ಬಾಳಾ ಠಾಕ್ರೆಗೂ, ಉದ್ಭವ್ ಠಾಕ್ರೆಗೂ ಇರುವ ವ್ಯತ್ಯಾಸ ಹಿಂದೂತ್ವ!
ಮಹಾರಾಷ್ಟ್ರದಲ್ಲಿ ಇನ್ನು ಏನೂ ಬಾಕಿ ಉಳಿದಿಲ್ಲ. ಯಾವಾಗ ಅಧಿಕಾರಕ್ಕಾಗಿ ಶಿವಸೇನೆ ಎನ್ನುವ ಹಿಂದೂ ಗರ್ಭದಲ್ಲಿ ಹುಟ್ಟಿದ ಪಕ್ಷ ಜಾತ್ಯಾತೀತವಾದಿ ಎಂದು ಹೇಳಿಕೊಂಡು ಮುಸ್ಲಿಮರೊಂದಿಗೆ ಸಖ್ಯ ಬೆಳೆಸಿಕೊಳ್ಳುವ ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿಯೊಂದಿಗೆ ಕೈ ಜೋಡಿಸಿತೋ ಅದರ ನಂತರವೂ ಶಿವಸೇನೆಯ ಕಾರ್ಯಕರ್ತರು ಆ ಪಕ್ಷದೊಂದಿಗೆ ಇದ್ದಾರಲ್ಲ ಎನ್ನುವುದೇ ಆಶ್ಚರ್ಯಕರ ವಿಷಯ. ಒಬ್ಬರು ಗಂಡ ಹೆಂಡತಿ ಬಾಳಾ ಸಾಹೇಬ್ ಠಾಕ್ರೆಯವರ ಅಧಿಕೃತ ಗುಹೆ ಮಾತ್ರೋಶ್ರೀಯ ಎದುರು ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆ ಎಂದು ಹೇಳುತ್ತಿದ್ದರೆ ಇದೇ ಪರಿಸ್ಥಿತಿಯಲ್ಲಿ ಇವತ್ತು ಸೀನಿಯರ್ ಠಾಕ್ರೆ ಇದ್ದರೆ ಏನಾಗುತ್ತಿತ್ತು? ಹೊರಗೆ ಯಾಕೆ, ಒಳಗೆ ಬಂದು ನಮ್ಮ ದೇವರ ಕೋಣೆಯಲ್ಲಿ ಕುಳಿತು ಪಠಿಸಿ ಮತ್ತು ಇಲ್ಲಿಯೇ ಊಟ ಮಾಡಿ ಹೋಗಿ ಎನ್ನುತ್ತಿದ್ದರು. ಆದರೆ ಈಗ ದೊಡ್ಡ ಠಾಕ್ರೆ ಇಲ್ಲ. ಅಧಿಕಾರದಾಹಿ ಜ್ಯೂನಿಯರ್ ಠಾಕ್ರೆ ಇರೋದು. ಅವರಿಗೆ ಇದೆಲ್ಲ ಏನೋ ಹುಚ್ಚಾಟಿಕೆ ಎಂದು ಅನಿಸುತ್ತಿದೆ. ಅದಕ್ಕೆ ತಮ್ಮದೇ ರಾಜ್ಯದ ಸಂಸದೆ ಮತ್ತು ಆಕೆಯ ಗಂಡ ಶಾಸಕ ಇಬ್ಬರನ್ನು ಬಂಧಿಸಿ ಅವರ ಮೇಲೆ ದೇಶದ್ರೋಹ ಕೇಸು ಹಾಕಿಸಿಬಿಟ್ಟಿದ್ದಾರೆ. ಈಗ ದಂಪತಿ ಜೈಲಿನಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿವಸೇನೆ ವಕ್ತಾರೆಯೊಬ್ಬರು ಆ ಗಂಡ, ಹೆಂಡತಿ ಪಕ್ಷೇತರರಾಗಿ ಗೆದ್ದಿರುವುದು, ಮಾಡಲು