ಪುತ್ತೂರಿನ ಹುಡುಗಿಗೆ ನ್ಯಾಯ ಸಿಗಬೇಕು, ಆದರೆ ಹೋರಾಟ ಈಗಲೇ ಯಾಕೆ?
ಪುತ್ತೂರಿನಲ್ಲಿ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಯುವಕರು ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಾ ಇದ್ದಿರಬಹುದು. ಅದರ್ಥ ಅತ್ಯಾಚಾರಿಗಳ ವಿಷಯದಲ್ಲಿ ಕಾಲೇಜಿನ ಹೆಸರನ್ನು ಎಳೆದು ತರುವ ಅಗತ್ಯ ಯಾರಿಗೂ ಇಲ್ಲ. ಯಾಕೆಂದರೆ ಕಾಲೇಜು ಯಾವ ವಿದ್ಯಾರ್ಥಿಗೂ ರೇಪ್ ಮಾಡಿ ಎಂದು ಕಲಿಸುವುದಿಲ್ಲ. ನೀವು ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಚಾರಿಸಿದರೆ ಪುತ್ತೂರು ವಿವೇಕಾನಂದ ಕಾಲೇಜಿನಷ್ಟು ಸ್ಟಿಕ್ಟ್ ಕಾಲೇಜು ಬೇರೆ ಇಲ್ಲ. ಅಷ್ಟೇ ಅಲ್ಲ, ವಿವೇಕಾನಂದ ಕಾಲೇಜಿನಲ್ಲಿ ಕಲಿಸುವಷ್ಟು ಭಾರತೀಯ ಸಂಸ್ಕೃತಿ, ಆಚಾರ, ವಿಚಾರ, ಭೋಧನೆಯನ್ನು ಬೇರೆ ಕಾಲೇಜುಗಳು ಕಲಿಸುವುದಿಲ್ಲ. ಈ ಕಾಲೇಜಿನಲ್ಲಿ ನೈತಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇನ್ನು ಆರು ಸಾವಿರ ವಿದ್ಯಾರ್ತಿಗಳು ಕಲಿಯುವ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಕೇವಲ ಐದು ವಿದ್ಯಾರ್ಥಿಗಳು ಮಾಡಿದ ಈ ನೀಚ ಕೃತ್ಯದಿಂದ ಇಡೀ ಕಾಲೇಜಿನ ಹೆಸರು ಹೇಗೆ ಹಾಳಾಗುತ್ತದೆ, ಸ್ವಾಮಿ. ಇನ್ನು ಮಕ್ಕಳಿಗೆ ಶಾಲೆ, ಕಾಲೇಜುಗಳಲ್ಲಿ ವಕೀಲರನ್ನು ಕರೆಸಿ ಕಾನೂನಿನ ಬಗ್ಗೆ ಒಂದಿಷ್ಟು ಅರಿವನ್ನು ಮೂಡಿಸಬೇಕು ಎಂದು ಹೇಳಲಾಗುತ್ತಿದೆ. ನನಗೆ ನೆನಪಿದ್ದ ಹಾಗೇ ಕೆಲವು ಸಮಯದ ಹಿಂದೆ ವಿವೇಕಾನಂದ ಕಾಲೇಜಿನಲ್ಲಿ ನ್ಯಾಯಾಧೀಶರು, ವಕೀಲರು ಮಕ್ಕಳನ್ನು ಕೂರಿಸಿ ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇನ್ನೆನೂ ಬೇಕು. ಆದರೆ ಕೆಲವರಿಗೆ ಈ ಹುಡುಗರ ಹೆಸರಿನೊಂದಿಗೆ ಕಾಲೇಜಿನ ಹೆಸರನ್ನು ಎಳೆದು ತರುವ ವಿಕೃತ ಆನಂದ ಬೇರೆ.
ಇಲ್ಲಿ ಅತ್ಯಾಚಾರ ನಡೆದಿದೆಯೋ ಅಥವಾ ಸಮ್ಮತಿ ಕ್ರಿಯೆಯೋ ಎನ್ನುವ ಬಗ್ಗೆ ತನಿಖೆ ಆಗಲಿದೆ. ಆದರೆ ಸದ್ಯ ಆ ಹುಡುಗಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಆಗಿದೆ ಎಂದೇ ಹೇಳುತ್ತಿದ್ದಾಳೆ. ಕೆಲವರು ವಿಡಿಯೋದಲ್ಲಿ ಅವಳು ಸಮ್ಮತಿಸಿರುವಂತೆ ಕಾಣುತ್ತಿದೆಯಲ್ಲ ಎಂದು ಹೇಳುತ್ತಾರೆ. ನಿಮಗೆ ಗೊತ್ತಿರಲಿ, ಎಫ್ ಡಿಎ ವಿಜಿಲೆಂಟ್ ಎನ್ನುವ ಡ್ರಗ್ಸ್ ಹೆಸರನ್ನು ನೀವು ಕೇಳಿದ್ದಿರೋ,ಇಲ್ವೋ? ಆದರೆ ಅಂತಹ ಒಂದು ಡ್ರಗ್ಸ್ ಇದೆ. ಇದನ್ನು ಯುವತಿಗೆ ನೀಡಿದರೆ ಕೆಲವು ಗಂಟೆಗಳ ತನಕ ಆಕೆ ಏನು ಮಾಡುತ್ತಿದ್ದಾಳೆ ಎನ್ನುವುದು ಆಕೆಗೆ ಗೊತ್ತಾಗುವುದೇ ಇಲ್ಲ. ಅವಳು ಅಮಲಿನಲ್ಲಿ ಇರುತ್ತಾಳೆ. ಮೇಲ್ನೊಟಕ್ಕೆ ಸರಿ ಇದ್ದಂತೆ ಕಾಣುತ್ತದೆ. ಈ ಪ್ರಕರಣದಲ್ಲಿ ಹಾಗೆ ಕೂಡ ಆಗಿರಬಹುದು. ಇನ್ನು ಒಂದು ವೇಳೆ ಆರೋಪಿಗಳು ಮುಸ್ಲಿಮರಾಗಿದ್ದರೆ ಕರಾವಳಿಯಲ್ಲಿ ಏನೇನೋ ಆಗುತ್ತಿತ್ತು ಎಂದು ಹೇಳುವವರಿದ್ದಾರೆ. ಬಜರಂಗದಳವರು ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಕೇಳುವವರು ಇದ್ದಾರೆ. ಇಲ್ಲಿ ಎರಡು ವಿಷಯಗಳಿವೆ. ಒಂದನೇಯದಾಗಿ ಪ್ರಕರಣ ಬೆಳಕಿಗೆ ಬಂದ ಇಪ್ಪತ್ತನಾಲ್ಕು ಗಂಟೆಯ ಒಳಗೆ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಆದ್ದರಿಂದ ಇನ್ನು ಯಾವುದರ ವಿರುದ್ಧ ಹೋರಾಡುವುದು? ಇನ್ನು ವಿಡಿಯೋದಲ್ಲಿರುವ ಹುಡುಗರನ್ನೇ ಪೊಲೀಸರು ಬಂಧಿಸಿರುವುದರಿಂದ ಏನೆಂದು ಪ್ರತಿಭಟನೆ ಮಾಡುವುದು. ಇಷ್ಟು ಸಿಂಪಲ್ ವಿಷಯ ಗೊತ್ತಿದ್ದರೂ ಕಾಂಗ್ರೆಸ್ಸಿಗರು ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಹುಡುಗಿಗೆ ನ್ಯಾಯ ಕೊಡಿ ಎನ್ನುತ್ತಿದ್ದಾರೆ. ಮೊನ್ನೆ ಪ್ರಕರಣ ಪತ್ತೆಯಾಗಿ, ನಿನ್ನೆ ಪೊಲೀಸರು ಆರೋಪಿಗಳನ್ನು ಹಿಡಿದರೆ ಇವತ್ತು ಸಂಜೆಯೊಳಗೆ ನ್ಯಾಯ ಕೊಡಲು ಆಗುತ್ತದೆಯಾ ಎನ್ನುವುದನ್ನು ಕಾಂಗ್ರೆಸ್ಸಿಗರು ಹೇಳಬೇಕು.
ಈಗ ಮುಖ್ಯವಾಗಿ ಆಗಬೇಕಾಗಿರುವುದು ಇಂತಹ ಯಾವುದೇ ದುಷ್ಟ ಕೃತ್ಯ ಆಗಿರಲಿ, ಅದು ಡ್ರಗ್ಸ್ ನಿಂದ ಪ್ರಭಾವಿತರಾಗಿರುವ ಹುಡುಗರೇ ಸೇರಿ ಮಾಡಿರುವಂತದ್ದು ಆಗಿರಬಹುದು. ಹಾಗಂತ ಹುಡುಗಿಯರು ಡ್ರಗ್ಸ್ ಸೇವಿಸಲ್ಲ ಎಂದು ನಾನು ಹೇಳುವುದಿಲ್ಲ. ಡ್ರಗ್ಸ್ ಯಾರೇ ಸೇವಿಸಿದರೂ ಅದರಿಂದ ಆಗುವುದು ಮಾತ್ರ ಸಮಾಜಕ್ಕೆ ನಷ್ಟ. ಆದ್ದರಿಂದ ಈಗ ಏನು ಮಾಡಬೇಕು ಎಂದರೆ ಅಗಸ್ಟ್ 15 ರಿಂದ ಎಲ್ಲಾ ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯ ಸಮಯ ಮಕ್ಕಳಿಗೆ ಕಡ್ಡಾಯವಾಗಿ ಡ್ರಗ್ಸ್ ಎಂದರೆ ಏನು, ಅದರ ದುಷ್ಪರಿಣಾಮಗಳ ಬಗ್ಗೆ ಬೋಧನೆ ನಡೆಯಬೇಕು ಎಂದು ರಾಜ್ಯ, ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಬೇಕು. ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಒಂದು ದೂರವಾಣಿ ಸಂಖ್ಯೆಯನ್ನು ಜನರಿಗೆ ನೀಡಿ ಎಲ್ಲಿಯಾದರೂ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂದು ನಾಗರಿಕರಿಗೆ ಅನಿಸಿದರೆ ತಮಗೆ ನೇರವಾಗಿ ಹೇಳಿ ಎಂದು ತಿಳಿಸಬೇಕು. ಆ ನಂಬ್ರ ಸ್ವತ: ಪೊಲೀಸ್ ಕಮೀಷನರ್ ಅವರೇ ನಿರ್ವಹಿಸಬೇಕು. ಯಾಕೆಂದರೆ ಜನರಿಗೆ ಸದ್ಯ ಧೈರ್ಯ ಇರುವುದು ಅವರೊಬ್ಬರ ಮೇಲೆ ಮಾತ್ರ!
Leave A Reply