ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಈಗ ಒಂದು ವರ್ಷ!
ನೀವು ಯಾವುದೋ ಸಮಾರಂಭಕ್ಕೆ ಹೋಗಿರುತ್ತೀರಿ. ಟೇಬಲ್ ಮೇಲೆ ಕುಳಿತು ಊಟ ಮಾಡೋಣ ಎಂದು ನಿರ್ಧರಿಸಿ ಟೇಬಲ್ ಹಾಕಿದ ಕಡೆ ಹೋಗಿ ಊಟಕ್ಕೆ ಕುಳಿತುಕೊಳ್ಳುತ್ತೀರಿ. ನಿಮ್ಮ ಎದುರು ಕ್ಯಾಟರಿಂಗ್ ನ ಹುಡುಗ ಬಂದು ಪ್ಲಾಸ್ಟಿಕ್ ಹಾಳೆಯನ್ನು ಎಳೆಯುತ್ತಾ ಹೋಗುತ್ತಾನೆ. ಅದರ ನಂತರ ಎಲೆ ಬರುತ್ತದೆ. ನೀವು ಸಾವಕಾಶವಾಗಿ ಊಟ ಮಾಡಿ ಎದ್ದು ಕೈತೊಳೆಯಲು ಹೋಗುತ್ತಿರಿ. ನಂತರ ಕ್ಯಾಟರಿಂಗ್ ನ ಹುಡುಗರು ಬಂದು ಆ ಟೇಬಲ್ ಮೇಲಿದ್ದ ಎಲೆಗಳೊಂದಿಗೆ ಆ ಪ್ಲಾಸ್ಟಿಕ್ ಅನ್ನು ಸೇರಿಸಿ ತ್ಯಾಜ್ಯದ ರಾಶಿ ಮಾಡುತ್ತಾರೆ. ಅದರ ನಂತರ ಎಲ್ಲವೂ ಅದೇ ರಸ್ತೆಯ ಪಾಲಿಕೆಯ ಕಬ್ಬಿಣದ ಡಬ್ಬಿಯನ್ನು ಸೇರುತ್ತವೆ. ಇಷ್ಟೇ ಆದರೆ ಏನು ಸಮಸ್ಯೆ ಎಂದು ನೀವು ಕೇಳಬಹುದು. ವಿಷಯ ಇರುವುದೇ ಇದರ ನಂತರ.ಆ ತ್ಯಾಜ್ಯದ ವಾಸನೆ ಯಾವ ರೀತಿಯಲ್ಲಿ ಅಕ್ಕಪಕ್ಕದಲ್ಲಿ ಹರಡುತ್ತದೆ ಎಂದರೆ ಹಸಿದ ಗೋಕರುಗಳು ಅದರ ಸನಿಹಕ್ಕೆ ಬರುತ್ತವೆ. ಆದರೆ ಅವುಗಳಿಗೆ ಆ ಪ್ಲಾಸ್ಟಿಕ್ ಒಳಗಿರುವ ಊಟ, ಪದಾರ್ಥ ಕಾಣುತ್ತದೆಯಾದರೂ ಅದನ್ನು ತಿನ್ನುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಪ್ಲಾಸ್ಟಿಕ್ ಬಿಡಿಸಿ ಎಲೆ ಮಾತ್ರ ಊಟ ಮಾಡಲು ಪ್ರಾಣಿಗಳಿಗೆ ಆಗುವುದಿಲ್ಲ. ಅವು ತಮ್ಮ ಬಾಯಿಂದ ಆದಷ್ಟು ಪ್ರಯತ್ನ ಮಾಡಿ ತಿನ್ನಲು ಹೋಗುತ್ತವೆ. ಈ ಮೂಲಕ ಆ ಎಲೆ, ಊಟದೊಂದಿಗೆ ಪ್ಲಾಸ್ಟಿಕ್ ಕೂಡ ದನದ ಹೊಟ್ಟೆ ಸೇರುತ್ತದೆ. ಹೊಟ್ಟೆಗೆ ಪ್ಲಾಸ್ಟಿಕ್ ಹೋದ ಬಳಿಕ ಕೆಲವು ವರ್ಷಗಳ ನಂತರದ ಆ ದನ ಒದ್ದಾಡಿ ಪ್ರಾಣ ಬಿಡುತ್ತದೆ. ನಮ್ಮ ಶೋಕಿಯ ತೆವಲಿಗೆ ನಾವು ಬಡಪಾಯಿ ದನಗಳನ್ನು ಪರೋಕ್ಷವಾಗಿ ಹತ್ಯೆ ಮಾಡಿರುತ್ತವೆ. ಅದಕ್ಕೆ ಏನು ಮಾಡಬೇಕು?
