ಕರಾವಳಿಯನ್ನು ನಿರ್ಲಕ್ಷಿಸಿದ ಸಿಎಂ ಎಚ್ಡಿಕೆ, ರೇವಣ್ಣ ಖುಷಿಗೆ ಹಾಸನದ ಬಜೆಟ್ ಮಂಡಿಸಿದ್ದಾರೆ!
ಕರ್ನಾಟಕ ರಾಜ್ಯದ ಬಜೆಟ್ ಅನ್ನು ಪಾಲಿಕೆ, ನಗರಸಭೆ ಅಥವಾ ಪುರಸಭೆಯ ಲೆವೆಲ್ಲಿಗೆ ತಂದ ಅಪಖ್ಯಾತಿ ಯಾರಿಗಾದರೂ ಹೋಗುತ್ತೆ ಎಂದರೆ ಅದು ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಲ್ಲಬೇಕು.
ಗುರುವಾರ ಅವರು ಮಂಡಿಸಿದ ಬಜೆಟ್ ಅವರ ತವರು ಜಿಲ್ಲೆ ಹಾಸನ ಅಥವಾ ಅವರ ಕರ್ಮಭೂಮಿ ರಾಮನಗರದ ಬಜೆಟ್ ಎಂದು ಹೇಳಿದರೂ ಅತಿಶಯೋಕ್ತಿ ಆಗಲಾರದು. ಆ ನಿಟ್ಟಿನಲ್ಲಿ ಸಹೋದರನ ಲೆವೆಲ್ಲನ್ನು ರಾಜ್ಯದ ಮುಖ್ಯಮಂತ್ರಿಯಿಂದ ಮೇಯರ್ ಮಟ್ಟಕ್ಕೆ ತಂದ ಖ್ಯಾತಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಸಲ್ಲಬೇಕು. ಹಾಗಾದರೆ ಕಳೆದ 15 ದಿನಗಳಿಂದ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಕುಳಿತು ಬಜೆಟ್ ತಯಾರಿಸಿದ್ದಾ ಅಥವಾ ಬೆಂಗಳೂರಿನ ಪದ್ಮನಾಭ ನಗರದ ತಮ್ಮ ತಂದೆಯ ಮನೆಯಲ್ಲಿ ಸಹೋದರ ರೇವಣ್ಣ ಅವರನ್ನು ಎದುರಿಗೆ ಕುಳ್ಳಿರಿಸಿ ತಯಾರಿಸಿದ ಬಜೆಟಾ ಎನ್ನುವ ಸಂಶಯ ಜನರಿಗೆ ಬರುತ್ತಿದೆ. ಒಂದು ವೇಳೆ ಕುಮಾರಸ್ವಾಮಿಯವರ ಜಾಗದಲ್ಲಿ ರೇವಣ್ಣ ಮುಖ್ಯಮಂತ್ರಿಯಾಗಿದ್ದರೆ ಎಲ್ಲಾ ಯೋಜನೆಗಳು ಕೇವಲ ಹೊಳೆನರಸಿಂಹಪುರಕ್ಕೆ ತಂದುಕೊಳ್ಳುತ್ತಿದ್ದರೋ ಏನೋ. ಒಬ್ಬ ಶಾಸಕನಿಗೆ ತನ್ನ ಕ್ಷೇತ್ರದ ಮೇಲೆ ಪ್ರೀತಿ ಇರಬೇಕು ನಿಜ, ಆದರೆ ಆತ ಮುಖ್ಯಮಂತ್ರಿ ಆದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎದುರಿಗೆ ತನ್ನ ಸ್ವಕ್ಷೇತ್ರದ ಭೂಪಟ ಇಟ್ಟು ಬಜೆಟ್ ತಯಾರಿಸಬಾರದು. ಆದರೆ ಕುಮಾರಸ್ವಾಮಿ ಅದನ್ನೇ ಮಾಡಿದ್ದಾರೆ. ಅವರಿಗೆ ಹಾಸನವೇ ಕರ್ನಾಟಕವಾಗಿದೆ. ಹತ್ತು ವರ್ಷಗಳ ನಂತರ ಮುಖ್ಯಮಂತ್ರಿಯಾಗಿರುವುದರಿಂದ ಸಹಜವಾಗಿ ಕುಮಾರಸ್ವಾಮಿ ಇಡೀ ರಾಜ್ಯವನ್ನು ತನ್ನದು ಎಂದು ಅಂದುಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಸಿದ್ಧರಾಮಯ್ಯ ಅವರಿಗೆ ಇರುವಂತಹ ದುರಂಹಕಾರ ಕುಮಾರಸ್ವಾಮಿ ಅವರಿಗೆ ಇಲ್ಲದೆ ಇರುವುದರಿಂದ ಅವರು ಕರ್ನಾಟಕದ ಎಲ್ಲಾ ಭಾಗಗಳ ಮೇಲೆ ಸಮಾನ ಪ್ರೀತಿ ತೋರಿಸುತ್ತಾರೆ ಎಂದು ಜನರಿಗೆ ನಿರೀಕ್ಷೆ ಇತ್ತು. ಆದರೆ ಜನರ ಮೇಲಿನ ಪ್ರೀತಿಗಿಂತ ಕುಮಾರಸ್ವಾಮಿ ಅವರಿಗೆ ತಮ್ಮ ಕುಟುಂಬವನ್ನು ಉಳಿಸುವ ಅಗತ್ಯ ಕಾಣುತ್ತಿದೆ. ಎಲ್ಲವನ್ನು ಹಾಸನಕ್ಕೆ ಧಾರೆ ಎರೆದು ತಮ್ಮದು ಒಳ್ಳೆಯ ಬಜೆಟ್ ಎಂದು ಹೇಳಿಕೊಳ್ಳುತ್ತಿದ್ದಾರೆ.
