ಆಗುತ್ತದೆ ಎನ್ನುವಷ್ಟರ ಮಟ್ಟಿಗೆ ಇವರುಗಳ ನಡುವೆ ಅಂಡರ್ ಸ್ಟ್ಯಾಂಡಿಂಗ್ ಇದೆ. ಹಾಗಿರುವಾಗ ನೀವು ಮೊದಲು ಅದನ್ನು ಸರಿ ಮಾಡಲು ಮುಂದಾಗಬೇಕು. ಪಾಲಿಕೆಯ ಎರಡು ಅಂಗಗಳಂತಿರುವ ಗುತ್ತಿಗೆದಾರರು ಮತ್ತು ಇಂಜಿನಿಯರ್ಸ್ ಚೆನ್ನಾಗಿರುವುದು ತಪ್ಪಲ್ಲ. ಆದರೆ ಅದರಿಂದ ನಗರದಲ್ಲಿ ಆಗುವ ಕಳಪೆ ಕಾಮಗಾರಿಗಳನ್ನು ಅನುಭವಿಸುವವರು ನಾವಲ್ಲವೇ. ಇವರು ಅಲಿಖಿತ ಒಪ್ಪಂದ ಮಾಡಿಕೊಂಡು ಕಮೀಷನ್ ಹಂಚಿಕೊಂಡು ತಿಂದರೆ ಮಂಗಳೂರು ಎಲ್ಲಿ ಉದ್ಧಾರವಾಗುವುದು ಭಾಸ್ಕರ್ ಮೊಯಿಲಿ ಅವರೇ. ಗುತ್ತಿಗೆದಾರರ ಲಾಬಿಯನ್ನು ನೀವು ಮುರಿದರೆ ಅದನ್ನು ಪಾಲಿಕೆಯ ಇತಿಹಾಸ ಯಾವತ್ತೂ ನೆನಪಿಸಿಕೊಳ್ಳುತ್ತದೆ. ಒಂದು ವೇಳೆ ಯಾವುದೇ ಕಾಮಗಾರಿ ಕಳಪೆ ಆಗಿದ್ದು ತಮ್ಮ ಗಮನಕ್ಕೆ ಬಂದ ಕೂಡಲೇ ಬಿಲ್ ಮಂಜೂರು ಆಗುವುದನ್ನು ನೀವು ನಿಲ್ಲಿಸಬೇಕು.
ಸ್ಪೆಶಲ್ ಗ್ಯಾಂಗ್, ಟ್ಯಾಂಕರ್ ಅವ್ಯವಹಾರ ನಿಲ್ಲಿಸಿ…
ಇನ್ನು ಮೇಯರ್ ಅವರೇ, ಎಪ್ರಿಲ್, ಮೇ ಬಂತೆಂದರೆ ಪಾಲಿಕೆ ಸದಸ್ಯರಿಗೆ, ಅಧಿಕಾರಿಗಳಿಗೆ ನೀರು ಪೂರೈಕೆ ಮಾಡುವ ಟ್ಯಾಂಕರ್ ಗಳಿಂದ ಹಣ ಹೊಡೆಯೋ ಹೊತ್ತು. ಅದನ್ನು ನೀವು ನಿಲ್ಲಿಸಬೇಕು. ಇಮೋಶನಲ್ ಆಗಿ ನೀರಿನ ಹೆಸರು ಮುಂದಿಟ್ಟು ಹಣ ಮಾಡುವ ದಂಧೆಯನ್ನು ನೀವು ಈ ಬಾರಿ ನಿಲ್ಲಿಸಬೇಕು. ಅದರೊಂದಿಗೆ ಸೆಕೆಗಾಲ ಮುಗಿದ ಬಳಿಕ ಮಳೆಗಾಲ, ಅಲ್ಲಿ ಸ್ಪೆಶಲ್ ಗ್ಯಾಂಗ್ ನಿಂದ ಹಣ ಹೊಡೆಯುವ ಸುಗ್ಗಿಕಾಲ. ಅದನ್ನು ಕೂಡ ನೀವು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಮಳೆಗಾಲದ ಗ್ಯಾಂಗ್ ಒಂದು ದೊಡ್ಡ ಗೋಲ್ ಮಾಲ್. ಅಲ್ಲಿ ಹಣ ಉಳಿಸಿದರೆ ಅದೇ ಕೆಲವು ಲಕ್ಷ ಆಗುತ್ತದೆ.
