ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು – ಬಾಂಬೆ ಹೈಕೋರ್ಟ್ ಪೀಠ!

ಆರೋಪಿ ಹಾಗೂ ಸಂತ್ರಸ್ತೆಯ ನಡುವೆ ಕಾಂಪ್ರಮೈಸ್ ಆಗಿದೆ ಎನ್ನುವ ಕಾರಣಕ್ಕೆ ಅತ್ಯಾಚಾರ ಪ್ರಕರಣದಲ್ಲಿ ದಾಖಲಾದ ಎಫ್ ಐ ಆರ್ ರದ್ದು ಮಾಡಲು ಆಗುವುದಿಲ್ಲ. ಯಾಕೆಂದರೆ ಅದು ಸಮಾಜದ ನೈತಿಕತೆಯ ವಿರುದ್ಧ ಸಂದೇಶ ನೀಡಿದಂತೆ ಆಗುತ್ತದೆ ಎಂದು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠ ಆದೇಶ ನೀಡಿದೆ. ಇಬ್ಬರು ಆರೋಪಿಗಳ ವಿರುದ್ಧ ದಾಖಲಾದ ಅತ್ಯಾಚಾರದ ಪ್ರಕರಣದ ಎಫ್ ಐ ಆರ್ ರದ್ದು ಕೋರಿ ಸಲ್ಲಿಸಿದ ಮೇಲ್ಮನವಿಯ ಪ್ರಕರಣದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ವಿಭಾ ಕಂಕನವಾಡಿ ಹಾಗೂ ನ್ಯಾಯಮೂರ್ತಿ ಸಂಜಯ ದೇಶಮುಖ್ ಅವರು ಸಂತ್ರಸ್ತೆ ಮಹಿಳೆಯ ಹೇಳಿಕೆಯಾಗಿರುವ ಆರೋಪಿ ಹಾಗೂ ತಾನು ಆತ್ಮೀಯ ಗೆಳೆಯರಾಗಿದ್ದು, ಕೆಲವು ತಪ್ಪು ತಿಳುವಳಿಕೆಯಿಂದ ದೂರು ದಾಖಲಿಸಿದ ಪರಿಣಾಮ ಎಫ್ ಐ ಆರ್ ಆಗಿದೆ. ಆದ್ದರಿಂದ ಎಫ್ ಐ ಆರ್ ರದ್ದು ಮಾಡಬೇಕು ಎಂದು ಕೋರಿದ್ದಾರೆ.
ಈ ಬಗ್ಗೆ ನ್ಯಾಯಾಧೀಶರು ತಮ್ಮ ತೀರ್ಪನ್ನು ದಾಖಲಿಸಿದ್ದು ” ಅತ್ಯಾಚಾರ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳು ಕಂಡುಬಂದಿದ್ದು, ಈಗ ದೂರುದಾರೆ ತಾನು ಆರೋಪಿಯೊಂದಿಗೆ ಬಹಳ ಕಾಲದಿಂದ ಆತ್ಮೀಯತೆ ಹೊಂದಿರುವುದಾಗಿ ಹೇಳುತ್ತಿದ್ದಾರೆ. ಈಗ ಎಫ್ ಐ ಆರ್ ರದ್ದು ಮಾಡಿ ಪ್ರಕರಣವನ್ನು ಮುಗಿಸಬೇಕು ಎನ್ನುವ ಕಾರಣಕ್ಕಾಗಿ ಆಗ ತಪ್ಪು ತಿಳುವಳಿಕೆ ಬಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ ಅತ್ಯಾಚಾರ ಪ್ರಕರಣದಲ್ಲಿ ತಪ್ಪು ತಿಳುವಳಿಕೆ ಎನ್ನುವುದು ಎಫ್ ಐಆರ್ ದಾಖಲಿಸುವ ಮಟ್ಟಿಗೆ ಹೋಗಿರುವುದು ಸಮಂಜಸವಲ್ಲ” ಎನ್ನುವ ಅರ್ಥದ ತೀರ್ಪನ್ನು ನೀಡಿದ್ದಾರೆ.
