ಕಡ್ಲೆಕಾಯಿ ಹಂಚಿದಂತೆ ಎಂಬಿಬಿಎಸ್ ಡಿಗ್ರಿ ಹಂಚುವ ಉಕ್ರೇನಿಗೆ ಹೋದದ್ದೇ ಸಾಧನೆಯಲ್ಲ!

ನಿಮ್ಮ ಮಗ ಯಾವ ದೇಶದಲ್ಲಿ ಡಾಕ್ಟರ್ ಆಗಿದ್ದಾನೆ ಎಂದು ಸಂಬಂಧಿಕರು ಕೇಳುತ್ತಾ ಇದ್ರೆ ಇವರಿಗೆ ಸ್ವರ್ಗ ಮೂರೇ ಗೇಣು. ಆದರೆ ಆ ಸಂಬಂಧಿಕರಿಗೆ ಗೊತ್ತಿಲ್ಲದ ಅಂಶ ಏನೆಂದರೆ ಇವರ ಮಗನಿಗೆ ಭಾರತದಲ್ಲಿ ಪ್ರಾಕ್ಟೀಸ್ ಮಾಡುವ ಅವಕಾಶವನ್ನು ನಮ್ಮ ಕಾನೂನು ಕೊಟ್ಟಿಲ್ಲ. ಯಾಕೆ ಕೊಟ್ಟಿಲ್ಲ ಎಂದರೆ ನೀವು ಪ್ರಪಂಚದ ಯಾವ ದೇಶದಲ್ಲಿ ಬೇಕಾದರೆ ಮೆಡಿಕಲ್ ಓದಿ. ನಂತರ ಭಾರತದಲ್ಲಿ ಬಂದು ಇಲ್ಲಿ ಪ್ರಾಕ್ಟೀಸ್ ಮಾಡುತ್ತಿರಿ ಎಂದಾದರೆ ಇಲ್ಲಿ ಒಂದು ಪರೀಕ್ಷೆ ಬರೆದು ಪಾಸಾಗಲೇಬೇಕು. ಇನ್ನು ಒಂದು ಅಂಕಿಸಂಖ್ಯೆಯ ಪ್ರಕಾರ ಭಾರತದಲ್ಲಿ ಇಂತಹ ಪರೀಕ್ಷೆ ಬರೆದ 15 ಶೇಕಡಾ ಜನರು ಮಾತ್ರ ಪಾಸಾಗುವುದರಿಂದ ಉಳಿದವರು ತಾವು ಎಲ್ಲಿ ಕಲಿತರೋ ಅಲ್ಲಿಯೇ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಪ್ರಾಕ್ಟಿಸ್ ಮಾಡಬೇಕಾಗುತ್ತದೆ. ಆದ್ದರಿಂದ ಯಾವ ವಿದ್ಯಾರ್ಥಿ ಇಲ್ಲಿ ಮೆಡಿಕಲ್ ಸೀಟ್ ಸಿಗಲಿಲ್ಲ ಎಂದು ಉಕ್ರೇನ್, ಚೀನಾ, ರಷ್ಯಾಕ್ಕೆ ಹಾರಿದನೋ ಅವನು ಈ ದೇಶಕ್ಕೆ ಬರುವ ಸಾಧ್ಯತೆ ಹೆಚ್ಚು ಕಡಿಮೆ ಹತ್ತು ಶೇಕಡಾ ಮಾತ್ರ. ಆದ್ದರಿಂದ ನಮ್ಮ ಭಾರತವನ್ನು ಬಿಟ್ಟು ಹೋದವರು ಈಗ ನಮ್ಮ ದೇಶದ ಗಟ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಇವರು ಇದ್ದ ಕೋಣೆಯ ಬಾಗಿಲಿನ ತನಕ ವಿಮಾನ ತರಬೇಕಿತ್ತಾ? ನಾವು 234 ರೂಪಾಯಿ ಕೊಟ್ಟು ಟ್ಯಾಕ್ಸಿಯಲ್ಲಿ ಬಂದೆ ಎಂದು ಒಬ್ಬಳು ಹೇಳಿದರೆ, ಇನ್ನೊಬ್ಬರು 700 ಕಿ.