ಬಸ್ಸಿನ ಟ್ರಿಪ್ ಕಟ್ ಮಾಡುವವರ ಪರ್ಮಿಟ್ ರದ್ದು ಮಾಡಲು ಡಿಸಿ ಮನಸ್ಸು ಮಾಡಲಿ!!
ಕೋವಿಡ್ ನಿಯಂತ್ರಣಕ್ಕೆ ತರಲು ಮೊದಲ ಬಾರಿ ಲಾಕ್ ಡೌನ್ ಘೋಷಣೆ ಆದಾಗ ಎಲ್ಲಾ ಉದ್ಯಮಗಳು ಬಂದ್ ಆದಂತೆ ಸಾರಿಗೆ ವ್ಯವಸ್ಥೆ ಕೂಡ ಬಂದಾಗಿತ್ತು. ಆಗ ಬಸ್ಸಿನವರು ತಮ್ಮ ಪರ್ಮಿಟ್ ಅನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಸರೆಂಡರ್ ಮಾಡಿಸಿದ್ದರು. ಬಸ್ ಉದ್ಯಮದಲ್ಲಿ ಇರುವವರಿಗೆ ಈ ಪರ್ಮಿಟ್ ಸರೆಂಡರ್ ಮಾಡುವುದು ಎನ್ನುವ ಶಬ್ದದ ಅರ್ಥ ಗೊತ್ತಿದೆ. ಆದರೆ ಜನಸಾಮಾನ್ಯರಿಗೆ ಅರ್ಥವಾಗಲು ಸಂಕ್ಷಿಪ್ತವಾಗಿ ಹೇಳುವುದಾದರೆ ನೀವು ಬಸ್ಸನ್ನು ರಸ್ತೆಯಲ್ಲಿ ಓಡಿಸುವ ಮೊದಲು ಆರ್ ಟಿಒದಿಂದ ಪರ್ಮಿಟ್ ಪಡೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಮೂರು ತಿಂಗಳಿಗೆ ಇಂತಿಷ್ಟು ಸಾವಿರ ಎಂದು ಮೊದಲೇ ಕಟ್ಟಬೇಕಾಗುತ್ತದೆ. ನೀವು ಒಂದು ವೇಳೆ ಬಸ್ಸನ್ನು ಎರಡ್ಮೂರು ತಿಂಗಳು ಓಡಿಸಲು ಬಯಸುವುದಿಲ್ಲವಾದರೆ ಆಗ ಈ ತೆರಿಗೆ ಕಟ್ಟಬೇಕಾಗಿರುವುದಿಲ್ಲ. ಆದರೆ ಪರ್ಮಿಟನ್ನು ಆರ್ಟಿಒಗೆ ಸರೆಂಡರ್ ಮಾಡಿ ಅವರಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಹಾಗೆ ಪರ್ಮಿಟ್ ಸರೆಂಡರ್ ಮಾಡಿದ ನಂತರ ಮತ್ತೆ ತೆರಿಗೆ ಕಟ್ಟಿದ ಬಳಿಕವೇ ಪರ್ಮಿಟ್ ಬಿಡಿಸಿ ಬಸ್ಸನ್ನು ಓಡಿಸಬೇಕಾಗುತ್ತದೆ. ಒಂದು ವೇಳೆ ಪರ್ಮಿಟ್ ಸರೆಂಡರ್ ಮಾಡಿದ ನಂತರವೂ ಬಸ್ಸು ರಸ್ತೆಯಲ್ಲಿ ಓಡುತ್ತಾ, ಹಣ ಮಾಡುವಲ್ಲಿ ತೊಡಗಿದರೆ ಅದು ಅಧಿಕಾರಿಗಳಿಗೆ ಗೊತ್ತಾದರೆ ಅವರು ಶಾಶ್ವತವಾಗಿ ಬಸ್ಸಿನ ಪರ್ಮಿಟ್ ರದ್ದು ಮಾಡುವ ಹಕ್ಕನ್ನು ಕೂಡ ಹೊಂದಿರುತ್ತಾರೆ. ಈಗ ವಿಷಯಕ್ಕೆ ಬರೋಣ. ಲಾಕ್ ಡೌನ್ ಬಳಿಕ ಸರಕಾರ ಜನರ ಸುರಕ್ಷತೆಯ ದೃಷ್ಟಿಯಿಂದ ಬಸ್ಸಿನಲ್ಲಿ 50:50 ಅನುಪಾತದಲ್ಲಿ ಪ್ರಯಾಣಿಕರನ್ನು ಹತ್ತಿಸಬೇಕು ಎಂದು ನಿಯಮ ಜಾರಿಗೆ ತಂದಿತ್ತು. ಆದರೆ ಅದು ಎಷ್ಟರಮಟ್ಟಿಗೆ ಅನುಷ್ಟಾನದಲ್ಲಿ ಇತ್ತು ಎನ್ನುವುದು ನೋಡಿದವರಿಗೆ ಎಲ್ಲವೂ ಗೊತ್ತು. ಕಿಕ್ಕಿರಿದು ಬಸ್ಸುಗಳು ಓಡಾಡುತ್ತಿದ್ದನ್ನು ಜನರು ನೋಡಿದ್ದಾರೆ. ಇರಲಿ, ಅದೆಲ್ಲ ಆಗಿ ಈಗ ಮತ್ತೆ ಜನಜೀವನ ಯಥಾಸ್ಥಿತಿಗೆ ಮರಳಿದೆ. ವೀಕೆಂಡ್ ಕಫ್ಯರ್ೂ ಕೂಡ ಈಗ ಇಲ್ಲ. ನೈಟ್ ಕಫ್ಯರ್ೂ ಕೂಡ ಹತ್ತು ಗಂಟೆಯ ನಂತರ ಆರಂಭವಾಗುವುದು. ಎಲ್ಲಾ ಕೈಗಾರಿಕೆಗಳು, ಕಚೇರಿಗಳು, ಮಳಿಗೆಗಳು, ಮಾಲ್ ಗಳು ಯಥಾಪ್ರಕಾರ ವ್ಯವಹಾರ ನಡೆಸುತ್ತಿವೆ. ಎಲ್ಲರೂ ಉತ್ಸಾಹದಿಂದ ಮುಖ್ಯವಾಹಿನಿಯಲ್ಲಿ ತೊಡಗಿಕೊಂಡು ವ್ಯಾಪಾರ ಮಾಡುತ್ತಿದ್ದರೆ, ಬಸ್ಸಿನವರು ಮಾತ್ರ ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕುತ್ತಿದ್ದಾರೆ. ಅದೇಗೆ ಎನ್ನುವುದನ್ನು ವಿವರಿಸುತ್ತೇನೆ.
ಮಂಗಳೂರಿನ ಸ್ಟೇಟ್ ಬ್ಯಾಂಕಿನಿಂದ ಬೆಳಿಗ್ಗೆ ಏಳು ಗಂಟೆಗೆ ಒಂದು ಬಸ್ಸು ಅತ್ತಾವರಕ್ಕೆ ಹೋಗುತ್ತೆ ಎಂದು ಅಂದುಕೊಳ್ಳೋಣ. ಅದರ ನಂತರ ಒಂದು ಬಸ್ಸು ಅದೇ ಸ್ಥಳಕ್ಕೆ ಏಳೂವರೆಗೆ ಹೊರಡುತ್ತೆ ಎಂದು ಲೆಕ್ಕ ಹಾಕೋಣ. ಮೂರನೇ ಬಸ್ಸು ಅದೇ ಸ್ಥಳಕ್ಕೆ ಏಳೂ ಮುಕ್ಕಾಲಿಗೆ ಹೊರಡುತ್ತೆ ಎಂದು ಅಂದಾಜು ಹಿಡಿಯೋಣ. ಈಗ ಈ ಮೂರು ಟೈಮಿಂಗ್ಗಿನ ಬಸ್ಸುಗಳ ಮಾಲೀಕರು ಒಬ್ಬರೇ ಆಗಿದ್ದರೆ ಪರಿಸ್ಥಿತಿ ಹೇಗೆ ಬದಲಾಗಿರುತ್ತೆ ಎನ್ನುವುದನ್ನು ನಿಮಗೆ ಹೇಳುತ್ತೇನೆ. ಈ ನಮ್ಮ ಮಂಗಳೂರಿನಲ್ಲಿ ಬಸ್ಸುಗಳ ವ್ಯವಸ್ಥೆ ಹೇಗಿದೆ ಎಂದರೆ ಅನೇಕ ಬಸ್ಸು ಮಾಲೀಕರ ಬಳಿ ಮೂರ್ನಾಕು ಬಸ್ಸುಗಳಿವೆ. ಮೂರು ಬಸ್ಸುಗಳು ಇದ್ದರೆ ಅವರು ಟೈಮಿಂಗ್ ಕೂಡ ತಮಗೆ ಬೇಕಾದ ಹಾಗೆ ಆರ್ ಟಿಒ ಜೊತೆ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಹತ್ತಿರದ ಮೂರು ಟೈಮಿಂಗ್ಗಿಗೆ ಮೂರು ತಮ್ಮದೇ ಬಸ್ಸನ್ನು ಬಿಟ್ಟಿರುತ್ತಾರೆ. ಏಳು ಗಂಟೆಯ ಬಸ್ಸು ಏಳು ಹತ್ತಕ್ಕೆ ಬಿಡುತ್ತದೆ. ಅಲ್ಲಿಯ ತನಕ ಆ ಬಸ್ಸಿನವರು ಎಷ್ಟು ಪ್ರಯಾಣಿಕರು ತುಂಬುತ್ತಾರೆ ಎಂದು ಕಾಯುತ್ತಾರೆ. ಏಳುವರೆಗೆ ಬಿಡಬೇಕಾದ ಮತ್ತು ಅದೇ ಜಾಗಕ್ಕೆ ಹೋಗಬೇಕಾದ ಬಸ್ಸನ್ನು ಮಾಲೀಕ ರದ್ದು ಮಾಡಿರುತ್ತಾರೆ. ಅದರ ನಂತರ ಅದೇ ಸ್ಥಳಕ್ಕೆ ಹೋಗಬೇಕಾಗಿರುವ ಬಸ್ಸು ಇರುವುದು ಏಳೂ ಮುಕ್ಕಾಲಿಗೆ. ಆಗ ಪ್ರಯಾಣಿಕರು ಕಾದು ಕಾದು ಏಳು ಮುಕ್ಕಾಲರ ಬಸ್ಸಿಗೆ ಹತ್ತುವಾಗ ಆ ಬಸ್ಸು ಫುಲ್ ಆಗಿರುತ್ತದೆ. ಯಾಕೆಂದರೆ ಎರಡು ಬಸ್ಸಿನ ನಡುವೆ ಒಂದು ಬಸ್ಸಿನ ಟ್ರಿಪ್ ಕ್ಯಾನ್ಸಲ್ ಆಗಿದೆ. ಇದರಿಂದ ಬಸ್ಸಿನ ಮಾಲೀಕನಿಗೆ ಒಂದು ಬಸ್ಸಿನ ಡಿಸೀಲ್ ಪೂರ್ಣವಾಗಿ ಉಳಿಯಿತು. ಅದೇ ಜನ ತನ್ನದೇ ಉಳಿದ ಎರಡು ಬಸ್ಸಿನಲ್ಲಿ ತುಂಬಿ ತುಳುಕಿದರಿಂದ ಹಣ ಕೂಡ ಆರಾಮವಾಗಿ ಬಂತು. ಒಂದು ಬಸ್ಸು ಟ್ರಿಪ್ ಹೋಗದೇ ಇದ್ದರೆ ಇಂಧನದ ಹಣ, ಕಂಡಕ್ಟರ್ ಮತ್ತು ಡ್ರೈವರ್ ಸಂಬಳ, ಕ್ಲೀನಿಂಗ್ ಮಾಡಬೇಕಾದ ಅಗತ್ಯ ಎಲ್ಲವೂ ಉಳಿಯುತ್ತದೆ. ಇದರಿಂದ ಅಸಲು ಲಾಭ ಯಾರಿಗೆ? ಬಹುತೇಕ ಮೂರ್ನಾಕು ಬಸ್ಸು ಇರುವ ಮಾಲೀಕರು ಹೀಗೆ ಮಾಡುತ್ತಿದ್ದಾರೆ. ಇನ್ನು ಕೊನೆಯ ಎರಡು ಟ್ರಿಪ್ ಕಟ್ ಮಾಡುವ ಮೂಲಕ ಅಲ್ಲಿಯೂ ಹಣ ಉಳಿಸಲಾಗುತ್ತದೆ. ಇವರನ್ನು ನಂಬಿದ ನಿತ್ಯದ ಪ್ರಯಾಣಿಕರು ಬಸ್ ಸ್ಟಾಪಿನಲ್ಲಿ ಕಾದದ್ದೇ ಬಂತು.
