ಮೋದಿ ಕನಸು ಆದರ್ಶ ಗ್ರಾಮ ಯೋಜನೆ ನಳಿನ್ ಫಸ್ಟ್!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ ಮಾಡಿದ ತಕ್ಷಣ ಜಾರಿಗೆ ತಂದಿರುವ ಹಲವಾರು ಯೋಜನೆಗಳಲ್ಲಿ ನನಗೆ ಇಷ್ಟವಾಗಿರುವುದು ಆದರ್ಶ ಗ್ರಾಮ ಯೋಜನೆ. ಯಾಕೆಂದರೆ ಭಾರತದ ಅಸಂಖ್ಯಾತ ಹಳ್ಳಿಗಳಲ್ಲಿ ಇವತ್ತಿಗೂ ಆಧುನಿಕ ಸೌಲಭ್ಯ ಏನು ಎಂದು ಗೊತ್ತಿರುವ ಜನರು ತಲೆತಲಾಂತರಗಳಿಂದ ವಾಸಿಸುತ್ತಿದ್ದಾರೆ. ಅವರಿಗೆ ವಿದ್ಯುತ್, ರಸ್ತೆ, ನೀರು, ಶಾಲೆ, ಸೇತುವೆಯಿಂದ ಹಿಡಿದು ಗ್ರಾಮ ಪಂಚಾಯತ್ ಕಟ್ಟಡದ ತನಕ ಯಾವುದೂ ಸರಿಯಾಗಿ ಸಿಕ್ಕಿರಲಿಲ್ಲ. ಹಾಗಂತ ಅಂತಹ ಕುಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ನಾವು ಸದಾ ಸಿದ್ಧ ಎಂದು ಭಾಷಣಗಳಲ್ಲಿ ಹೇಳಿ ಚಪ್ಪಾಳೆ ತಟ್ಟಿಸಿಕೊಳ್ಳುವ ರಾಜಕಾರಣಿಗಳು ಭಾಷಣ ಮುಗಿದ ಮೇಲೆ ಅತ್ತ ತಲೆ ಹಾಕಿ ಕೂಡ ಮಲಗುವುದಿಲ್ಲ. ಹಾಗಾದರೆ ಭಾರತದ ಇಂತಹ ಹಳ್ಳಿಗಳ ಜನರಿಗೆ ಸರಿಯಾದ ಮೂಲಭೂತ ಸೌಲಭ್ಯಗಳು ಸಿಗುವುದು ಬೇಡವಾ? ಇನ್ನೆಷ್ಟು ದಿನ ಎಂದು ಅಂತಹ ಹಳ್ಳಿಗಳು ಶಿಲಾಯುಗದಲ್ಲಿ ಇರುವುದು ಎಂದು ಅಂದುಕೊಂಡ ನರೇಂದ್ರ ಮೋದಿ ಇದನ್ನು ಒಂದು ಯೋಜನೆಯ ರೀತಿಯಲ್ಲಿ ಎತ್ತಿಕೊಳ್ಳದೇ ಹೋದರೆ ಏನು ಆಗುವುದಿಲ್ಲ ಎಂದು ನಿರ್ಧರಿಸಿಬಿಟ್ಟರು. ಹಾಗೇ ಅವರು ಜಾರಿಗೆ ತಂದದ್ದೇ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ. ಈ ನಾಲ್ಕೂವರೆ ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬ ಸಂಸದ ಕೂಡ ಇದನ್ನು ಎಷ್ಟು ಆಸಕ್ತಿಯಿಂದ ಕೈಗೆತ್ತಿಕೊಂಡಿದ್ದಾರೆ ಎನ್ನುವುದು ಅವರವರಿಗೆ ಬಿಟ್ಟಿದ್ದು. ಆದರೆ ಕರ್ನಾಟಕದ ಮಟ್ಟಿಗೆ ಮಾತ್ರ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದಿರುವವರಲ್ಲಿ ಅಗ್ರಸ್ಥಾನದಲ್ಲಿ ನಿಂತಿದ್ದಾರೆ.
ಏನಿತ್ತು ಮಾನದಂಡ…
ನಳಿನ್ ಕುಮಾರ್ ಕಟೀಲ್ ಅವರು ಸುಳ್ಯದ ಸಮೀಪ ಬಳ್ಪ ಎನ್ನುವ ಕುಗ್ರಾಮವನ್ನು ತೆಗೆದುಕೊಂಡು ತಮ್ಮ ಕೈಮೀರಿ ಪ್ರಯತ್ನ ಮಾಡಿ ಆದರ್ಶ ಗ್ರಾಮವನ್ನಾಗಿ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಸಿಎಂಆರ್ ಡಿ ಸಂಸ್ಥೆ ತನ್ನ ವರದಿಯಲ್ಲಿ ನಳಿನ್ ಸಾಧನೆಯನ್ನು ಎತ್ತಿಹಿಡಿದಿದೆ. ಮೂಲ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನದ ಬಳಕೆ ಸೇರಿದಂತೆ ಒಟ್ಟು ಒಂಭತ್ತು ಅಂಶಗಳ ಮಾನದಂಡದ ಆಧಾರದ ಮೇಲೆ ಯಾವ ಗ್ರಾಮ ಆದರ್ಶವಾಗಿದೆ ಎನ್ನುವುದು ಜಾರಿಯಾಗಬೇಕಿತ್ತು. ಕೇಂದ್ರದಿಂದ ಬರುವ ಸಂಸದರ ನಿಧಿ, ಸಿಆರ್ ಎಫ್ ಹಣ ಬಳಕೆ, ಸ್ವಯಂ ಸೇವಾ ಸಂಸ್ಥೆಗಳ ಒಳಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡದೇ ಇದ್ದ ಕಾರಣ ಹಲವಾರು ಸಂಸದರ ಕನಸು ಈಡೇರಲೇ ಇಲ್ಲ. ಅನೇಕ ಸಂಸದರು ಕೇವಲ ಮೂಲ ಸೌಕರ್ಯಗಳಿಗೆ ಮಾತ್ರ ಒತ್ತು ನೀಡಿದ್ದು, ಸಿಎಂಡಿಆರ್ ನ ವರದಿಯಲ್ಲಿ ಉಲ್ಲೇಖವಾಗಿದೆ. ಹಳ್ಳಿ ಶಾಶ್ವತವಾಗಿ ತನ್ನ ಸಂಪನ್ಮೂಲ ಕ್ರೋಢಿಕರಿಸಿಕೊಂಡು ಸುಸ್ಥಿರ ಗ್ರಾಮವಾಗಿ ರೂಪಗೊಳ್ಳಲು ಅಗತ್ಯ ಮಾನದಂಡಗಳ ಬಳಕೆ ಅನೇಕ ಕಡೆ ಆಗಿಲ್ಲ. ಯಾವುದೇ ಆದರ್ಶ ಗ್ರಾಮಗಳ ಪಂಚಾಯತ್ ಗಳು ಕೂಡ ಸಮಗ್ರ ಅಭಿವೃದ್ಧಿ ಚಿಂತನೆ ಅಡಿಯಲ್ಲಿ ಕ್ರಿಯಾ ಯೋಜನೆ ರೂಪಿಸದಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಆದರೆ ನಳಿನ್ ಕುಮಾರ್ ಕಟೀಲ್ ಮಾನದಂಡಗಳಲ್ಲಿ ಹೆಚ್ಚಿನವುಗಳನ್ನು ಪೂರೈಸಿರುವುದು ವರದಿಯಲ್ಲಿ ನಿಚ್ಚಳವಾಗಿದೆ.
ಉಳಿದವರಿಗೆ ಇಚ್ಚಾಶಕ್ತಿಯ ಕೊರತೆ…
ಸಂಸದರಿಗೆ ಇಚ್ಚಾಶಕ್ತಿಯೊಂದು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ನಳಿನ್ ಅವರ ಆದರ್ಶ ಗ್ರಾಮ ಯೋಜನೆ ಬಹುತೇಕ ಯಶಸ್ವಿಯಾಗಿ ಅವರು ನಂಬರ್ ಒಂದನೇ ಸ್ಥಾನದಲ್ಲಿ ನಿಂತಿರುವುದು ಸಾಕ್ಷಿಯಾಗಿದೆ. ಅಷ್ಟಕ್ಕೂ ಅವರಿಗೆ ಹೀಗೆ ನಂಬರ್ ಒಂದನೇ ಸ್ಥಾನ ಕೊಟ್ಟಿರುವುದು ಅವರ ವೈರಿಗಳಿಗೆ ನುಂಗಲಾರದ ತುಪ್ಪವಾಗಬಹುದು. ಆದರೆ ಕೊಟ್ಟಿರುವ ಸಂಸ್ಥೆಯ ಬಗ್ಗೆ ತಿಳಿದಾಗ ವಾಸ್ತವ ಗೊತ್ತಾಗುತ್ತದೆ. ನಮ್ಮ ರಾಜ್ಯದಲ್ಲಿ ಇವರ ಹಾಗೆ ಘಟಾನುಘಟಿ ಸಂಸದರಿದ್ದಾರೆ. ಆದರೆ ಬೇರೆ ಸಂಸದವರು ಆದರ್ಶ ಗ್ರಾಮ ಯೋಜನೆಯ ಬಗ್ಗೆ ಅಷ್ಟಾಗಿ ಆಸಕ್ತಿ ವಹಿಸದೇ ಇರುವುದು ಇಲ್ಲಿ ಸ್ಪಷ್ಟವಾಗಿದೆ. ನಳಿನ್ ಬಳ್ಪ ಪ್ರದೇಶಕ್ಕೆ ಅನೇಕ ಸಲ ಭೇಟಿ ಕೊಟ್ಟಿದ್ದಾರೆ. ಇವರಷ್ಟು ಆದರ್ಶ ಗ್ರಾಮಗಳಿಗೆ ಭೇಟಿ ಕೊಟ್ಟ ಬೇರೆ ಸಂಸದರು ಕೂಡ ಇಲ್ಲ. ಅನೇಕರು ಕೇವಲ ಘೋಷಣೆ ಮಾಡಿ ಒಂದೆರಡು ಸಲ ಹೋಗಿದ್ದು ಬಿಟ್ಟರೆ ತಮ್ಮ ಆಯ್ಕೆಯ ಕುಗ್ರಾಮಗಳತ್ತ ಕಣ್ಣೆತ್ತಿ ಕೂಡ ನೋಡಿಲ್ಲ. ಆ ಕಾರಣದಿಂದ ಉಳಿದವರ ಗ್ರಾಮಗಳು ನಳಿನ್ ಅವರ ಗ್ರಾಮಗಳಂತೆ ಆದರ್ಶ ಗ್ರಾಮಗಳಾಗಿಲ್ಲ. ಇನ್ನು ನಳಿನ್ ಹಲವಾರು ಸಂಘ, ಸಂಸ್ಥೆ, ಕಂಪೆನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅನುದಾನ ತರಿಸಿ ಬಳ್ಪಕ್ಕೆ ಸುರಿದಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಇದೆಲ್ಲ ಒಬ್ಬ ಸಂಸದನಿಗೆ ನೈತಿಕ ಸ್ಥೈರ್ಯ ಖಂಡಿತವಾಗಿ ಹೆಚ್ಚಿಸುತ್ತದೆ!
Leave A Reply