ಪ್ಲಾಸ್ಟಿಕ್ ನಿಷೇಧ. ಭಾರತ ಸಂವಿಧಾನದ ಕಲಾಂ 48ಎ ಅನ್ವಯ, ಪ್ರತಿ ರಾಜ್ಯದಲ್ಲಿಯೂ ರಾಜ್ಯ ಸರಕಾರ ಪ್ಲಾಸ್ಟಿಕ್ ಸಂಬಂಧಿತ ಎಲ್ಲಾ ವಸ್ತುಗಳನ್ನು ನಿಷೇಧಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳು, ಪ್ಲಾಸ್ಟಿಕ್ ಭಿತ್ತಿಪತ್ರಗಳು, ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ತಟ್ಟೆ, ಫ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ಹಾಳೆ, ಪ್ಲಾಸ್ಟಿಕ್ ಚಮಚಾಗಳು, ಕ್ಲಿಂಗ್ ಫಿಲ್ಮ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆಗಳು ಮತ್ತು ತೆರ್ಮಕೊಲ್ ನಿಂದ ತಯಾರಾದ ವಸ್ತುಗಳ ವ್ಯಾಪಕ ಬಳಕೆಯಿಂದಾಗಿ ಪರಿಸರಕ್ಕೆ ಹಾನಿ ಮತ್ತು ಮಾನವ ಮತ್ತಿತ್ತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿರುವುದರ ಜೊತೆಗೆ, ಚರಂಡಿಗಳ, ಮೋರಿಗಳ ಮತ್ತು ಒಳಚರಂಡಿಗಳ ಸರಾಗ ಹರಿಯುವಿಕೆಗೆ ಕೂಡ ಪ್ಲಾಸ್ಟಿಕ್ ಅಡ್ಡಿಯಾಗಿರುವುದು ಸಂಶಯಕ್ಕೆ ಆಸ್ಪದವೇ ಇಲ್ಲ. ಈ ಎಲ್ಲಾ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ನಿಷೇಧ ಉಲ್ಲಂಘಿಸುವವರ ಮೇಲೆ ಕ್ರಮ ವಹಿಸುವ ಅಧಿಕಾರವನ್ನು ಒಳಗೊಂಡ ವಿವರಗಳನ್ನು ಸರಕಾರದ ಪತ್ರದಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಗಳಿಗೆ ಕಳುಹಿಸಿಕೊಡಲಾಗಿದೆ.
ಇಷ್ಟೆಲ್ಲಾ ಆದರೂ ಇನ್ನೂ ಕೂಡ ಈ ಪ್ಲಾಸ್ಟಿಕ್ ಬಳಸುವುದಕ್ಕೆ ಜನ ಹಿಂಜರಿಯುತ್ತಿಲ್ಲ. ಅದಕ್ಕೆ ಕಾರಣ ಅಂಗಡಿಗಳಲ್ಲಿ ಇದನ್ನು ಪೂರೈಸುವುದು ಸಂಪೂರ್ಣವಾಗಿ ನಿಂತಿಲ್ಲ. ಹಲವು ಮಾಲ್ ಗಳಲ್ಲಿ ಕ್ಯಾರಿಬ್ಯಾಗ್ ಗೆ ಹೆಚ್ಚುವರಿ 5 ರೂಪಾಯಿ ವಿಧಿಸಿದರೂ ಜನ ಅದಕ್ಕೆ ಹಣ ಪಾವತಿಸಿ ಪ್ಲಾಸ್ಟಿಕ್ ಖರೀದಿಸುತ್ತಿದ್ದಾರೆ. ಆದರೆ ಕ್ಯಾರಿಬ್ಯಾಗ್ ಎಂಬ ಶಬ್ದಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು, 2016 ರ ನಿಯಮ 3(ಸಿ) ರಲ್ಲಿ ನೀಡಿರುವ ವ್ಯಾಖ್ಯಾನದಲ್ಲಿ ಯಾವುದೇ ಸಾಮಾಗ್ರಿಗಳನ್ನು ಉಪಯೋಗಿಸುವ ಮೊದಲು ಪ್ಯಾಕ್ ಮಾಡಿ ಸೀಲ್ ಮಾಡಿರುವ ಪ್ಯಾಕೆಂಜಿಂಗ್ ಪ್ಲಾಸ್ಟಿಕ್ ಗಳು ಸೇರುವುದಿಲ್ಲ ಎಂದು ಹೇಳಲಾಗಿದೆ.
Leave A Reply