ಖಾದರ್ ಯಾವ ಮುಖ ಇಟ್ಟು ಕರಾವಳಿಗೆ ಬರುತ್ತಾರೋ…
ಕುಮಾರಸ್ವಾಮಿ ಏಕಕಾಲಕ್ಕೆ ಕಾಂಗ್ರೆಸ್ಸನ್ನು ಮೆಚ್ಚಿಸಲು ಮತ್ತು ತಮ್ಮ ಪಕ್ಷಕ್ಕೆ ಕರಾವಳಿಯಲ್ಲಿ ಇರುವ ಸ್ಥಾನಮಾನಕ್ಕೆ ಪ್ರತೀಕಾರ ತೀರಿಸಲು ಹೊರಟುಬಿಟ್ಟಿದ್ದಾರೆ. ಕರಾವಳಿಯಲ್ಲಿ ಜಾತ್ಯಾತೀತ ಜನತಾದಳ ಮೂಡಬಿದ್ರೆಯಲ್ಲಿ ಅಮರನಾಥ ಶೆಟ್ಟಿಯವರ ರಾಜಕೀಯ ಶಸ್ತ್ರತ್ಯಾಗದೊಂದಿಗೆ ಮುಕ್ತಾಯಗೊಂಡಿದೆ. ಇನ್ನು ಕಾಂಗ್ರೆಸ್ಸಿಗೆ ಇರುವ ಏಕೈಕ ಅಸ್ತಿತ್ವ ಅದು ಮಂಗಳೂರು ಅಂದರೆ ಉಳ್ಳಾಲ ವಿಧಾನಸಭಾ ಕ್ಷೇತ್ರ. ಕಾಂಗ್ರೆಸ್ಸಿಗೆ ಹೀನಾಯವಾಗಿ ಸೋಲಿಸಿದ ಜನರ ಬಗ್ಗೆ ಕುಮಾರಸ್ವಾಮಿ ಎಷ್ಟು ಕೋಪಗೊಂಡಿದ್ದಾರೆ ತಮ್ಮ ಇಡೀ ಬಜೆಟಿನಲ್ಲಿ ಕರಾವಳಿಯನ್ನು ಉಲ್ಲೇಖಿಸಿ ಒಂದೇ ಒಂದು ಯೋಜನೆಯನ್ನು ಕೊಟ್ಟಿಲ್ಲ. ಇದನ್ನು ಕರಾವಳಿಯ ಕಾಂಗ್ರೆಸ್ಸಿಗರು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾರೋ ಅಥವಾ ಹೀಗೆ ಆಗ್ಬೇಕು ಇಲ್ಲಿನ ಜನರಿಗೆ ಎಂದು ಹೇಳಿ ಕಣ್ಣುಮುಚ್ಚಿ ಮಲಗುತ್ತಾರೋ ನೋಡಬೇಕು. ಮನಸ್ಸು ಮಾಡಿದ್ರೆ ಕರಾವಳಿಯ ಅಭಿವೃದ್ಧಿಗೆ ಸಿಎಂ ತುಂಬಾ ಯೋಜನೆಗಳನ್ನು ಕೊಡಬಹುದಿತ್ತು. ಮೀನುಗಾರರ ಸಮಸ್ಯೆಗಳನ್ನು ಹಿಡಿದು ಇದೇ ವಾರದ ಆದಿಯಲ್ಲಿ ಕರಾವಳಿಯ ಶಾಸಕರ ನಿಯೋಗ ಸಿಎಂಗೆ ಮನವಿ ಸಲ್ಲಿಸಿತ್ತು. ಆದರೆ ಕುಮಾರಸ್ವಾಮಿಯವರಿಗೆ ಕರಾವಳಿ ಕರ್ನಾಟಕ ನಮ್ಮ ರಾಜ್ಯದಲ್ಲಿ ಬರುತ್ತಾ ಎನ್ನುವುದರ ಬಗ್ಗೆ ಗೊಂದಲ ಇದ್ದಂತೆ ಕಾಣುತ್ತದೆ. ಕುಮಾರಸ್ವಾಮಿ ಮೂರ್ನಾಕು ಯೋಜನೆ ಕರಾವಳಿಗೆ ಕೊಟ್ಟಿದ್ದರೆ ಇಲ್ಲಿನ ಜೆಡಿಎಸ್ ನವರಿಗೆ ಕನಿಷ್ಟ ಎದೆಯುಬ್ಬಿಸಿ ಹೇಳಲು ಕಾರಣ ಸಿಗುತ್ತಿತ್ತು. ಆದರೆ ಕರಾವಳಿಯನ್ನು ಮರೆತಂತೆ ವರ್ತಿಸಿರುವ ಕುಮಾರಸ್ವಾಮಿಯವರ ಈ ವರ್ತನೆಯಿಂದ ಇಲ್ಲಿನ ಜೆಡಿಎಸ್ ನವರಿಗೆ ಇದ್ದ ಏಕೈಕ ಹೋಪ್ ಕೂಡ ಕಮರಿ ಹೋಗಿದೆ. ಇನ್ನು ಯಾವ ಮುಖ ಇಟ್ಟು ಕುಮಾರಸ್ವಾಮಿ ನಮ್ಮ ಪಕ್ಷದವರು ಎಂದು ಇಲ್ಲಿನ ಜೆಡಿಎಸ್ ನವರು ಹೇಳುತ್ತಾರೋ ನೋಡ್ಬೇಕು. ಇನ್ನು ನೀವು ನೋಡಬೇಕಿತ್ತು. ಸದನದಲ್ಲಿ ಸಚಿವ ಯುಟಿ ಖಾದರ್ ಅವರು ಒಂದು ಯೋಜನೆಯನ್ನು ಹೇಳುವಾಗ ಮೇಜು ಕುಟ್ಟಿ ಸ್ವಾಗತಿಸಿ ಸಂತೋಷ ವ್ಯಕ್ತಪಡಿಸುತ್ತಿದ್ದರು. ಅದ್ಯಾವುದೇಂದರೆ ಸರಕಾರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ. ಕನಕಪುರ, ಮಂಡ್ಯ, ಮೈಸೂರಿಗೆ ಸಿಎಂ ಸರಕಾರಿ ಮೆಡಿಕಲ್ ಕಾಲೇಜು ಘೋಷಿಸುವಾಗ ಯುಟಿ ಖಾದರ್ ಅವರ ಮುಖ ಅರಳುತ್ತಿತ್ತು. ಆದರೆ ಖಾದರ್ ಅವರೇ, ನೀವು ಮಂಗಳೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ತರುತ್ತೇನೆ ಎಂದು ಕಳೆದ ಬಾರಿ ಆರೋಗ್ಯ ಸಚಿವರಾಗಿದ್ದಾಗ ಇದ್ದಬದ್ದ ವೇದಿಕೆಗಳಲ್ಲಿ ಹೇಳಿ ಓಡಾಡುತ್ತಿದ್ದಿರಿ. ಇವತ್ತು ಮಂಗಳೂರಿಗೆ ಸಿಎಂ ಚೊಂಬು ಕೊಟ್ಟು ಬೇರೆ ಕಡೆ ಮೆಡಿಕಲ್ ಕಾಲೇಜುಗಳ ಸ್ಥಾಪನೆಯ ಬಗ್ಗೆ ಘೋಷಿಸುತ್ತಿದ್ದರೆ ಅದ್ಯಾವ ನೈತಿಕತೆ ಇಟ್ಟು ಚಪ್ಪಾಳೆ ತಟ್ಟಿದ್ದಿರಿ.
ಇದಾ ಬಡವರ ಮೇಲಿನ ಪ್ರೀತಿ..
