ಮತದಾನಕ್ಕಾಗಿ ಸಿಡ್ನಿಯ ಕೆಲಸ ಬಿಟ್ಟು ಬಂದ ಸುಧೀಂದ್ರರಿಂದ ಇಲ್ಲಿನವರೇ ಕಲಿಯುವುದು ಬೇಕಾದಷ್ಟಿದೆ!!
ನನಗೆ ಸುಧೀಂದ್ರ ಹೆಬ್ಬಾರ್ ಗ್ರೇಟ್ ಎಂದು ಅನಿಸುತ್ತಿದೆ. ಏಕೆಂದರೆ ಪಕ್ಕದ ರಸ್ತೆಯ ಕೊನೆಯಲ್ಲಿ ಮತಗಟ್ಟೆ ಇದ್ದರೂ ಯಾಕೆ ಹೋಗಿ ಸುಮ್ಮನೆ ಮತ ಹಾಕುವುದು, ಅದರಿಂದ ಏನಾಗುತ್ತದೆ ಎನ್ನುವವರ ನಡುವೆ ಸುಧೀಂದ್ರ ಅವರಂತವರು ವಿಭಿನ್ನವಾಗಿ ನಿಲ್ಲುತ್ತಾರೆ. ಸುಧೀಂದ್ರ ಮತದಾನ ಹಾಕುವುದಕ್ಕಾಗಿ ಆಸ್ಟ್ರೇಲಿಯಾದ ಸಿಡ್ನಿಯಿಂದ ಬಂದಿದ್ದಾರೆ. ತುಂಬಾ ಜನ ವಿದೇಶಿದಿಂದ ಬರುತ್ತಾರೆ. ಅವರಲ್ಲಿ ಇವರು ಒಬ್ಬರು ಎಂದು ನಿಮಗೆ ಅನಿಸಬಹುದು. ಆದರೆ ಸುಧೀಂದ್ರ ಹೆಬ್ಬಾರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಿಡ್ನಿಯಿಂದ ಬಂದಿದ್ದಾರೆ. ಅದರೊಂದಿಗೆ ಮೋದಿಗೆ ಮತ ಹಾಕಬೇಕು ಎಂದೇ ಬಂದಿದ್ದಾರೆ. ಇಲ್ಲಿ ನಾವು ಮೂರು ಆಂಗಲ್ ನಲ್ಲಿ ಇದನ್ನು ನೋಡಬೇಕು. ಮೊದಲನೇಯದಾಗಿ ಮತ ಹಾಕಲೇಬೇಕು ಎನ್ನುವ ತುಡಿತ.
ಕರೆದುಕೊಂಡು ಹೋಗುವವರು ಇದ್ದಾರಾ…
ನಮ್ಮ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಸುಮಾರು ಹದಿನೇಳು ಲಕ್ಷದಷ್ಟು ಮತದಾರರಿದ್ದಾರೆ. ನಮ್ಮಲ್ಲಿ ಮತದಾನ ನಡೆಯವುದು ಸರಾಸರಿ 74 ಶೇಕಡಾ. ಹಾಗಾದರೆ ಉಳಿದ 26% ಜನ ಯಾಕೆ ಮತ ಹಾಕಿಲ್ಲ ಎಂದು ನಿಮಗೆ ಅನಿಸಬಹುದು. ಅದರಲ್ಲಿ ಹೆಚ್ಚಿನವರು ಇಲ್ಲಿ ಊರಿನಲ್ಲಿ ಇರುವುದಿಲ್ಲ. ಎರಡನೇಯದಾಗಿ ಊರಿನಲ್ಲಿ ಇದ್ದರೂ ಮತಗಟ್ಟೆಗೆ ಹೋಗಿ ಮತ ಹಾಕುವಷ್ಟು ವ್ಯವಧಾನ ಹೊಂದಿರುವುದಿಲ್ಲ. ಮೂರನೇಯದಾಗಿ ಟೂರ್, ಪಿಕ್ ನಿಕ್ ಎಂದು ಹೋಗುವವರ ಸಂಖ್ಯೆ ಕೂಡ ಅಲ್ಲಿ ಇದೆ. ಕೊನೆಯದಾಗಿ ನನ್ನ ಒಂದು ಮತದಿಂದ ಏನಾಗುತ್ತದೆ, ಯಾವ ಅಭ್ಯರ್ಥಿ ಕೂಡ ನನಗೆ ಪ್ರಯೋಜನಕ್ಕೆ ಬಂದಿಲ್ಲ ಎನ್ನುವ ತಾತ್ಸಾರ. ಆದ್ದರಿಂದ ಈ ಎಲ್ಲ ಕಾರಣಗಳಿಂದ ಜನ ಮತದಾನಕ್ಕೆ ಬರುವುದಿಲ್ಲ. ಇದನ್ನು ಮೊದಲು ಸರಿಪಡಿಸಬೇಕು. