ಪಾಲಿಕೆಯಲ್ಲಿ ಇನ್ನಾರು ತಿಂಗಳು “ಆಮ್ ಆದ್ಮಿ” ಆಡಳಿತ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನ ಕೊನೆಯ ಮೇಯರ್ ಕೆಳಗಿಳಿಯುತ್ತಿದ್ದಂತೆ ಕಾಂಗ್ರೆಸ್ ಆಡಳಿತ ವಿದ್ಯುಕ್ತವಾಗಿ ಕೊನೆಗೊಂಡಿದೆ. ಮೀಸಲಾತಿಯಲ್ಲಿ ಇದ್ದ ಗೊಂದಲದಿಂದ ಪಾಲಿಕೆಗೆ ಚುನಾವಣೆ ಆಗದೇ ಸದ್ಯ ಚುನಾಯಿತ ಸರಕಾರ ಅಲ್ಲಿಲ್ಲ. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರು ಕೂಡ ಕಾರಣರು. ಅವರಿಗೂ ಈಗ ಇಲೆಕ್ಷನ್ ಬೇಕಂತಿರಲಿಲ್ಲ. ಯಾಕೆಂದರೆ ಕಾಂಗ್ರೆಸ್ ಸೋತರೆ ಅದು ಲೋಕಸಭೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತಿತ್ತು. ಇನ್ನು ಬಿಜೆಪಿಗೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಅನುಭವ. ಲೋಕಸಭೆಗೆ ಒಂದೊಂದು ವಾರ್ಡಿನಲ್ಲಿ ನಾಲ್ಕೈದು ಹೆಚ್ಚುವರಿ ಕಾರ್ಯಕರ್ತರು ಸಿಕ್ಕಂತೆ ಆಗಿದೆ. ಅದೆಲ್ಲವೂ ರಾಜಕೀಯ ಎಂದು ಪಕ್ಕಕ್ಕೆ ಇಟ್ಟುಕೊಳ್ಳೋಣ. ನಿಜವಾದ ವಿಷಯ ಏನೆಂದರೆ ಇನ್ನಾರು ತಿಂಗಳು ಪಾಲಿಕೆಯಲ್ಲಿ ಆಮ್ ಆದ್ಮಿ ಆಡಳಿತ.
ಡಿಸಿ ಕೈಯಲ್ಲಿ ದಂಡ ಇದೆ…
ಆಮ್ ಆದ್ಮಿ ಎಂದರೆ ದೆಹಲಿಯ ಕೇಜ್ರಿವಾಲ್ ಅವರ ಪಕ್ಷದವರ ಆಡಳಿತ ಎಂದಲ್ಲ. ಜನ ಸಾಮಾನ್ಯರ ಆಡಳಿತ ಎನ್ನುವ ಅರ್ಥದಲ್ಲಿ ಹೇಳುತ್ತಿದ್ದೇನೆ. ಏಕೆಂದರೆ ಇನ್ನು ಪಾಲಿಕೆಯಲ್ಲಿ ಮೊದಲ ಮಹಡಿಯಲ್ಲಿ ಬಿಳಿ ಶರ್ಟ್ ಬಿಳಿ ಪ್ಯಾಂಟು ಹಾಕಿ ಅಡ್ಡಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಪಾಲಿಕೆಯನ್ನೇ ಅಡ್ಡೆ ಮಾಡಿಕೊಂಡವರು ಇನ್ನಾರು ತಿಂಗಳು ಈ ಕಡೆ ತಮ್ಮ ಪಾರುಪತ್ಯ ತೋರಿಸಲು ಆಗುವುದಿಲ್ಲ. ಇನ್ನೇನ್ನಿದ್ದರೂ ಅಲ್ಲಿ ಜಿಲ್ಲಾಧಿಕಾರಿಗಳದ್ದೇ ಕಾರುಬಾರು. ಒಬ್ಬ ಜಿಲ್ಲಾಧಿಕಾರಿ ಮನಸ್ಸು ಮಾಡಿದರೆ ತಮಗೆ ಸಿಕ್ಕಿದ ಈ ಆರು ತಿಂಗಳಲ್ಲಿ ಪಾಲಿಕೆಯಲ್ಲಿ ಏನೂ ಬೇಕಾದರೂ ಮಾಡಬಹುದು. ಇಬ್ರಾಹಿಂ ಜಿಲ್ಲಾಧಿಕಾರಿಯಾಗಿದ್ದಾಗ ಅವರಿಗೆ ಈ ಅವಕಾಶ ಸಿಕ್ಕಿತ್ತು. ಈಗ ಸಸಿಕಾಂತ್ ಸೆಂಥಿಲ್ (ಶಶಿಕಾಂತ್ ಸೆಂಥಿಲ್ ಎಂದು ಬರೆಯುವವರೂ ಇದ್ದಾರೆ) ಅವರಿಗೆ ಈ ಅವಕಾಶ ಸಿಕ್ಕಿದೆ. ಇಂದೊಂದು ರೀತಿಯಲ್ಲಿ ರಾಜ್ಯದಲ್ಲಿ ಚುನಾಯಿತ ಸರಕಾರ ಇಲ್ಲದೇ ಇದ್ದಾಗ ರಾಷ್ಟ್ರಪತಿ ಆಡಳಿತ ಎಂದು ಹೇಳಿ ರಾಜ್ಯಪಾಲರು ಆಡಳಿತ ಮಾಡುತ್ತಾರಲ್ಲ ಹಾಗೆ. ಸೆಂಥಿಲ್ ನಿಜಕ್ಕೂ ಬದಲಾವಣೆ ತರುತ್ತಾರಾ? ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ಕಾಗದ ಪತ್ರಗಳ ವಿಲೇವಾರಿ ಸಹಿತ ಅನೇಕ ಕೆಲಸಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಅವರಿಗೆ ಇರುವಾಗ ಅವರು ಮೇ ಮೊದಲು ಪಾಲಿಕೆಯಲ್ಲಿ ದೊಡ್ಡ ಬದಲಾವಣೆಗೆ ಶ್ರೀಕಾರ ಹಾಕುತ್ತಾರೆ ಎನ್ನುವುದು ಸದ್ಯಕ್ಕೆ ಹೇಳುವುದು ಕಷ್ಟ.
