ಫಲಿಸಿತು ಯುವ ಬ್ರಿಗೇಡ್ ಶ್ರಮ, ಒಂದೇ ದಿನದಲ್ಲಿ ನೇತ್ರಾವತಿ ನದಿ ಸ್ವಚ್ಛಗೊಳಿಸಿದ ಕಾರ್ಯಕರ್ತರು!
ಮಂಗಳೂರು: ನೀರು ಜೀವಜಲ ಎನ್ನುತ್ತೇವೆ, ವೇದಿಕೆ ಮೇಲೆ ಕುಳಿತು ಜಲಮೂಲ ಉಳಿಸಬೇಕು, ಮಿತವಾಗಿ ನೀರು ಬಳಸಬೇಕು ಎಂದು ಭಾಷಣ ಬಿಗಿಯುತ್ತೇವೆ, ನೀರಿನ ಸಂರಕ್ಷಣೆ ಕುರಿತು ತಾಸುಗಟ್ಟಲೇ ಹೇಳುತ್ತೇವೆ… ಆದರೆ ವಾಸ್ತವದಲ್ಲಿ ಬಹುತೇಕ ಜನ ನೀರಿನ ರಕ್ಷಣೆ ಮಾಡದಿರುವುದರಿಂದ, ಸರ್ಕಾರವೂ ಕೆರೆ-ಕಟ್ಟೆ ಹೂಳೆತ್ತುವುದನ್ನು ಸಮರ್ಪಕವಾಗಿ ಮಾಡದ ಕಾರಣ ನೀರು ಮಾನವನಿಗೆ ದುಬಾರಿಯಾಗುತ್ತಲೇ ಇದೆ.
ಆದರೂ ನೀರಿನ ಸಂರಕ್ಷಣೆಯನ್ನು ರಾಜ್ಯದಲ್ಲಿ ಪ್ರಾಮಾಣಿಕವಾಗಿ ಮಾಡುತ್ತಿರುವ ಸಂಸ್ಥೆಯೆಂದರೆ ಅದು ಯುವ ಬ್ರಿಗೇಡ್. ಯುವ ಉತ್ಸಾಹಿಗಳ ತಂಡ ಕಟ್ಟಿರುವ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯದ ಹಲವು ಬಾವಿ, ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.
ಇಂತಹ ತಂಡವೊಂದು ಇತ್ತೀಚೆಗೆ ಧರ್ಮಸ್ಥಳದ ಬಳಿ ಇರುವ ನೇತ್ರಾವತಿ ನದಿಯನ್ನು ಸ್ವಚ್ಛಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ನೂರಾರು ಜನ ನೀರಿನ ಸಂರಕ್ಷಣೆ ಹಾಗೂ ನದಿಗಳ ಸ್ವಚ್ಛತೆ ಬಗ್ಗೆ ಯೋಚನೆ ಮಾಡುವಂತೆ ಮಾಡಿದ್ದಾರೆ.
ಹೌದು, ಒಂದು ದಿನ ನದಿಯ ಎರಡು ಭಾಗದಲ್ಲಿ ಸುಮಾರು 500 ಯುವ ಬ್ರಿಗೇಡ್ ಸ್ವಯಂ ಕಾರ್ಯಕರ್ತರು ನೇತ್ರಾವತಿ ನದಿಯನ್ನು ಸ್ವಚ್ಛಗೊಳಿಸಲು ಶ್ರಮಿಸಿದ್ದಾರೆ. ಸುಮಾರು 8 ತಾಸು ಯುವ ಕಾರ್ಯಕರ್ತರು ಮಾಡಿದ ಶ್ರಮದಿಂದ ನದಿಯಲ್ಲಿದ್ದ 30ಕ್ಕೂ ಅಧಿಕ ಟನ್ ತ್ಯಾಜ್ಯವನ್ನು ಹೊರತೆಗೆಯಲಾಗಿದೆ.
ಅಷ್ಟೇ ಅಲ್ಲ, 500 ಕಾರ್ಯಕರ್ತರು ಬಂದು ನೇತ್ರಾವತಿ ನದಿ ನೀರು ಸ್ವಚ್ಛಗೊಳಿಸಿದ್ದು, ಈ ಭಾಗದಲ್ಲಿ ಸಾವಿರಾರು ಜನರ ಮೇಲೆ ಪ್ರಭಾವ ಬೀರಿದೆ. ಸುಮಾರು 5000 ಯುವಕರು ನದಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ. ಇಂತಹವರ ಸಂತತಿ ಸಾವಿರವಾಗಲಿ ಎಂಬುದೇ ನಮ್ಮ ಆಶಯ.
Leave A Reply