ರಾಜಕಾಲುವೆಗಳ ಹೂಳು ತೆಗೆಯುವ ಪ್ರಕ್ರಿಯೆ ಹೀಗೆ ಅಲ್ಲವೇ ಅಲ್ಲ!!
Posted On May 12, 2020
ಮಳೆಗಾಲಕ್ಕೆ ಕೆಲವೇ ದಿನಗಳು ಬಾಕಿ ಇವೆ. ಮಳೆಗಾಲ ಕಾಲಿಡುವ ಮೊದಲು ಮಂಗಳೂರು ಮಹಾನಗರ ಪಾಲಿಕೆ ಕೆಲವು ಪೂರ್ವ ತಯಾರಿ ಮಾಡಬೇಕಾಗುತ್ತದೆ. ಅದರಲ್ಲಿ ಎರಡು ರೀತಿಯ ಖರ್ಚುಗಳಿವೆ. ಮೊದಲನೇಯದಾಗಿ ರಾಜಕಾಲುವೆಯ ಹೂಳು ತೆಗೆಯುವುದು ಅಂದರೆ ಬೃಹತ್ ಚರಂಡಿಗಳಲ್ಲಿ ಜಿಸಿಬಿ ಯಂತ್ರವನ್ನು ಇಳಿಸಿ ಅದರಲ್ಲಿ ತುಂಬಿದ ಹೂಳು, ಮರಳು, ಕೆಸರು ತೆಗೆಯುವುದು. ನಿಮಗೆಲ್ಲಾ ಗೊತ್ತಿರುವ ಹಾಗೆ ಕೆಲವು ಚರಂಡಿಗಳು ಒಂದು ವಾರ್ಡಿನಲ್ಲಿ ಪ್ರಾರಂಭವಾದರೆ ಇನ್ನೊಂದು ವಾರ್ಡಿನಿಂದ ಹಾದು ಮತ್ತೊಂದು ವಾರ್ಡಿನಲ್ಲಿ ಕೊನೆಗೊಳ್ಳುತ್ತವೆ. ಕೆಲವು ಬೃಹತ್ ಚರಂಡಿಗಳು ಐದಾರು ವಾರ್ಡುಗಳಲ್ಲಿ ಹಾದು ಹೋಗುತ್ತವೆ. ಹಿಂದೆ ಪಾಲಿಕೆಯಲ್ಲಿ ಹೇಗೆ ಮಳೆಗಾಲದ ಪೂರ್ವ ರಾಜಕಾಲುವೆ ಹೂಳೆತ್ತುವ ಕಾಮಗಾರಿ ನಡೆಯುತ್ತಿತ್ತು ಎಂದರೆ ಒಂದು ಸಂಪೂರ್ಣ ರಾಜಕಾಲುವೆಯ ಹೂಳೆತ್ತುವ ಕಾಮಗಾರಿಯನ್ನು ಒಬ್ಬನೇ ಗುತ್ತಿಗೆದಾರನಿಗೆ ಕೊಡಲಾಗುತ್ತಿತ್ತು. ಅದನ್ನು ನೋಡಿಕೊಳ್ಳಲು ಇಂಜಿನಿಯರಿಂಗ್ ವಿಭಾಗದಿಂದ ಒಬ್ಬರು ಜೆಇಯವರಿಗೆ ಹೊಣೆ ನೀಡಲಾಗುತ್ತಿತ್ತು. ಇದರಿಂದ ಪ್ರಾರಂಭದಿಂದ ಕೊನೆಯ ತನಕ ಸಂಪೂರ್ಣ ಹೂಳೆತ್ತುವುದನ್ನು ಆ ಜೆಇ ನೋಡಿಕೊಳ್ಳಬೇಕಾಗಿತ್ತು. ಆದರೆ ಈ ಬಾರಿ ಹಾಗೆ ಮಾಡಲಿಲ್ಲ. ಇಂಜಿನಿಯರಿಂಗ್ ವಿಭಾಗದಿಂದ ಬೇರೆ ಬೇರೆ ಜ್ಯೂನಿಯರ್ ಇಂಜಿನಿಯರ್ ಗಳಿಗೆ ಕೆಲಸ ಹಂಚಿಹೋಗಿದೆ.
ಇದರಿಂದ ಏನು ಸಮಸ್ಯೆ ಆಗಿದೆ ಎಂದರೆ ಉದಾಹರಣೆಗೆ 44 ವಾರ್ಡಿನಲ್ಲಿ ಒಂದು ರಾಜಕಾಲುವೆ ಶುರುವಾಗಿದೆ ಎಂದು ಇಟ್ಟುಕೊಳ್ಳೋಣ. ಅದರ ಜೆಇ ಉದಾಹರಣೆಗೆ ಎ ಎಂದು ಅಂದುಕೊಳ್ಳೋಣ. ಅವರ ವ್ಯಾಪ್ತಿಯಲ್ಲಿ ಗುತ್ತಿಗೆದಾರ ರಾಜಕಾಲುವೆಯ ಕೆಲಸ ಅವರು ಆರಂಭಿಸಿದ್ದಾರೆ ಎಂದೇ ಭಾವಿಸೋಣ. ಆದರೆ ಆ ಬೃಹತ್ ಚರಂಡಿ ವಾರ್ಡ್ 48 ರಲ್ಲಿ ಕೊನೆಗೊಳ್ಳುತ್ತೆ ಎಂದಾದರೆ ಅದರ ಜೆಇ ಬೇರೆಯದ್ದೇ ವ್ಯಕ್ತಿ ಆಗಿದ್ದು ಅವರಿಗೆ ಸರಿಯಾದ ಮಾಹಿತಿ ಇಲ್ಲದಿರುವ ಸಾಧ್ಯತೆ ಇದೆ. ಒಂದು ರಾಜಕಾಲುವೆಗೆ ಒಂದೇ ಜೆಇ ಆದರೆ ಎಸ್ಟೀಮೇಶನ್, ಎಷ್ಟು ಆಳದಿಂದ ಹೂಳು ತೆಗೆಯಬೇಕು, ಎಷ್ಟು ದಿನದಲ್ಲಿ ಮುಗಿದರೆ ಒಳ್ಳೆಯದು ಎಲ್ಲಾ ಮಾಹಿತಿ ಇರುತ್ತದೆ. ಬೇರೆ ಬೇರೆ ಜೆಇಗಳಾದರೆ ಇದೆಲ್ಲಾ ಹೊಂದಾಣಿಕೆ ಕೊರತೆಯಿಂದ ಕೆಲಸ ಸರಿಯಾಗಿ ನಡೆಯುವುದಿಲ್ಲ. ಅಕಸ್ಮಾತ್ ಆಗಿ ಮೇ 18 ಕ್ಕೆ ದೊಡ್ಡ ಮಳೆ ಬಂತೆಂದರೆ ಆಗ ಕೆಲಸ ಸಂಪೂರ್ಣ ಮುಗಿಯದೇ ಅದೇ ಬೃಹತ್ ಚರಂಡಿಯ ಮೂಲಕ ಕೃತಕ ನೆರೆ ಬರುವ ಸಾಧ್ಯತೆ ಇದೆ. ಇನ್ನೊಂದು ಆಂಗಲ್ ನಲ್ಲಿ ನೋಡಿದರೆ ಬೇರೆಯದ್ದೇ ಅವ್ಯವಹಾರ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಟೆಂಡರ್ ಕರೆದು ಕಾಮಗಾರಿಯನ್ನು ಕೊಡುವುದರಿಂದ ಆಯಾ ಗುತ್ತಿಗೆದಾರ ಕೆಲಸ ಮುಗಿಸಿ ಮಳೆ ಬಂದ ನಂತರ ಬಿಲ್ ಸಂದಾಯವಾಗುತ್ತಿತ್ತು. ಸಾಮಾನ್ಯವಾಗಿ ಈ ಕಾಮಗಾರಿ ಎಪ್ರಿಲ್ ನಲ್ಲಿ ಕೈಗೆತ್ತಿಕೊಂಡರೆ ಮೇ ಮಧ್ಯದ ನಡುವೆ ಮುಗಿಯುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದ ಟೆಂಡರ್ ಕರೆಯುವುದು ತಡವಾಗಿ ಕಾಮಗಾರಿ ಈಗ ತಾನೆ ಶುರುವಾಗುತ್ತಿದೆ.
