ಇರಾನ್ ನಲ್ಲಿ ಬುರ್ಖಾಕ್ಕೆ ಅಲ್ಲಿನ ಹೆಣ್ಣುಮಕ್ಕಳು ನೋ, ಇಲ್ಲಿ…!
ಸುಪ್ರೀಂಕೋರ್ಟ್ ಹಿಜಾಬ್ ಪ್ರಕರಣದಲ್ಲಿ ಮಹತ್ವದ ತೀರ್ಪನ್ನು ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ದ್ವಿಸದಸ್ಯ ಪೀಠದಲ್ಲಿ ಒಬ್ಬರು ನ್ಯಾಯಮೂರ್ತಿಯವರು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಎತ್ತಿಹಿಡಿದರೆ, ಇನ್ನೊಬ್ಬರು ನ್ಯಾಯಮೂರ್ತಿಯವರು ಆ ಆದೇಶವನ್ನು ವಜಾಗೊಳಿಸಿದ್ದರು. ಈ ಮೂಲಕ ಫಲಿತಾಂಶ ಟೈ ಆಗಿತ್ತು. ಆದ್ದರಿಂದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ಈಗ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲಾಗಿದೆ. ಅಲ್ಲಿಯ ತನಕ ಕರ್ನಾಟಕ ಹೈಕೋರ್ಟ್ ಕೊಟ್ಟಿರುವ ಆದೇಶವನ್ನೇ ಪಾಲಿಸಬೇಕಾಗಿರುವ ಅಗತ್ಯ ಇದೆ. ಒಂದು ಕಡೆಯಲ್ಲಿ ಇರಾನ್ ನಂತಹ ಮುಸ್ಲಿಮರೇ ಇರುವ ಕರ್ಮಟ ರಾಷ್ಟ್ರದಲ್ಲಿ ಹೆಣ್ಣುಮಕ್ಕಳು ಹಿಜಾಬ್, ಬುರ್ಕಾ ವಿರುದ್ಧ ಬೀದಿಗಳಿದು ಹೋರಾಟ ಮಾಡುತ್ತಿದ್ದರೆ ನಮ್ಮ ರಾಜ್ಯದಲ್ಲಿ ಏನಾಗುತ್ತಿದೆ? ನಾವು ತರಗತಿಯೊಳಗೆ ಕೂಡ ಹಿಜಾಬ್ ಧರಿಸಿಯೇ ಕೂರುತ್ತೇವೆ ಎಂದು ಹಟ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ತರಗತಿಯ ಒಳಗೆ ಬಿಟ್ಟು ಬೇರೆ ಎಲ್ಲಿಯೂ ಹಿಜಾಬ್ ಹಾಕಬೇಡಿ ಎಂದು ಸರಕಾರ ಹೇಳಿಲ್ಲ. ಅಷ್ಟಕ್ಕೂ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಅಲ್ಲ ಎಂದು ಹೈಕೋರ್ಟ್ ಹೇಳಿದೆ. ಇಷ್ಟಿದ್ದು ಹಿಜಾಬ್ ಸಮವಸ್ತ್ರ ಅಲ್ಲ. ಅದನ್ನು ತರಗತಿಯೊಳಗೆ ಧರಿಸಲು ಆಯಾ ಕಾಲೇಜಿನ ಆಡಳಿತ ಮಂಡಳಿ ಅನುಮತಿ ನೀಡದಿದ್ದರೆ ತರಗತಿಯೊಳಗೆ ಧರಿಸಬೇಡಿ. ಕ್ಯಾಂಪಸ್ಸಿಗೆ ಬಂದ ನಂತರ ನಿಗದಿಪಡಿಸಿದ ಕೋಣೆಯೊಳಗೆ ಹೋಗಿ ಅಲ್ಲಿ ತೆಗೆದಿಟ್ಟು ಕ್ಲಾಸ್ ರೂಂಗೆ ಹೋಗಿ ಎಂದು ಹೇಳಿರುವಂತದ್ದು. ಪ್ರಪಂಚದ ಒಂದು ಭಾಗದಲ್ಲಿ ಹೆಣ್ಣುಮಕ್ಕಳು ಮುಂದಿನ ಶತಮಾನಕ್ಕೆ ಹೋಗಲು ನಿರ್ಧರಿಸಿದರೆ ಅದೇ ಪ್ರಪಂಚದ ಇನ್ನೊಂದು ಭಾಗದ ಹೆಣ್ಣುಮಕ್ಕಳು ತಾವು ಯಾವುದೋ ಮೂಲಭೂತವಾದಿ ಸಂಘಟನೆಗಳ ರಾಜಕೀಯ ಮುಖವಾಗಿರುವ ಎಸ್ ಡಿಪಿಐ ತಾಳಕ್ಕೆ ತಕ್ಕಂತೆ ಕುಣಿಯಲು ನಿಶ್ಚಯಿಸಿರುವುದು ನಿಜಕ್ಕೂ ಅಸಹ್ಯಕರ ವಿಷಯ. ಹಿಜಾಬ್ ಧರಿಸುವುದು, ಬಿಡುವುದು ಆಯಾ ಹೆಣ್ಣಿನ ವೈಯಕ್ತಿಕ ನಿರ್ಧಾರ. ಆಕೆಗೆ ಅದು ಇಷ್ಟವಿಲ್ಲದಿದ್ದರೆ ಅದನ್ನು ಧರಿಸಲು ಯಾರೂ ಕೂಡ ಒತ್ತಾಯ ಮಾಡಬಾರದು. ಒಂದು ವೇಳೆ ತಮ್ಮ ಮತದಲ್ಲಿ ಅದನ್ನು ಧರಿಸಲೇಬೇಕು ಎಂದು ಆ ಮನೆಯ ಹಿರಿಯರು ಅಜ್ಜ ನೆಟ್ಟ ಆಲದ ಮರಕ್ಕೆ ನೇತಾಡಲು ಬಯಸಿದರೆ ಅದು ಅವರ ಕರ್ಮ. ಆದರೆ ಹಿರಿಯರು ತರಗತಿಯೊಳಗೆ ಧರಿಸಲು ಕಾಲೇಜು ಅನುಮತಿ ನೀಡದಿದ್ದರೆ ಕಾಲೇಜಿನವರು ಹೇಳಿದಂತೆ ಕೇಳು ಎಂದು ಕೂಡ ಮಕ್ಕಳಿಗೆ ಬುದ್ಧಿವಾದ ಹೇಳಬೇಕು. ಬೇಕಾದರೆ ಈ ಕರ್ನಾಟಕದ ಆರು ಜನ ವಿದ್ಯಾರ್ಥಿನಿಯರು ಯಾರು ಕೋರ್ಟಿಗೆ ಹೋಗಿದ್ದಾರೋ ಅವರನ್ನು ಒಂದು ಗಂಟೆ ಈ ಸಿನೆಮಾದ ಸ್ಟಾರ್ ನಟಿಯರು ಇದ್ದಾರಲ್ಲ, ಊರ್ಫಿ, ಕತ್ರಿನಾ ಸಹಿತ ಕೆಲವರೊಂದಿಗೆ ಸಮಾಲೋಚನೆಗೆ ಅವಕಾಶ ನೀಡಬೇಕು. ಟೆನ್ನಿಸ್ ನಲ್ಲಿ ಭಾರತದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಸಾನಿಯಾ ಮಿರ್ಜಾ ಜೊತೆ ಒಂದು ಗಂಟೆ ಮಾತನಾಡಲು ಅವಕಾಶ ನೀಡಬೇಕು. ಆಗ ಇವರ ಮನಸ್ಸುಗಳು ಬದಲಾಗಬಹುದು. ಯಾಕೆಂದರೆ ತರಗತಿಯೊಳಗೆ ಎಲ್ಲರಿಗೂ ಸಮವಸ್ತ್ರ ಬೇಕು ಎನ್ನುವುದನ್ನು ಜಾರಿಗೆ ತಂದದ್ದು ಇಂದಿರಾಗಾಂಧಿ. ಮಕ್ಕಳಲ್ಲಿ ಬಡವರು, ಶ್ರೀಮಂತರು ಎನ್ನುವ ಭೇದಭಾವ ಇರಬಾರದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗಿತ್ತು. ಆದರೆ ಅದರಲ್ಲಿ ಕೆಲವರು ತಲೆಗೆ ಏನೋ ಹಾಕುತ್ತೇವೆ ಎಂದು ಹಟ ಮಾಡಿದರೆ ಏನಾಗುತ್ತದೆ? ಇನ್ನೊಬ್ಬರು ತಾವು ಇನ್ನು ಏನೋ ಹಾಕಿಕೊಂಡು ಬರುತ್ತೇವೆ ಎಂದು ಕಿರಿಕ್ ಮಾಡುತ್ತಾರೆ. ಆಗ ಎಲ್ಲರಿಗೂ ಅವಕಾಶ ಮಾಡಿಕೊಟ್ಟರೆ ಸಮವಸ್ತ್ರದ ಘನತೆ ಎಲ್ಲಿಗೆ ಬಂದು ತಲುಪುತ್ತದೆ. ಇನ್ನು ಹಿಜಾಬ್ ವಿಷಯದಲ್ಲಿ ಯಾವ ವಿದ್ಯಾರ್ಥಿನಿಯರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರೋ ಅವರು ಈ ಹಿಂದೆ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರಲಿಲ್ಲ. ಈ ಪ್ರಕರಣ ಸೃಷ್ಟಿ ಮಾಡುವುದಕ್ಕಾಗಿಯೇ ಅವರು ಹಿಜಾಬ್ ಧರಿಸಲೇಬೇಕು ಎಂದು ಹಟ ಮಾಡಿದಂತೆ ಕಾಣುತ್ತದೆ. ಅತ್ತ ಇರಾನ್ ನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಏನು ಮಾಡುತ್ತಿದ್ದಾರೆ? ತರಗತಿಯಲ್ಲಿ ಮಾತ್ರ ಅಲ್ಲ, ಎಲ್ಲಿಯೂ ಹಿಜಾಬ್ ಧರಿಸಲ್ಲ ಎನ್ನುತ್ತಿದ್ದಾರೆ. ಬುರ್ಕಾ ಕಿತ್ತು ಬಿಸಾಡುತ್ತಿದ್ದಾರೆ. ತಲೆಕೂದಲು ಕಟ್ ಮಾಡುವ ನಿಷೇಧವಿರುವ ಆ ಮೂಲಭೂತವಾದಿಗಳ ಭೂಮಿಯಲ್ಲಿ ಬಹಿರಂಗವಾಗಿ ಕ್ಯಾಮೆರಾಗಳ ಮುಂದೆ ಕೂದಲು ಕಟ್ ಮಾಡಿ ಅದಕ್ಕೆ ಬೆಂಕಿ ಕೊಡುತ್ತಿದ್ದಾರೆ. ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಬರುತ್ತಿರುವ ಇರಾನ್ ಸರಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ರಕ್ತಪಾತ ಆಗಿದೆ. ಆದರೂ ಯುವತಿಯರು ಹಿಂದೆ ಸರಿಯುತ್ತಿಲ್ಲ. ಇರಾನ್ ಪೊಲೀಸರು ಶೂಟ್ ಔಟ್ ಮಾಡಿ ಹೆಣ ಬೀಳಿಸಿದರೂ ಹುಡುಗಿಯರು ಕ್ಯಾರೇ ಎನ್ನುತ್ತಿಲ್ಲ. ಯಾಕೆಂದರೆ ಬುರ್ಖಾ, ಹಿಜಾಬ್ ಅವರಿಗೆ ಬೇಡವಾಗಿದೆ. ಆದರೆ ಇಲ್ಲಿ ನೋಡಿದರೆ ತರಗತಿಯೊಳಗೆ ಸಮವಸ್ತ್ರ ನಿಯಮ ವಿರೋಧಿಸಬೇಡಿ ಎಂದರೆ ಕೋರ್ಟಿಗೆ ಹೋಗುತ್ತಾರೆ. ಇಂತವರನ್ನು ಹಿಡಿದುಕೊಂಡು ದೇಶ ಹೇಗೆ ಮುಂದಕ್ಕೆ ಹೋಗುವುದು.ಇನ್ನು ಇಂತಹ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೂಡ ಒಂದೋ ತ್ರಿಸದಸ್ಯ ಪೀಠ ಅಥವಾ ಪೂರ್ಣ ಪ್ರಮಾಣದ ಪೀಠವನ್ನು ನೀಡಿದ್ದರೆ ಆಗ ತೀರ್ಪು ಏನೇ ಬರಲಿ, ಗೊಂದಲ ಇರುತ್ತಿರಲಿಲ್ಲ. ಈಗ ದ್ವಿಸದಸ್ಯ ಪೀಠಕ್ಕೆ ಕೊಟ್ಟ ಕಾರಣ ಇಲ್ಲಿ ಗೊಂದಲ ಮುಂದುವರೆದಿದೆ. ಈಗ ಮತ್ತೆ ಸಿಜೆಐ ಏನಾದರೂ ಕ್ರಮ ತೆಗೆದುಕೊಳ್ಳಬೇಕು. ಅದರ ಬದಲಿಗೆ ಮೊದಲೇ ಯೋಚಿಸಿದರೆ ಈ ಸಮಯದಲ್ಲಿ ತೀರ್ಪು ಬಂದು ಯೆಸ್ ಔರ್ ನೋ ಆಗುತ್ತಿತ್ತು!
Leave A Reply