ಕೆಲಸ ಇಲ್ಲ, ಅವರಿಗೆ ಭಾರತೀಯ ಜನತಾ ಪಾರ್ಟಿಯವರು ಕೆಲಸ ಕೊಟ್ಟಿದ್ದಾರೆ ಎಂದು ಹಂಗಿಸಿದ್ದಾರೆ. ಹಾಗಾದರೆ ಹಿಂದೂ ದೇವರನ್ನು ಪೂಜಿಸುವುದು, ಶ್ಲೋಕ ಪಠಣ ಮಾಡುವುದು ಎಲ್ಲ ಕೆಲಸವಿಲ್ಲದವರ ಕ್ರಿಯೆಯಾಗಿದ್ದರೆ ಶಿವಸೇನೆ ಇಷ್ಟು ವರ್ಷ ತಮ್ಮ ಕಾರ್ಯಕರ್ತರಿಂದ ಮಾಡಿಸಿದ್ದೇನು? ನಿಮಗೆ ಅಧಿಕಾರಕ್ಕೆ ಬಂದ ಬಳಿಕ ಹಿಂದೂತ್ವ ಎನ್ನುವುದು ನಿರುದ್ಯೋಗಿಗಳ ಟೈಂಪಾಸ್ ಎಂದು ಅನಿಸುವುದಾದರೆ ಇಲ್ಲಿಯ ತನಕ ಶಿವಸೇನೆ ಯಾವ ಏಜೆಂಡಾ ಇಟ್ಟು ಅಮಾಯಕ ಶಿವಸೇನಾ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದೆ. ಮುಸ್ಲಿಂ ಲೀಗ್ ಪಕ್ಷ ಒಂದು ವೇಳೆ ಅಧಿಕಾರಕ್ಕೆ ಯಾವುದೇ ರಾಜ್ಯದಲ್ಲಿ ಬಂದರೆ ಅಲ್ಲಿನ ಸಿಎಂ ಮನೆ ಮುಂದೆ ನಾವು ನಮ್ಮ ಧರ್ಮದ ಏನೋ ಮಾಡುತ್ತೇವೆ ಎಂದು ಹೇಳಿದರೆ ಅವರನ್ನು ದೇಶದ್ರೋಹದ ಕೇಸ್ ಮೇಲೆ ಒಳಗೆ ಹಾಕುತ್ತಾರಾ? ಇಲ್ಲ, ಇದು ಹಿಂದೂಗಳು ಮಾತ್ರ ಮಾಡೋದು. ಯಾಕೆಂದರೆ ನಮಗೆ ಇಲ್ಲಿಯೂ ರಾಜಕೀಯ ಮುಖ್ಯ. ಅದಕ್ಕೆ ಸೀನಿಯರ್ ಠಾಕ್ರೆ ಆವತ್ತು ಹೇಳಿದ್ದು _ ನಾವು ಅಧಿಕಾರಕ್ಕಾಗಿ ಹಂಬಲಿಸುವುದಿಲ್ಲ. ಹಾಗೆ ಏನಾದರೂ ಮಾಡಿದರೆ ನಮ್ಮ ತತ್ವ, ಸಿದ್ಧಾಂತವನ್ನು ಕೈಚೆಲ್ಲಬೇಕಾಗಿ ಬರಬಹುದು. ಅದಕ್ಕಾಗಿ ನಮ್ಮ ಕುಟುಂಬ ಕೂಡ ಅಧಿಕಾರದಲ್ಲಿ ಇರಲ್ಲ ಎಂದಿದ್ದರು. ಬಿಜೆಪಿಯೊಂದಿಗೆ ನಮಗೆ ದೋಸ್ತಿ ಸರಿ ಹೊಂದಲ್ಲ ಎಂದು ಯಾವಾಗ ಶಿವಸೇನೆ ಅಂದುಕೊಂಡಿತೋ ಆವಾಗಲೇ ಒಂದು ವಿಷಯ ಸ್ಪಷ್ಟವಾಗಿತ್ತು. ಅದು ಬಿಸಿ ಬಾಣಲೆಯಿಂದ ನೇರ ಬೆಂಕಿಗೆ ಬಿದ್ದು ಬಿಟ್ಟಿತ್ತು. ಹಾಗಂತ ತನ್ನ ಸಿದ್ಧಾಂತವನ್ನು ಮರೆಯಲು ಆಗುತ್ತಾ? ರಾಜ್ ಠಾಕ್ರೆ ಮೇ 3 ರ ನಂತರ ಮಸೀದಿಯ ಹೊರಗೆ ಲೌಡ್ ಸ್ಪೀಕರ್ ಇರಬಾರದು ಎಂದು ಬಹಿರಂಗ ಹೇಳಿಕೆ ಕೊಟ್ಟ ಮೇಲೆ ಅವರನ್ನು ಯಾಕೆ ಇಲ್ಲಿಯವರೆಗೆ ಬಂಧಿಸಿಲ್ಲ. ಯಾಕೆಂದರೆ ಅವರನ್ನು ಮುಟ್ಟಿದರೆ ನಂತರ ಉದ್ಭವ್ ತನ್ನ ಮೂಗಿನ ಒಳಗೂ ಬೆರಳು ಹಾಕಲು ಸಮಯ ಇರುವುದಿಲ್ಲ, ಹಾಗೆ ಮಹಾರಾಷ್ಟ್ರ ಕಾದ ಎಣ್ಣೆಯಂತೆ ಬಿಸಿಯಾಗಲಿದೆ. ಅದಕ್ಕೆ ಕೆಲವು ನಿಯಮಗಳನ್ನು ಬದಲಾಯಿಸಿ ಮುಸ್ಲಿಮರಿಗೂ ನೋವಾಗದ ಹಾಗೆ ಮಹಾರಾಷ್ಟ್ರ ಸರಕಾರ ಸುತ್ತೋಲೆ ಹೊರಡಿಸಿದೆ. ಅದರ ನಡುವೆ ಬಾವಿಯ ಆಳ ನೋಡುವುದಕ್ಕೆ ಬಿಜೆಪಿ ಕೂಡ ಮುಂದಾಗಿದೆ. ಮಾಜಿ ನಾಯಕಿ ನಟಿ, ಸಂಸದೆ ನವನೀತ್ ಕೌರ್ ಮತ್ತು ಆಕೆಯ ಪತಿ, ಶಾಸಕ ರವಿ ರಾಣಾ ಇಬ್ಬರೂ ಪಕ್ಷೇತರರಾಗಿ ಗೆದ್ದವರು. ಗೆಲ್ಲುವಾಗ 2019 ರಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಇವರಿಗೆ ಬೆಂಬಲವಾಗಿ ನಿಂತಿತ್ತು. ಈಗ ಪ್ರಸ್ತುತ ಬಿಜೆಪಿಯನ್ನು ಇವರಿಬ್ಬರು ಬೆಂಬಲಿಸುತ್ತಿದ್ದಾರೆ. ಆ ನಿಷ್ಟೆ ಎಷ್ಟು ಸ್ಟ್ರಾಂಗ್ ಆಗಿದೆ ಎಂದು ನೋಡಲು ಅವರ ಮೂಲಕ ಇಂತಹ ಕಲ್ಲನ್ನು ಬಿಜೆಪಿ ಎಸೆದಿದೆ. ಆದರೆ ಕೆಲವು ಕಾಲದಿಂದ ಮೂರ್ಖರೊಂದಿಗೆ ಅಧಿಕಾರ ನಡೆಸುತ್ತಾ ತನ್ನ ನೈಜ ಅಸ್ತಿತ್ವವನ್ನು ಮರೆತಂತೆ ಆಡುತ್ತಿರುವ ಉದ್ಭವ್ ಅವರು ಎಸೆದಿರುವ ಕಲ್ಲನ್ನು ಮುಂದೆ ಗೋಡೆ ಕಟ್ಟಲು ಬಳಸುವುದು ಬಿಟ್ಟು ತಮ್ಮ ಕಾಲ ಮೇಲೆಯೇ ಎತ್ತಿ ಹಾಕಿ ಈಗ ಒದ್ದಾಡುತ್ತಿದ್ದಾರೆ. ರಾಜಕೀಯ ಅಷ್ಟು ಸುಲಭವಲ್ಲ ಎಂದು ಉದ್ಭವಿಗೆ ಅನಿಸಲು ಶುರುವಾಗಿ ತುಂಬಾ ಸಮಯವಾಗಿದೆ. ಇದು ಅದರ ಒಂದು ಅಧ್ಯಾಯ ಅಷ್ಟೇ!
Leave A Reply