ಇಸ್ಲಾಂ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂ ಧ್ವಜ ನೆಡಲು ಮುಂದಾಗಿರುವ ಈ ಮಹಿಳೆಗೊಂದು ಸಲಾಂ!
ಇಸ್ಲಾಮಾಬಾದ್: ಪಾಕಿಸ್ತಾನ ಎಂದರೇನೆ ಹಾಗೆ. ಅದು ಹಿಂದೂಸ್ಥಾನದಿಂದ ಬೇರೆಯಾದ ರಾಷ್ಟ್ರವಾಗಿದ್ದರೂ, ಅಲ್ಲಿ ಹಿಂದೂಗಳಿಗೆ ಭದ್ರತೆ ಇಲ್ಲ. ಪಾಕಿಸ್ತಾನದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು ಹಾಗೂ ಮುಸ್ಲಿಮರಿಂದ ದೌರ್ಜನ್ಯಕ್ಕೊಳಗಾದವರು. ಇಂತಹ ರಾಷ್ಟ್ರದಲ್ಲಿ ಹಿಂದೂಗಳು, ಅದರಲ್ಲೂ ಮಹಿಳೆಯರು ಚುನಾವಣೆಗೆ ನಿಲ್ಲುವ ಯೋಚನೆ ಇರಲಿ, ಉತ್ತಮ ಜೀವನ ಸಹ ಸಾಗಿಸಲು ಕಷ್ಟಸಾಧ್ಯ.
ಆದರೆ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಹಾಗೆ, ಪಾಕಿಸ್ತಾನದಲ್ಲೂ ಹಿಂದೂ ಮಹಿಳೆಯೊಬ್ಬರು ಜುಲೈ 25ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಮಾಡುವ ಮೂಲಕ ಪಾಕಿಸ್ತಾನದ ರಾಜಕೀಯ ಇತಿಹಾಸದಲ್ಲೇ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದಾರೆ.
ಹೌದು, ಪಾಕಿಸ್ತಾನದ ಸಿಂಧ್ ಚುನಾವಣೆ ಕ್ಷೇತ್ರದಿಂದ ಹಿಂದೂ ಧರ್ಮದ ಮೇಘ್ವಾರ್ ಸಮುದಾಯಕ್ಕೆ ಸೇರಿರುವ ಸುನಿತಾ ಪರಮಾರ್ ಅವರು ಸ್ಪರ್ಧಿಸಲು ಮುಂದಾಗಿದ್ದಾರೆ. ಒಂದು ವೇಳೆ ಶಾಂತಿಯುತವಾಗಿ ಚುನಾವಣೆ ನಡೆದು, ಸುನಿತಾ ಪರಮಾರ್ ಗೆಲುವು ಸಾಧಿಸಿದರೆ, ಪಾಕಿಸ್ತಾನ ಇತಿಹಾಸದಲ್ಲೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಮಹಿಳೆಯೊಬ್ಬರು ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಚುನಾವಣೆಯಲ್ಲಿ ಏಕೆ ಸ್ಪರ್ಧಿಸುತ್ತಿದ್ದೇನೆ ಎಂಬ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸುನಿತಾ, ಸಿಂಧ್ ಕ್ಷೇತ್ರದಿಂದ ಈ ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾದವರು ಅಭಿವೃದ್ಧಿಗೆ ಯಾವುದೇ ಒತ್ತು ನೀಡಲಿಲ್ಲ. ಇದರಿಂದಾಗಿ ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರು, ವಿದ್ಯುತ್, ಶಿಕ್ಷಣ ಸೇರಿ ಹಲವು ಮೂಲಸೌಕರ್ಯಗಳ ಕೊರತೆಯಿದೆ. ಹಾಗಾಗಿ ಜನರ ಒತ್ತಾಯದ ಮೇರೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ, ನಾವು ಇಪ್ಪತ್ತೊಂದನೇ ಶತಮಾನದಲ್ಲಿ ಬದುಕುತ್ತಿದ್ದು ಅಭಿವೃದ್ಧಿ ಹೊಂದಬೇಕು. ಹಾಗಾಗಿ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮೊದಲು ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ. ಬಳಿಕ ಉಳಿದ ಎಲ್ಲ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.
ಆದಾಗ್ಯೂ 2017ರಲ್ಲಿ ಪಾಕಿಸ್ತಾನದಲ್ಲಿ ನಡೆದ ಜನಗಣತಿಯ ಪ್ರಕಾರ, ಸಿಂಧ್ ಕ್ಷೇತ್ರದಲ್ಲಿ 16 ಲಕ್ಷ ಜನಸಂಖ್ಯೆಯಿದ್ದು, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಹಿಂದೂಗಳೇ ಇರುವುದರಿಂದ, ಸುನಿತಾ ಪರಮಾರ್ ಗೆಲುವು ಸಾಧಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಅದೇನೆ ಇರಲಿ, ಇಸ್ಲಾಂ ರಾಷ್ಟ್ರದಲ್ಲಿ ಹಿಂದೂ ಧ್ವಜ ನೆಡಲು ಮುಂದಾಗಿರುವ ಈ ದಿಟ್ಟ ಹಿಂದೂ ಮಹಿಳೆಗೆ ಸಲಾಂ.
Leave A Reply