ಗೋವುಗಳ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಕುಟುಂಬದವರೇ ಹೀಗೆ ಬಹಿಷ್ಕಾರ ಹಾಕುವುದು ಸರೀನಾ?

ಭೋಪಾಲ್: ಒಂದು ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂಬ ಪ್ರತೀತಿ ಇದೆ. ಒಂದು ಗೋವು ಹಾಲು ಕೊಡುತ್ತೆ, ಆ ಹಾಲು ಮೊಸರಾಗುತ್ತದೆ, ಮೊಸರು ಮಜ್ಜಿಗೆ, ಮಜ್ಜಿಗೆ ಬೆಣ್ಣೆ, ಬೆಣ್ಣೆ ತುಪ್ಪವಾಗಿ ಮನುಷ್ಯನಿಗೆ ಬೇಕಾದ ವಿಟಮಿನ್ ನೀಡುತ್ತದೆ. ಕೃಷಿಕರಿಗೆ ಗೊಬ್ಬರ ನೀಡುತ್ತದೆ. ವಿಭೂತಿಯಾಗಲು ಗೋವಿನ ಸಗಣಿಯೇ ಬೇಕು. ಅಷ್ಟರಮಟ್ಟಿಗೆ ಗೋವು ಬಹುಪಯೋಗಿ.
ಆದರೆ ಮಧ್ಯಪ್ರದೇಶದ ನೀಮೂಚ್ ನಲ್ಲಿ ಮಾತ್ರ ಮಹಿಳೆಯೊಬ್ಬರು ಗೋವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಕ್ಕೇ ಕುಟುಂಬದಿಂದಲೇ ಬಹಿಷ್ಕಾರ ಎದುರಿಸುವ ಅನಿವಾರ್ಯ ಬಂದೊದಗಿದೆ. ಇದು ಸಮಾಜವೇ ತಲೆ ತಗ್ಗಿಸುವ ಕೃತ್ಯವಾದರೂ ಯಾರೊಬ್ಬರೂ ಮಹಿಳೆ ಬೆಂಬಲಕ್ಕೆ ನಿಲ್ಲದಿರುವುದು ಅಮಾನವೀಯ ಎನಿಸುತ್ತಿದೆ.
ಹೌದು, ನೀಮೂಚ್ ನಲ್ಲಿ ಮೆಹರುನಿಸಾ ಖಾನ್ ಗೋಶಾಲೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಗೋಸೇವಾ ಸಂಸ್ಥೆಯ ಅಧ್ಯಕ್ಷೆಯೂ ಆಗಿರುವ ಇವರು ಗೋವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಇದನ್ನೇ ಮಹಾಪರಾಧ ಎಂಬಂತೆ ಭಾವಿಸಿರುವ ಮಹಿಳೆಯ ಗಂಡ ಹಾಗೂ ಆತನ ಕುಟುಂಬಸ್ಥರು ಮಹಿಳೆಯನ್ನು ಮನೆಯಿಂದಲೇ ಹೊರಹಾಕಿದ್ದಲ್ಲದೆ, ಬಹಿಷ್ಕಾರ ಹೇರಿದ್ದಾರೆ.
ಮತ್ತೊಂದು ವಿಪರ್ಯಾಸದ ಸಂಗತಿಯೆಂದರೆ ಮಹಿಳೆಯ ಈ ಅಂತಃಕರಣಕ್ಕೆ ಆಕೆಯ ಸಹೋದರಿ ಹಾಗೂ ಪೋಷಕರು ಸಹ ವಿರೋಧ ವ್ಯಕ್ತಪಡಿಸಿದ್ದು, ಗೋವುಗಳ ರಕ್ಷಣೆ ಮಾಡುವುದು ಬೇಡ ಎಂದು ಒತ್ತಾಯ ಮಾಡುತ್ತಿದ್ದಾರಂತೆ. ಅಲ್ಲದೆ ಗೋಶಾಲೆ ತೆರೆದಾಗಿನಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೆಹರುನಿಸಾ ಖಾನ್ ಮಾಹಿತಿ ನೀಡಿದ್ದಾರೆ.
ಗೋರಕ್ಷಣೆ ಮಾಡುವುದರಿಂದ ತಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮನೆಯಿಂದ ಹೊರಹಾಕಿದ್ದಾರೆ. ತವರು ಮನೆಯವರೂ ನನ್ನ ಕೆಲಸಕ್ಕೆ ವಿರೋಧಿಸುತ್ತಾರೆ. ಆದರೆ ನಾನು ಮಾತ್ರ ಗೋವುಗಳ ರಕ್ಷಣೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಒಂಟಿಯಾಗಿಯೇ ಜೀವನ ಸಾಗಿಸುತ್ತೇನೆ ಎನ್ನುತ್ತಾರೆ ದಿಟ್ಟೆ ಮೆಹರುನಿಸಾ.
ಹೀಗೆ ಮಹಿಳೆಯೊಬ್ಬಳಿಗೆ ಗೋವು ರಕ್ಷಣೆ ಮಾಡುವುದೇ ದೊಡ್ಡ ಅಪರಾಧ ಎಂಬಂತೆ ಭಾವಿಸಿ, ಆಕೆಯನ್ನು ಕುಟುಂಬದಿಂದಲೇ ಬಹಿಷ್ಕಾರ ಹಾಕಿದರೂ, ಇದುವರೆಗೂ ಯಾವುದೇ ಮಹಿಳಾ ಹಕ್ಕುಗಳ ಆಯೋಗ, ಬುದ್ಧಿಜೀವಿಗಳು, ಪ್ರಗತಿಪರರು, ಜೀವಪರರು, ಅಲ್ಪಸಂಖ್ಯಾತರ ಪರರು ಮಹಿಳೆ ನೆರವಿಗೆ ಬಾರದಿರುವುದು ಸಹ ಘೋರ ದುರಂತವಾಗಿದೆ. ಮೆಹರುನಿಸಾಗೆ ಗೋಮಾತೆ ಒಳ್ಳೆಯದನ್ನೇ ಮಾಡಲಿ.
Leave A Reply