ಇದರಲ್ಲಿ ಈಗ ಅರ್ಧಕರ್ಧ ಕಾಮಗಾರಿಯನ್ನು ಒಬ್ಬರಿಗೆ ಕೊಡಲಾಗಿದೆ. ಅವರು ಅದನ್ನು ಆರಂಭಿಸಿ ಮುಗಿಸುವಾಗ ಮಳೆಗಾಲ ಕಳೆದಿರುತ್ತದೆ. ಅದರ ಬದಲು ಈಗ ಸಾಕಷ್ಟು ತಡವಾಗಿರುವುದರಿಂದ ಒಬ್ಬರಿಗೆ ಕೊಡುವ ಬದಲು ಅದನ್ನು ಹಂಚಿ ಕೊಟ್ಟರೆ ಎಲ್ಲಾ ಗುತ್ತಿಗೆದಾರರು ಬೇಗ ಕಾರ್ಯ ನಡೆಸಿ ಎಲ್ಲಾ ರಾಜಕಾಲುವೆಗಳ ಹೂಳೆತ್ತುವಿಕೆ ಮುಗಿಯುತ್ತಿತ್ತು. ಈಗ 18 ರಾಜಕಾಲುವೆ ಪಾಲಿಕೆ ವ್ಯಾಪ್ತಿಯಲ್ಲಿ ಇದೆ ಎಂದಾದರೆ ಹೆಚ್ಚೆಂದರೆ ಹತ್ತರ ಕೆಲಸ ಮಾತ್ರ ಮುಗಿಯುತ್ತದೆ. ಜೋರು ಮಳೆ ಬಂದರೆ ಎಲ್ಲ ಬಾಕಿ ಉಳಿದ ರಾಜಕಾಲುವೆಗಳ ಹೂಳನ್ನು ಮಳೆಯ ನೀರೆ ಕೊಚ್ಚಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಒಂದೊಂದು ಬೃಹತ್ ಚರಂಡಿಯ ಹೂಳು ತೆಗೆಯಲು ಎಂಟರಿಂದ 16 ಲಕ್ಷ ಖರ್ಚಾಗುತ್ತದೆ. ನಾಲ್ಕರದ್ದು ತೆಗೆಯದೇ ಹಾಗೇ ಬಿಟ್ಟರೂ ಮಳೆ ಬಂದ ನಂತರ ತೆಗೆದಿದ್ದಾರಾ, ಇಲ್ವಾ ಗೊತ್ತಾಗುವುದಿಲ್ಲ. ಆದರೆ ಬಿಲ್ ಮಾತ್ರ ಇಲ್ಲಿ ಯಥಾಪ್ರಕಾರ ಆಗುತ್ತದೆ. ನಾಲ್ಕು ಬೃಹತ್ ಚರಂಡಿಗಳದ್ದು 50 ಲಕ್ಷ ಬಿಲ್ ಎಂದರೂ ನಷ್ಟ ಯಾರಿಗೆ?
ಬಿಜೆಪಿ ಪಕ್ಷ ತುಂಬಾ ನಿರೀಕ್ಷೆಗಳೊಂದಿಗೆ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿರುವುದು ಅವರಿಗೆ ಇದು ಮೊದಲ ಮಳೆಗಾಲ. ಬಿಜೆಪಿಯ ಎರಡೂ ಶಾಸಕರು ಪಾಲಿಕೆಯ ವ್ಯಾಪ್ತಿಯಲ್ಲಿ ಇದ್ದಾರೆ. ಅವರು ತಕ್ಷಣ ಎಲ್ಲಾ ಮನಪಾ ಸದಸ್ಯರ ಮೀಟಿಂಗ್ ಕರೆದು ನಿಮ್ಮ ವಾರ್ಡಿನ ರಾಜಕಾಲುವೆಗಳ ಹೂಳು ತೆಗೆಯುವಾಗ ಅದನ್ನು ಅಲ್ಲಿಯೇ ನಿಂತು ಸರಿಯಾಗಿ ಕೆಲಸ ಆಗುವ ಹಾಗೆ ನೋಡುವಂತೆ ಸೂಚಿಸಬೇಕು. ಕಾರ್ಪೋರೇಟರ್ ಸರಿಯಾಗಿ ನೋಡದಿದ್ದರೆ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಲ್ಲ. ಸರಿಯಾಗಿ ಕೆಳಗೆ ಹೂಳು ತೆಗೆಯದಿದ್ದರೆ ನಮ್ಮ ತೆರಿಗೆಯ ಹಣ ವ್ಯರ್ಥ. ಇನ್ನು ಹೂಳನ್ನು ಚರಂಡಿಯ ಪಕ್ಕದಲ್ಲಿ ಹಾಕಿ ಹಾಗೇ ಬಿಟ್ಟರೆ ಅದು ಮತ್ತೆ ಚರಂಡಿಯನ್ನು ಸೇರುತ್ತದೆ. ಇದರಿಂದ ಕೃತಕ ನೆರೆ ಗ್ಯಾರಂಟಿ. ಬಿಜೆಪಿಯವರು ತಲೆಯಲ್ಲಿ ಏನು ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಹೀಗೆ ಆದರೆ ಜನರು ಈ ಬಾರಿಯೂ ಕೃತಕ ನೆರೆಯಿಂದ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ನೆನಪಿರಲಿ!!
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply