ಸ್ಮಾರ್ಟ್ ಸಿಟಿ ಯೋಜನೆ ಹಳ್ಳ ಹಿಡಿಯಲು ಎಂಟು ಇಂಚಿನ ಪೈಪು ಸಾಕು!!
ಐನೂರು ರೂಪಾಯಿಯ ಶರ್ಟೋ ಅಥವಾ ಒಂದು ಸಾವಿರ ರೂಪಾಯಿಯ ಸೀರೆಯನ್ನೋ ಖರೀದಿಸುವಾಗ ನಾವು ಒಂದು ಗಂಟೆ ಬಟ್ಟೆ ಅಂಗಡಿಯಲ್ಲಿ ನಿಂತು ಯೋಚಿಸುತ್ತೇವೆ. ತೆಗೆದುಕೊಳ್ಳುವ ಬಟ್ಟೆ ಮುಂದಿನ ತಿಂಗಳು ನಡೆಯುವ ಸಂಬಂಧಿಯ ಮದುವೆಗೆ ಸೂಟ್ ಆಗುತ್ತೋ ಇಲ್ವೋ ಎನ್ನುವುದರಿಂದ ಹಿಡಿದು ಅದು ಒಗೆದಾಗ ಬಣ್ಣ ಹೋಗುತ್ತಾ, ಎಷ್ಟು ಕಾಲ ಬಾಳ್ವಿಕೆ ಬರಬಹುದೋ ಎಂದೆಲ್ಲ ಯೋಚಿಸಿ ಕೊಳ್ಳುತ್ತೇವೆ. ಒಂದು ಸಾವಿರದ ಒಳಗಿನ ಹೆಚ್ಚೆಂದರೆ ಐದಾರು ವರ್ಷ ಬಾಳ್ವಿಕೆ ಬರುವ ಬಟ್ಟೆಗಳನ್ನು ಖರೀದಿಸುವ ಮುನ್ನವೇ ನಾವು ಇಷ್ಟು ಯೋಚಿಸುತ್ತೇವೆ. ಹಾಗಿರುವಾಗ ಒಂದು ಸಾವಿರ ಕೋಟಿಯ ಪ್ರಾಜೆಕ್ಟ್ ಗಳು ನಮ್ಮ ಊರಿಗೆ ಬಂದಾಗ ನಾವೆಷ್ಟು ಯೋಚಿಸಬೇಡಾ. ಅಷ್ಟಕ್ಕೂ ಯೋಚಿಸಬೇಕಾದವರು ಯಾರು? ನಾವು ನೀವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಯಾರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕುಳಿತಿದ್ದಾರೋ ಅವರು ಈ ಬಗ್ಗೆ ಗಂಭೀರವಾಗಿ ಯೋಚಿಸದೇ ಇದ್ದಾಗ ಏಶಿಯನ್ ಡೆವಲಪಮೆಂಟ್ ಬ್ಯಾಂಕ್ ನಿಂದ ಬಂದ ಸಾಲ ಅರಬ್ಬಿ ಸಮುದ್ರದ ಮೇಲೆ ಹೋಮ ಮಾಡಿದಂತೆ ಆಗಿತ್ತು. ಈಗ ಸ್ಮಾರ್ಟ್ ಸಿಟಿ ಸರದಿ.
ಒಮ್ಮೆ ತಪ್ಪು ಮಾಡಿದಾಗಲೇ ಬುದ್ಧಿ ಬರಬೇಕಿತ್ತು…
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ತಿಂಗಳ ಕೊನೆಯಲ್ಲಿ ಪರಿಷತ್ ಸಭೆ ಎನ್ನುವುದನ್ನು ಮಾಡುತ್ತಾರೆ. ಆ ದಿನ ಎಲ್ಲಾ ಸದಸ್ಯರು ಬಂದು ಮಂಗಳೂರಿನ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಲಿ ಎನ್ನುವುದು ಮುಖ್ಯ ಉದ್ದೇಶ. ಕೆಲವು ಖಾಯಂ ಸದಸ್ಯರಂತೆ ಇರುವವರು ಇಡೀ ದಿನ ಇಡೀ ತಿಂಗಳು ಅಲ್ಲಿಯೇ ಹೊರಳಾಡುತ್ತಿದ್ದರೂ ಮತ್ತು ಹೆಚ್ಚಿನ ನಿರ್ಧಾರಗಳನ್ನು ಅವರವರೇ ತೆಗೆದುಕೊಳ್ಳುವುದರಿಂದ ಪರಿಷತ್ ಸಭೆ ಇತ್ತೀಚೆಗೆ ಬರಿ ಕಾಫಿ, ತಿಂಡಿ ಬಿಲ್ ಗೆ ಸೀಮಿತವಾಗುವಂತೆ ಆಗಿದೆ. ಮರುದಿನ ಪತ್ರಿಕೆಯಲ್ಲಿ ನಾಲ್ಕು ಜನ ಹಿರಿಯ ಸದಸ್ಯರು ಆರೋಪ-ಪ್ರತ್ಯಾರೋಪ ಮಾಡಿದ ಸುದ್ದಿ ಅಚ್ಚಾಗುತ್ತೆ ವಿನ: ಮಂಗಳೂರಿನ ಅಭಿವೃದ್ಧಿಯ ಬಗ್ಗೆ ಇವರು ಯಾರೂ ಕೂಡ ಕಡಿದು ಗುಡ್ಡೆ ಹಾಕಿದ್ದು ಯಾವುದೂ ಕಾಣುವುದಿಲ್ಲ. ಈಗಂತೂ ರಾಕೆಟ್ ವೇಗದಲ್ಲಿ ಮಂಗಳೂರು ಬೆಳೆಯುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಅತೀ ವೇಗದಲ್ಲಿ ಅಭಿವೃದ್ಧಿ ಹೊಂದುವ ನಗರವಾಗಿ ಮಂಗಳೂರು ಎದ್ದು ಕಾಣುತ್ತಿದೆ. ಇವತ್ತು ಇರುವ ಮಂಗಳೂರು ಮುಂದಿನ ನವೆಂಬರ್ ಬರುವ ಹೊತ್ತಿಗೆ ಎಷ್ಟು ಬೆಳೆದಿರುತ್ತೆ ಎನ್ನುವ ಕಲ್ಪನೆ ಯಾರಿಗೂ ಇರುವುದಿಲ್ಲ. ಆದ್ದರಿಂದ ಯಾವುದೇ ಯೋಜನೆ ಮಂಗಳೂರಿಗೆ ಬರುವಾಗ ಅದು ಜಾತ್ರೆಯ ದಿನ ರಸ್ತೆಗೆ ಹಾಕುವ ಟ್ಯೂಬ್ ಲೈಟ್ ಗಳಂತೆ ವಾರಕ್ಕೆ ಮಾತ್ರ ಸೀಮಿತವಾದಂತೆ ಇರಬಾರದು. ಏಕೆಂದರೆ ಅಭಿವೃದ್ಧಿ ಎನ್ನುವುದು ಶಾಶ್ವತವಾಗಿರಬೇಕು ಅಥವಾ ಕನಿಷ್ಟ ಇಪ್ಪತೈದರಿಂದ ಮೂವತ್ತು ವರ್ಷಗಳನ್ನಾದರೂ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಬೇಕು. ಆದರೆ ಅಂತಹ ದೂರದೃಷ್ಟಿ ಇರುವಂತಹ ಕಾರ್ಪೋರೇಟರ್ ಗಳು ನಮ್ಮ ಪಾಲಿಕೆಯಲ್ಲಿ ಯಾರಿದ್ದಾರೆ ಎನ್ನುವುದು ಪ್ರಶ್ನೆ. ಅನೇಕ ಕಾರ್ಪೋರೇಟರ್ ಗಳಿಗೆ ತಾವು ಅಧಿಕಾರದಲ್ಲಿದ್ದಾಗ ಎಷ್ಟು ಕಮೀಷನ್ ಸಿಗುತ್ತದೆ ಎನ್ನುವುದರ ಚಿಂತೆ ಬಿಟ್ಟರೆ ದೂರದೃಷ್ಟಿ ಎನ್ನುವುದು ಅವರ ಡಿಕ್ಷನರಿಯಲ್ಲಿಯೇ ಇಲ್ಲ. ಅದರ ಪರಿಣಾಮವಾಗಿ ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕಿನಿಂದ ಬಂದ 320 ಕೋಟಿ ರೂಪಾಯಿ ಸಾಲದಿಂದ ಆದದ್ದೇನು? 2026 ರ ತನಕ ಮಂಗಳೂರು ಮಹಾನಗರಕ್ಕೆ 24*7 ನೀರು ಕೊಡುವ ಯೋಜನೆ ಯಾಕೆ ಈಡೇರಿಲ್ಲ. ಈಗ ಮತ್ತೆ ಅಂತಹುದೇ ವಿಫಲ ಯೋಜನೆಯನ್ನು ಅನುಷ್ಟಾನಕ್ಕೆ ತರಲು ನಮ್ಮ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಜ್ಜಾಗಿದ್ದಾರೆ. ದುರಂತ ಎಂದರೆ ಯಾರೂ ಕೂಡ ಈ ಬಗ್ಗೆ ಮಾತನಾಡುವುದಿಲ್ಲ ಎನ್ನುವುದೇ ಆಶ್ಚರ್ಯದ ಸಂಗತಿ.
