ಪಿಣರಾಯಿ ಕೆಲವು ಮಹಿಳೆಯರನ್ನು ಮುಂದಿಟ್ಟು ಆಟವಾಡಿದರೆ ಸುಟ್ಟು ಭಸ್ಮವಾಗಲು ತುಂಬಾ ದಿನ ಬೇಕಿಲ್ಲ!!
ಇದರಲ್ಲಿ ಗೆದ್ದದ್ದು ಯಾರು? ಪಿಣರಾಯಿ ವಿಜಯನ್, ಕಮ್ಯೂನಿಸ್ಟರು, ಎಡಪಕ್ಷದ ಸರಕಾರ, ಅಯ್ಯಪ್ಪ ದೇವಳ ಪ್ರವೇಶಿಸಿದ ಮಹಿಳೆಯರು ಅಥವಾ ಭಕ್ತಿ. ಗೆದ್ದದ್ದು ಧರ್ಮದ್ರೋಹಿಗಳು. ಇದು ಕಮ್ಯೂನಿಸ್ಟ್ ಮತ್ತು ಬಿಜೆಪಿ ಹೋರಾಟ ಆಗಿರಲೇ ಇಲ್ಲ. ಇದು ಪುರುಷ ಮತ್ತು ಮಹಿಳೆಯರ ಹೋರಾಟ ಆಗಿರಲೇ ಇಲ್ಲ. ಇದು ಎಡಪಂಥ ಮತ್ತು ಬಲಪಂಥದ ಹೋರಾಟ ಆಗಿರಲೇ ಇಲ್ಲ. ಇದು ಅಪ್ಪಟ ಧರ್ಮಪರ ಮತ್ತು ಧರ್ಮವಿರೋಧಿಗಳ ನಡುವಿನ ಹೋರಾಟವಾಗಿತ್ತು. ಸದ್ಯ ಧರ್ಮವಿರೋಧಿಗಳ ಕೈ ಮೇಲಾಗಿದೆ. ಈ ಮೂಲಕ ಪಿಣರಾಯಿ ವಿಜಯನ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಅಯ್ಯಪ್ಪ ಸ್ವಾಮಿಯ ನಿಜವಾದ ಕಾರಣಿಕ ಇನ್ನು ಶುರುವಾಗಲಿದೆ.
ನರ ಮತ್ತು ರಾಕ್ಷಸರ ನಡುವಿನ ಯುದ್ಧ ಇಂದು ನಿನ್ನೆಯದ್ದಲ್ಲ. ಪುರಾಣಗಳಲ್ಲಿ ಕೂಡ ಇದರ ಉಲ್ಲೇಖವಿದೆ. ಯಾವುದು ಆಗಬಾರದು ಎಂದು ದೇವತೆಗಳು ಬಯಸುತ್ತಿದ್ದರೋ ಅದನ್ನು ರಾಕ್ಷಸರು ಮಾಡುತ್ತಿದ್ದರು. ಋಷಿ, ಮುನಿಗಳು ಯಾಗ, ಹೋಮಗಳನ್ನು ಮಾಡುವಾಗ ಹೋಮಕುಂಡಕ್ಕೆ ಮಾಂಸ, ರಕ್ತವನ್ನು ಸುರಿದು ಯಾಗ ಸಂಪನ್ನವಾಗದಂತೆ ನೋಡಿಕೊಂಡ ಕಾರಣದಿಂದಲೇ ಋಷಿಗಳ ಕೋಪಕ್ಕೆ ರಾಕ್ಷಸರು ತುತ್ತಾಗಿ ಶಾಪಗ್ರಸ್ತರಾಗುತ್ತಿದ್ದರು. ಭಗವಾನ್ ನಂತಹ ಕೆಲವರು ಅದರ ಪಳೆಯುಳಿಕೆಗಳಾಗಿದ್ದಾರೆ. ಹಾಗೆ ಅಸುರರ ವಂಶದಲ್ಲಿ ಹುಟ್ಟಿದ ಇಬ್ಬರು ಋತಿಮತಿ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವರ ಶಬರಿಮಲೆ ದೇವಸ್ಥಾನದ ಒಳಗೆ ಪ್ರವೇಶ ಮಾಡಿ ಇಷ್ಟು ವರ್ಷ ನಡೆದುಕೊಂಡ ಬಂದ ಸಂಪ್ರದಾಯವನ್ನು ಮುರಿದಿದ್ದಾರೆ. ಹಾಗೆ ಮಾಡುವ ಮೂಲಕ ಅವರಿಗೆ ಏನು ಸಿಕ್ಕಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಏನಾದರೂ ವಿಶೇಷ ಸೌಲಭ್ಯ? ಸದ್ಯಕ್ಕೆ ಗೊತ್ತಿಲ್ಲ. ಬರುವ ದಿನಗಳಲ್ಲಿ ಅದು ಹೊರಗೆ ಬರಬಹುದು.
