ಫೀಸ್ ನಲ್ಲಿ ವಿನಾಯಿತಿ ಕೊಡಲು ಮೀನಾಮೇಷ ಯಾಕೆ?
ಒಂದು ಸಿಂಪಲ್ ಪ್ರಶ್ನೆ. ಅದಕ್ಕೆ ಉತ್ತರಿಸಲು ನ್ಯಾಯಾಲಯಗಳಿಗೆ ಬೇಕಾಗಿರುವುದು ಬೆರಳೆಣಿಕೆಯ ದಿನ. ಯಾಕೆಂದರೆ ಅದೇನು ಗಲ್ಲು ಶಿಕ್ಷೆಗೆ ಸಮಾನಾದ ಪ್ರಕರಣವೇನಲ್ಲ. ವಿಷಯ ಏನೆಂದರೆ ರಾಜ್ಯ ಸರಕಾರ ಒಂದು ವರ್ಷದ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಫೀಸಿನಲ್ಲಿ 30 ಶೇಕಡಾ ಮೊತ್ತವನ್ನು ಕಡಿತಗೊಳಿಸಿ ಎಂದು ಸೂಚನೆ ನೀಡಿತ್ತು. ಆದರೆ ಅದು ಸಾಧ್ಯವಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟಗಳು ನ್ಯಾಯಾಲಯದ ಮೆಟ್ಟಿಲು ಏರಿದವು. ನ್ಯಾಯಾಲಯದ ಮುಂದಿದ್ದದ್ದು ಒಂದೇ ಪ್ರಶ್ನೆ. ರಾಜ್ಯ ಸರಕಾರ ಹೇಳಿದಂತೆ ಕೇಳಿ ಎಂದು ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳಿಗೆ ಹೇಳುವುದಾ? ಇಲ್ಲ ನೀವು ಹಾಗೆ ಶಿಕ್ಷಣ ಸಂಸ್ಥೆಗಳಿಗೆ ಹೇಳಲು ಸಾಧ್ಯವಿಲ್ಲ ಎಂದು ಸರಕಾರಕ್ಕೆ ಹೇಳುವುದಾ? ಅದನ್ನು ನಿರ್ಧರಿಸಲು ಸರಕಾರಕ್ಕೆ ಒಂದು ವರ್ಷ ಬೇಕಾ? ಆಕ್ಸಿಜನ್ ಕೊಡಿ, ಲಸಿಕೆ, ವೆಂಟಿಲೇಟರ್ ಕೊಡಿ, ಈಗಲೇ ಕೊಡಿ, ನಾಳೆಯೇ ಕೊಡಿ ಎಂದು ನ್ಯಾಯಾಲಯಗಳು ರಾಜ್ಯ ಸರಕಾರಕ್ಕೆ ಸೂಚನೆ ಕೊಡುತ್ತಿಲ್ಲವೇ? ಆಕ್ಸಿಜನ್, ಲಸಿಕೆ ಅವೆಲ್ಲ ಒಂದು ದಿನದೊಳಗೆ ಸೃಷ್ಟಿಯಾಗುವುದಿಲ್ಲ. ಆದರೆ ನ್ಯಾಯಾಲಯಗಳು ಕೇಂದ್ರ ಸರಕಾರ ಇದ್ದು ಕೊಡುತ್ತಿಲ್ಲ ಎನ್ನುವ ರೀತಿಯಲ್ಲಿ ಜನರಿಗೆ ಭಾವನೆ ಮೂಡುವ ಹಾಗೆ ಮಾಡಿದ್ದವು.
ಆದರೆ ಶಿಕ್ಷಣ ಮಕ್ಕಳ ಮತ್ತು ಪೋಷಕರ ಮೂಲಭೂತ ಅವಶ್ಯಕತೆ. ಅದನ್ನು ಸರಿಯಾಗಿ ದಡ ಸೇರಿಸಲು ರಾಜ್ಯ ಸರಕಾರಕ್ಕೆ ಆಗಲಿಲ್ಲ. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಯಾಕೆ 30 ಶೇಕಡಾ ಫೀಸ್ ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುವುದು ಕೂಡ ಪ್ರಶ್ನೆ. ಅವರಿಗೆ ಶಿಕ್ಷಕರಿಗೆ ಸಂಬಳ ಕೊಡಲು ಇದೆ ಎನ್ನುವುದು ಹೌದಾದರೂ ವಿದ್ಯುತ್, ನೀರು ಬಿಲ್ ಉಳಿತಾಯವಾಗಲಿಲ್ಲವೇ? ಅದನ್ನು ಯಾಕೆ ಅವು ಪರಿಗಣಿಸುವುದಿಲ್ಲ. ಇನ್ನು ಎಷ್ಟೋ ಕಡೆ ಶಿಕ್ಷಕರಿಗೆ ಪೂರ್ತಿ ಸಂಬಳ ಕೊಡಲು ಸಾಧ್ಯವಿಲ್ಲ ಕೈ ಎತ್ತಿರುವ ಶಿಕ್ಷಣ ಸಂಸ್ಥೆಗಳಿವೆ. ಹಾಗಾದರೆ ನಿಜಕ್ಕೂ ಖಾಸಗಿ ಶಾಲೆ, ಕಾಲೇಜುಗಳ ಆಡಳಿತ ಮಂಡಳಿ ಅಥವಾ ಮಾಲೀಕರು ಸಂಕಷ್ಟದಲ್ಲಿದ್ದಾರಾ? ನಮಗೆ ಬ್ಯಾಂಕ್ ಲೋನ್ ಇದೆ. ಅದನ್ನು ಕಟ್ಟಲು ಇದೆ ಎಂದು ಅಂತಹ ಶಾಲೆ, ಕಾಲೇಜಿನವರು ಹೇಳಬಹುದು. ಆದರೆ ತಮ್ಮ ವಹಿವಾಟನ್ನು ಹೆಚ್ಚಿಸಲು, ಆಸ್ತಿಪಾಸ್ತಿ ಬೆಳೆಸಲು ಆರಂಭದಲ್ಲಿ ಒಂದು ಶಿಕ್ಷಣ ಸಂಸ್ಥೆ ಇದ್ದವರು ನಂತರ ಒಂದು ಇದ್ದದ್ದನ್ನು ನಾಲ್ಕು ಮಾಡುವ ನಿಟ್ಟಿನಲ್ಲಿ ಸಾಲ ತೆಗೆದುಕೊಂಡಿರುತ್ತಾರೆ ವಿನ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಂದು ಅವರು ಹೇಳಿದರೆ ಕೇಳಲು ಜನರೇನು ತಮ್ಮ ಕಿವಿಯ ಮೇಲೆ ಹೂ ಇಟ್ಟುಕೊಂಡಿಲ್ಲ. ಅವರ ಸಾಲ ತೀರಿಸಲು ಮಕ್ಕಳ ಪೋಷಕರು ತಮ್ಮ ಬೆವರು ಮತ್ತು ರಕ್ತ ಒಂದು ಮಾಡಬೇಕಾಗಿದೆ. ಇಡೀ ಜೀವಮಾನ ಫೀಸ್ ಹೆಸರಿನಲ್ಲಿ ಮತ್ತು ಬೇರೆಬೇರೆ ರೀತಿ ಹಣವನ್ನು ದಂಡಿಯಾಗಿ ಪೋಷಕರಿಂದ ವಸೂಲಿ ಮಾಡಿ ತಮ್ಮ ತಿಜೋರಿ ತುಂಬಿಸುವ ಶಿಕ್ಷಣ ಸಂಸ್ಥೆಗಳು ಈ ಎರಡು ವರ್ಷಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿವೆ.
