ತ್ಯಾಜ್ಯವಾಗುತ್ತಿರುವ ದಾರಿಸೂಚಕ ಫಲಕಗಳ ಕಥೆ!
ಇವತ್ತು ಕೆಲವು ಫೋಟೋಗಳನ್ನು ಈ ಜಾಗೃತ ಅಂಕಣದೊಂದಿಗೆ ಪೋಸ್ಟ್ ಮಾಡುತ್ತಿದ್ದೇನೆ. ಈ ಫೋಟೋಗಳನ್ನು ನೋಡಿದರೆ ನಮ್ಮ ನಿಮ್ಮ ತೆರಿಗೆಯ ಹಣ ಹೇಗೆ ಪೋಲಾಗುತ್ತಿದೆ ಎಂದು ಗೊತ್ತಾಗುತ್ತದೆ. ಯಾವುದೇ ಒಂದು ನಗರಕ್ಕೆ ದಾರಿಸೂಚಕ ಫಲಕಗಳು ಅತ್ಯಗತ್ಯ. ಅವು ಒಬ್ಬ ಯಾತ್ರಿ ಅಥವಾ ಊರಿಗೆ ಬಂದ ಅತಿಥಿಗಳಿಗೆ ಉಪಯುಕ್ತವಾಗಿರುತ್ತದೆ. ಆದರೆ ಮಂಗಳೂರಿನ ಪರಿಸ್ಥಿತಿ ಹೇಗಿದೆ ಎನ್ನುವುದೇ ಇವತ್ತಿನ ಜಾಗೃತ ಅಂಕಣದ ಕಥೆ. ನೀವು ಯಾವುದೋ ಊರಿನಿಂದ ಮಂಗಳೂರಿಗೆ ಬರುತ್ತೀರಿ. ನಿಮಗೆ ರಥಬೀದಿ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ಇರುತ್ತದೆ. ಹಂಪನಕಟ್ಟೆಯ ಬಳಿ ನಾಲ್ಕು ರಸ್ತೆ ಸೇರುವ ಕಡೆ ನಿಮಗೆ ಒಂದು ದಾರಿ ಸೂಚಕ ಫಲಕ ಕಾಣಿಸುತ್ತದೆ. ನೀವು ಕಾರನ್ನು ಹತ್ತಿರಕ್ಕೆ ಹೋಗಿ ನಿಲ್ಲಿಸಿ ನೋಡುತ್ತೀರಿ. ಆದರೆ ಆ ಬೋರ್ಡ್ ಅಡ್ಡ ಬಿದ್ದಿರುತ್ತದೆ. ನಿಮಗೆ ನಿರಾಸೆಯಾಗುತ್ತದೆ. ನಂತರ ನೀವು ಯಾರನ್ನಾದರೂ ಕೇಳಿ ನೀವು ಹೋಗಬೇಕಾದ ಸ್ಥಳ ತಲುಪುತ್ತೀರಿ. ಆದರೆ ಯಾರನ್ನೋ ಕೇಳಿ ಹೋಗುವುದಾದರೆ ಈ ನೇಮ್ ಬೋರ್ಡ್ ಗಳು ಯಾಕಿರಬೇಕು? ಅದಕ್ಕಾಗಿ ಒಂದೊಂದಕ್ಕೆ ಯಾಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕು? ಅಷ್ಟಕ್ಕೂ ನೇಮ್ ಬೋರ್ಡ್ ಗಳು ರಸ್ತೆಯ ಬದಿಗಿಂತ ಜಾಸ್ತಿ ಚರಂಡಿಯಲ್ಲಿಯೋ, ಯಾರದ್ದೋ ಓಣಿಯಲ್ಲಿಯೋ ಯಾಕೆ ಬಿದ್ದಿರುತ್ತದೆ? ಅದರ ಹಿಂದೆ ನಮ್ಮ ಅಧಿಕಾರಿಗಳ ಹಸಿವು ಮತ್ತು ಕಾರ್ಪೋರೇಟರ್ ಗಳ ದಿವ್ಯ ನಿರ್ಲಕ್ಷ್ಯ ಇದೆ.