ಧರ್ಮ ವಿರೋಧಿ ನಡೆ…
ನೀವು ಕೆಲವು ದೇವಸ್ಥಾನಗಳಿಗೆ ಹೋಗುವಾಗ ಅಲ್ಲಿ ಪುರುಷರು ಶರ್ಟ್, ಪ್ಯಾಂಟ್ ತೆಗೆದು ಪಂಚೆ ಧರಿಸಿಕೊಂಡು ಹೋಗಬೇಕು. ಸ್ತ್ರೀಯರು ಲಕ್ಷಣವಾಗಿ ಸೀರೆ, ಚೂಡಿದಾರ್ ಧರಿಸಬೇಕು ಎನ್ನುವ ನಿಯಮವಿದೆ. ಅಂತಹ ದೇವಸ್ಥಾನಗಳಲ್ಲಿ ನಾವು ಹೇಗೆ ಬೇಕಾದರೂ ಹೋಗುತ್ತೇವೆ. ಬಿಡದಿದ್ದರೆ ಕೋರ್ಟಿಗೆ ಹೋಗಿ ಆದೇಶ ತರುತ್ತೇವೆ ಎಂದು ಯಾರಾದರೂ ಹೇಳಿದರೆ ಆಗ ಏನು ಮಾಡುವುದು. ಅಂತವರು ಕೋರ್ಟಿಗೆ ಹೋದರೆ ನ್ಯಾಯಾಲಯ ಕೂಡ ಶರ್ಟ್, ಪ್ಯಾಂಟ್ ತೆಗೆಯುವುದು ಅವೈಜ್ಞಾನಿಕ. ಯಾರೂ ಕೂಡ ಹೇಗೆ ಬೇಕಾದರೂ ಹಾಗೆ ಹೋಗಬಹುದು ಎಂದು ಹೇಳಿದರೆ ಏನಾಗುತ್ತದೆ. ಆ ದೇವಳದ ಆಚಾರ, ಸಂಪ್ರದಾಯಕ್ಕೆ ದಕ್ಕೆ ಬರುತ್ತದೆ. ಯಾರಾದರೂ ಶರ್ಟ್, ಪ್ಯಾಂಟ್ ಧರಿಸಿಯೇ ಹೋದರೆ ಏನಾಗುತ್ತದೆ. ನಮಗೆ ಕಸಿವಿಸಿಯಾಗುತ್ತದೆ. ಮನಸ್ಸಿಗೆ ನೋವಾಗುತ್ತದೆ. ಕೇವಲ ಶರ್ಟ್, ಪ್ಯಾಂಟಿನ ವಿಷಯದಲ್ಲಿಯೇ ಹೀಗಾದರೆ ಪುರಾಣಗಳಲ್ಲಿ ಸ್ತ್ರೀಯರು ಅಂದರೆ ಋತುವತಿ ವಯಸ್ಸಿನ ಸ್ತ್ರೀಯರು ಶಬರಿಮಲೆಯ ಅಯ್ಯಪ್ಪನನ್ನು ನೋಡಬಾರದು ಎಂದು ಇದ್ದಾಗಲೂ ಇಲ್ಲ ನಾವು ನೋಡಿಯೇ ನೋಡುತ್ತೇವೆ ಎಂದು ಹಟ ಹಿಡಿದರೆ ಅದಕ್ಕೆ ಸುಪ್ರೀಂಕೋರ್ಟ್ ಬೆಂಬಲ ನೀಡಿದರೆ, ಸ್ಥಳೀಯ ಸರಕಾರಗಳು ಪ್ರೋತ್ಸಾಹ ನೀಡಿದರೆ ಆಗ ಏನಾಗುತ್ತದೆ. ನಿಯಮ ಉಲ್ಲಂಘಿಸುವವರು ಉಲ್ಲಂಘಿಸುತ್ತಾರೆ. ಆಘಾತ ಆಗುವುದು ನೈಜ ಭಕ್ತರಿಗೆ. ಇವತ್ತಿನ ಸನಾತನ ಧರ್ಮ ನಿಂತಿರುವುದೇ ಭಕ್ತಿಯ ಮೇಲೆ. ಒಂದೇ ಸ್ಥಳದಲ್ಲಿ ಎಲ್ಲರೂ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರೆ ಅದರಿಂದ ಹೊರಹೊಮ್ಮುವ ಶಕ್ತಿ ನಮ್ಮನ್ನು ದುಷ್ಟರಿಂದ ರಕ್ಷಿಸುತ್ತದೆ ಎನ್ನುವುದು ನಾವು ನಂಬಿಕೊಂಡು ಬಂದಿರುವ ಸಿದ್ಧಾಂತ. ಅಷ್ಟಕ್ಕೂ ಈ ಬಾರಿ ನಡೆದಿರುವುದು ನಮ್ಮ ನಂಬಿಕೆಯ ಮೇಲೆ ಪ್ರಹಾರ. ಅಯ್ಯಪ್ಪ ಸ್ವಾಮಿಯ ಮೇಲೆ ನಾವು ಇಟ್ಟಿರುವ ಭಕ್ತಿಯ ಪರೀಕ್ಷೆ ನಡೆದು ಹೋಯಿತು. ಅಯ್ಯಪ್ಪ ಸ್ವಾಮಿಯನ್ನು ಶಬರಿಮಲೆಯಲ್ಲಿ ನಾನು ನೋಡಲು ಹೋದದ್ದು ಮೊತ್ತ ಮೊದಲ ಬಾರಿಗೆ 1977 ರಲ್ಲಿ. ನೀವು ಅಲ್ಲಿ ಹೋಗುವ ಮೊದಲು ರೈಲ್ವೆ ಸ್ಟೇಶನ್ ನ ಹೊರಗೆ ಅನೇಕ ಮುಸಲ್ಮಾನರ ಅಂಗಡಿಗಳಲ್ಲಿ, ಹೋಟೇಲ್ ಗಳಲ್ಲಿಯೂ ಅಯ್ಯಪ್ಪ ಸ್ವಾಮಿಯ ದೊಡ್ಡ ದೊಡ್ಡ ಫೋಟೋಗಳಿವೆ. ಅಯ್ಯಪ್ಪನ ಬಗ್ಗೆ ಮುಸಲ್ಮಾನರು ಭಯಭಕ್ತಿಯಿಂದ ಮಾತನಾಡುತ್ತಾರೆ.
ಆ ದಿನಗಳು ಸವಾಲಿನದ್ದು ಆಗಿತ್ತು..
ಒಂದು ಕಾಲದಲ್ಲಿ ಶಬರಿಮಲೆಗೆ ಹೋಗಲು ಮನೆಯಿಂದ ಯಾರಾದರೂ ತಯಾರಾಗಿ ಮಾಲೆ ಧರಿಸಿದರೆ ಆ ವ್ಯಕ್ತಿ ಇರುಮುಡಿ ಕಟ್ಟುವ ದಿನ ಅಕ್ಕಪಕ್ಕದ ಮನೆಯವರು, ಸಂಬಂಧಿಕರು ಬಂದು ತಮ್ಮ ಕೈಯಿಂದ ಮೂರು ಮುಷ್ಟಿ ಅಕ್ಕಿಯನ್ನು ಅದರಲ್ಲಿ ಹಾಕುವ ಸಂಪ್ರದಾಯ ಇತ್ತು. ಏಕೆಂದರೆ ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಲು ಹೊರಡುವ ವ್ಯಕ್ತಿಗೆ ಏಳು ಗುಂಡಿಗೆ ಧೈರ್ಯ ಬೇಕು ಎನ್ನುವ ನಾಣ್ಣುಡಿ ಇತ್ತು. ರೈಲಿನಿಂದ ಇಳಿದು 48 ಮೈಲು ನಡೆದು ದೇವಸ್ಥಾನ ಪ್ರವೇಶಿಸಬೇಕಾಗಿತ್ತು. ದಾರಿಯಲ್ಲಿ ಸಿಗುವ ಕಾಡುಪ್ರಾಣಿಗಳ ದಾಳಿಯಿಂದ ಪಾರಾಗಿ ಹೋಗುವ ಸಾಹಸ ನಮ್ಮ ಕಣ್ಣೆದುರಿಗೆ ಬರುತ್ತಿತ್ತು. ಅದಕ್ಕಾಗಿ ಹೋಗುವ ದಾರಿಯಲ್ಲಿ ಕ್ರೂರಪ್ರಾಣಿಗಳು ದಾಳಿ ಮಾಡದಿರಲಿ ಎಂದು ಅಲ್ಲಲ್ಲಿ ಆಯಕಟ್ಟಿನ ಜಾಗದಲ್ಲಿ ಪಟಾಕಿಗಳನ್ನು ಹೊಡೆದು ಅವುಗಳು ಬರದ ಹಾಗೆ ತಡೆಯುವ ಕೆಲಸ ನಡೆಯುತ್ತಿತ್ತು. ಅದನ್ನು ಒಬ್ಬೊಬ್ಬರ ಹೆಸರಿನಲ್ಲಿ ಪಟಾಕಿ ಹೊಡೆಯವುದು ಎನ್ನಲಾಗುತ್ತಿತ್ತು. ನಾನೇ ಕೆಲವು ಬಾರಿ ಹೋಗುವಾಗ ಆನೆಯ ಲದ್ದಿ, ಮುಳ್ಳು ಹಂದಿಯನ್ನು ಗಮನಿಸಿದ್ದೇನೆ. ನಾವು ಹೋಗುವ ಕೆಲವೇ ನಿಮಿಷಗಳ ಮೊದಲು ಆನೆ ಅತ್ತಲಿಂದ ಹೋಗಿರುವ ಸಾಕ್ಷಿ ಅದು.
ಅಲ್ಲಿಗೆ ಯಾಕೆ ಮಹಿಳೆಯರು ಋತುಮತಿ ವಯಸ್ಸಿನಲ್ಲಿ ಹೋಗಬಾರದು ಎನ್ನುವುದಕ್ಕೆ ಉತ್ತರ ಧಾರ್ಮಿಕ ವಿದ್ವಾಂಸರು, ಪುರಾಣ ಅಧ್ಯಯನ ಮಾಡಿದವರು ಕೊಡಬಹುದು. ಆದರೆ ಹೋಗಬಾರದು ಎನ್ನುವ ತಿಳುವಳಿಕೆ ಕೇರಳ ಸಹಿತ ಎಲ್ಲಾ ಆಸ್ತಿಕ ಬಾಂಧವರಲ್ಲಿ ಇದೆ. ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ದೆಹಲಿಯ ಪೀಠದಲ್ಲಿ ಕೊಡುವುದಕ್ಕೂ, ಶಬರಿಮಲೆಯ ಸನ್ನಿಧಾನದಲ್ಲಿ ಬಂದು ನೋಡಿ ಆ ಶಕ್ತಿಯನ್ನು ಅನುಭವಿಸಿ ಮಾತನಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇತ್ತೀಚೆಗೆ ಸುಪ್ರೀಂ ತೀರ್ಪಿನ ವಿರುದ್ಧ ನಡೆದ ಮಾನವ ಸರಪಣಿ ಇಡೀ ಕೇರಳದಲ್ಲಿ ಆಸ್ತಿಕ ಬಾಂಧವರು 728 ಕಿಲೋ ಮೀಟರ್ ನಿಂತು ತಮ್ಮ ಶಕ್ತಿ ತೋರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸರಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಇದ್ದವರ ಸಂಖ್ಯೆ ಎಲ್ಲರಿಗೂ ಗೊತ್ತಿದೆ. ಪಿಣರಾಯಿ ಶಕ್ತಿಯ ವಿರುದ್ಧ ಈಜಲು ಹೊರಟಿದ್ದಾರೆ. ಸುಟ್ಟು ಭಸ್ಮವಾದರೆ ಅವರೇ ಹೊಣೆ!
Leave A Reply