ಕೊಂಕಣಿ ಅಕಾಡೆಮಿಯ ಬೆಳ್ಳಿಹಬ್ಬವೋ ಅಥವಾ ಬಂಗಾರದ ಪಲ್ಲಂಕಿಯೋ?
ಕರ್ನಾಟಕದಲ್ಲಿ ವಿವಿಧ ಭಾಷಾ ಅಕಾಡೆಮಿಗಳಿವೆ. ಅದರಲ್ಲಿ ತುಳು, ಬ್ಯಾರಿ ಮತ್ತು ಕೊಂಕಣಿ ಅಕಾಡೆಮಿಯ ಕಚೇರಿಗಳು ಮಂಗಳೂರಿನಲ್ಲಿಯೇ ಇವೆ. ಪ್ರತಿ ಅಕಾಡೆಮಿಗೂ ಅಧ್ಯಕ್ಷರು ಮತ್ತು ಸದಸ್ಯರು ಇದ್ದಾರೆ. ಇನ್ನು ಅಧ್ಯಕ್ಷರಿಗೆ ಕನಿಷ್ಟ 35 ಸಾವಿರ ರೂಪಾಯಿಯಷ್ಟು ವೇತನ ಇದೆ. ಉಳಿದ ಭತ್ಯೆಗಳು ಪ್ರತ್ಯೇಕ. ವಾಹನಕ್ಕೆ ಡಿಸೀಲ್, ಬೇರೆ ಜಿಲ್ಲೆಗಳಿಗೆ ಹೋದರೆ ಪ್ರವಾಸ ಭತ್ಯೆ ಎಲ್ಲಾ ಸೇರಿದರೆ ಅದೊಂದಿಷ್ಟು ಸಾವಿರ. ಏನಿಲ್ಲ ಎಂದರೆ ತಿಂಗಳಿಗೆ ಒಬ್ಬೊಬ್ಬ ಅಧ್ಯಕ್ಷರನ್ನು ಸಾಕಲು 50 ಸಾವಿರ ರೂಪಾಯಿಗಳು ಬೇಕಾಗುತ್ತದೆ.
ಆದ್ದರಿಂದ ಯಾವುದೇ ವ್ಯಕ್ತಿ ತಾನು ಭಾಷೆಯ ಸೇವೆಗಾಗಿ ಅಕಾಡೆಮಿಯಲ್ಲಿ ಅಧ್ಯಕ್ಷನಾಗಿದ್ದೇನೆ ಎಂದು ಭಾಷಣದಲ್ಲಿ ಹೇಳಿದರೂ ಅದನ್ನು “ಪೇಮೆಂಟ್ ಸೇವೆ” ಎಂದು ಅಂದುಕೊಳ್ಳಬೇಕು. ಏಕೆಂದರೆ ಸಂಬಳ ಹಾಗೂ ಭತ್ಯೆಗಳನ್ನು ತೆಗೆದುಕೊಂಡರೆ ಅದು ಸೇವೆ ಆಗುವುದಿಲ್ಲ. ಇನ್ನು ಕೊಂಕಣಿ ಅಕಾಡೆಮಿಯ ವಿಷಯಕ್ಕೆ ಬರೋಣ.
ಕೊಂಕಣಿ ಮಾತನಾಡುವ ಜಾತಿಗಳ ಪೈಕಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಈ ಬಾರಿ ಅಧ್ಯಕ್ಷಗಿರಿ ಸಿಕ್ಕಿದೆ ಎಂದು ಗೊತ್ತಾದಾಗ ಅದೇ ಜಾತಿಯವನಾಗಿ ನನಗೆ ಸಹಜವಾಗಿ ಒಂದಷ್ಟು ಖುಷಿಯಾಯಿತು. ಅದರಲ್ಲಿಯೂ ಒಬ್ಬ ವೈದ್ಯರು ಅಧ್ಯಕ್ಷರಾಗುತ್ತಿದ್ದಾರೆ ಎಂದಾಗ ಹಿರಿಮೆಯೂ ಆಯಿತು. ಅವರು ಉಮ್ಮೇದಿನಲ್ಲಿ ತಮ್ಮ ಸೇವಾವಧಿಯ ಆರಂಭದಲ್ಲಿಯೇ ಅಕಾಡೆಮಿಯ ಸ್ಥಾಪನೆಯ ಬೆಳ್ಳಿಹಬ್ಬವನ್ನು ಕೂಡ ತಮ್ಮ ಸ್ವಊರಿನಲ್ಲಿ ಆಚರಿಸಿದರು. ಪರವಾಗಿಲ್ಲ, ಫಾಸ್ಟ್ ಇದ್ದಾರೆ ಅನಿಸಿತು. ನಾನು ಸಾರ್ವಜನಿಕ ಬದುಕಿನಲ್ಲಿ ಮಾಡಿದ ಸೇವೆಗಾಗಿ ನನ್ನನ್ನು ಆಹ್ವಾನಿಸಿ ಸನ್ಮಾನಿಸಲಾಗಿತ್ತು. ಐದು ಸಾವಿರ ರೂಪಾಯಿ ಗೌರವಧನ ಕೊಟ್ಟಿದ್ದರು. ಅಲ್ಲಿಂದ ಬಂದವನೇ ಆ ಹಣವನ್ನು ಸಮಾಜಸೇವಾ ಸಂಸ್ಥೆಗೆ ದೇಣಿಗೆಯಾಗಿ ಕೊಟ್ಟೆ.