ಮಂಗಳೂರು ನಗರದಲ್ಲಿ ಕೆಲವು ವರ್ಷಗಳ ಹಿಂದೆ ದಾರಿಸೂಚಕ ಫಲಕಗಳೇ ಕಡಿಮೆ ಇದ್ದವು. ಆ ಬಳಿಕ ಸಾರ್ವಜನಿಕರಿಂದ ನಿರಂತರ ಆಗ್ರಹ ಕೇಳಿ ಬಂದ ಹಿನ್ನಲೆಯಲ್ಲಿ ದಾರಿಸೂಚಕ ಫಲಕಗಳು ಹುಟ್ಟಿಕೊಂಡವು. ಆರಂಭದಲ್ಲಿ ಅಲ್ಲಲ್ಲಿ ಜಂಕ್ಷನ್ ಗಳಲ್ಲಿ ದಾರಿಸೂಚಕ ಫಲಕಗಳು ಚೆನ್ನಾಗಿಯೇ ಇದ್ದವು. ಅದರಲ್ಲಿ ಸ್ಪಷ್ಟವಾಗಿ ಆಯಾ ಜಂಕ್ಷನ್ ನಿಂದ ಎಲ್ಲೆಲ್ಲಿ ಸಂಪರ್ಕ ರಸ್ತೆಗಳು ಇವೆ ಎಂದು ಬರೆಯಲಾಗಿತ್ತು. ಆದರೆ ಕ್ರಮೇಣ ಅವು ಅಲ್ಲಿಂದ ಕಣ್ಮರೆಯಾಗಲು ಆರಂಭವಾಯಿತು. ನಿಮಗೆ ಆಶ್ಚರ್ಯವಾಗಬಹುದು. ನಗರದಲ್ಲಿ ಹಾಕಿದ ದಾರಿಸೂಚಕ ಫಲಕಗಳು ಕಣ್ಮರೆಯಾಗಲು ಕಾರಣಗಳು ಎನು ಎಂದು ಅನಿಸಬಹುದು. ವಿಷಯ ಏನೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಲ್ಲಿ ರಸ್ತೆಗಳನ್ನು ಅಗೆಯುವುದು, ಗುಂಡಿ ಮುಚ್ಚುವುದು ಆಗುತ್ತಿತ್ತಲ್ಲ, ಆಗ ಅಲ್ಲೆಲ್ಲ ಹಾಕಿದ ಈ ಫಲಕಗಳು ಕಬಾಬ್ ಮೇ ಹಡ್ಡಿಯಂತೆ ಆಗಿದ್ದವು. ಅದಕ್ಕಾಗಿ ಯಾವುದೇ ಕಾಮಗಾರಿ ಇರಲಿ, ಅದು ಪಾಲಿಕೆಯದ್ದು ಆಗಿರಬಹುದು, ಸ್ಮಾರ್ಟ್ ಸಿಟಿದ್ದು ಆಗಿರಬಹುದು, ಅಮೃತ ಯೋಜನೆ ಆಗಿರಬಹುದು, ಮೆಸ್ಕಾಂ ಆಗಿರಬಹುದು. ಈ ಫಲಕಗಳು ಅಡ್ಡ ಬಂತು ಎಂದ ಕೂಡಲೇ ಇದಕ್ಕೆ ಒಂದು ಚೂರು ಮರ್ಯಾದೆ ಕೊಡದೇ ತೆಗೆದು ಮೂಲೆಯಲ್ಲಿ ಬಿಸಾಡಲಾಗುತ್ತಿತ್ತು. ಕಾಮಗಾರಿ ಮುಗಿದು ಹೋಗುವಾಗ ಯಾರು ಈ ಬೋರ್ಡ್ ಗಳನ್ನು ಕಿತ್ತು ಹಾಕಿದ್ದರೋ ಅವರು ಯಥಾಸ್ಥಿತಿಯಲ್ಲಿ ಅದನ್ನು ನಿಲ್ಲಿಸಬೇಕಾಗಿರುವುದು ಅವರ ಕರ್ತವ್ಯ. ಆದರೆ ಅವರು ಅದಕ್ಕೆ ಪುನ: ಶ್ರಮ ಮತ್ತು ಸಮಯ ಯಾಕೆ ಹಾಕುವುದು ಎಂದು ಸೀದಾ ಎದ್ದು ಹೋಗುತ್ತಿದ್ದರು. ಅವರು ತಮ್ಮ ಪಾಡಿಗೆ ಹಾಗೆ ಹೋದರೆ ಅದನ್ನು ನೋಡಿ ಸುಮ್ಮನೆ ಬಿಡಲು ಆಗುತ್ತಾ? ಯಾರು ಆ ಕಾಮಗಾರಿಯ ಬಿಲ್ ಪಾಸ್ ಮಾಡುತ್ತಾರೋ ಅವರು ಆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಮೊದಲಿಗೆ ಹಾಗೆ ಕಿತ್ತು ಬಿಸಾಡಿರೋ ಎಲ್ಲಾ ದಾರಿಸೂಚಕ ಫಲಕಗಳನ್ನು ಮತ್ತೆ ಯಥಾವತ್ತಾಗಿ ನಿಲ್ಲಿಸಿ ಬನ್ನಿ ಎಂದು ಹೇಳಬೇಕು. ಆ ಬಳಿಕ ಅದನ್ನು ಪರಿಶೀಲಿಸಿ ನಂತರ ಬಿಲ್ ಪಾಸು ಮಾಡಬೇಕು. ಹೋಗಲಿ, ಅಧಿಕಾರಿಗಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲ ಎಂದೇ ಇಟ್ಟುಕೊಳ್ಳೋಣ. ನಗರವನ್ನು ಸುಂದರ, ಅಭಿವೃದ್ಧಿ ಮಾಡಲು ಒಂದು ಅವಕಾಶ ಕೊಡಿ ಎಂದು ಮತ ಬೇಡಿ ಗೆದ್ದುಬಂದಿರುವ ಕಾರ್ಪೊರೇಟರ್ ಗಳು ಇದ್ದಾರಲ್ಲ, ಅವರು ಏನು ಕಮೀಷನ್ ತಿನ್ನಲು ಹೋಗಿದ್ದಾರಾ? ಅವರಾದರೂ ತಮ್ಮ ವಾರ್ಡುಗಳ ವ್ಯಾಪ್ತಿಯಲ್ಲಿ ದಾರಿಸೂಚಕ ಫಲಕಗಳನ್ನು ಸರಿ ಇವೆಯಾ ಅಥವಾ ಬಿದ್ದು ಹೋಗಿದೆಯಾ ಎಂದು ನೋಡುವುದು ಬೇಡವಾ? ಈ ಅಧಿಕಾರಿಗಳು ಯಾಕೆ ಈ ಬಗ್ಗೆ ಆಸಕ್ತಿ ತೋರಿಸುವುದಿಲ್ಲ ಎಂದರೆ ಅವರಿಗೆ ಈ ಹೊಸ ಹೊಸ ಫಲಕಗಳು ಹಾಕಿದಷ್ಟು ಲಾಭ ಜಾಸ್ತಿ. ಪ್ರತಿ ಬಿಲ್ ನಲ್ಲಿ ಇನ್ನೊಂದಿಷ್ಟು ಹೊಡೆಯುತ್ತಾ ಹೋಗಬಹುದು. ಹಾಗಂತ ಫಲಕಗಳು ತುಂಬಾ ವರ್ಷಗಳಿಂದ ಹಳೆಯದಾಗಿ ಅದನ್ನು ಇಡುವುದು ವ್ಯರ್ಥ ಎಂದಾದರೆ ಆಗ ಬದಲಾಯಿಸಿಬಿಟ್ಟರೆ ತೊಂದರೆ ಇಲ್ಲ. ಆದರೆ ಎಷ್ಟೋ ಫಲಕಗಳು ಹೊಚ್ಚ ಹೊಸದಾಗಿರುತ್ತದೆ. ಅವುಗಳನ್ನು ನೋಡುವಾಗ ಇದನ್ನು ಯಾಕೆ ಮೂಲೆಗೆ ಬಿಸಾಡಿದ್ದಾರೆ ಎಂದು ಅನಿಸುತ್ತದೆ. ಈ ವಿಷಯದಲ್ಲಿ ಪಾಲಿಕೆ ಆಯುಕ್ತರು ಸೂಕ್ತ ಕ್ರಮ ತೆಗೆದುಕೊಳ್ಳದೇ ಹೋದರೆ ಶೀಘ್ರದಲ್ಲಿ ಇದೇ ಒಂದು ಗೋಲ್ ಮಾಲ್ ದಂಧೆಯಾಗಿ ಬಿಡುತ್ತದೆ. ಇದು ದಾರಿಸೂಚಕ ಫಲಕಗಳಿಗೆ ಮಾತ್ರ ಸೀಮಿತವಾಗಿಲ್ಲ. ಇತರ ಸಿಗ್ನಲ್ ತೋರಿಸುವ ಬೋರ್ಡ್ ಗಳು ಕೂಡ ಚೆನ್ನಾಗಿ ಇರುವಾಗಲೇ ಗುಜರಿ ಸೇರುತ್ತಿವೆ. ಮಂಗಳೂರಿನಲ್ಲಿ ಈ ಪರಿ ನಮ್ಮ ಸಾರ್ವಜನಿಕ ಸ್ವತ್ತುಗಳು ಮೂಲೆ ಸೇರುತ್ತಿರುವುದು ನಿಜಕ್ಕೂ ರಾಷ್ಟ್ರೀಯ ಪೋಲು ಎನ್ನಬಹುದು!
Leave A Reply