ಆಂಟೋನಿ ವೇಸ್ಟ್ ಅವರ ಬಗ್ಗೆ ದೂರುಗಳಿದ್ದರೆ…
ನಮಗೆ ಅಂದರೆ ಜನಸಾಮಾನ್ಯರಿಗೆ ಈ ಮಾರ್ಚ್ ನಿಂದ ನೆಕ್ಟ್ ಸೆಪ್ಟೆಂಬರ್ ತನಕ ಮುಂದಿನ ಕಮೀಷನ್ ಗಿರಾಕಿಗಳು ಪಾಲಿಕೆಯಲ್ಲಿ ಅಧಿಕಾರ ವಹಿಸಿಕೊಳ್ಳುವ ತನಕ ನಮ್ಮ ಜವಾಬ್ದಾರಿ ಎಷ್ಟಿದೆಯೋ ಅಷ್ಟು ನಿರ್ವಹಿಸಿಬಿಡಬೇಕು. ನಿಮ್ಮಲ್ಲಿ ಯಾವುದಾದರೂ ದೂರುಗಳಿದ್ದಲ್ಲಿ ನೇರವಾಗಿ ಪಾಲಿಕೆಗೆ ಹೋಗಿ, ಅಲ್ಲಿ ಕಮೀಷನರ್ ಅವರಿಗೆ ಸಲ್ಲಿಸಿ. ಅವರು ಯಾರ ಪರವಾಗಿ ಆದರೂ ವಾಲುತ್ತಾರೆ ಎಂದು ಅನಿಸಿತ್ತು ಎಂದಾದರೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ. ಅದು ಸಾರ್ವಜನಿಕ ಸಮಸ್ಯೆ ಆಗಿದ್ದರೆ ಒಳ್ಳೆಯದು. ಕಾರ್ಪೋರೇಟರ್ ಗಳ ಆಡಳಿತ ಇದ್ದಾಗ ಅವರು ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುತ್ತಿದ್ದಿರಬಹುದು. ಅಂತಹ ನಿರೀಕ್ಷೆ ಬೇಡಾ. ಆದರೆ ನಿಮ್ಮ ಇಡೀ ವಾರ್ಡಿಗೆ, ಇಡೀ ರಸ್ತೆಗೆ ಸಂಬಂಧಪಟ್ಟ ಏನಾದರೂ ತೊಂದರೆಗಳಿದ್ದಲ್ಲಿ ತಿಳಿಸಿಬಿಡಿ. ಉದಾಹರಣೆಗೆ ನಿಮ್ಮ ಏರಿಯಾದಲ್ಲಿ ಚರಂಡಿ ನಿರ್ಮಾಣವಾಗುತ್ತದೆ ಎಂದರೆ ಅದರಲ್ಲಿ ನಿಮಗೆ ಕಳಪೆ ಕಾಮಗಾರಿ ಆಗುತ್ತಾ ಇದೆ ಎಂದು ಅನಿಸಿದರೆ ಈಗ ಯಾರ ಅಡ್ಡಿ ಇಲ್ಲದೆ ನೇರವಾಗಿ ಜಿಲ್ಲಾಧಿಕಾರಿಯವರಿಗೆ ದೂರು ಕೊಡಿ. ನಿಮ್ಮ ಮನೆಯ ತ್ಯಾಜ್ಯವನ್ನು ಸಂಗ್ರಹಿಸಲು ಪಾಲಿಕೆ ನೇಮಿಸಿರುವ ಸಂಸ್ಥೆ ನಿರ್ಲಕ್ಷ್ಯ ಮಾಡಿದರೆ ಯಾವುದೇ ಕಾರಣಕ್ಕೂ ಸ್ಟಾಫ್ ಕಾರ್ನರ್ ಬೇಡಾ. ರಸ್ತೆಯನ್ನು ಗಲೀಜಾಗಿ ಕ್ಲೀನ್ ಮಾಡಲು ಹೋಗದೇ ಮಲಗಿರುವವರಿಗೆ ಎಬ್ಬಿಸಲು ಇದು ಸೂಕ್ತ ಸಮಯ. ಖಾತಾದಂತಹ ಸಮಸ್ಯೆ ಇದೆಯಾ, ಡಿಸಿಗೆ ಹೇಳಿ. ನಿಮ್ಮ ತೆರಿಗೆಯ ಹಣ ಎರಡೆರಡು ಕೋಟಿ ನುಂಗಿ ಚರಂಡಿಯ ನೀರು ಕುಡಿಯುವವರ ವಿರುದ್ಧ ಡಿಸಿ ಕ್ರಮ ತೆಗೆದುಕೊಳ್ಳಬೇಕಾದರೆ ನೀವು ಹೇಳಿ ಬರಬೇಕು. ಮಾಡುತ್ತಿರಾ!
Leave A Reply