ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕೋಟಿಗಟ್ಟಲೆ ಅನುದಾನ ಹೇಗೂ ಬರುತ್ತಾ ಇದೆ. ಅದರೊಂದಿಗೆ ಎಡಿಬಿ-2 ಕೋಟಿಗಟ್ಟಲೆ ಹಣ ಬರುತ್ತದೆ. ಕೇಂದ್ರ ಸರಕಾರದ ಅಮೃತ ಯೋಜನೆಯಿಂದ ಕೂಡ ಸಾಕಷ್ಟು ಹಣ ಬರುತ್ತದೆ. ಇದೆಲ್ಲವೂ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿಯೇ ನಡೆಯುತ್ತದೆ. ಈ ಹಣ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಗುವ ಅಭಿವೃದ್ಧಿಗೆ ವಿನಿಯೋಗವಾಗಲೇಬೇಕು. ಸ್ಮಾರ್ಟ್ ಸಿಟಿ ಹಣದಿಂದ ಏನು ಅಭಿವೃದ್ಧಿ ಆಗುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬರುತ್ತಾ ಇರಬಹುದು. ಇವರು ಈಗಾಗಲೇ ಅಲ್ಲಲ್ಲಿ ಬಸ್ ಸ್ಟಾಪ್ ಮಾಡಿದ್ದಾರೆ. ಹನ್ನೆರಡುವರೆ ಲಕ್ಷದಿಂದ ಹಿಡಿದು 20 ಲಕ್ಷದ ತನಕ ಕೇವಲ ಒಂದೊಂದು ಬಸ್ ಸ್ಟಾಪುಗಳಿಗೆ ಖರ್ಚಾಗಿದೆ. ಅದು ನೋಡಿದರೆ ದೆಹಲಿ ಮಾದರಿ ಬಸ್ ಸ್ಟಾಪ್. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹವಾಮಾನ ಸಂಪೂರ್ಣ ಬದಲಾಗುತ್ತಿರುತ್ತದೆ ಎನ್ನುವುದನ್ನು ನಾವು ಚಿಕ್ಕಂದಿನಲ್ಲಿಯೇ ಕಲಿತಿರುತ್ತೇವೆ. ಆದರೆ ಐಎಎಸ್ ಕಲಿತಿರುವವರಿಗೆ ಅದು ಗೊತ್ತಿರುವುದಿಲ್ಲ. ಆದ್ದರಿಂದ ಅವರು ಯಾವುದೋ ಊರಿನ ಬಸ್ ಸ್ಟಾಪನ್ನು ನೋಡಿ ಅದನ್ನೇ ಇಲ್ಲಿ ಮಾಡಲು ಹೊರಡುತ್ತಾರೆ. ಇಲ್ಲಿ ಮಳೆಯ ಪ್ರಮಾಣ ಹೆಚ್ಚು. ನಮ್ಮಲ್ಲಿ ಹೆಚ್ಚಾಗಿ ಬಸ್ ಸ್ಟಾಪುಗಳು ಉಪಯೋಗಕ್ಕೆ ಬೀಳುವುದು ಮಳೆಗಾಲದ ಸಮಯದಲ್ಲಿ. ಆದರೆ ಲಕ್ಷಗಟ್ಟಲೆ ಖರ್ಚು ಮಾಡಿರುವ ಸ್ಮಾರ್ಟ್ ಸಿಟಿಯ ಬಸ್ಸು ಸ್ಟಾಪುಗಳು ಜೋರು ಮಳೆ ಬಂದರೆ ಕೆಳಗೆ ನಿಂತ ದಾರಿಹೋಕನನ್ನು ಪೂರ್ಣವಾಗಿ ಸ್ನಾನ ಮಾಡಿಸುತ್ತದೆ. ಕಟ್ಟಿದರೆ ಒಂದು ನೀರಿನ ಹನಿ ಒಳಗೆ ಬೀಳದೆ ಬಸ್ ಸ್ಟಾಪು ಒಂದು ಭದ್ರತೆಯ ಫೀಲ್ ಕೊಡಬೇಕು. ಜೋರು ಗಾಳಿ ಬಂದರೆ ಒದ್ದೆಯಾಗುವ ಬಸ್ ಸ್ಟಾಪುಗಳು ನಮಗೆ ಬೇಕಾ? ಇನ್ನು ಇವರು ಹಣ ಇದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಬಸ್ ಸ್ಟಾಪುಗಳನ್ನು ನಿರ್ಮಿಸುವ ಬಗ್ಗೆ ನಾನು ಹಿಂದೊಮ್ಮೆ ಬರೆದಿದ್ದೆ. ಪದವು ಮತ್ತು ಪಣಂಬೂರು ಜಂಕ್ಷನ್ ಗಳಲ್ಲಿ ಒಂದೇ ಜಾಗದಲ್ಲಿ ಮೂರು ಬಸ್ ಸ್ಟಾಪುಗಳಿವೆ. ಒಂದು ಕೇಂದ್ರ ಸರಕಾರ, ಒಂದು ಪಾಲಿಕೆ ಮತ್ತೊಂದು ಸ್ಮಾರ್ಟ್ ಸಿಟಿ ಹಣದಲ್ಲಿ ನಿರ್ಮಾಣವಾಗಿದೆ. ಆದರೆ ಇವರು ಎಷ್ಟು ಬುದ್ಧಿವಂತರು ಎಂದರೆ ದಿನಕ್ಕೆ ಅಂದಾಜು 308 ಬಸ್ಸುಗಳು ಬಂದು ನಿಂತು ಹೋಗುವ ಸ್ಟೇಟ್ ಬ್ಯಾಂಕಿನಲ್ಲಿ ಒಂದು ಹಳೆಯ ಬಸ್ ಸ್ಟಾಪು ಅರ್ಧ ಜೀವ ಹಿಡಿದು ನಿಂತಿದೆ. ಅಲ್ಲಿ ಸುರತ್ಕಲ್ ಕಡೆಗೆ ಹೋಗುವ ಬಸ್ಸುಗಳು ನಿಲ್ಲುತ್ತವೆ. ಉಳಿದ ನಂಬರ್ ಗಳ ಬಸ್ಸುಗಳಿಗೆ ಬಸ್ ಸ್ಟಾಪುಗಳು ಇಲ್ಲ. ಅಲ್ಲಿ ಮೂರು ಅಲ್ಲ, ಐದು ಇದ್ದರೂ ನಾವು ಒಪ್ಪಬಹುದಿತ್ತು. ಆದರೆ ಇವರು ಅಗತ್ಯ ಇರುವ ಕಡೆ ಮಾಡುವುದಿಲ್ಲ. ಮಾಡಲು ಅಲ್ಲಿನ ವ್ಯಾಪಾರಿಗಳು ಇವರನ್ನು ಬಿಡುವುದಿಲ್ಲ. ವ್ಯಾಪಾರಿಗಳ ಯೋಗಕ್ಷೇಮ ಪಾಲಿಕೆಗೆ ಮುಖ್ಯವಾಗಿರುವುದರಿಂದ ಇವರಿಗೆ ಜನರು ಮಳೆಗೆ ನಿಂತರೆಷ್ಟು? ಬಿಸಿಲಿಗೆ ನಿಂತರೆಷ್ಟು? ಕ್ಯಾರೇ ಇಲ್ಲ. ಇದನ್ನು ಜನರು ಪ್ರಶ್ನಿಸುವುದಿಲ್ಲ. ಅಲ್ಲಿಯೇ ಗೊಣಗಿ ನಿಂತುಕೊಳ್ಳುತ್ತಾರೆ. ನಾನು ಹೇಳುವುದಾದರೆ ಸ್ಮಾರ್ಟ್ ಸಿಟಿಯ ಹಣ ವಿನಿಯೋಗದ ವಿಷಯ ಬಂದಾಗ ಸಾರ್ವಜನಿಕರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇವರು ಮಾತನಾಡುವ ನಮ್ಮಂತವರನ್ನು ಅಭಿವೃದ್ಧಿಗೆ ಸಂಬಂಧಿಸಿದ ಸಭೆಗೆ ಕರೆಯುವುದಿಲ್ಲ. ಕರೆದರೂ ನಾವು ಏನಾದರೂ ಹೇಳಿದರೆ ಸಭೆಯಲ್ಲಿರುವ ಅತೀ ಬುದ್ಧಿವಂತರು “ನಿಮಗೆ ಟೆಕ್ನಿಕಲ್ ಜ್ಞಾನ ಇಲ್ಲ” ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ಎರಡು ವರ್ಷಗಳಿಂದ ಪಾಲಿಕೆಯ ಚೇಂಬರ್ ನೋಡಿದವರು 30 ವರ್ಷಗಳಿಂದ ಪಾಲಿಕೆಯ ಕಂಬಗಳಿಗೂ ಪರಿಚಯ ಇರುವ ನನಗೆ ಅನ್ಯಾಯದ ವಿರುದ್ಧ ಮಾತನಾಡಲು ಬಿಡುವುದಿಲ್ಲ. ಇನ್ನು ಹಣ ವೇಸ್ಟ್ ಆಗದೇ ಇರುತ್ತಾ?