ಕಾಂಪ್ರೋಮೈಸ್ ಎನ್ನುವುದು ಯಾವ ಆಧಾರದಲ್ಲಿ ನಡೆಯುತ್ತದೆಯೋ ಬೇರೆ ವಿಷಯ. ಎಫ್ ಐ ಆರ್ ನಲ್ಲಿ ದಾಖಲಾಗಿರುವ ವಿಷಯದಲ್ಲಿ ತಪ್ಪಿದೆ ಎನ್ನುವುದು ವಿಷಯವಾಗಿಲ್ಲ. ಆದರೆ ಈಗ ಆರೋಪಿಯನ್ನು ಕ್ಷಮಿಸುವ ಕಾರಣಕ್ಕೆ ಎಫ್ ಐ ಆರ್ ರದ್ದು ಮಾಡಲು ವಿನಂತಿ ಮಾಡಲಾಗಿದೆ ಎನ್ನುವುದು ನ್ಯಾಯಮೂರ್ತಿಗಳ ಅಭಿಪ್ರಾಯ.
ನ್ಯಾಯಾಧೀಶರು ” ಇಂತಹ ಸಂದರ್ಭದಲ್ಲಿ ಕೆಳ ನ್ಯಾಯಾಲಯಗಳು ದೂರುದಾರೆಯ ವಿರುದ್ಧವೇ ಸುಳ್ಳು ಹೇಳಿಕೆ ನೀಡಿರುವ ಕೇಸನ್ನು ದಾಖಲಿಸಬಹುದು” ಎಂದು ಹೇಳಿದ್ದಾರೆ.
“ಕಾಂಪ್ರಮೈಸ್ ಮಾಡಿ ಪ್ರಕರಣವನ್ನು ರದ್ದು ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ಸಂತ್ರಸ್ತೆಯು ಪ್ರತಿಕೂಲ ಸಾಕ್ಷಿಯಾಗಿ ಪ್ರಕರಣಗಳೇ ಹಳ್ಳ ಹಿಡಿದಿರುವುದು ನಮಗೆ ಗೊತ್ತಿದೆ. ಆದ್ದರಿಂದ ಕೆಳ ನ್ಯಾಯಾಲಯಗಳು ಇಂತಹ ಸಂದರ್ಭದಲ್ಲಿ ಅಂತಹ ದೂರುದಾರೆಯ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಕೇಸನ್ನು ದಾಖಲಿಸಬಹುದು. ಕೆಲವು ಕಾಂಪ್ರಮೈಸ್ ಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದಿಲ್ಲ. ಕೆಲವೊಮ್ಮೆ ಆರೋಪಿಗಳು ಹಣದ ಆಮಿಷ ಅಥವಾ ಬೇರೆ ಆಮಿಷ, ಒತ್ತಡ ಹಾಕಿ ದೂರುದಾರೆಯಿಂದ ಕಾಂಪ್ರಮೈಸ್ ಎನ್ನುವುದನ್ನು ಮಾಡಿಕೊಳ್ಳುತ್ತಾರೆ ” ನ್ಯಾಯಾಧೀಶರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಎರಡು ಮಕ್ಕಳ ತಾಯಿಯಾಗಿರುವ ಹೆಂಗಸೊಬ್ಬಳು ಗದ್ದೆಯಲ್ಲಿ ಹೋಗುವಾಗ ಅವಳನ್ನು ಹತ್ತಿರ ಕರೆದು ವಿಳಾಸ ಕೇಳುವ ನೆಪದಲ್ಲಿ ಮುಖಕ್ಕೆ ಏನೋ ಹಾಕಿ ಅವಳಿಗೆ ಸಣ್ಣಗೆ ಮತಿ ತಪ್ಪಿದಂತೆ ಆದಾಗ ಕಾರಿನ ಒಳಗೆ ಎಳೆದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅವಳು ವಿರೋಧಿಸಿದಾಗ ಅವಳಿಗೆ ಹಲ್ಲೆ ಮಾಡಿದ ಪರಿಣಾಮ ಅವಳ ತುಟಿಗೆ ಗಾಯವಾಗಿದೆ.
ನಂತರ ಆರೋಪಿ ಆಕೆಯನ್ನು ಲಾಡ್ಜಿಗೆ ಕರೆದುಕೊಂಡು ಹೋಗಿ ಅವಳಿಗೆ ಮತ್ತೆ ಲೈಂಗಿಕ ಸುಖಕ್ಕಾಗಿ ಪೀಡಿಸಿದ್ದಾನೆ. ಅವಳು ಬೊಬ್ಬೆ ಹೊಡೆದಿದ್ದಾಳೆ. ಆಗ ಲಾಡ್ಜ್ ಮಾಲೀಕ ಅವರಿಗೆ ಬೊಬ್ಬೆ ಹೊಡೆಯದಂತೆ ಎಚ್ಚರಿಕೆ ನೀಡಿದ್ದಾನೆ. ನಂತರ ಆರೋಪಿ ಹಾಗೂ ಸಂತ್ರಸ್ತೆಯ ನಡುವೆ ಘರ್ಷಣೆ ಆಗಿ ಬೊಬ್ಬೆ ಜಾಸ್ತಿಯಾದಾಗ ಅವರಿಬ್ಬರನ್ನು ಲಾಡ್ಜ್ ನಿಂದ ಹೊರಗೆ ಕಳುಹಿಸಲಾಗಿದೆ. ನಂತರ ಆರೋಪಿ ಆಕೆಯನ್ನು ಲಾಥೂರ್ ಜಿಲ್ಲೆಯ ರಸ್ತೆಯೊಂದರಲ್ಲಿ ಬಿಟ್ಟು ತೆರಳಿದ್ದಾನೆ. ನಂತರ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಂಡನಿಗೆ ಫೋನ್ ಮಾಡಿದ್ದಾಳೆ. ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೋಟೇಲಿನ ಮಾಲೀಕ ಹಾಗೂ ಕಾರಿನ ನಿಜವಾದ ಮಾಲೀಕನ ಸಾಕ್ಷ್ಯವನ್ನು ದಾಖಲಿಸಿ, ಉಳಿದ ಸಾಕ್ಷಿಗಳ ವಿಚಾರಣೆಯ ನಂತರ ಅಪರಾಧ ನಡೆದಿರುವುದು ನ್ಯಾಯಾಧೀಶರಿಗೆ ಮನವರಿಕೆ ಆಗಿದೆ.
“ಪ್ರಕರಣವನ್ನು ಪರಿಶೀಲಿಸಿ ಇದೊಂದು ಗುರುತರವಾದ ಅಪರಾಧವಾಗಿದ್ದು, ನಂತರ ಕಾಂಪ್ರಮೈಸ್ ನೆಪದಲ್ಲಿ ಪ್ರಕರಣವನ್ನು ರದ್ದು ಮಾಡಲು ಆಗುವುದಿಲ್ಲ. ಈಗ ದೂರುದಾರೆ ಈ ಪ್ರಕರಣವನ್ನು ರದ್ದು ಕೋರಿ ಮಾಡಿದ ಮನವಿಯನ್ನು ನ್ಯಾಯಾಲಯ ಸಿಆರ್ ಪಿಸಿ ಸೆಕ್ಷನ್ 482 ನಲ್ಲಿ ಪರಿಗಣಿಸಿ ಪುರಸ್ಕರಿಸಲಾಗುವುದಿಲ್ಲ. ಆರೋಪಿ ಅಥವಾ ದೂರುದಾರೆ ಕಾನೂನಿನೊಂದಿಗೆ ಯಾವುದೇ ಆಟವಾಡಲು ನಾವು ಬಿಡುವುದಿಲ್ಲ. ಆದ್ದರಿಂದ ಎಫ್ ಐ ಆರ್ ರದ್ದು ಕೋರಿ ಮನವಿಯನ್ನು ನ್ಯಾಯಾಲಯ ಒಪ್ಪುವುದಿಲ್ಲ ” ಎಂದು ಸ್ಪಷ್ಟವಾಗಿ ಹೇಳಿದೆ. ಈ ಎಲ್ಲಾ ವಿಷಯಗಳನ್ನು ಇಟ್ಟುಕೊಂಡು ನ್ಯಾಯಾಲಯ ಮಹಿಳೆಯ ಮನವಿಯನ್ನು ತಳ್ಳಿ ಹಾಕಿದೆ.