ಮೀಗೆ 2000 ರೂಪಾಯಿ ತೆಗೆದುಕೊಂಡರು ಎಂದು ಹೇಳುತ್ತಿದ್ದಾರೆ. ನಾವು ಗಡಿಯ ತನಕ ಕಷ್ಟಪಟ್ಟು ಬಂದ್ವಿ. ನಂತರ ಗಡಿಯಲ್ಲಿ ಭಾರತದ ಅಧಿಕಾರಿಗಳು ಇದ್ದರು. ಅದರ ನಂತರ ನಮಗೆ ಅಲ್ಲಿ ಊಟ, ತಿಂಡಿ ಕೊಟ್ಟು ವಿಮಾನದಲ್ಲಿ ತರಲಾಯಿತು ಎಂದು ಹೇಳುತ್ತಿದ್ದಾರೆ. ನಾವು ಅಲ್ಲಿಯ ತನಕ ಬ್ರೆಡ್, ಬಿಸ್ಕಿಟ್ ತಿನ್ನಬೇಕಾಯಿತು ಎಂದು ದು:ಖ ತೋಡಿಕೊಂಡವರು ಇದ್ದಾರೆ. ಒಂದಂತೂ ಸೇಫಾಗಿ ಬಂದ ಎಲ್ಲಾ ವಿದ್ಯಾರ್ಥಿಗಳು ಕರೆಕ್ಟಾಗಿ ಕೇಳಬೇಕು ಏನೆಂದರೆ ನಿಮ್ಮ ಮುಖ ನೋಡಿ ಕರೆದುಕೊಂಡು ಬಂದದ್ದೇ ಅಲ್ಲ. ನೀವು ಕಷ್ಟದಲ್ಲಿ ಇದ್ದಿರಿ ಎಂದು ನಿಮ್ಮ ತಾಯಿ, ತಂದೆ ಗೋಳಾಡುತ್ತಿದ್ದರಲ್ಲ, ಅವರಿಗಾಗಿ ಈ ದೇಶದ ಪ್ರಧಾನಿ ಇಷ್ಟೆಲ್ಲಾ ಶ್ರಮ ವಹಿಸಬೇಕಾಯಿತು. ಇನ್ನು 500-600 ಕಿ.ಮೀ ದೂರ ರಿಸ್ಕ್ ತೆಗೆದುಕೊಂಡು ಬಂದ್ವಿ ಎನ್ನುತ್ತಿರಲ್ಲ, ನಿಮಗೆ 50% ಅಂಕಗಳಿದ್ದರೂ ಮೆಡಿಕಲ್ ಸೀಟನ್ನು ಒಳ್ಳೆಯ ಕಡ್ಲೆಕಾಯಿ ಹಂಚಿದ ಹಾಗೆ ಉಕ್ರೇನ್ ಹಂಚುತ್ತಿದೆಯಲ್ಲ, ಅವರಿಗೆ ನೀವು ಎಂದಾದರೂ ನಿಮ್ಮ ಕಾಲೇಜಿನಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆ ಇದೆಯಾ ಎಂದು ಕೇಳಿದ್ದಿರಾ? ಕಡಿಮೆ ಮೊತ್ತಕ್ಕೆ, ಬೇಕಾದಷ್ಟು ಜನರಿಗೆ, ಸುಲಭವಾಗಿ ಪಾಸಾಗುವಂತಹ ಸಿಲೆಬಸ್ ಇಟ್ಟು, ವಿಕೇಂಡ್ ಮೋಜು ಮಾಡಲು ಅವಕಾಶ ಕೊಟ್ಟು ಕೊನೆಗೆ ನೀವು ಎನು ಕಲಿತಿರೋ, ಬಿಟ್ಟಿದ್ದಿರೋ ಒಂದು ಎಂಬಿಬಿಎಸ್ ಡಿಗ್ರಿ ಇರುವ ಸರ್ಟಿಫಿಕೇಟ್ ಕೊಟ್ಟು ಡಾಕ್ಟರ್ ಎಂದು ಹೇಳಿ ಕಳುಹಿಸುತ್ತಾರಲ್ಲ, ಆ ಡಿಗ್ರಿಗೆ ಭಾರತದಲ್ಲಿ ಎಷ್ಟು ಗೌರವ ಇದೆ ಎಂದು ಗೊತ್ತಿದೆಯಾ? ನೇಪಾಳದಂತಹ ರಾಷ್ಟ್ರದಲ್ಲಿ ನೀವು ಯಾವುದಾದರೂ ಮೆಡಿಕಲ್ ಡಿಗ್ರಿ ಪಡೆದುಕೊಳ್ಳಬೇಕಾದರೆ ಜಸ್ಟ್ ಫೀಸ್ ಕಟ್ಟಿ ಭಾರತದಲ್ಲಿಯೇ ಕುಳಿತು ಸರ್ಟಿಫೀಕೇಟ್ ತರಿಸಿಕೊಳ್ಳಬಹುದು. ಅಲ್ಲಿ ಮೆಡಿಕಲ್ ಕಲಿತಿರುವ ವೈದ್ಯರಿಗೆ ಬೆಲೆ ಚಿಲ್ಲರೆಯಷ್ಟು. ಅದಕ್ಕೆ ಅಲ್ಲಿನ ರಾಜ ಮನೆತನದ ಕುಡಿಗಳು ಭಾರತಕ್ಕೆ ಬಂದು ಎಂಬಿಬಿಎಸ್ ಓದಿ ಹೋಗಿವೆ. ಅಲ್ಲಿ ನೀವು ನಿಮ್ಮ ಹೆಸರಿನ ನಂತರ ಎಂಬಿಬಿಎಸ್ ಡಿಗ್ರಿ ಬರೆದು ಬ್ರಾಕೆಟ್ ನಲ್ಲಿ {ಇಂಡಿಯಾ} ಎಂದು ಬರೆದರೆ ಗೌರವ ಹೆಚ್ಚು. ವಿಶ್ವಾಸ ದುಪ್ಪಟ್ಟು.
ಇನ್ನೊಬ್ಬ ಭಾರತ ಸರಕಾರಕ್ಕೆ ಗಟ್ಸ್ ಇಲ್ಲ ಎಂದು ಹೇಳುತ್ತಾನೆ. ಒಂದು ದೇಶ ಮತ್ತೊಂದು ದೇಶದ ಮೇಲೆ ಯುದ್ಧ ನಡೆಸುತ್ತಿರುವಾಗ ನೀವು ಭಾರತದ ಧ್ವಜ ಹಾಕಿಕೊಂಡು ಬಂದದ್ದಕ್ಕೆ ಬದುಕಿದ್ದೀರಿ, ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಎಲ್ಲರಿಗೂ ಗೊತ್ತು. ಅದರೊಂದಿಗೆ ಯುದ್ಧ ಶುರುವಾಗುವ ಹದಿನೈದು ದಿನ ಮೊದಲೇ ದೇಶ ಬಿಟ್ಟು ಹೋಗಲು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸೂಚನೆ ನೀಡಿತ್ತಲ್ಲ. ಆದರೂ ಉಕ್ರೇನ್ ವಿಶ್ವವಿದ್ಯಾನಿಲಯಗಳು ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳಲು ನಿರಾಕರಿಸಿದವು ಎಂದು ನಾವು ಬಿಟ್ಟು ಬಂದಿಲ್ಲ ಎನ್ನುತ್ತಿರಲ್ಲ. ನೀವು ಇಲ್ಲಿಂದ ಹೋಗುವಾಗ ಮೋದಿಯವರಿಗೆ ಹೇಳಿ ಕೈ ಕುಲುಕಿ ಹೋದವರ ಹಾಗೆ ಮಾತನಾಡುತ್ತಿರಲ್ಲ. ಬೇರೆ ದೇಶಗಳು ಹೇಳಿದ ಹಾಗೆ ನಿಮ್ಮ ಸ್ವಂತ ರಿಸ್ಕಿನಲ್ಲಿ ಬರುವುದಾದರೆ ಬನ್ನಿ, ನಾವು ವಿಮಾನ ಕಳುಹಿಸುವುದಾಗಲಿ, ಏರ್ ಲಿಫ್ಟ್ ಮಾಡಲ್ಲ ಎಂದಿದ್ದಾರಲ್ಲ, ನಿಮಗೆ ಅದು ಗೊತ್ತಿಲ್ಲ. ಕೇವಲ 900 ಜನರು ಮಾತ್ರ ಇರುವ ತನ್ನ ದೇಶದ ಪ್ರಜೆಗಳನ್ನು ಅಮೇರಿಕಾ ಕರೆದುಕೊಂಡು ಬರಲು ಹೋಗಿಲ್ಲ ಎಂದ ಮೇಲೆ ಗಟ್ಸ್ ಬಗ್ಗೆ ಮಾತನಾಡುವರಿಗೆ ಒಂದಿಷ್ಟು ಸಾಮಾನ್ಯ ಜ್ಞಾನ ಬೇಡವೇ? ಕೆಲವರ ಉದ್ದೇಶ ಇಷ್ಟೇ, ಎಲ್ಲಿ ಇದರ ಕ್ರೆಡಿಟ್ ಮೋದಿ ಪಡೆದುಕೊಳ್ಳುತ್ತಾರೋ ಎಂದು ಹೆದರಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನೀವು ಮೋದಿಯನ್ನು ಭಾರತೀಯ ಜನತಾ ಪಾರ್ಟಿಯ ಮುಖಂಡನಂತೆ ನೋಡಬೇಡಿ. ಈ ದೇಶದ ಪ್ರಧಾನಿಯಂತೆ ನೋಡಿ. ನೀವು ಅಲ್ಲಿಂದ ತಪ್ಪಿಸಿ ಗಡಿಯ ತನಕ ಬರಲು ಕಷ್ಟಪಟ್ಟಿರಬಹುದು. ಅದರರ್ಥ ನೀವು ಈ ದೇಶಕ್ಕಾಗಿ ಹೋರಾಡಲು ಉಕ್ರೇನಿಗೆ ಹೋದದ್ದಲ್ಲ. ಇಲ್ಲಿ ಪರೀಕ್ಷೆ ಕಠಿಣವಿದೆ. ನೀಟ್ ಬರೆದು ಪಾಸಾಗಲು ಕಷ್ಟವಿತ್ತು. ಇನ್ನು ಸರಕಾರಿ ಸೀಟ್ ಪಡೆದುಕೊಳ್ಳಲು ಅಷ್ಟು ಮಾರ್ಕ್ ಬಂದಿಲ್ಲ. ಅಷ್ಟು ಪ್ರತಿಭಾವಂತನಲ್ಲ, ಆದರೂ ಡಾಕ್ಟರು ಆಗಬೇಕು. ಅದಕ್ಕೆ ಹೋದ್ರಿ. ಬಂದ ಮೇಲೆ ಇಲ್ಲಿ ಹಳ್ಳಿಗಳಲ್ಲಿ ಸೇವೆ ಮಾಡುವ ಗುರಿ ನಿಮಗೆ ಇರುವುದೇ ಇಲ್ಲ. ಯಾಕೆಂದರೆ ನೀವು ಇಲ್ಲಿ ಬಂದ ಮೇಲೆ ಇನ್ನೊಂದು ಪರೀಕ್ಷೆ ಬರೆಯುವಷ್ಟು ಬುದ್ಧಿವಂತರಾಗಿರುವುದಿಲ್ಲ.!
Leave A Reply