ಇನ್ನು ಸ್ಮಾರ್ಟ್ ಸಿಟಿ ರಸ್ತೆಗಳನ್ನು ನಿರ್ಮಿಸುವಾಗ ಫೇವರ್ ಫಿನಿಶ್ ರಸ್ತೆಗಳನ್ನು ನಿರ್ಮಿಸಬೇಕಾಗುತ್ತದೆ. ಆದರೆ ನಮ್ಮ ಸ್ಮಾರ್ಟ್ ರಸ್ತೆಗಳು ಫೇವರ್ ಫಿನಿಶ್ ಮೆಶಿನ್ ತರುವಷ್ಟು ಅಗಲ ಇಲ್ಲ. ಆ ರಸ್ತೆಯಲ್ಲಿ ನಮ್ಮ ಮೆಶಿನ್ ಬರಲು ಆಗುವುದಿಲ್ಲ. ರಸ್ತೆ ಅಗಲವಿಲ್ಲ. ಹಾಗಿರುವಾಗ ಫೆವರ್ ಫಿನಿಶ್ ರಸ್ತೆಗಳು ಎಂದು ದಾಖಲೆಯಲ್ಲಿ ಬರೆಯುವುದು ಯಾಕೆ? ಯೋಜನೆಯಂತೆ ಕೆಲಸಗಳು ನಡೆಯುವುದಿಲ್ಲ ಎಂದಾದರೆ ಸ್ಮಾರ್ಟ್ ಸಿಟಿ ಹೆಸರು ಯಾಕೆ? ನಾನು ಹೇಳುವುದಾದರೆ ಎಲ್ಲೆಲ್ಲಿ ಸ್ಮಾರ್ಟ್ ಸಿಟಿ ಕೆಲಸ ಆಗುತ್ತದೆಯೋ ಅಲ್ಲಿ ಯೋಜನೆಯ ಕೆಲಸದ ಬಗ್ಗೆ ದೊಡ್ಡ ಬೋರ್ಡ್ ಹಾಕಬೇಕು. ಅದರಲ್ಲಿ ಕಾಮಗಾರಿಯ ಹೆಸರು, ಮಂಜೂರಾದ ಹಣ, ಇಂಜಿನಿಯರ್ ಹೆಸರು, ಗುತ್ತಿಗೆದಾರರ ಹೆಸರು, ಫೋನ್ ನಂಬ್ರ ಎಲ್ಲವೂ ಬರೆದು ಇರಬೇಕು. ಒಂದು ವೇಳೆ ಕಾಮಗಾರಿ ಕಳಪೆಯಾದರೆ ನಾಗರಿಕರು ಆ ಬೋರ್ಡ್ ನಲ್ಲಿದ್ದ ಫೋನ್ ಸಂಖ್ಯೆಗಳಿಗೆ ಕರೆ ಮಾಡಿ ವಿಚಾರಿಸಬಹುದು. ಹಾಗೆ ಮಾಡದಿದ್ದರೆ ಗುತ್ತಿಗೆದಾರರನ್ನು ಕೇಳುವವರು ಇರುವುದಿಲ್ಲ. ಇಷ್ಟಾಗಿಯೂ ಗಡಿಯಾರ ವೃತ್ತದಿಂದ ಆರ್ ಟಿಒ ತನಕದ ರಸ್ತೆ ಕಾಮಗಾರಿ ಇನ್ನೂ ಮುಗಿದಿಲ್ಲ. ಸ್ಮಾರ್ಟ್ ಸಿಟಿ ಎಂದರೆ ಅಭಿವೃದ್ಧಿ ಆದ ಕಡೆಯಲ್ಲಿಯೇ ಮತ್ತೆ ಅಭಿವೃದ್ಧಿ ಮಾಡುವುದಲ್ಲ ಎನ್ನುವುದನ್ನು ಇವರೆಲ್ಲ ಮೊದಲಿಗೆ ತಲೆಯಿಂದ ಹೊರಗೆ ಹಾಕಬೇಕು. ಅಲ್ಲಿಯೇ ತನಕ ಇವರೆಲ್ಲ ಸ್ಮಾರ್ಟ್ ಇರುವ ಕಡೆ ಸ್ಮಾರ್ಟ್ ಮಾಡುತ್ತಾರೆ. ಯಾಕೆಂದರೆ ಇವರ ತಲೆಯಲ್ಲಿ ನಾವೇ ಸ್ಮಾರ್ಟ್ ಎನ್ನುವುದು ಬಂದು ಬಿಟ್ಟಿದೆ. ಇನ್ನು ಎಡಿಬಿ-2 ಮತ್ತು ಅಮೃತ ಯೋಜನೆ ಬಗ್ಗೆನೂ ಇವರು ಮಾಡುತ್ತಿರುವ ಕರ್ಮ ಬರೆಯಲಿಕ್ಕಿದೆ!!
Leave A Reply