ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳು ಅರ್ಹರಿಗೆ ಸಿಗುವ ನಿರೀಕ್ಷೆ ಇತ್ತು!!
ಭಾರತದ ಸ್ವತಂತ್ರ ಇತಿಹಾಸದಲ್ಲಿ ಮೊದಲ ಬಾರಿಗೆ ಪದ್ಮಪ್ರಶಸ್ತಿಗಳಿಗೆ ಗೌರವ ತಂದುಕೊಟ್ಟವರು ನರೇಂದ್ರ ಮೋದಿ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಅಷ್ಟು ವರ್ಷ ಪದ್ಮಪ್ರಶಸ್ತಿಗಳು ಕ್ಲಬ್ಬುಗಳಲ್ಲಿ ನಿರ್ಧಾರವಾಗುತ್ತಿದ್ದವು. ಆದ್ದರಿಂದ ಪ್ರಭಾವಿಗಳಿಗೆ, ಹಿತೈಷಿಗಳಿಗೆ, ಬಕೆಟ್ ಹಿಡಿದವರಿಗೆ, ಶ್ರೀಮಂತರಿಗೆ ಒಳ್ಳೆಯ ಕಡ್ಲೆಕಾಯಿ ಹಂಚುವಂತೆ ಹಂಚಲಾಗುತ್ತಿತ್ತು. ಅದರಿಂದ ತೆಗೆದುಕೊಂಡವರಿಗೂ ಲಾಭ ಇಲ್ಲ. ಕೊಟ್ಟವರಿಗೂ ಗೌರವ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಒಬ್ಬ ವ್ಯಕ್ತಿಗೆ ಪದ್ಮಭೂಷಣ, ಪದ್ಮವಿಭೂಷಣ ಅಥವಾ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದರೆ ಅದನ್ನು ತನ್ನ ಹೆಸರಿನ ಮುಂದೆ ಹಾಕಿಕೊಳ್ಳಲು ಅವನಿಗೂ ಮುಜುಗರವಾಗಬಾರದು. ಇನ್ನು ಆ ಪ್ರಶಸ್ತಿಯೊಂದಿಗೆ ಆ ವ್ಯಕ್ತಿಯ ಹೆಸರು ಹೇಳುವಾಗಲೋ, ಕೇಳುವಾಗಲೋ, ಉಲ್ಲೇಖಿಸುವಾಗಲೋ ನಮಗೂ ಮುಜುಗರ ಆಗಬಾರದು. ಆದರೆ ಅಂತಹ ಒಂದು ಟ್ರೆಂಡ್ ಕತ್ತರಿಸಿ ಅರ್ಹರನ್ನು ಹುಡುಕಿ ತೆಗೆದು ಪ್ರಶಸ್ತಿ ಕೊಡಿಸಿದ್ದು ಮೋದಿ. ಇದರಿಂದ ಆಡಿ ಕಾರಿನಲ್ಲಿ ಬಂದು ಪ್ರಶಸ್ತಿ ತೆಗೆದುಕೊಳ್ಳುತ್ತಿದ್ದವರ ಎದುರು ಬರಿಕಾಲಿನಲ್ಲಿಯೋ, ಚಪ್ಪಲಿಯಲ್ಲಿಯೋ ಬಂದು ಪ್ರಶಸ್ತಿ ತೆಗೆದುಕೊಳ್ಳುವವರ ಸಂಖ್ಯೆ ಶುರುವಾಯಿತು. ವಿದೇಶಿ ಬಟ್ಟೆ, ಸೆಂಟ್ ಹೊಡೆದು, ಡಿಸೈನರ್ ಲುಕ್ ನಲ್ಲಿ ಬರುತ್ತಿದ್ದವರ ಎದುರು ಸಾಮಾನ್ಯ ಪಂಚೆ, ಸಾಂಪ್ರದಾಯಿಕ ಬಟ್ಟೆ ತೊಟ್ಟು ಬರುವವರ ಸಂಖ್ಯೆ ನೋಡಿ ಖುಷಿಯಾಯಿತು. ಮೊದಲ ಬಾರಿಗೆ ಈ ಪದ್ಮಶ್ರೀ ಗೌರವಗಳಿಗೆ ಗೌರವ ಬಂತು. ನಮಗೂ ಕೂಡ ಪದ್ಮಶ್ರೀ ಹರೇಕಳ ಹಾಜಬ್ಬ ಸಹಿತ ಲಂಬಾಣಿ ಹೆಣ್ಣುಮಗಳು, ಗುಡ್ಡ ತೋಡಿ ನೀರು ತಂಧ ಭಗೀರಥ ಹೀಗೆ ಹತ್ತು ಹಲವು ನೈಜ ಸಾಧಕರು ಪ್ರಶಸ್ತಿ ತೆಗೆದುಕೊಳ್ಳುವುದನ್ನು ನೋಡುವ ಭಾಗ್ಯ ದೊರಕಿತು. ಇವರೆಲ್ಲ ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ. ಆದರೆ ಹಿಂದಿನ ಸಮಯದಲ್ಲಿ ಪ್ರಶಸ್ತಿಗಾಗಿಯೇ ಒಂದೆರಡು ಸಾಮಾಜಿಕ ಕೆಲಸ ಮಾಡಿದಂತೆ ನಾಟಕವಾಡಿ ಪ್ರಶಸ್ತಿ ಗಿಟ್ಟಿಸುತ್ತಿದ್ದವರ ಮುಂದೆ ಈ ಸಾಧಕರ ಶ್ರಮ ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇರಲಿಲ್ಲ.
