ಬಸ್ಸಿನವರು ಡಿಸೌಂಟ್ ಕೊಡಲಿ ಅಥವಾ ಚುನಾವಣಾ ಆಯೋಗ ದಾಳಿ ಮಾಡಲಿ!!
ಪ್ರಪಂಚದಲ್ಲಿ ಅತೀ ಹೆಚ್ಚು ಖರ್ಚು ಇರುವ ಚುನಾವಣೆ ಎಂದರೆ ಅದು ಭಾರತ ದೇಶದ್ದು ಎನ್ನುವುದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಂತ ನಾನು ಇವತ್ತು ಒಂದೊಂದು ಚುನಾವಣೆಗೆ ಸರಕಾರಕ್ಕೆ ಎಷ್ಟು ಖರ್ಚು ಬೀಳುತ್ತೆ ಎಂದು ಹೇಳಲು ಹೋಗುತ್ತಿಲ್ಲ. ಅವರ ಖರ್ಚು ಬರೆದು ನಿಮಗೆ ಬೋರ್ ಹೊಡೆಸುವ ಉದ್ದೇಶ ನನಗೆ ಇಲ್ಲ. ನಾನು ಹೇಳುವುದು ಒಂದು ಚುನಾವಣೆ ಎಂದರೆ ನಮ್ಮಂತಹ ಜನಸಾಮಾನ್ಯರ ಕಿಸೆಗೆ ಎಷ್ಟರ ಮಟ್ಟಿಗೆ ತೂತು ಬೀಳುತ್ತೆ ಎನ್ನುವುದು ಮಾತ್ರ. ನಮ್ಮ ಕರಾವಳಿಯಲ್ಲಿ ಅನೇಕ ಯುವಕ, ಯುವತಿಯರು ಬೆಂಗಳೂರು, ಮೈಸೂರಿನಲ್ಲಿ ಅನಿವಾರ್ಯವೋ ಅಥವಾ ವೃತ್ತಿಯ ಅಗತ್ಯವೋ ಕೆಲಸಕ್ಕೆ ಹೋಗಿ ಅಲ್ಲಿ ದುಡಿಯುತ್ತಿದ್ದಾರೆ. ಎಪ್ರಿಲ್ 18ಕ್ಕೆ ಚುನಾವಣೆ ಬರುತ್ತಾ ಇದೆ. ಮೊಬೈಲ್ ಒನ್ ಮಾಡಿದರೆ ಹತ್ತು ಮೆಸೆಜ್ ಗಳಲ್ಲಿ ಎರಡು ಮೇಸೆಜ್ “ನಿಮ್ಮ ಅಮೂಲ್ಯ ಮತವನ್ನು ತಪ್ಪದೇ ಚಲಾಯಿಸಿ” ಎಂದು ಬಂದಿರುವುದನ್ನು ನೀವು ಓದುತ್ತಾ ಇದ್ದೀರಿ. ಅಂದರೆ ರಾಜ್ಯ ಸರಕಾರ ಆಯಾಯಾ ಜಿಲ್ಲಾಡಳಿತದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಮಾಡಿ ಮತದಾನದ ಬಗ್ಗೆ ಜನರಲ್ಲಿ ಜಾಗೃತ ಮೂಡಿಸಲು ಪ್ರಯತ್ನಿಸುತ್ತಾ ಇದೆ. ಎಷ್ಟೋ ಕಡೆ ಸ್ವೀಪ್ ಹೆಸರಿನಲ್ಲಿ ಜನಜಾಗೃತಿ ಮಾಡುವ ಉದ್ದೇಶ ಒಳ್ಳೆಯದು. ಮಾನವ ಸರಪಳಿ, ಬೀದಿನಾಟಕ, ಸೈಕಲ್ ರ್ಯಾಲಿ ಎಲ್ಲ ನಡೆಯುತ್ತಿದೆ. ಇದನ್ನೆಲ್ಲ ನೋಡಿ ಬೆಂಗಳೂರಿನಲ್ಲಿಯೋ, ಮೈಸೂರಿನಲ್ಲಿಯೋ ಕುಳಿತ ಕರಾವಳಿಯ ಯುವಕನೊಬ್ಬ ಏನಾದರಾಗಲಿ ವೋಟ್ ಹಾಕಿಯೇ ಬರೋಣ ಎಂದು ಹೊರಟುಬಿಟ್ಟರೆ ಬಸ್ ನಿಲ್ದಾಣದ ಟಿಕೆಟ್ ಕೌಂಟರಿನಲ್ಲಿ ಬಸ್ ಟಿಕೆಟ್ ದರ ಕೇಳಿ ತಾನು ಬಂದಿರುವುದು ಬಸ್ ನಿಲ್ದಾಣಕ್ಕೋ, ವಿಮಾನ ನಿಲ್ದಾಣಕ್ಕೋ ಎಂದು ಗಾಬರಿಗೆ ಬೀಳುವುದು ನಿಜ. ಯಾಕೆಂದರೆ ಸಿಕ್ಕಿದ್ದೇ ಜೀರುಂಡೆ ಎನ್ನುವ ರೀತಿಯಲ್ಲಿ ಬಸ್ ಕಂಪೆನಿಗಳು ಇಲೆಕ್ಷನ್ ಹೆಸರಿನಲ್ಲಿ ಹಬ್ಬ ಮಾಡಲು ತಯಾರಾಗಿವೆ. ಏಳು ನೂರು ರೂಪಾಯಿ ಇರುವ ಮಂಗಳೂರು-ಬೆಂಗಳೂರು ಟಿಕೆಟ್ ದರ ಈಗ ಸಾವಿರದ ಆರುನೂರು ದಾಟಿದೆ. ಇನ್ನೂ ಇಲೆಕ್ಷನ್ ಗೆ ಹತ್ತು ದಿನ ಇರುವ ಈ ಹೊತ್ತಿನಲ್ಲಿ ಇಲೆಕ್ಷನ್ ಹಿಂದಿನ ದಿನ ಊರಿಗೆ ಹೊರಟು ಬಸ್ ನಿಲ್ದಾಣಕ್ಕೆ ಬಂದು ಪರ್ಸ್ ತೆಗೆದರೆ ಜಸ್ಟ್ ತ್ರೀ ತೌಸಂಡ್ ಎಂದು ಕೌಂಟರಿನಲ್ಲಿ ಒಳಗೆ ಕುಳಿತವರು ಹೇಳಿದರೆ ಆಶ್ಚರ್ಯ ಇಲ್ಲ. ಹಾಗಾದರೆ ಇದು ತಪ್ಪಲ್ವಾ?
ಬೇಲಿಗೆ ಹೊಲದ ಬಗ್ಗೆ ವ್ಯಾಮೋಹ..
ಖಂಡಿತ ತಪ್ಪು. ಆದರೆ ಕೇಳುವುದು ಯಾರಿಗೆ? ಬೇಲಿಯೇ ಎದ್ದು ಹೊಲ ಮೇಯಲು ಕುಳಿತಿರುವುದು ಮಾತ್ರವಲ್ಲ, ಹೊಲವನ್ನು ನುಂಗಿ ಬಿಡಲು ತಯಾರಾದರೆ ತಡೆಯುವುದು ಯಾರು? ನಾನು ಹೇಳುತ್ತಿರುವುದು ಸರಕಾರಿ ಬಸ್ಸಿನ ವಿಷಯದಲ್ಲಿ. ಸಾರಿಗೆ ಸಚಿವ ತಮ್ಮಣ್ಣ ಡಿಸಿ ಅವರು ಈಗಾಗಲೇ ಒಂದು ಹೇಳಿಕೆ ಕೊಟ್ಟು ಯಾವುದಾದರೂ ಬಸ್ಸಿನವರು ಹೀಗೆ ದುಬಾರಿ ಟಿಕೆಟ್ ದರ ವಿಧಿಸಿದರೆ ತಮಗೆ ದೂರು ಕೊಡಿ ಎಂದು ಹೇಳಿದ್ದಾರೆ. ಆದರೆ ಅವರ ಹೇಳಿಕೆಯನ್ನು ಅವರದ್ದೇ ಇಲಾಖೆಯವರು ಪಾಲಿಸುತ್ತಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರೇ ಒಂದಕ್ಕೆ ನಾಲ್ಕು ಎಂದು ವ್ಯಾಪಾರ ಕುಳಿತರೆ ಅದನ್ನು ನೋಡಿ ಖಾಸಗಿಯವರು ಸಮ್ಮನಿರುತ್ತಾರಾ? ಸರಕಾರಿ ಬಸ್ಸಿಗೆ ನೀವು ಅಷ್ಟು ಕೊಡುವುದಾದರೆ ನಮ್ಮಲ್ಲಿಗೆ ಬನ್ನಿ ಎಂದು ಬಾಯಿ ಮಾತಿನ ಜಾಹೀರಾತು ಕೊಟ್ಟು ಬಸ್ಸು ತುಂಬಿಸುತ್ತಿದ್ದಾರೆ. ಬಹುಶ: ಇಲೆಕ್ಷನ್ ಮುಗಿಯುವ ಹೊತ್ತಿಗೆ ಕೆಲವು ಖಾಸಗಿ ಬಸ್ ಮಾಲೀಕರು ಇನ್ನೆರಡು ಹೊಸ ಬಸ್ಸುಗಳನ್ನು ಖರೀದಿಸಿದರೂ ಆಶ್ಚರ್ಯವಿಲ್ಲ. ಅಷ್ಟು ಲಾಭ ಆಗುತ್ತಿದೆ.
ಸಾರಿಗೆ ಇಲಾಖೆಯನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಳ್ಳಲಿ..
ಇಲ್ಲಿ ಸಾರಿಗೆ ಇಲಾಖೆಯ ಜವಾಬ್ದಾರಿ ದೊಡ್ಡದಿದೆ. ಮತದಾನ ನಮ್ಮ ಪವಿತ್ರ ಹಕ್ಕು. ಅದನ್ನು ಚಲಾಯಿಸುವುದು ನಮ್ಮ ಕರ್ತವ್ಯ. ಹಾಗಿರುವಾಗ ಹಕ್ಕು ಮತ್ತು ಕರ್ತವ್ಯದ ನಡುವೆ ಯಾರಾದರೂ ಅಡ್ಡಿ ಬಂದರೆ ಅದನ್ನು ವಿರೋಧಿಸುವ ಕೆಲಸ ಸಾರ್ವಜನಿಕ ವಲಯದಲ್ಲಿ ನಡೆಯಬೇಕು. ಆದರೆ ಸುಮ್ಮನೆ ಗಲಾಟೆ ಯಾಕೆ ಎಂದು ತುಂಬಾ ಜನ ಅಷ್ಟು ಖರ್ಚು ಮಾಡಿ ವೋಟ್ ಹಾಕುವುದು ಬೇಡಾ ಎಂದು ಅಂದುಕೊಂಡೇ ಮತದಾನಕ್ಕೆ ಬೇರೆ ಊರಿನಿಂದ ಬರುವುದಿಲ್ಲ. ಇದರಿಂದ ಸಹಜವಾಗಿ ಮತದಾನ ಕಡಿಮೆಯಾಗುತ್ತದೆ. ಅದರ ಬದಲಿಗೆ ಅದೇ ಮತದಾರನಿಗೆ ಮತ ಚಲಾಯಿಸಲು ಬರುವುದಾದರೆ ಅದರ ಹಿಂದಿನ ದಿನ ಹಬ್ಬಕ್ಕೆ ಡಿಸೌಂಟ್ ಕೊಡುತ್ತಾರಲ್ಲ ಹಾಗೆ ಬಸ್ಸಿನಲ್ಲಿಯೂ ಮತದಾನಕ್ಕೆ ಹೊಗುವವರಿಗೆ ಇಂತಿಷ್ಟು ಎಂದು ಡಿಸೌಂಟ್ ಕೊಡಬೇಕು. ಆಗ ಯಾವ ಪ್ರಯಾಣಿಕ ಕೂಡ ಮುಖ ಗಂಟು ಹಾಕಿ ಊರಿಗೆ ವೋಟ್ ಚಲಾಯಿಸಲು ಬರುವುದಿಲ್ಲ. ಖುಷಿಯಾಗಿಯೇ ಬಂದು ಹೋಗುತ್ತಾನೆ. ಮತದಾನ ಜಾಸ್ತಿಯಾಗಬೇಕೆಂದು ರಾಜ್ಯ ಚುನಾವಣಾ ಆಯೋಗ ಏನೆಲ್ಲಾ ಕಸರತ್ತು ಮಾಡುವಾಗ, ಎಲ್ಲೆಲ್ಲಾ ರೇಡ್ ಮಾಡುತ್ತಾ ಇರುವಾಗ ಹೀಗೆ ದುಬಾರಿ ಟಿಕೆಟ್ ದರ ವಿಧಿಸುತ್ತಿರುವ ಬಸ್ಸು ಬುಕ್ಕಿಂಗ್ ಕಚೇರಿಗಳಿಗೂ ದಾಳಿ ಮಾಡಲಿ, ಸರಕಾರಿ ಡಿಪೋಗಳಿಗೂ ಹೋಗಿ ನೋಡಲಿ. ಚುನಾವಣಾ ಆಯೋಗಕ್ಕೆ ಸಂಪೂರ್ಣ ಅವಕಾಶ ಇದೆ. ಅದನ್ನು ಬಿಟ್ಟು ಬೀದಿನಾಟಕ, ಮಾನವ ಸರಪಳಿ, ರ್ಯಾಲಿ ಎಂದೆಲ್ಲ ಮಾಡಿ ಬಿಲ್ ಹೆಚ್ಚಿಸಿ ತಮ್ಮ ಕಿಸೆ ತುಂಬಿಸುವ ಅಧಿಕಾರಿಗಳು ಜನರ ಬಗ್ಗೆ ನೈಜ ಕಾಳಜಿ ತೋರಿಸಿ ಮತದಾನದ ಶೇಕಡಾವನ್ನು ಜಾಸ್ತಿ ಮಾಡಲಿ!
Leave A Reply