ಎಲ್ಲಿ ಬಸ್ ಸ್ಟಾಪ್ ಮಾಡಬೇಕು ಎನ್ನುವುದು ಕಾಮನ್ ಸೆನ್ಸ್!!
ಈಗೀಗ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳಿಗಿಂತ ಹೋಂಗಾರ್ಡ್ ಗಳೇ ಎಷ್ಟೋ ವಾಸಿ ಎಂದು ಅನಿಸುತ್ತದೆ. ನೀವು ಗಮನಿಸಿರಬಹುದು. ಹೋಂಗಾರ್ಡ್ ಗಳಿಗೆ ಸಂಬಳ ಕಡಿಮೆ. ಆದರೆ ಅವರು ಹೆಚ್ಚಿನ ಸಂದರ್ಭದಲ್ಲಿ ಪೊಲೀಸರಿಗಿಂತ ಹೆಚ್ಚು ಆಕ್ಟಿವ್ ಆಗಿ ಇರುತ್ತಾರೆ. ಪೊಲೀಸರಾದರೂ ತಮಗೆ ಕೊಟ್ಟ ಡ್ಯೂಟಿ ಪಾಯಿಂಟ್ ನಲ್ಲಿ ನಿಲ್ಲದೇ ಅನತಿ ದೂರದಲ್ಲಿ ತಮ್ಮ ಸ್ಟ್ಯಾಂಡ್ ಹಾಕಿದ ಬೈಕ್ ನಲ್ಲಿ ಕುಳಿತು ಮೊಬೈಲ್ ಒತ್ತುತ್ತಾ ಇರುತ್ತಾರೆ. ಅವರಿಗೆ ಡ್ಯೂಟಿ ಹಾಕಿದ ಜಾಗದಲ್ಲಿ ಎಲ್ಲಿಯಾದರೂ ಟ್ರಾಫಿಕ್ ಜಾಮ್ ಆದರೆ ಮೊದಲನೇಯದಾಗಿ ಇವರು ಮದುಮಗನಂತೆ ನಡೆದುಕೊಂಡು ಬರುವಾಗ ಸ್ವಲ್ಪ ಇದ್ದ ಸಮಸ್ಯೆ ಜಾಸ್ತಿಯಾಗುತ್ತದೆ. ಇನ್ನು ಇವರು ಹತ್ತಿರ ಹೋಗುವಷ್ಟರಲ್ಲಿ ಸಮಸ್ಯೆ ಗುಡ್ಡವಾಗಿರುತ್ತದೆ. ಹಾಗಂತ ಇವರಿಗೆ ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವ ಪೂರ್ವ ತರಬೇತಿಯೇ ಇರುವುದಿಲ್ಲ. ಆದ್ದರಿಂದ ಇವರು ಮಾಡುವ ಪ್ರಯೋಗಗಳಿಂದ ಇವರ ಅದೃಷ್ಟ ಚೆನ್ನಾಗಿದ್ದರೆ ಸಮಸ್ಯೆ ಪರಿಹಾರ ಆದರೂ ಆಗಬಹುದು. ಇಲ್ಲದೇ ಹೋದರೆ ಸಮಸ್ಯೆ ಉಲ್ಬಣವಾದರೂ ಆಗಬಹುದು. ಆದ್ದರಿಂದ ಮೇಲಾಧಿಕಾರಿಗಳು ಇದನ್ನು ಆದಷ್ಟು ಬೇಗ ಸರಿ ಮಾಡಬೇಕು.