ಸಿಟಿ ಮತ್ತು ಸರ್ವಿಸ್ ಬಸ್ಸು ಎನ್ನುವುದು ಮಧ್ಯಮ ವರ್ಗದವರ ಸಾರಿಗೆ ಇದ್ದಂತೆ. ಬೈಕ್, ಕಾರು ಕೊಳ್ಳಲಾಗದ ಸಾಮಾನ್ಯ ಜನ ಬಸ್ಸಿಗಾಗಿ ಕಾದು ಅದರಲ್ಲಿಯೇ ಪ್ರಯಾಣಿಸುತ್ತಾರೆ. ಹಿಂದೆ ಇದೇ ಬಸ್ಸು ಮಾಲೀಕರು ತಮ್ಮದು ಸೇವೆ ಎನ್ನುತ್ತಿದ್ದರು. ಈಗ ಇದು ಸೇವೆಯಾಗಿ ಉಳಿದಿಲ್ಲ. ಕೇಳಿದರೆ ಬಸ್ಸಿನಲ್ಲಿ ಜನ ಬರುವುದಿಲ್ಲ ಎಂದು ಸುಳ್ಳು ಸಬೂಬು ನೀಡಲಾಗುತ್ತಿದೆ. ಜನರು ಈ ಬಗ್ಗೆ ದೂರು ನೀಡಿದ ನಂತರ ಜಿಲ್ಲಾಧಿಕಾರಿಯವರು ” ಯಾರು ಬಸ್ ಓಡಿಸುವುದಿಲ್ಲವೋ ಆ ರೂಟಿನಲ್ಲಿ ಸರಕಾರಿ ಬಸ್ ಓಡಿಸಬೇಕಾಗುತ್ತದೆ, ಎಚ್ಚರ” ಎಂದು ಸೂಚನೆ ನೀಡಿದ್ದಾರೆ. ಆದರೆ ಆ ಸೂಚನೆ ಕೇವಲ ದಾಖಲೆಯಲ್ಲಿ ಮಾತ್ರ ಉಳಿಯದೇ ಅನುಷ್ಟಾನಕ್ಕೂ ಬರಬೇಕಿದೆ. ಹೇಗೂ ಪರ್ಮಿಟ್ ಸರೆಂಡರ್ ಆದ ಬಸ್ಸಿನ ಲಿಸ್ಟ್ ಆರ್ ಟಿಒ ಬಳಿ ಇದೆ. ಡಿಸಿಯವರು ಆರ್ಟಿಒ ಇದರ ಪದ ನಿಮಿತ್ತ ಅಧ್ಯಕ್ಷರೂ ಆಗಿದ್ದಾರೆ. ಅವರು ಆ ಲಿಸ್ಟ್ ತರಿಸಿದರೆ ಎಲ್ಲವೂ ಬಹಿರಂಗವಾಗುತ್ತದೆ. ಮತ್ತೆ ಬೇಕಾದರೆ ಸರಕಾರಿ ಬಸ್ಸು ಓಡಿಸುವುದಾ, ಇವರಿಗೆ ಬಿಸಿ ಮುಟ್ಟಿಸುವುದಾ ಎಂದು ನಿರ್ಧರಿಸಲಿ. ಅಂದ ಹಾಗೆ ಸರಕಾರಿ ಬಸ್ಸಿನವರ ಕಥೆನೆ ಬೇರೆ ಇದೆ. ಅದನ್ನು ನಾಳೆ ಹೇಳಲೇಬೇಕು!
Leave A Reply