ಚುನಾವಣೆಯ ಮೊದಲು ಮಾತನಾಡಿದರೆ ಕುಮಾರಸ್ವಾಮಿ ತಾವು ಬಡವರ ಬಂಧು ಎಂದು ಹೇಳುತ್ತಿದ್ದರು. ಅಧಿಕಾರಕ್ಕೆ ಬಂದ ಬಳಿಕ ಇವರು ಮಂಡಿಸಿದ ಮೊದಲ ಬಜೆಟಿನಲ್ಲಿ ಕಾಣುತ್ತಿರುವುದು ವಿದ್ಯುತ್ ದರ ಯೂನಿಟ್ ಗೆ ಹೆಚ್ಚಿಸಿರುವುದು, ಪೆಟ್ರೋಲ್, ಡಿಸೀಲ್ ದರ ಹೆಚ್ಚಿಸಿರುವುದು, ಸಾರಿಗೆ ದರ ಹೆಚ್ಚಿಸಿರುವುದು ಹೀಗೆ ದರ ಹೆಚ್ಚಳದ್ದೇ ಕಾರುಬಾರು. ವಿದ್ಯುತ್ ದರ ಎರಡು ತಿಂಗಳು ಮೊದಲು ಹೆಚ್ಚಾಗಿತ್ತು. ಮುಖ್ಯಮಂತ್ರಿಯವರು ಆಗ ಬಿಝಿ ಇದ್ದ ಕಾರಣ ಗೊತ್ತಿಲ್ಲವೇನೋ. ಇನ್ನು ಗ್ರಾಮ ವಾಸ್ತವ್ಯದ ಡ್ರಾಮ ನಡೆಯುವಾಗ ಆ ಮನೆಯವರು ಕರೆಂಟ್ ಬಿಲ್ ಸಿಕ್ಕಾಪಟ್ಟೆ ಜಾಸ್ತಿ ಮಾಡಿದ್ದಿರಿ ಎಂದರೆ ಕುಮಾರಸ್ವಾಮಿ ಏನು ಉತ್ತರ ಕೊಡುತ್ತಾರೋ. ಇನ್ನು ಯಾವುದೇ ರಾಜ್ಯ ಸರಕಾರ ಸೆಸ್ ಸಿಕ್ಕಾಪಟ್ಟೆ ಹಾಕಿ ಜನರ ಮೇಲೆ ಹೆಚ್ಚುವರಿ ಭಾರ ಹಾಕುವುದು ಬೇಡಾ ಎಂದು ಸ್ವಯಂ ನಿರ್ಭಂದ ಹಾಕಿಕೊಂಡರೆ ನಮ್ಮ ಮುಖ್ಯಮಂತ್ರಿ ಮಾತ್ರ 32% ಏಕ್ಸಟ್ರಾ ಸೆಸ್ ಹಾಕಿ ಪೆಟ್ರೋಲ್ ಮತ್ತು ಡಿಸೀಲ್ ಗೆ ಲೀಟರಿಗೆ ಒಂದು ರೂಪಾಯಿ ಇಪ್ಪತ್ತು ಪೈಸೆಯಷ್ಟು ದರ ಏರಿಸಿದ್ದಾರೆ. ಎಲ್ಲರೂ ಪ್ರೆಟೋಲ್, ಡಿಸೀಲ್ ದರ ಜಿಎಸ್ ಟಿ ಒಳಗೆ ಬರಲಿ ಎಂದು ಆಶಿಸುತ್ತಿದ್ದರೆ ಕುಮಾರಸ್ವಾಮಿ ಮಧ್ಯಮ ವರ್ಗದವರ ಮೇಲೆ ಬರೆ ಎಳೆದು ಖುಷಿ ಪಡುತ್ತಿದ್ದಾರೆ. ಇನ್ನು ವಾರದೊಳಗೆ ಜನಸಾಮಾನ್ಯರ ಇತರ ದಿನ ಉಪಯೋಗಿ ವಸ್ತುಗಳ ಬೆಲೆ ಹೆಚ್ಚಾಗಲಿದೆ. ಈಗ ಮೊದಲಿಗೆ ಆಗಬೇಕಾಗಿರುವುದು ಕರಾವಳಿಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಪಕ್ಷಭೇದ ಮರೆತು ಬೀದಿಗೆ ಇಳಿಯಬೇಕು. ಕರಾವಳಿಗೆ ಒಂದೇ ಒಂದು ಯೋಜನೆ ಘೋಷಿಸದ ಕುಮಾರಸ್ವಾಮಿ ವಿರುದ್ಧ ಧ್ವನಿ ಎತ್ತಬೇಕು. ಯಾಕೆಂದರೆ ಅಭಿವೃದ್ಧಿಯಲ್ಲಿ ರಾಜಕೀಯ ಇರಬಾರದು ಎನ್ನುವುದು ಎಲ್ಲರ ಅಭಿಪ್ರಾಯವಲ್ಲವೇ, ಈಗ ಕಾರ್ಯರೂಪಕ್ಕೆ ತನ್ನಿ. ಕುಮಾರಸ್ವಾಮಿ ಅಂತಹ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ!
Leave A Reply