ಇನ್ನು ಸ್ಟೇಟ್ ಬ್ಯಾಂಕಿನಿಂದ ಹಂಪನಕಟ್ಟೆಯಾಗಿ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯ ತನಕ ಒಂದೇ ಒಂದು ಬಸ್ ಸ್ಟಾಪ್ ಇರಲಿಲ್ಲ. ಅದರಿಂದ ಜನರಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ವಿವಿ ಕಾಲೇಜಿನ ಎದುರು ಒಂದು ಬಸ್ ಸ್ಟಾಪ್ ರಚನೆಯಾಯಿತು. ಅದು ಅವೈಜ್ಞಾನಿಕವಾಗಿರುವ ಯೋಜನೆ. ಒಂದು ಬಸ್ ಸ್ಟಾಪ್ ಯಾವತ್ತೂ ಜಂಕ್ಷನ್ ನಲ್ಲಿ ಇರಲೇಬಾರದು. ಇನ್ನು ಸಿಗ್ನಲ್ ಲೈಟ್ ಪಕ್ಕದಲ್ಲಿಯೂ ಮಾಡಬಾರದು. ಆದರೆ ಮಾಡಲಾಗಿದೆ. ಇದರಿಂದ ಗಣಪತಿ ಹೈಸ್ಕೂಲ್ ಕಡೆಗೆ ಹೋಗುವ ವಾಹನಗಳಿಗೆ ಮತ್ತು ಬಸ್ ಗಳಿಗೆ ಈ ಬಸ್ ಸ್ಟಾಪಿನಿಂದ ಕಿರಿಕಿರಿ ಮತ್ತು ಪೀಕ್ ಅವರ್ ನಲ್ಲಿ ಟ್ರಾಫಿಕ್ ಜಾಮ್ ಎನ್ನುವುದು ಗ್ಯಾರಂಟಿಯಾಗುತ್ತದೆ. ಇನ್ನು ಈ ಬಸ್ ಸ್ಟಾಪಿನಲ್ಲಿ ಪ್ರಯಾಣಿಕರನ್ನು ಹತ್ತಿಸಿ ಬಸ್ ಗಳು ವೇಗವಾಗಿ ಮುಂದಕ್ಕೆ ಹೋಗುತ್ತದೆಯಾ? ಇಲ್ಲವೇ ಇಲ್ಲ. ಹತ್ತು ಆನೆಗಳು ದೂಡಿಕೊಂಡು ಹೋದರೂ ಮುಂದೆ ಹೋಗದಷ್ಟು ನಿಧಾನವಾಗಿ ಅಲ್ಲಲ್ಲಿ ತೆವಳಿಕೊಂಡು ಸಾಗುತ್ತವೆ. ಹಾಗಾದರೆ ಇದಕ್ಕೆ ಪರಿಹಾರ ಏನು? ಯಾವ ಉದ್ದೇಶಕ್ಕೆ ಹಳೆ ಕಾಂಗ್ರೆಸ್ ಆಫೀಸಿನ ಬಳಿ ಬಸ್ ಸ್ಟಾಪ್ ಮಾಡಿದ ಮೇಲೆ ಅಲ್ಲಿ ಪ್ರಯಾಣಿಕರನ್ನು ಹತ್ತಿಸಿದ ಮೇಲೆ ಮತ್ತೆ ಮತ್ತೆ ದುರಾಸೆ ಯಾಕೆ? ಇನ್ನು ಇವರು ಇರುವೆಯಂತೆ ಸಾಗುವುದರಿಂದ ಜನ ಕೂಡ ಬಸ್ ಸ್ಟಾಪಿನ ತನಕ ಬಂದು ನಿಲ್ಲುವುದಿಲ್ಲ. ತಮಗೆ ಎಲ್ಲಿ ಅನುಕೂಲವಾಗುತ್ತೋ ಅಲ್ಲಿಯೇ ನಿಂತುಬಿಡುತ್ತಾರೆ. ಇನ್ನು ಜನರು ಪೂರ್ಣವಾಗಿ ಕೈ ಅಡ್ಡ ಹಾಕಬೇಕೆಂದು ಕೂಡ ಇಲ್ಲ. ನಮ್ಮ ಎಲ್ಲಾ ಬಸ್ ಡ್ರೈವರುಗಳು ಸೋಶಿಯಾಲಜಿಯಲ್ಲಿ ಗ್ರಾಜ್ಯುಯೇಟ್ ಮಾಡಿದ್ದಾರೆ. ರಸ್ತೆಬದಿಯಲ್ಲಿ ನಿಂತ ವ್ಯಕ್ತಿಯ ಕಣ್ಣನ್ನು ನೋಡಿ ಅದನ್ನೇ ಅರಿತು ಬಸ್ಸನ್ನು ನಿಲ್ಲಿಸಿಬಿಡುತ್ತಾರೆ.
ಇನ್ನು ಸ್ಮಾರ್ಟ್ ಸಿಟಿ ಎಂದರೆ ಫುಟ್ ಪಾತ್ ಗಳನ್ನು ಅಗಲ ಮಾಡುವುದು ಎಂದು ವಿದೇಶಗಳಲ್ಲಿ ಇರುವುದನ್ನು ನೋಡಿ ಬಂದಿರುವ ನಮ್ಮವರು ಅದನ್ನು ಇಲ್ಲಿ ಯಥಾವತ್ತಾಗಿ ಅನುಷ್ಟಾನಕ್ಕೆ ತರುತ್ತಿದ್ದಾರೆ. ಆದರೆ ನಮ್ಮಲ್ಲಿ ವಿಶಾಲ ಫುಟ್ ಪಾತ್ ಎನ್ನುವುದು ವಾಹನ ಪಾರ್ಕ್ ಮಾಡಲು ಅನುಕೂಲಕರವಾಗಿ ಮಾಡಿರುವ ವ್ಯವಸ್ಥೆ ಎನ್ನುವ ಚಿಂತನೆ ಹಲವರಲ್ಲಿ ಇದೆ. ಆದ್ದರಿಂದ ಫುಟ್ ಪಾತ್ ಮೇಲೆ ವಾಹನ ಹತ್ತಿಸಿ ನಿಲ್ಲಿಸಿಬಿಡುತ್ತಾರೆ. ವಿದೇಶಗಳಲ್ಲಿ ಅಲ್ಲಿನವರಿಗೆ ಇರುವ ಜ್ಞಾನ ಮತ್ತು ನಮ್ಮವರಿಗೆ ಇಲ್ಲಿರುವ ಅನಿವಾರ್ಯತೆ ಮ್ಯಾಚ್ ಆಗುತ್ತಿದೆ. ಇದರಿಂದ ಪಾರ್ಕಿಂಗ್ ಎಲ್ಲಿ ಎಂದರೆ ವಿಶಾಲವಾದ ಸ್ಮಾರ್ಟ್ ಫುಟ್ ಪಾತ್ ಮೇಲೆ ಎನ್ನುವುದು ಮಂಗಳೂರಿಗರು ಕಂಡುಕೊಂಡಿರುವ ಹೊಸ ವ್ಯವಸ್ಥೆ. ಇದನ್ನು ನಾವು ಪಿವಿಎಸ್, ರಥಬೀದಿ, ಅಲೋಶಿಯಸ್ ಕಾಲೇಜು ಎಲ್ಲಿ ಬೇಕಾದರೂ ಅಲ್ಲಿ ನೋಡಬಹುದು. ಇನ್ನು ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯಲ್ಲಿರುವ ಅಲೋಶಿಯಸ್ ಕಾಲೇಜಿನ ಹತ್ತಿರ ಬಸ್ ಬೇ ಒಂದಿದೆ. ಆರಂಭದಲ್ಲಿ ಅಲ್ಲಿ ಬಸ್ ಗಳು ಬಂದು ಅದು ಉಪಯೋಗಕ್ಕೆ ಬೀಳುತ್ತಿತ್ತು. ಆದರೆ ಈಗ ಅದರೊಳಗೆ ಬಸ್ಸುಗಳೇ ಹೋಗುವುದಿಲ್ಲ. ಅದೀಗ ನಿರಾಶ್ರಿತರಿಗೆ ರೆಸ್ಟ್ ರೂಂ, ಪಡ್ಡೆ ಹುಡುಗರಿಗೆ ಜೋಲಿ ರೂಂ, ನಮಾಜು ಮಾಡಲು ಪ್ರಾರ್ಥನಾ ರೂಂ ಹೀಗೆ ಮಲ್ಟಿ ಪರ್ಪಸ್ ವ್ಯವಸ್ಥೆಗೆ ಒಗ್ಗಿಕೊಂಡಿದೆ. ನಿಮಗೆ “ಅಡ್ಡೆ” ಮಾಡಲು ಮನಸ್ಸಿದ್ದರೆ ಅಂತಹ ಒಂದು ಕಾನ್ಸೆಪ್ಟ್ ತನ್ನಿ. ಇದು ಮೋಜುಮಸ್ತಿಗೆ ಸರಕಾರ ನಿರ್ಮಿಸಿದ ಅಡ್ಡೆಗಳು ಎಂದು ಯೋಜನೆ ಹಾಕಿ ಅದನ್ನು ನಿರ್ಮಿಸಿ ಶಾಸಕರುಗಳಿಂದ ಉದ್ಘಾಟನೆ ಮಾಡಿಸಿ. ಇಂತಹ ಅಡ್ಡೆಗಳನ್ನು ನಮ್ಮ ಸರಕಾರ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅನೇಕ ಕಡೆ ಮಾಡುತ್ತದೆ. ಕೆಲಸವಿಲ್ಲದೆ ಇರುವ ಪಡ್ಡೆಗಳು ಇಂತಹ ಅಡ್ಡೆಗಳನ್ನು ಬಳಸಬಹುದು. ಇದಕ್ಕಾಗಿ ಸ್ಮಾರ್ಟ್ ಸಿಟಿ ಫಂಡ್ ನಲ್ಲಿ ಹತ್ತು ಕೋಟಿ ಇಡಲಾಗಿದೆ ಎಂದು ಶಾಸಕರು ಘೋಷಣೆ ಮಾಡಲಿ. ಅದು ಬಿಟ್ಟು ಯಾವುದಕ್ಕೋ ಮಾಡುವುದು ಮತ್ತು ಅದು ಇನ್ಯಾವುದಕ್ಕೋ ಉಪಯೋಗಕ್ಕೆ ಹೋಗುವುದು ಮಂಗಳೂರಿನಲ್ಲಿ ಮಾತ್ರನಾ!
Leave A Reply