ನೀವು ಕೊಟ್ಟ ಬೆಂಕಿಯಿಂದ ನನ್ನ ರಾಜ್ಯಕ್ಕೆ ಇಷ್ಟು ನಷ್ಟವಾಗಿದೆ, ಪಾವತಿಸಿ ಎನ್ನುವ ಧೈರ್ಯ ಸಿಎಂ ತೋರಿಸಲಿ!!

ಒಂದು ಸಲ ನಿಮಗೆ ನಿಮ್ಮ ತಂದೆ ಮೇಲೆಯೋ ಅಥವಾ ತಾಯಿ ಮೇಲೆಯೋ ಕೋಪ ಬಂತು. ನೀವು ಕೂಡಲೇ ಮನೆಯ ಟಿವಿಯನ್ನು ಎತ್ತಿ ನೆಲಕ್ಕೆ ಬಿಸಾಡಿ ಮುರಿದು ಹಾಕುತ್ತೀರಾ. ನಿಮಗೆ ನಿಮ್ಮ ಹೆಂಡ್ತಿ ಮೇಲೆಯೋ ಅಥವಾ ಗಂಡನ ಮೇಲೆಯೋ ಕೋಪ ಬಂದರೆ ನೀವು ತಕ್ಷಣ ಹೊರಗೆ ಬಂದು ನಿಮ್ಮ ಕಾರಿಗೋ, ಬೈಕಿಗೋ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಬಿಡುತ್ತೀರಾ. ಒಂದು ವೇಳೆ ಇಲ್ಲ ಎಂದಾದರೆ ನಿಮಗೆ ಕೋಪ ಬಂತು ಎಂದ ಕೂಡಲೇ ನಮ್ಮ ದೇಶದ ರೈಲುಗಳು, ಸರಕಾರಿ ಬಸ್ಸುಗಳಿಗೆ ಬೆಂಕಿ ಕೊಡುವುದು ಅಥವಾ ರೈಲ್ವೆ ನಿಲ್ದಾಣಗಳ ವಸ್ತುಗಳನ್ನು ಮುರಿದು ಹಾಕುವುದು ಎಷ್ಟು ಸರಿ?
ಹೇಗೆ ನಿಮ್ಮ ಕಷ್ಟದ ದುಡಿಮೆಯ ಹಣದಿಂದ ನೀವು ಖರೀದಿಸಿದ ವಸ್ತುಗಳನ್ನು ನಾಶ ಮಾಡಲು ನೀವು ತಯಾರಿಲ್ಲವೋ ಹಾಗೆ ದೇಶದ ಕೆಲವೇ ಕೆಲವು ತೆರಿಗೆದಾರರು ಪಾವತಿಸಿ ನೀವು ಅನುಭವಿಸುವ ಸರಕಾರಿ ಸೌಲಭ್ಯಗಳನ್ನು ನಾಶ ಮಾಡಲು ನಿಮಗೆ ಯಾವುದೇ ಅಧಿಕಾರವಿಲ್ಲ. ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರೈಲ್ವೆ ಇಲಾಖೆಯವರು ಇತ್ತೀಚೆಗೆ ಕೆಲವು ದುಷ್ಕರ್ಮಿಗಳು ಬೆಂಕಿ ಕೊಟ್ಟು ಸುಟ್ಟು ಹೋಗಿರುವ ರೈಲ್ವೆ ಬೋಗಿಗಳ ವಿಡಿಯೋಗಳನ್ನು ಹಾಕಿದ್ದಾರೆ. ಸಿಎಎ ವಿರುದ್ಧದ ಕೆಲವರ ಹೋರಾಟದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೈಲ್ವೆ ಇಲಾಖೆಗೆ ನಷ್ಟವಾಗಿದೆ. ಬೆಂಕಿ ಕೊಟ್ಟವ ಖುಷಿ ಪಡುತ್ತಿರಬಹುದು. ಯಾಕೆಂದರೆ ಅವನಿಗೆ ಯಾರೋ ಕೊಟ್ಟ 500 ಅಥವಾ ಒಂದು ಸಾವಿರ ರೂಪಾಯಿಗೆ ಸರಿಯಾಗಿ ಅವನು ತನ್ನ ಕೆಲಸ ಮಾಡಿದ್ದಾನೆ. ಚಿಲ್ಲರೆ ಹಣ ಕೊಟ್ಟು ಇವನಿಂದ ಬೆಂಕಿ ಹಾಕಿಸಿಕೊಂಡವರು ಸಂಭ್ರಮಿಸುತ್ತಾ ಇರಬಹುದು. ಆದರೆ ನಷ್ಟವಾದ ಕೋಟ್ಯಾಂತರ ರೂಪಾಯಿ ಯಾರಪ್ಪನ ಹಣ?
