ನಕ್ಸಲ್ ಪೀಡಿತ ಮಕ್ಕಳ ಕೈಗೆ ಗನ್ನಿನ ಬದಲಾಗಿ ಪೆನ್ನು ಕೊಡುತ್ತಿರುವ ಯೋಧರಿಗೊಂದು ಸೆಲ್ಯೂಟ್

ರಾಯಪುರ: ಅದು ಜಮ್ಮು-ಕಾಶ್ಮೀರದ ಗಡಿ ಇರಲಿ, ನಕ್ಸಲರ ಉಪಟಳ ಜಾಸ್ತಿ ಇರುವ ಯಾವುದೇ ದಟ್ಟಾರಣ್ಯ ಇರಲಿ, ಅಲ್ಲೆಲ್ಲ ವೈರಿಗಳಿಂದ ದೇಶವನ್ನು ರಕ್ಷಿಸಲು, ಅವರನ್ನು ಸದೆಬಡಿಯುವಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ (ಸಿಆರ್ ಪಿಎಫ್) ಯೋಧರ ಪಾತ್ರ ಮಹತ್ತರವಾದುದು.
ಹೀಗೆ ಗಡಿಯಲ್ಲಿ, ಅರಣ್ಯದಲ್ಲಿ ದುಷ್ಟಶಕ್ತಿಗಳ ಸದೆಬಡೆಯುವ ಯೋಧರು ಮತ್ತೊಂದು ಸಾರ್ಥಕ ಕೆಲಸ ಮಾಡುತ್ತಿದ್ದು, ಛತ್ತೀಸ್ ಗಡದ ನಕ್ಸಲ್ ಪೀಡಿತ ಪ್ರದೇಶದ ಮಕ್ಕಳಿಗೆ ಉಚಿತವಾಗಿ ತರಗತಿ ತೆಗೆದುಕೊಳ್ಳುವ ಮೂಲಕ ತಾವು ಬರೀ ದುಷ್ಟಶಕ್ತಿಗಳ ಸಂಹಾರ ಮಾಡುವವರಲ್ಲ, ಬದಲಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಹೆಮ್ಮೆಯ ಯೋಧರು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೌದು, ಗಂಗಾಲೂರ್ ಮತ್ತು ಬಿಜಾಪುರ್ ಪ್ರದೇಶದಲ್ಲಿ ಸುಮಾರು 50 ಮಕ್ಕಳು ಮಾವೋವಾದಿಗಳ ಗುಂಪು ಸೇರಿದ್ದಾರೆ ಎಂದು ತಿಳಿದುಬಂದಿದ್ದು, ಅವರಿಗೆ ಗನ್ನಿನ ಬದಲು ಪೆನ್ನು ನೀಡಿ, ಅವರನ್ನೂ ಸಾಕ್ಷರರನ್ನಾಗಿ ಮಾಡುತ್ತಿದ್ದಾರೆ ನಮ್ಮ ವೀರ ಯೋಧರು.
ಬಿಜಾಪುರ ಜಿಲ್ಲೆಯ ಬಸ್ತಾರ್ ವಿಭಾಗದ ಸಿಆರ್ ಪಿಎಫ್ ಯೋಧರು, ಈ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಗತಿ ತೆಗೆದುಕೊಳ್ಳುವ ಮೂಲಕ ಸಾಕ್ಷರರನ್ನಾಗಿ ಮಾಡುತ್ತಿದ್ದು, ಶಿಕ್ಷಣ, ಮೌಲ್ಯ ಒದಗಿಸುವ ಮೂಲಕ ಅವರನ್ನು ನಾಗರಿಕ ಸಮಾಜಕ್ಕೆ ಕರೆತರುತ್ತಿರುವುದು ಶ್ಲಾಘನೀಯವಾಗಿದೆ.
ಈ ಕುರಿತು ಕಮಾಂಡಂಟ್ ಸುಧೀರ್ ಕುಮಾರ್ ಪ್ರತಿಕ್ರಿಯಿಸಿದ್ದು, ವಾರದಲ್ಲಿ ಐದರಿಂದ ಆರು ದಿನ ದಿನಾಲೂ ಒಂದರಿಂದ ಎರಡು ತಾಸು ಮರದ ಬುಡದಲ್ಲಿ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ. ನಮ್ಮ ಯೋಧರ ಗುಂಪಿನಲ್ಲಿ ಅವಿನಾಶ್ ರೈ ಎಂಬುವರು ಬಿ.ಎಡ್ ಮುಗಿಸಿದ್ದು, ಅವರೇ ಜಾಸ್ತಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಂದೂಕಿನ ನಳಿಕೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುವುದಿಲ್ಲ ಎಂಬ ಮಾತಿದೆ, ಆದರೆ ಅಂತಹ ಬಂದೂಕು ಕಿತ್ತೆಸೆದು ಪೆನ್ನು ಕೊಟ್ಟರೆ ಖಂಡಿತವಾಗಿಯೂ ಮಕ್ಕಳು ಎಂಬ ಗುಬ್ಬಚ್ಚಿಗಳು ಸ್ವಚ್ಛಂದ ಸಮಾಜದಲ್ಲಿ ಗೂಡು ಕಟ್ಟಬಹುದು ಎಂಬುದನ್ನು ಸಿಆರ್ ಪಿಎಫ್ ಯೋಧರು ತೋರಿಸಿಕೊಟ್ಟಿದ್ದಾರೆ. ಇಂತಹ ಹೆಮ್ಮೆಯ ಯೋಧರಿಗೊಂದು ಸೆಲ್ಯೂಟ್.
Leave A Reply