ಆದರೆ ಆ ಬೆಳ್ಳಿಹಬ್ಬದ ಖರ್ಚುವೆಚ್ಚದ ಬಗ್ಗೆ ಇತ್ತೀಚೆಗೆ ಅಂಕಿ ಅಂಶಗಳ ಸಹಿತ ಮಾಧ್ಯಮದಲ್ಲಿ ಬಂದಿರುವ ವರದಿಯನ್ನು ನೋಡಿ ಹೌಹಾರಿದ್ದೇನೆ. ಎರಡು ದಿನದ ಕಾರ್ಯಕ್ರಮಕ್ಕೆ ಖರ್ಚಾದ ಒಟ್ಟು ಮೊತ್ತ 30,36,728 ರೂಪಾಯಿಯಂತೆ. ಅಲ್ಲಿ ಒಬ್ಬ ಕುರುಡ ಬಂದಿದ್ದರೂ ಅವನಿಗೆ ಅಷ್ಟು ಹಣ ಖರ್ಚಾಗಲು ಸಾಧ್ಯವೇ ಇಲ್ಲ ಎಂದು ಗೊತ್ತಾಗುತ್ತಿತ್ತು. ಅಕಾಡೆಮಿಯ ಪಟಾಲಾಂ ಮಂಗಳೂರಿನಿಂದ ಕಾರ್ಕಳಕ್ಕೆ ಮಾಡಿದ ಪ್ರಯಾಣ ವೆಚ್ಚವೇ 3,55,365 ರೂಪಾಯಿಗಳಂತೆ. ಕೇವಲ ಊಟೋಪಚಾರಕ್ಕೆ 5,28,540 ರೂಪಾಯಿ ಆಗಿದೆಯಂತೆ. ಬಹುಶ: ಬಕಾಸುರರೇ ಅಲ್ಲಿ ಟೆಂಟ್ ಹಾಕಿ ಕುಳಿತು ತಿಂದರೂ ಅಷ್ಟು ಹಣ ಆಗುತ್ತಿರಲಿಲ್ಲ ಎನ್ನುವುದು ಅಲ್ಲಿ ಹೋಗಿ ಬಂದವರ ವಾದ. ಸ್ಮರಣಿಕೆ, ಪ್ರಮಾಣಪತ್ರ, ಬ್ಯಾಡ್ಜ್ ಗಳಿಗೆ 1,50,671 ರೂಪಾಯಿ ಆಗಿದೆಯಂತೆ. ಪ್ರಮಾಣಪತ್ರಕ್ಕೆ ಬಂಗಾರದ ಕೋಟ್ ಹೊಡೆದು ಕೊಟ್ಟಿದ್ದರೆ ಅದು ಬೇರೆ ವಿಷಯ. ಆದರೆ ಅವರು ಕೊಟ್ಟ ಪ್ರಮಾಣಪತ್ರ ನೋಡುವಾಗ ಸಣ್ಣ ಮಗುವಿಗೂ ಅಲ್ಲಿ ದಾಲ್ ಮೇ ಬಹುತ್ ಕುಚ್ ಕಾಲಾ ಹೇ ಎನ್ನುವುದು ಗೊತ್ತಾಗುತ್ತದೆ. 116 ಪುಟಗಳ ಸ್ಮರಣ ಸಂಚಿಕೆಗೆ 1,60,040 ತೋರಿಸಲಾಗಿದೆ. ಅದು ಸರಿಯಾಗಿ ಎಷ್ಟು ಪ್ರಿಂಟ್ ಮಾಡಿದ್ದರೋ ದೇವರಿಗೆ ಗೊತ್ತು. ಎಲ್ಲಾ ಕಡೆಯಿಂದ ಕೋಟೇಶನ್ ತೆಗೆದುಕೊಳ್ಳುವ ಬೃಹತ್ ನಾಟಕ ಮಾಡಿ ಕೊನೆಗೆ ತಮ್ಮದೇ ಊರಿನ ಯಾರಿಗಾದರೂ ಕೊಟ್ಟು ಅವರಿಂದ ಇಂತಿಷ್ಟು ಮೊತ್ತದ ಬಿಲ್ ನೀಡಬೇಕು, ಕಮೀಷನ್ ಇಷ್ಟು ಕೊಡಬೇಕು, ಇಷ್ಟು ಪಾಲು ನಮಗೆ ಕೊಡಬೇಕು ಎನ್ನುವ ಸ್ಕ್ರಿಷ್ಟ್ ಸ್ವತ: ಅಧ್ಯಕ್ಷರೇ ಕುಳಿತು ಬರೆದಿದ್ದಾರೋ ಅಥವಾ ಯಾರಾದರೂ ಹೇಳಿಕೊಟ್ಟಿದ್ದಾರೋ ಕಾರ್ಕಳದ ವೆಂಕಟರಮಣ ದೇವರಿಗೆ ಮಾತ್ರ ಗೊತ್ತು.
ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಟಿ, ಕವಿಗೋಷ್ಟಿಯನ್ನು ಮಂಗಳೂರಿನಲ್ಲಿ ಅನೇಕ ಸಂಘಟನೆಗಳು ಆಗಾಗ ಮಾಡುತ್ತವೆ. ಅವರುಗಳಿಗೆ ಕೊಂಕಣಿ ಅಕಾಡೆಮಿಯ ಬೆಳ್ಳಿಹಬ್ಬದ ಹೆಸರಿನಲ್ಲಿ ವಿಚಾರಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಆದ 4,66,800 ರೂಪಾಯಿಯಷ್ಟು ಮೊತ್ತವನ್ನು ನೋಡಿ ಎಲ್ಲಿಂದ ನಗಬೇಕು ಎಂದು ಗೊತ್ತಾಗುತ್ತಿಲ್ಲ. ಕೊಂಕಣಿ ಅಕಾಡೆಮಿ ಅಧ್ಯಕ್ಷರು ಒಂದು ವರ್ಷದಲ್ಲಿ ಸಾಧಿಸಿದ ವೇಗವನ್ನು ಕಂಡು ಬಹುಶ: ಬೆಂಗಳೂರಿನ ಹಿರಿಯ ಶಾಸಕರು, ಸಚಿವರುಗಳು ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಯಾಕೆಂದರೆ ಇದು ಅಕಾಡೆಮಿಯ ಅಧ್ಯಕ್ಷರ ಮನೆಯ ಹಣ ಅಲ್ಲ. ಜನರ ತೆರಿಗೆಯ ಹಣ. ರಸ್ತೆ ಬದಿಯ ಗೂಡಂಗಡಿಯೊಬ್ಬ ಪಾಲಿಕೆಗೆ ಕಟ್ಟಬೇಕಾದ ಜುಜುಬಿ ಹಣ ಕಟ್ಟದಿದ್ದರೆ ಅವನ ಅಂಗಡಿಯನ್ನು ಎತ್ತಾಕಿಕೊಂಡು ಹೋಗುತ್ತಾರೆ. ಹಾಗಿರುವಾಗ ಈ ಮೂವತ್ತು ಲಕ್ಷ ರೂಪಾಯಿಯ ಗೋಲ್ಮಾಲ್ ಆಗಿರುವುದೇ ಆದರೆ ಆ ಬಗ್ಗೆ ಕನ್ನಡ ಸಂಸ್ಕೃತಿ ಸಚಿವರು ತನಿಖೆ ಮಾಡಬೇಕು. ಇದರೊಂದಿಗೆ ಯಾವುದೇ ಅಕಾಡೆಮಿ ಇರಲಿ, ಅದು ಇಷ್ಟು ವರ್ಷಗಳಲ್ಲಿ ಭಾಷೆಗಾಗಿ ಮಾಡಿದ ಕೆಲಸಗಳು ಮತ್ತು ಆದ ಖರ್ಚು ನಿಜಕ್ಕೂ ತಾಳೆಯಾಗುತ್ತಿದೆ ಎಂದಾದರೆ ಓಕೆ, ಇಲ್ಲದಿದ್ದರೆ ಸುಮ್ಮನೆ ವಾರಕ್ಕೊಮ್ಮೆ ಕಚೇರಿಗೆ ಬಂದು ಕಾಫಿ, ಅಂಬಡೆ ತಿಂದು ಹೋಗುವವರಿಗೆ ತಿಂಗಳಿಗೆ ಐವತ್ತು ಸಾವಿರ ಖರ್ಚು ಮಾಡಲು ಅದು ನಮ್ಮ ತೆರಿಗೆಯ ಹಣ. ಪ್ರಜ್ಞಾವಂತ ನಾಗರಿಕರು ಉತ್ತರಿಸಬೇಕು.
Leave A Reply