ನಿಮಗೆ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಅಸಮಾಧಾನಗಳಿದ್ದರೆ ಯಾವುದಾದರೂ ಬಿಜೆಪಿ ನಾಯಕರನ್ನು ಅಡ್ಡ ಹಾಕಿ ಕೇಳಿ. ಅವರಿಗೆ ಸರಿಯಾಗಿ ಗೊತ್ತಿಲ್ಲವಾ ಅವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿ. ಯಾಕೆಂದರೆ ಈ ಕಾಯಿದೆಯ ಬಗ್ಗೆ ನಾಗರಿಕರಲ್ಲಿ ಸೂಕ್ತ ಜಾಗೃತಿ ಮೂಡಿಸಿ ವಿರೋಧಿಸುವವರಿಗೆ ಸಮಾಧಾನ ಆಗುವ ಉತ್ತರ ಕೊಡಬೇಕಾದವರು ಬಿಜೆಪಿಯವರು. ಬಿಜೆಪಿ ಶಾಸಕರು, ಸಂಸದರು ಈ ವಿಷಯದಲ್ಲಿ ಯಾವುದೇ ವ್ಯಕ್ತಿಯ ಪ್ರಶ್ನೆಗಳಿಗೆ ಉತ್ತರ ಕೊಡಲು ತಯಾರಿದ್ದೇನೆ ಎಂದು ಎದೆತಟ್ಟಿ ಹೇಳಬೇಕು. ಹಾಗೆ ಅಧ್ಯಯನ ಮಾಡಿ ಸಿದ್ಧರಾಗಿರಬೇಕು. ಕಾಯಿದೆ ವಿರೋಧ ಮಾಡುವವರು ತಮಗೆ ಸರಿಯಾದ ಉತ್ತರ ಕೊಡುವಂತೆ ಬಿಜೆಪಿ ಜನಪ್ರತಿನಿಧಿಗಳಿಗೆ ಆಗ್ರಹಿಸಲಿ. ಅದನ್ನು ಬಿಟ್ಟು ನಾವು ನೀವು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಟ್ಟಿದ ತೆರಿಗೆಯ ಹಣದಿಂದ ಖರೀದಿಸಿದ ಸಾರ್ವಜನಿಕ ಸೊತ್ತುಗಳಿಗೆ ನಾಶ ಮಾಡಿದರೆ ಸುಮ್ಮನೆ ನೋಡಿಕೊಂಡು ಬಿಡುವುದಕ್ಕೆ ಆಗತ್ತಾ? ಅಂತವರು ಮುಂದಿನ ಬಾರಿ ಹಾಗೆ ರೈಲು, ಬಸ್ಸುಗಳಿಗೆ ಬೆಂಕಿ ಕೊಡುವ ಮೊದಲು ನೂರು ಬಾರಿ ಯೋಚಿಸುವಂತೆ ಎಚ್ಚರಿಕೆ ಕೊಡುವ ಕೆಲಸ ನಡೆಯಬೇಕು. ಹಾಗೆ ಮಾಡುವುದು ಹೇಗೆ?
