ಬೈಕ್ ವೀರರೇ ಎಚ್ಚರ, ವೇಗ ಬೇಗ ಮೇಲಕ್ಕೆ ಕಳುಹಿಸುತ್ತದೆ!!
ತುಂಬಾ ಯುವಕರಿಗೆ ಈ ವಿಷಯ ಗೊತ್ತಿರುತ್ತದೆ. ಆದರೆ ಏನೂ ಆಗುವುದಿಲ್ಲ ಎನ್ನುವ ದಿವ್ಯ ನಿರ್ಲಕ್ಷ್ಯ ಇರುತ್ತದೆ. ನನ್ನ ಬೈಕಿನ ಮೇಲೆ ನನಗೆ ಕಂಟ್ರೋಲ್ ಇದೆ. ಏನೂ ಆಗುವುದಿಲ್ಲ ಎನ್ನುವ ಧೈರ್ಯ ಇರುತ್ತದೆ. ಅನೇಕ ಬಾರಿ ಅದು ಭಂಡ ದೈರ್ಯವಾಗುತ್ತದೆ. ಅದರಿಂದ ಮಳೆಗಾಲ ನಮ್ಮ ಜಿಲ್ಲೆಯಲ್ಲಿ ಲೇಟ್ ಆಗಿ ಶುರುವಾಗಿದ್ದರೂ ಅಪಘಾತಗಳು ಬೇಗ ನಡೆದು ಯುವಕರು ಸಾವನ್ನಪ್ಪಿದ್ದಾರೆ. ಯುವಕ, ಯುವತಿಯರು ನಮ್ಮ ದೇಶದ ಆಸ್ತಿ. ಸದೃಢ ಸಮಾಜ ಕಟ್ಟಲು ಯುವಶಕ್ತಿ ಅಗತ್ಯ. ಆದರೆ ವಯಸ್ಸಿಗೆ ಬಂದ ಯುವಕ, ಯುವತಿಯರು ಅಪಘಾತಕ್ಕೆ ಬಲಿಯಾದರೆ ಅದು ಆ ಕುಟುಂಬಕ್ಕೆ ಆದ ನಷ್ಟ ಮಾತ್ರವಲ್ಲ, ಇಡೀ ದೇಶಕ್ಕೂ ಆದ ನಷ್ಟ. ಅದನ್ನು ತಪ್ಪಿಸಬೇಕಾದರೆ ನಮ್ಮ ಯುವಕರು ಮನೆಯಿಂದ ಬೈಕ್ ಹೊರಗೆ ತೆಗೆದು ಕಾಲೇಜಿಗೆ ಅಥವಾ ಉದ್ಯೋಗಕ್ಕೆ ಹೊರಡುವಾಗ ತಮ್ಮ ತಾಯಿ, ತಂದೆ, ಅಕ್ಕ, ತಂಗಿ, ಅಣ್ಣ, ತಮ್ಮಂದಿರ ಮುಖಗಳನ್ನು ಒಮ್ಮೆ ಕಣ್ಣಿಗೆ ತಂದುಕೊಳ್ಳಬೇಕು. ಅದರಿಂದ ಏನಾಗುತ್ತದೆ ಎಂದರೆ ನೀವು ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಲು ಹೋಗುವುದಿಲ್ಲ. ಒಂದಿಷ್ಟು ಜಾಗರೂಕತೆ ಮನಸ್ಸಿನ ಒಳಗೆ ಕುಳಿತಿರುತ್ತದೆ. ಅಷ್ಟಕ್ಕೂ ಅಪಘಾತಗಳು ಹೇಗೆ ಮಳೆಗಾಲದಲ್ಲಿ ಹೆಚ್ಚಿರುತ್ತವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತೇನೆ.
ಮೊದಲನೇಯದಾಗಿ ನಮ್ಮ ಜಿಲ್ಲೆ ಬಂದರು ನಗರಿ. ಇಲ್ಲಿ ಆಯಿಲ್ ಸಾಗಾಟದ ಲಾರಿಗಳು, ಅದಿರು ತುಂಬಿದ ಲಾರಿಗಳು, ಮೀನು ತುಂಬಿದ ಟೆಂಪೋಗಳು ಒಂದಿಷ್ಟು ಹೆಚ್ಚೇ ಓಡಾಡುತ್ತಿರುತ್ತವೆ. ಅವು ಆಯಿಲ್ ಅಥವಾ ಜಿಡ್ಡು ಪದಾರ್ಥವನ್ನು ನೆಲಕ್ಕೆ ಬೀಳಿಸುತ್ತಾ ಹೋಗಿರಬಹುದು. ಅದರ ಮೇಲೆ ಮಳೆಯ ನೀರು ಬಿದ್ದು ಆ ನಂತರ ಯಾವುದಾದರೂ ದ್ವಿಚಕ್ರ ವಾಹನಗಳು ವೇಗವಾಗಿ ಚಲಿಸಿದರೆ ವಾಹನ ಸ್ಕಿಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರತಿ ಬಾರಿ ಹೀಗೆ ಆಗುತ್ತೆ ಎನ್ನುವುದನ್ನು ನಾನು ಖಡಾಖಂಡಿತವಾಗಿ ಹೇಳುವುದಿಲ್ಲ. ಆದರೆ ಬಹುತೇಕ ಸಂದರ್ಭದಲ್ಲಿ ಸ್ಕಿಡ್ ಆಗುವುದನ್ನು ಅಲ್ಲಗಳೆಯುವಂತಿಲ್ಲ. ಇನ್ನು ಹಲವು ಸಂದರ್ಭದಲ್ಲಿ ಏನಾಗುತ್ತೆ ಎಂದರೆ ಚರಂಡಿಗಳ ಹೂಳುಗಳನ್ನು ಪಾಲಿಕೆಯವರು ತೆಗೆಯದೇ ಇರುವುದರಿಂದ ಮಳೆಯ ನೀರು ಚರಂಡಿ ಸೇರಲು ಸಾಧ್ಯವಾಗುವುದಿಲ್ಲ. ಅದರಿಂದ ನೀರು ರಸ್ತೆಯ ಮೇಲೆ ಹರಿಯುತ್ತಿರುತ್ತದೆ. ಇದರಿಂದ ದ್ವಿಚಕ್ರವಾಹನಗಳು ಬರುವಾಗ ಪಾದಚಾರಿಗಳ ಮೇಲೆ ನೀರು ಚಿಮ್ಮುವುದರಿಂದ ನಾವು ಏನು ಮಾಡುತ್ತೇವೆ ಎಂದರೆ ಸಡನ್ನಾಗಿ ಬೈಕ್ ಸ್ಲೋ ಮಾಡುತ್ತೇವೆ. ಇದು ಕೂಡ ಸ್ಕಿಡ್ ಆಗಲು ಒಂದು ಕಾರಣವಾಗುತ್ತದೆ. ಇನ್ನು ಫ್ಲಾಟ್ ಟೈಯರ್ ಗಳು ಕೂಡ ಬೈಕ್ ಸ್ಕಿಡ್ ಆಗಲು ಕಾರಣವಾಗಬಹುದು. ಆದರಿಂದ ಏನೇ ಆಗಲಿ, ನೀವು ಕಾಲೇಜಿಗೋ ಅಥವಾ ಉದ್ಯೋಗಕ್ಕೋ ಹೋಗುವವರಾದರೆ ನಿರ್ದಿಷ್ಟ ಸಮಯದ ಮೊದಲೇ ಮನೆಯಿಂದ ಹೊರಡಿ. ಮನೆಯಿಂದ ಹತ್ತು ನಿಮಿಷ ಸಾಕು. ಅಲ್ಲಿ ಒಂಭತ್ತು ಗಂಟೆಗೆ ಇದ್ದರೆ ಓಕೆ. ಎಂಟು ಐವತ್ತಕ್ಕೆ ಹೊರಟರೆ ತಲುಪುತ್ತೇನೆ ಎನ್ನುವ ಇಂತಹ ಲೆಕ್ಕಾಚಾರಗಳು ಇನ್ನು ಬೇಡಾ. ಅಂತಹ ಕ್ಯಾಲ್ಕುಲೇಶನ್ ಯಾವತ್ತೂ ಕೂಡ ಹಾಕುವುದು ರಿಸ್ಕೆ. ಅದರಲ್ಲಿಯೂ ಮಳೆಗಾಲದಲ್ಲಿ ರಿಸ್ಕ್ ಇನ್ನೂ ಜಾಸ್ತಿ. ಇನ್ನು ಹಿಂದಿನಂತೆ ಈಗ ನಗರ ಭಾಗಗಳಲ್ಲಿ ಹೊಂಡ, ಗುಂಡಿಗಳ ಕಿರಿಕಿರಿ ಇಲ್ಲವಾದರೂ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ತಿರುವು ಭಾಗಗಳಲ್ಲಿ ಈಗಲೂ ಸಮಸ್ಯೆ ಇದ್ದೇ ಇದೆ. ಕಡಬ, ಅಸೈಗೋಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಯುವಕರು ಮೃತಪಟ್ಟಿದ್ದಾರೆ. ನಿಮ್ಮ ವೇಗ ಅನೇಕರ ಕಣ್ಣಿನಲ್ಲಿ ನಿತ್ಯ ನೀರು ತರುವುದು ಬೇಡಾ!
Leave A Reply