ಲೋಕಸಭೆ ಚುನಾವಣೆಯಲ್ಲೂ ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಕಮಲ ಪಡೆ ಹೇಗೆ ಸಜ್ಜಾಗಿದೆ ನೋಡಿ!
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಮೋದಿ ಅವರ ಅಲೆ, ಯಡಿಯೂರಪ್ಪ ಅವರ ನಾಯಕತ್ವ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವೈಫಲ್ಯ ಎಷ್ಟು ಪರಿಣಾಮ ಬೀರಿದೆಯೋ, ಅದರಲ್ಲಿ ಸಾಮಾಜಿಕ ಜಾಲತಾಣದ ಪಾತ್ರವೂ ಪ್ರಮುಖವಾಗಿತ್ತು.
ಫೇಸ್ ಬುಕ್, ಟ್ವಿಟರ್, ವಾಟ್ಸ್ ಆ್ಯಪ್ ಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಬಿಜೆಪಿಯ ಅಭಿವೃದ್ಧಿ ಪರ ಆಡಳಿತ, ಸಿದ್ದರಾಮಯ್ಯರ ಇಬ್ಬಂದಿ ಹಾಗೂ ಧರ್ಮ ಆಧಾರಿತ ಯೋಜನೆಗಳು ಚರ್ಚೆಯಾದವು. ಅವುಗಳು ಮತವಾಗಿಯೂ ಪರಿಣಮಿಸಿ ರಾಜ್ಯದಲ್ಲಿ ಬಿಜೆಪಿ ನೂರಕ್ಕೂ ಅಧಿಕ ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಅನುಕೂಲವಾಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಬಿಜೆಪಿ ಸುಮಾರು 25 ಸಾವಿರ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿತ್ತು.
ಈಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಲು ಯೋಜನೆ ರೂಪಿಸಿದ್ದು, ವಾಟ್ಸ್ ಆ್ಯಪ್ ಅನ್ನು ಪ್ರಬಲವಾಗಿ ಬಳಸಲು ಮುಂದಾಗಿದೆ. ಅದಕ್ಕಾಗಿ ಸುಮಾರು 35 ಸಾವಿರ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ರೂಪಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಹೀಗೆ ರಚಿಸುವ 35 ಸಾವಿರ ವಾಟ್ಸ್ಆ್ಯಪ್ ಗ್ರೂಪ್ ಗಳಿಗೆ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಡಿಪಿ ಆಗಿ ಸೆಟ್ ಮಾಡುವಂತೆ ರಾಜ್ಯ ಬಿಜೆಪಿ ಸೂಚಿಸಿದ್ದು, ಹರ ಹರ ಮೋದಿ ರಿಂಗ್ ಟೋನ್ ಸೆಟ್ ಮಾಡಿಕೊಳ್ಳುವ ಮೂಲಕ ಮೋದಿ ಅವರ ಅಲೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರು ಮೊದಲಿನಿಂದಲೂ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸುತ್ತಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಈ ತಂತ್ರ ಮತ್ತಷ್ಟು ಯಶಸ್ವಿಯಾಗುತ್ತದೆ ಎಂದೇ ರಾಜಕೀಯ ವಲಯದಲ್ಲಿ ಬಿಂಬಿಸಲಾಗುತ್ತಿದೆ.
Leave A Reply