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರಕಾರ ಅದನ್ನು ಮಾಡಿದೆ. ಯುಪಿಯಲ್ಲಿ ಬೆಂಕಿ ಕೊಟ್ಟವರಿಗೆ ನೋಟಿಸು ಕೊಟ್ಟು “ನೀವು ಬೆಂಕಿ ಕೊಟ್ಟ ಕಾರಣ ನನ್ನ ಸರಕಾರದ ತಿಜೋರಿಗೆ ಇಷ್ಟು ನಷ್ಟವಾಗಿದೆ. ಅದನ್ನು ನೀವೆ ತುಂಬಬೇಕು. ಇಷ್ಟು ಹಣ ಕಟ್ಟಿ ರಸೀದಿ ಪಡೆದುಕೊಳ್ಳಿ” ಎಂದು ನೋಟಿಸು ನೀಡಿದೆ. ಬುಲಂದ್ ಶೇಹರ್ ಎನ್ನುವ ಪ್ರದೇಶದ ಕೆಲವು ಮುಸ್ಲಿಂ ವ್ಯಾಪಾರಿಗಳು ತಮಗೆ ಬಂದ ನೋಟಿಸಿಗೆ ಅನುಗುಣವಾಗಿ ಯುಪಿ ಸರಕಾರಕ್ಕೆ ಏಳು ಲಕ್ಷದ ಚೆಕ್ ನೀಡಿದ ಫೋಟೋವನ್ನು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಇದನ್ನು ನಮ್ಮ ಕರ್ನಾಟಕ ರಾಜ್ಯ ಸರಕಾರ ಕೂಡ ಜಾರಿಗೆ ತರಬೇಕು. ಈ ಬಗ್ಗೆ ಸಿಎಂ ತೆಗೆದುಕೊಳ್ಳುವ ಯಾವುದೇ ನಡೆಗೆ ಪೂರ್ಣ ಪ್ರಮಾಣದ ಬೆಂಬಲ ಇದೆ ಎಂದು ಬಿಜೆಪಿ ಸಚಿವರು, ಸಿಎಂ ಆಪ್ತರು ಹೇಳಿಕೊಂಡು ಬರುತ್ತಿದ್ದಾರೆ. ಯುಪಿ ಮಾದರಿ ಇಲ್ಲಿ ಕೂಡ ಅನುಷ್ಟಾನಕ್ಕೆ ತರುವ ಜವಾಬ್ದಾರಿ ಬಿಎಸ್ ಯಡಿಯೂರಪ್ಪನವರ ಮೇಲಿದೆ. ಅವರಿಗೆ ಈ ನಿಟ್ಟಿನಲ್ಲಿ ನ್ಯಾಯಾಂಗದ ಸಹಕಾರವೂ ಸಿಗಲಿದೆ. ಅದೇಗೆ ಎಂದರೆ ಯಾವುದೇ ಬಂದ್, ಪ್ರತಿಭಟನೆಯಲ್ಲಿ ಭಾಗವಹಿಸುವವರು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವನ್ನು ಉಂಟು ಮಾಡಿದರೆ ಅದರಿಂದ ಆಗುವ ಹಾನಿಯನ್ನು ಬಂದ್ ಗೆ ಕರೆಕೊಟ್ಟವರೆ ತುಂಬಬೇಕು ಎನ್ನುವುದು ಸುಪ್ರೀಂ ಆದೇಶ. ಇಲ್ಲಿ ಕೂಡ ಸಿಎಎ ಬಗ್ಗೆ ಯಾರಿಗಾದರೂ ಸಂಶಯ ಇದ್ದರೆ ಅದಕ್ಕೆ ಪ್ರತಿಭಟನೆ ಮಾಡಲು ಯಾರು ಬೇಡ ಎನ್ನುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಹೊಸದಲ್ಲ. ಆದರೆ ಆ ಹೆಸರಿನಲ್ಲಿ ದೊಂಬಿ, ಸಂಘರ್ಷ ಮಾಡಿ ಸಾರ್ವಜನಿಕರ ಸೊತ್ತಿಗೆ, ಸರಕಾರದ ಆಸ್ತಿಗೆ ದಕ್ಕೆ ತರುವುದು ಸರ್ವಥಾ ತಪ್ಪು. ಅಂತವರಿಗೆ ಏನು ಮಾಡಬೇಕು ಎನ್ನುವುದನ್ನು ಯುಪಿ ಸಿಎಂ ತೋರಿಸಿಕೊಟ್ಟಿದ್ದಾರೆ. ಈಗ ನಮ್ಮ ಸಿಎಂ ಸರದಿ!