ಹಾಗೇ ಹಟ ಹಿಡಿದರೆ ಅವರಿಗೆ ಎಚ್ಚರಿಕೆ ಕೊಟ್ಟು ಸರಕಾರ ಹೇಳಿದ ಹಾಗೆ ಕೇಳಿ ಎಂದು ಕಿವಿ ಹಿಂಡಬೇಕಾದದ್ದು ಯಾರು? ಅದು ನ್ಯಾಯಾಲಯ. ಪೂರ್ತಿ ಫೀಸ್ ಕೊಡಲು ಸಾಧ್ಯವಿಲ್ಲ, ಆದಾಯದ ಕೊರತೆ ಇದೆ ಎಂದು ಪೋಷಕರು ಕೂಡ ಸಂಕಟ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಂದು ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಮಾನಸಿಕವಾಗಿ ಸಿದ್ಧರಾಗುವುದು ಕಡಿಮೆ. ಈ ವರ್ಷ ಸರಕಾರಿ ಶಾಲೆಗಳ ದಾಖಲಾತಿ ಹೆಚ್ಚಾಗಿರುವುದು ಹೌದಾದರೂ ಇವತ್ತಿಗೂ ಕೆಳಮಧ್ಯಮ ವರ್ಗದ ಕುಟುಂಬಗಳು ಹೇಗಾದರೂ ಮಾಡಿ ಒಂದಿಷ್ಟು ಹಣ ಒಟ್ಟು ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಇನ್ನು ಫೀಸ್ ತುಂಬಾ ತೆಗೆದುಕೊಳ್ಳುವ ಶಾಲೆಗಳಲ್ಲಿ ಚೆನ್ನಾಗಿ ಕಲಿಸುತ್ತಾರೆ ಎನ್ನುವುದು ಮತ್ತು ನೋಡಲು ಚೆಂದವಿರುವ ಯುವಕ ಅಥವಾ ಯುವತಿ ತುಂಬಾ ಬುದ್ಧಿವಂತರು ಎಂದು ಅಂದುಕೊಳ್ಳುವುದು ಎರಡೂ ಶುದ್ಧ ಮೂರ್ಖತನ. ಎಲ್ಲವೂ ನಿಮ್ಮ ಮಗು ಹೇಗೆ ಶಿಕ್ಷಕರು ಹೇಳಿದ್ದನ್ನು ಗ್ರಹಿಸುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ ವಿನ: ಉತ್ತಮ ಕಟ್ಟಡಗಳು, ಆಕರ್ಷಕ ಪೀಠೋಪಕರಣಗಳು ಮತ್ತು ಆಧುನಿಕ ಸಮವಸ್ತ್ರ ಮಕ್ಕಳ ಭವಿಷ್ಯವನ್ನು ರೂಪಿಸುವುದಿಲ್ಲ.
ಇನ್ನು ಈ ಬಾರಿ ಪ್ರಥಮ ಪಿಯು ಪಾಸಾಗಬೇಕಾದರೂ ಎರಡೂ ರೀತಿಯ ಪ್ರಶ್ನಾಪತ್ರಿಕೆಗಳನ್ನು ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ. ಆ ಎರಡನ್ನು ತುಂಬಿಸಿ ಕಳುಹಿಸಿಕೊಡಬೇಕಾಗಿದೆ. ಪಠ್ಯ ಮುಗಿಯದವರು ನೋಡಿ ಕೂಡ ಬರೆಯಬಹುದಾಗಿದೆ. ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಆದರೆ ಈ ಕುರಿತು ಗೊಂದಲ ಇನ್ನು ಹಾಗೆ ಇದೆ. ಈ ಬಾರಿ ಹತ್ತನೇ ಮತ್ತು ಪಿಯು ಎರಡು ವರ್ಷದ ವಿದ್ಯಾರ್ಥಿಗಳು ಕೊರೊನಾಗಿಂತ ಹೆಚ್ಚು ತಲೆಕೆಡಿಸಿಕೊಂಡಿರುವುದು ಈ ಪರೀಕ್ಷೆ ಮತ್ತು ಮುಂದಿನ ತರಗತಿಯ ಉತ್ತೀರ್ಣವಾಗುವ ರೀತಿ ಮತ್ತು ಮಾರ್ಗದ ಬಗ್ಗೆ. ಹಾಗಾದ್ರೆ ಇಷ್ಟು ಗೊಂದಲ ಯಾಕೆ? ಹತ್ತನೇ ತರಗತಿಯ ಪರೀಕ್ಷೆಯನ್ನು ಜುಲೈ ಮೂರನೇ ವಾರದಲ್ಲಿ ಮಾಡುತ್ತೇವೆ ಎನ್ನುವ ಭರವಸೆಯಲ್ಲಿ ಸರಕಾರ ಇದೆ. ಎಲ್ಲರನ್ನು ಪಾಸು ಮಾಡುತ್ತೇವೆ ಎನ್ನುವ ಮಾತುಗಳು ಸಚಿವರ ಬಾಯಿಂದ ಹೊರಬಿದ್ದಿದೆ. ಒಟ್ಟಿನಲ್ಲಿ ಸರಕಾರದ ಶಿಕ್ಷಣ ಇಲಾಖೆ ಅನಾವಶ್ಯಕವಾಗಿ ಗೊಂದಲವನ್ನು ಉಂಟು ಮಾಡುತ್ತಿದೆ. ಯಾವಾಗಲೂ ನೇರವಾಗಿ ಕಡ್ಡಿಮುರಿದಂತೆ ಮಾತನಾಡುತ್ತಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯಾಕೋ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಮಕ್ಕಳು ಮತ್ತು ಪೋಷಕರು ಹಾಗೂ ಶಿಕ್ಷಕರು ಕೂಡ ಸರಕಾರದ ಈ ನಡೆಯಿಂದ ಹೈರಾಣಾಗಿದ್ದಾರೆ. ಅತಿಥಿ ಶಿಕ್ಷಕರು ಸರಕಾರದ ಪ್ಯಾಕೇಕ್ ಏನೂ ಇಲ್ಲದೆ ಬೀಡಿ ಕಟ್ಟುವುದರಿಂದ ಹಿಡಿದು ತರಕಾರಿ ಮಾರುವ ಕಾಯಕಕ್ಕೂ ಕೈ ಹಾಕಿದ್ದಾರೆ. ಹಾಗಂತ ಯಾವ ಕೆಲಸವೂ ಮೇಲು ಅಥವಾ ಕೀಳು ಎಂದು ನಾನು ಹೇಳುತ್ತಿಲ್ಲ. ಆದರೆ ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು. ಅದು ಶಾಲೆಯಲ್ಲಿಯೂ ಹಾಗೆ ಅಲ್ಲವೇ? ಪಿಟಿ ಮಾಸ್ಟರ್ ಗಣಿತ ಕಲಿಸಲು ಆಗುತ್ತಾ?
ಈ ಬಾರಿ ಪುನಃ ಫೀಸ್ ಕಡಿಮೆ ಮಾಡುವ ಬಗ್ಗೆ ಒಂದು ಆದೇಶ ಜಾರಿ ಗೊಳಿಸಿದೆ ಈ ಆದೇಶದ ಬಗ್ಗೆ ಶಾಲೆ ಕಾಲೇಜ್ ಮಾಲೀಕರ ಸಂಘದಲೇ ಎರಡು ಗುಂಪು ಗಳಾಗಿವೆ ಒಂದು ಗುಂಪು ಸರಕಾರದ ಆದೇಶ ಓಕೆ ಅಂದರೆ ಇನ್ನೊಂದು ಗುಂಪು ಒಪುದಿಲ್ಲ ನಾವು ಕೋರ್ಟ್ ಗೆ ಹೋಗುತ್ತವೆ ಅನ್ನುತ್ತಿದ್ದಾರೆ ಒಟ್ಟಾರೆ ಮಕ್ಕಳ ಪೋಷಕರಿಗೆ ಒಂದು ಕಡೆ ಫೀಸ್ ಕಟ್ಟುವುದು ಹೇಗೆ ಎಂದು ಚಿಂತೆಯಾದರೆ ಇನ್ನೊಂದು ಕಡೆ ಮಕ್ಕಳಿಗೆ ಸರಿಯಾದ ಪಾಠ ಇಲ್ಲವಲ್ಲ ಎಂಬ ಟೆನ್ ಸನ್ ಕೋರ್ಟ್ ಮತ್ತು ಸರಕಾರಕ್ಕೆ ಅರಾಮ.ಇದಕ್ಕೆ ಕೊನೆ ಎಂ ದು?
Leave A Reply