ಇನ್ನು ನೀವು ಪಾಲಿಕೆಯ ಆದಾಯವನ್ನು ಹೆಚ್ಚಿಸುವುದಕ್ಕೆ ಪ್ರಥಮ ಆದ್ಯತೆ ಎಂದು ಹೇಳಿರುವುದನ್ನು ಪತ್ರಿಕೆಯಲ್ಲಿ ಓದಿದೆ. ತುಂಬಾ ಖುಷಿಯಾಯಿತು. ಆದರೆ ಹೇಳಿಕೆಯನ್ನು ಕಾರ್ಯರೂಪಕ್ಕೆ ತರಬೇಕಾದರೆ ನೀವು ಮೊದಲು ಕೈ ಹಾಕಬೇಕಾಗಿರುವುದು ಜಾಹೀರಾತು ಹೋರ್ಡಿಂಗ್ ಗಳ ಮೇಲೆ. ಹಿಂದೊಮ್ಮೆ ಪಾಲಿಕೆಯಲ್ಲಿ ಜಂಟಿ ಆಯುಕ್ತರಾಗಿದ್ದ ಅಧಿಕಾರಿಯೊಬ್ಬರು ಮಾತನಾಡುವಾಗ ಹೇಳಿದ ನೆನಪು ” ನಾವು ಪಾಲಿಕೆ ಕಡೆಯಿಂದ ಸರಿಯಾಗಿ ಕೆಲಸ ಮಾಡಿದರೆ ಆರಾಮವಾಗಿ ವರ್ಷಕ್ಕೆ ಜಾಹೀರಾತು ಫಲಕಗಳಿಂದಲೇ ನಾಲ್ಕು ಕೋಟಿ ಆದಾಯ ಪಾಲಿಕೆಗೆ ತರಬಹುದು” ಎಂದಿದ್ದರು. ಇಲ್ಲಿಯ ತನಕ ಈ ಆದಾಯ ಹೆಚ್ಚೆಂದರೆ ಬರುತ್ತಿರುವುದು ಒಂದು ಕೋಟಿಯ ಹತ್ತಿರ ಹತ್ತಿರ. ಪಾಲಿಕೆಯವರು ಹೆಚ್ಚೆಂದರೆ ವರ್ಷಕ್ಕೆ 5% ದರ ಏರಿಸುತ್ತಾರೆ. ಅತ್ತ ಜಾಹೀರಾತು ಸಂಸ್ಥೆಯವರು ಕಂಪೆನಿಗಳ ಮೇಲೆ ಅದನ್ನು ಹಾಕಿ ಕೋಟಿ ಎಣಿಸುತ್ತಾರೆ. ಒಂದು ಕೋಟಿಯ ಆದಾಯವನ್ನು ನಾಲ್ಕು ಕೋಟಿಗೆ ಏರಿಸಲು ಭಾಸ್ಕರ್ ಮೊಯಿಲಿ ಸಮರ್ಥರಾದರೆ ಅದು ಅವರ ಮೊದಲ ಗುರಿ ಈಡೇರಿದ ಸಂಭ್ರಮ. ಆದರೆ ಅಲ್ಲೊಂದು ಸಣ್ಣ ತಾಂತ್ರಿಕ ಸಮಸ್ಯೆ ಇದೆ. ಮಂಗಳೂರಿನ ಹೆಚ್ಚಿನ ಹೋರ್ಡಿಂಗ್ ಗಳ ಮಾಲೀಕರು ಮಂಗಳೂರು ನಗರ ದಕ್ಷಿಣದ ಶಾಸಕ ಜೆ ಆರ್ ಲೋಬೋ ಅವರ ಹತ್ತಿರದ ಸಂಬಂಧಿ. ತನ್ನ ಸಂಬಂಧಿಗೆ ಬರುವ ಲಾಭಕ್ಕೆ ಅಡ್ಡಗಾಲು ಬೀಳಲು ಶಾಸಕರು ಬಿಡುವುದಿಲ್ಲ. ಭಾಸ್ಕರ್ ಮೊಯಿಲಿಯವರೇ, ನೀವು ನಿಯಮ ಸ್ಟ್ರಾಂಗ್ ಮಾಡಿದರೆ ಏನೂ ಹೆದರುವ ಅಗತ್ಯ ಇಲ್ಲ. ನಿಮ್ಮನ್ನು ಒಂದು ವರ್ಷದ ತನಕ ತೆಗೆಯಲು ಆಗುವುದಿಲ್ಲ. ಕಿರಿಕಿರಿ ಮಾಡೋಣ ಎಂದು ಹೊರಡುವವರು ಮೇ ನಂತರ ಅಧಿಕಾರದಲ್ಲಿ ಇರುತ್ತಾರಾ, ಯಾರಿಗೂ ಗೊತ್ತಿಲ್ಲ!
Leave A Reply