ಎಡಿಬಿ-2 ರಲ್ಲಿ 739 ಕೋಟಿ ಬರಲು ಇದೆ. ಕೆಲಸ ಸರಿಯಾದರೆ ಬಿಜೆಪಿ ಬಚಾವ್, ಇಲ್ಲದಿದ್ದರೆ….!
ಸ್ಮಾರ್ಟ್ ಸಿಟಿಯ ಕರ್ಮವನ್ನು ಮೊನ್ನೆ ಬರೆದಾಗ ಕೊನೆಯಲ್ಲಿಯೇ ಹೇಳಿದ್ದೆ. ಇನ್ನೆರಡು ಬರೆಯಲು ಇದೆ. ಅದರಲ್ಲಿ ಎರಡನೇಯದ್ದು ಎಡಿಬಿ-2. ಏಶಿಯನ್ ಡೆವಲಪಮೆಂಟ್ ಬ್ಯಾಂಕ್ ನ ಎರಡನೇ ಕಂತಿನ ಸಾಲ ಸುಮಾರು 739 ಕೋಟಿ ಬರಲಿದೆ. ಮೊದಲ ಕಂತಿನಲ್ಲಿ ಬಂದ ಕೋಟ್ಯಾಂತರ ರೂಪಾಯಿಯಲ್ಲಿ ಎಷ್ಟು ಚಿಲ್ಲರೆ ಕೆಲಸ ಆಗಿದೆ ಎನ್ನುವುದನ್ನು ನಾನು ಈ ಮೊದಲೇ ಬರೆದಿದ್ದೇನೆ. ಈಗ ಎರಡನೇಯ ಕಂತು ಪಾಲಿಕೆಯ ಮುಂದೆ ಬರುವಾಗ ಇಲ್ಲಿ ಪಾಲಿಕೆಯಲ್ಲಿಯೂ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ಅದೇ ರೀತಿಯಲ್ಲಿ ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರದಲ್ಲಿ ಎರಡರಲ್ಲಿಯೂ ಬಿಜೆಪಿ ಶಾಸಕರು ಇದ್ದಾರೆ. ಕಾಂಗ್ರೆಸ್ ಇದ್ದಾಗ ಆರೋಪ ಮಾಡುವುದು ಸುಲಭ. ಈಗ ಕೈಯಲ್ಲಿ ಜನ ಅಧಿಕಾರ ಕೊಟ್ಟು ನೋಡುತ್ತಿದ್ದಾರೆ. ಈಗ ಎಡಿಬಿ 739 ಕೋಟಿ ಹೇಗೆ ಸದ್ಭಳಕೆಯಾಗುತ್ತದೆ ಎನ್ನುವುದರ ಮೇಲೆ ಎರಡೂವರೆ ವರ್ಷಗಳ ನಂತರ ಬರುವ ವಿಧಾನಸಭಾ ಚುನಾವಣೆಯ ಮೇಲೆ ಅದು ವಿಷಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪಾಲಿಕೆ, ವಿವಿಧ ಇಲಾಖೆ ಮತ್ತು ಶಾಸಕರ ಕಚೇರಿಗಳ ನಡುವೆ ಸೂಕ್ತ ಸಂವಹನ ಆಗಲೇಬೇಕು. ಏಕೆಂದರೆ ಪಾಲಿಕೆಗೂ ನೀರಿನ ಸಮಸ್ಯೆ ಸರಾಗವಾಗಿ ಪರಿಹಾರವಾಗಲು ಕೋಟಿಗಟ್ಟಲೆ ಅನುದಾನ ಬಿಡುಗಡೆಯಾಗುತ್ತದೆ. ಅದು ಯಾವುದಕ್ಕೆ ಸಮರ್ಪಕವಾಗಿ ಬಳಕೆಯಾಗುತ್ತದೆ ಎನ್ನುವುದನ್ನು ಕೂಡ ನೋಡಬೇಕು. ಇದು ನಾನು ಸುಮ್ಮನೆ ಬರೆಯುತ್ತಿಲ್ಲ. ದಾಖಲೆಯೊಂದಿಗೆ ಬರೆಯುತ್ತಿದ್ದೇನೆ. ಇತ್ತೀಚೆಗೆ ಪಾಲಿಕೆಯ ಜಂಟಿ ಆಯುಕ್ತ ಸಂತೋಷ ಕುಮಾರ್ ಅವರು ನೀರಿನ ಕಾಮಗಾರಿ ಎಂದು ನಾಲ್ಕೂವರೆ ಕೋಟಿ ರೂಪಾಯಿಯನ್ನು ಮಂಜೂರು ಮಾಡಿದ್ದಾರೆ. ಮೊದಲನೇಯದಾಗಿ ಅವರಿಗೆ ಹಾಗೆ ಹಣ ಮಂಜೂರು ಮಾಡಲು ಯಾವುದೇ ಅಧಿಕಾರ ಇಲ್ಲ. ಅದು ಅಲ್ಲದೇ ಆಯುಕ್ತರ ರಜಾದಿನದಂದು ಯಾವುದೇ ಅಂದಾಜುಪಟ್ಟಿ ಇಲ್ಲದೆ ಮಂಜೂರಾತಿಗೊಳಿಸಲು ಅಧಿಕಾರ ಇಲ್ಲ ಎಂದು ಅವರಿಗೆ ಗೊತ್ತಿರಬೇಕಿತ್ತು. ಅದು ಬಿಟ್ಟು ಹೀಗೆ ಬೇಕಾಬಿಟ್ಟಿ ಹಣ ಮಂಜೂರು ಮಾಡುವುದು ಎಷ್ಟು ಸರಿ. ಎರಡನೇಯದಾಗಿ ಅದು ಅಗತ್ಯವೂ ಅಲ್ಲ. ಇದನ್ನೆಲ್ಲ ನೋಡಬೇಕಾದವರು ಯಾರು? ಮಾತನಾಡಿದರೆ ನನಗೆ ಟೆಕ್ನಿಕಲ್ ನಾಲ್ಡೆಜ್ ಇಲ್ಲ ಎನ್ನುವವರು ಈಗ ಹೊಸದಾಗಿ ಹುಟ್ಟಿಕೊಂಡಿದ್ದಾರೆ. ಒಂದು ವೇಳೆ ಹಾಗೆ ಟೆಕ್ನಿಕಲ್ ಜ್ಞಾನ ಇಲ್ಲದಿದ್ದರೆ ಗೊತ್ತಿದ್ದವರ ಕೇಳಿ ಬರೆದು ಅದನ್ನು ಮನನ ಮಾಡಿಕೊಂಡು ಸಭೆಗಳಲ್ಲಿ ಯಾರ ಎದುರು ಕೂಡ ಮಾತನಾಡುವಷ್ಟು ಸಾಮರ್ತ್ಯ ಕಳೆದ 30 ವರ್ಷಗಳಲ್ಲಿ ಬೆಳೆಸಿಕೊಂಡಿದ್ದೇನೆ. ಅಷ್ಟಕ್ಕೂ ನಾನು ಸಭೆಗಳಲ್ಲಿ ಮಾತನಾಡುವುದು ನನ್ನ ಲಾಭಕ್ಕಾಗಿ ಅಲ್ಲ. ಜನರ ತೆರಿಗೆಯ ಹಣ ಪೋಲಾಗಬಾರದು ಎನ್ನುವ ಕಾರಣಕ್ಕೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲಾ ವಿಷಯಗಳಲ್ಲಿ ನಾವು ಒಂದೇ ಎಂದು ಸಾಬೀತು ಮಾಡುತ್ತಾ ಹೋದರೆ ನಾನು ಮಾತನಾಡಲು, ಬರೆಯಲು ಹಿಂಜರಿಯುವ ಪ್ರಶ್ನೆನೆ ಇಲ್ಲ.
Leave A Reply