ಸ್ಮಾರ್ಟ್ ಸಿಟಿ ಇಂಜಿನಿಯರ್ಸ್ ಗಳಿಗೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲ…
ಮಂಗಳೂರಿನ ಮಿಶನ್ ಸ್ಟ್ರೀಟ್, ಬೀಬಿ ಅಲಾಬಿ ರಸ್ತೆ ಇಲ್ಲೆಲ್ಲ ಒಳಚರಂಡಿಗೆ ಪಾಲಿಕೆಯವರು ಎಂಟು ಇಂಚಿನ ಪೈಪಿನಿಂದ ಹತ್ತು ಇಂಚಿಗೆ ಶಿಫ್ಟ್ ಆಗುತ್ತಿದ್ದಾರೆ. ಏಕೆಂದರೆ ಈಗ ಮಂಗಳೂರಿನ ವೇಗವನ್ನು ಗಮನಿಸಿದರೆ ಎಲ್ಲಿ ಕೂಡ ಎಂಟು ಇಂಚಿನ ಪೈಪು ಸಾಲುವುದೇ ಇಲ್ಲ. ಹತ್ತು ಇಂಚಿನದ್ದೂ ಕೂಡ ಬರುವ ದಿನಗಳಲ್ಲಿ ಸಾಲುವುದಿಲ್ಲ ಎನ್ನುವ ಪರಿಸ್ಥಿತಿ ಬರಬಹುದು. ಆದರೆ ನಮ್ಮ ಅತೀ ಬುದ್ಧಿವಂತ ಸ್ಮಾರ್ಟ್ ಸಿಟಿ ಅನುಷ್ಟಾನ ಮಾಡುವವರು ಈಗ ಕಾಮಗಾರಿ ಆಗುವ ಕಡೆ ಎಂಟು ಇಂಚಿನ ಪೈಪನ್ನೇ ಒಳಚರಂಡಿಗೆ ಹಾಕಿಸುತ್ತಿದ್ದಾರೆ. ಮಂಗಳೂರು ಇನ್ನು ಬೆಳೆಯುವುದಿಲ್ಲ ಎಂದು ಇವರೇ ನಿರ್ಧಾರ ಮಾಡಿದಂತೆ ವರ್ತಿಸುತ್ತಿದ್ದಾರೆ. ಮಂಗಳೂರಿನ ಜನಸಂಖ್ಯೆ ಬರುವ ದಿನಗಳಲ್ಲಿ ಅರ್ಧಕರ್ಧ ಕಡಿಮೆ ಆಗುತ್ತೆ ಎಂದು ಇವರು ಅಂದುಕೊಂಡಿದ್ದಾರೆನೋ ಎನ್ನುವಂತಿದೆ ಸ್ಮಾರ್ಟ್ ಸಿಟಿ ಅನುಷ್ಟಾನ ಮಾಡುತ್ತಿರುವ ಇಂಜಿನಿಯರ್ಸ್, ಅಧಿಕಾರಿಗಳ ಮನಸ್ಥಿತಿ. ಯಾಕೆಂದರೆ ಅವರಿಗೆ ಮಂಗಳೂರಿನ ಬಗ್ಗೆ ಗೊತ್ತಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಎಂದರೆ ಅದು ಭವಿಷ್ಯದಲ್ಲಿ ದೂರದೃಷ್ಟಿ ಇಟ್ಟು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಟ್ಟಿಕೊಂಡ ಕನಸು. ಆದ್ದರಿಂದ ಅದಕ್ಕೆ ವಿಶೇಷ ಮಹತ್ವವನ್ನು ಕೊಡಬೇಕಾಗಿರುವುದು ಅದನ್ನು ಅನುಷ್ಟಾನ ಮಾಡುವವರ ಕರ್ತವ್ಯ. ಆದ್ದರಿಂದ ಯಾವುದೇ ಕಾಮಗಾರಿ ನಡೆಯುವಾಗ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಮಾಹಿತಿಗಳನ್ನು ಪಡೆದು ಕೆಲಸಕಾರ್ಯ ನಿರ್ವಹಿಸಬೇಕು. ಆದರೆ ಇವರು ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡುವುದರಿಂದ ಸ್ಮಾರ್ಟ್ ಸಿಟಿ ಕೂಡ ದೀಪಾವಳಿಗೆ ಗೂಡುದೀಪ ನೇತಾಡಿಸಿ ತುಳಸಿಪೂಜೆ ಆದ ಕೂಡಲೇ ಇಳಿಸುವ ಲೆವೆಲ್ಲಿಗೆ ಬಂದಿದೆ. ಪಾಲಿಕೆಯವರೇ ಎಂಟು ಇಂಚಿನಿಂದ ಹತ್ತು ಇಂಚಿಗೆ ಶಿಫ್ಟ್ ಆಗಿರುವಾಗ ಸ್ಮಾರ್ಟ್ ಸಿಟಿಯವರು ರಿವರ್ಸ್ ಗೇರಿಗೆ ಹೋಗುತ್ತಿರುವುದು ಎಂತಹ ದುರ್ಧೈವ!
Leave A Reply