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ. ನಮಗೆ ನಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಇದನ್ನು ಹಕ್ಕು ಎಂದು ಬೇಕಾದರೂ ಸ್ವೀಕರಿಸಿ ಅಥವಾ ಕರ್ತವ್ಯ ಎಂದು ಕೂಡ ಅಂದುಕೊಳ್ಳಿ. ಒಟ್ಟಿನಲ್ಲಿ ಮತದಾನ ಮಾಡಿ. ಕೆಲವು ರಾಷ್ಟ್ರಗಳಲ್ಲಿ ಸರ್ವಾಧಿಕಾರ, ರಾಜಪ್ರಭುತ್ವ ಇದೆ. ಅಂತಹ ರಾಷ್ಟ್ರಗಳಲ್ಲಿ ಹುಟ್ಟಿಲ್ಲ ಎನ್ನುವ ಸಮಾಧಾನವಾದರೂ ನಮಗೆ ಇದೆ. ಒಂದು ವೇಳೆ ನೀವು ಮತ ಹಾಕುವುದಕ್ಕೆ ನಿರ್ಲಕ್ಷ್ಯ ತೋರಿಸಿದರೆ ಮುಂದಿನ ಬಾರಿ ಸರ್ವಾಧಿಕಾರಿಗಳ ಕೆಟ್ಟ ರಾಷ್ಟ್ರಗಳಲ್ಲಿ ಹುಟ್ಟಲುಬಹುದು!!
ಎರಡನೇಯದಾಗಿ ಸುಧೀಂದ್ರ ಹೆಬ್ಬಾರ್ ವೋಟ್ ಹಾಕಲು ಇಲ್ಲಿಯೇ ಪಕ್ಕದ ಉಡುಪಿಯಿಂದಲೋ ಅಥವಾ ಹೆಚ್ಚೆಂದರೆ ಮುಂಬೈ, ದೆಹಲಿಯಿಂದ ವೋಟ್ ಹಾಕಲು ಮಂಗಳೂರಿಗೆ ಬಂದಿದ್ದರೆ ಅದು ದೊಡ್ಡ ವಿಷಯ ಆಗುತ್ತಿರಲಿಲ್ಲ. ಅವರು ಆಸ್ಟ್ರೇಲಿಯಾದ ಸಿಡ್ನಿಯಂತಹ ದೂರದೇಶದಿಂದ ಅಷ್ಟು ಖರ್ಚು ಮಾಡಿಕೊಂಡು ಮಂಗಳೂರಿಗೆ ಬಂದಿದ್ದಾರೆ. ಸಾಮಾನ್ಯವಾಗಿ ಮತಗಟ್ಟೆ ಎರಡು ಕಿಲೋ ಮೀಟರ್ ದೂರ ಇದ್ದರೆ ಅಷ್ಟು ದೂರ ಹೋಗುವುದು ಯಾರು? ತಾವು ಮತ ಹಾಕುವ ಪಕ್ಷದ ಕಾರ್ಯಕರ್ತರು ಏನಾದರೂ ವ್ಯವಸ್ಥೆ ಮಾಡುತ್ತಾರಾ ಎಂದು ಕಾಯುವವರೇ ಜಾಸ್ತಿ. ಯಾರಾದರೂ ಕಾರು ಮಾಡಿ ಕರೆದುಕೊಂಡು ಹೋಗಲಿ ಎಂದು ಅಂದುಕೊಂಡು ಕೊನೆಗೆ ಯಾರೂ ಬರದೇ ಇದ್ದಾಗ ಮನೆಯಲ್ಲಿಯೇ ನಿದ್ರೆ ಮಾಡುವವರು ಇದ್ದಾರೆ. ಹಾಗಿರುವಾಗ ಸಿಡ್ನಿಯಿಂದ ಬಂದು ಮತ ಚಲಾಯಿಸುವುದು ಯಾವ ಕಾರಣಕ್ಕೂ ಚಿಕ್ಕ ವಿಷಯವಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಂದು ಮತ ಹಾಕಿ ಹೋಗುವುದು ಎಂದರೆ ಮನಸ್ಸು ದೊಡ್ಡದೇ ಇರಬೇಕು.
ಎಲ್ಲರಿಂದಲೂ ಇದು ಕಷ್ಟ…
ಮೂರನೇಯದಾಗಿ ಸುಧೀಂದ್ರ ಹೆಬ್ಬಾರ್ ಮಂಗಳೂರಿಗೆ ವೋಟ್ ಹಾಕಿ ಬರಲು ಸಿಡ್ನಿಯಲ್ಲಿ ತಾವು ಕೆಲಸಕ್ಕೆ ಇದ್ದ ಕಂಪೆನಿಯವರು ರಜೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅದು ಇನ್ನೂ ಗ್ರೇಟ್. ಇದು ಒಂದಷ್ಟರ ಮಟ್ಟಿಗೆ ಎಲ್ಲರೂ ಪಾಲಿಸಲು ಕಷ್ಟವಾಗುವ ನಿರ್ಧಾರ. ತಾವು ಕೆಲಸಕ್ಕೆ ಇದ್ದ ಕಂಪೆನಿಗೆ ರಾಜೀನಾಮೆ ಬಿಸಾಡಿ ಮತದಾನದ ಒಂದೇ ಒಂದು ಕಾರಣಕ್ಕೆ ಹೊರಟು ಬರುವುದಿದೆಯಲ್ಲ, ಅದಕ್ಕೆ ಎಂಟು ಗುಂಡಿಗೆ ಬೇಕು. ಯಾಕೆಂದರೆ ಇವರು ಇದ್ದ ಕೆಲಸ ಚಿಕ್ಕದೇನಲ್ಲ. ಸುಧೀಂದ್ರ ಹೆಬ್ಬಾರ್ ಸಿಡ್ನಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಅಧಿಕಾರಿಯಾಗಿದ್ದವರು. ಒಳ್ಳೆಯ ವೇತನ, ಸೌಲಭ್ಯ ಇದೆ. ಅವರು ಅಲ್ಲಿನ ಶಾಶ್ವತ ಕಾರ್ಡ್ ಹೋಲ್ಡರ್ ಕೂಡ ಹೌದು. ಹಾಗಿರುವಾಗ ಅಲ್ಲಿಯೇ ಸೆಟಲ್ ಆಗಿರುವ, ಆಸ್ಟ್ರೇಲಿಯಾದ ಪ್ರಜೆಯನ್ನೇ ಮದುವೆಯಾಗಿರುವ ಹೆಬ್ಬಾರ್ ಮತ ಹಾಕಲು ಬಂದಿರುವುದು ನಿಜಕ್ಕೂ ಗ್ರೇಟ್. ನಾನು ವೈಯಕ್ತಿಕವಾಗಿ ಎಲ್ಲರಿಗೂ “ರಜೆ ಸಿಗದಿದ್ದರೆ ಕೆಲಸಕ್ಕೆ ರಾಜೀನಾಮೆ ಬಿಸಾಡಿ ಬನ್ನಿ” ಎನ್ನುವ ಸಲಹೆಯನ್ನು ಕೊಡಲು ಬಯಸುವುದಿಲ್ಲ. ಯಾಕೆಂದರೆ ಇದೊಂದು ರೀತಿಯಲ್ಲಿ ರಿಸ್ಕ್. ಆದರೆ ಎಲ್ಲಾ ಅವಕಾಶ ಇದ್ದು ಕೂಡ ಮತದಾನ ಮಾಡದೇ ಸಮಯ ವ್ಯರ್ಥ ಮಾಡುತ್ತಾರಲ್ಲ, ಅಂತವರು ಮಾತ್ರ ಸುಧೀಂದ್ರ ಹೆಬ್ಬಾರ್ ಅವರಿಂದ ಕಲಿಯಲು ತುಂಬಾ ಇದೆ. ಅದರಲ್ಲಿಯೂ ಮೋದಿಗೆ ಮತ ಹಾಕಲು ಬಂದೆ ಎಂದು ಸುಧೀಂದ್ರ ಹೇಳುತ್ತಾರೆ. ಇಂತಹ ಅಭಿಮಾನಿಗಳು ಕೋಟಿಗಟ್ಟಲೆ ಇರುವುದರಿಂದ ಮೋದಿ ನಿರಾಯಾಸವಾಗಿ ಈ ಬಾರಿಯೂ ಗೆಲ್ಲಲಿದ್ದಾರೆ!
Leave A Reply