ಇಂತಹ ಒಂದು ಶ್ರೇಷ್ಟ ಸಂಪ್ರದಾಯದ ಒಂದು ಶೇಕಡಾವನ್ನಾದರೂ ಕರ್ನಾಟಕ ಅಥವಾ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೊಡುವಾಗ ನಮ್ಮ ರಾಜ್ಯ ಸರಕಾರಗಳು ಪಾಲಿಸಿದರೂ ಸಾಕಿತ್ತು. ಇವರು ಮೋದಿಯವರಂತೆ ನಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇತ್ತು. ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಉಪಯೋಗಕ್ಕೆ ಬರಲಿ ಎನ್ನುವ ಕಾರಣಕ್ಕೆ, ಪ್ರಶಸ್ತಿ ಅಕಾಂಕ್ಷಿಗಳ ಹಿಂದೆ ಜನಬಲ, ಜಾತಿ ಬಲ, ಹಣ ಬಲ ಇದೆ ಎನ್ನುವ ಕಾರಣಕ್ಕೆ ಕೆಲವರಿಗೆ ಪ್ರಶಸ್ತಿಗಳನ್ನು ಹಿಂದಿನಿಂದಲೂ ನೀಡಿಕೊಂಡು ಬರಲಾಗುತ್ತಿತ್ತು. ತಮ್ಮ ಗೆಳೆಯರು ಎನ್ನುವ ಕಾರಣಕ್ಕೆ, ತಮ್ಮ ಜಾತಿಯ ಸಂಘ-ಸಂಸ್ಥೆಗಳು ಎನ್ನುವ ಕಾರಣಕ್ಕೆ ಪ್ರಶಸ್ತಿಗಳು ಸಿಗುತ್ತಿದ್ದವು. ಕೆಲವರಂತೂ ಎಲ್ಲೆಂಲ್ಲಿಂದಲೋ ಶಿಫಾರಸ್ಸು ಮಾಡಿ ಪ್ರಶಸ್ತಿ ಗಿಟ್ಟಿಸಿಕೊಂಡು “ನನ್ನ ಕೆಲಸ ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದಗಳು” ಎಂದು ಪೆಚ್ಚುಮೋರೆ ಹಾಕಿ ಹೇಳಿದಾಗ ಗೊತ್ತಿದ್ದವರಿಗೆ ಅದು ಕಾಮಿಡಿ ಮತ್ತು ಅಸಹ್ಯ ಎರಡೂ ಆಗುತ್ತಿತ್ತು. ಅರ್ಜಿ ಹಾಕಿ ಪ್ರಶಸ್ತಿ ಪಡೆದುಕೊಂಡವರು ಕೂಡ ನಿನ್ನೆ ತನಕ ಗೊತ್ತಿರಲಿಲ್ಲ ಎಂದು ಹೇಳುವಾಗ ಅವರ ನಾಟಕಕ್ಕಾದರೂ ಪ್ರಶಸ್ತಿ ನೀಡಿದ್ದು ಸಾರ್ಥಕವಾಯಿತು ಎಂದು ಅನಿಸಿ ನಕ್ಕಿದವರು ಇದ್ದರು. ಹೀಗೆ ರಾಜಕೀಯ ಎನ್ನುವುದು ಪ್ರಶಸ್ತಿಗಳ ಒಳಗೆ ನುಗ್ಗಿಯೋ ಅಥವಾ ಪ್ರಶಸ್ತಿಗಳಲ್ಲಿ ರಾಜಕೀಯ ಸೇರಿಯೋ ಅದರ ಮೌಲ್ಯ ಕಡಿಮೆಯಾಗಿತ್ತು. ಇದನ್ನು ತಪ್ಪಿಸುವುದಕ್ಕಾಗಿ ಒಬ್ಬ ಶಾಸಕನಿಗೆ ಐದು ಹೆಸರನ್ನು ಮಾತ್ರ ಶಿಫಾರಸ್ಸು ಮಾಡುವ ಅವಕಾಶ ದಯಪಾಲಿಸಲಾಗಿತ್ತು. ಇನ್ನು ಕೆಲವು ಸಂಘಟನೆಗಳು ಯಾಕೆ ಪ್ರಶಸ್ತಿ ಗಿಟ್ಟಿಸಿಕೊಂಡವು ಎಂದರೆ ವರ್ಷದ 365 ದಿನವೂ ಯುವಕ ಮಂಡಲದ ಕಚೇರಿ ತೆರೆದಿರುತ್ತಿತ್ತು ಎಂದು ಹೇಳಿದವರಿದ್ದರು. ಒಂದು ಸಂಘಟನೆ ಅಥವಾ ವ್ಯಕ್ತಿ ತನ್ನಿಂದ ಈ ಸಮಾಜಕ್ಕೆ ಯಾವ ಕೊಡುಗೆಯನ್ನು ಫಲಾಪೇಕ್ಷೆ ಇಲ್ಲದೆ ಕೊಟ್ಟಿದ್ದಾನೆ ಎನ್ನುವುದು ಬಹಳ ಮುಖ್ಯ. ಕೆಲವರು ತೆರೆಮರೆಯಲ್ಲಿ ಜನಸೇವೆ ಮಾಡುತ್ತಾರೆ. ಸರಕಾರದ ಯೋಜನೆಗಳನ್ನು ಬಡಬಗ್ಗರ ಮನೆಬಾಗಿಲಿಗೆ ತಲುಪಿಸುವ ಕೆಲಸದಿಂದ ಹಿಡಿದು ಸರಕಾರಿ ಕಚೇರಿಗಳಲ್ಲಿ ಏನಾದರೂ ಅನ್ಯಾಯ ಆದ್ರೆ ಅದನ್ನು ಅಲ್ಲಿ ಹೋಗಿ ಸರಿಪಡಿಸುವುದನ್ನು ಸೇರಿಸಿಕೊಂಡು ಆರ್ಟಿಒ ಕಚೇರಿಯಲ್ಲಿ ಚಾಲನಾ ತರಬೇತಿ ಲೈಸೆನ್ಸ್ ಸಿಗಲು ಹೆಚ್ಚು ವಸೂಲಿಗೆ ಅಧಿಕಾರಿಗಳು ಇಳಿದರೆ ಅಲ್ಲಿಯ ತನಕ ಎಲ್ಲದರಲ್ಲಿಯೂ ಜನಸಾಮಾನ್ಯರಿಗೆ ನೆರವು ನೀಡುವ ಸಂಘಟನೆ, ವ್ಯಕ್ತಿಗಳು ಇದ್ದಾರೆ. ಈ ಪ್ರಶಸ್ತಿ ಸಿಕ್ಕಿರುವ ಸಂಘಟನೆಗಳು ಅದಾದರೂ ಮಾಡಿದ್ದಾರಾ ಎಂದು ನೋಡಿದರೆ ಅದು ಕೂಡ ಇಲ್ಲ. ಹಾಗಿರುವಾಗ ಕರ್ನಾಟಕದ ಸರಕಾರ ಅಥವಾ ಭಾರತೀಯ ಜನತಾ ಪಾರ್ಟಿಯವರು ಮೋದಿಯವರು ಹಾಕಿಕೊಟ್ಟಿರುವ ಪಥದಲ್ಲಿ ನಡೆಯುವುದು ಬಿಟ್ಟು ಕಾಂಗ್ರೆಸ್ ಸಂಸ್ಕೃತಿಯಲ್ಲಿಯೇ ನಡೆದರೆ ಅದರಿಂದ ಏನು ಪ್ರಯೋಜನ? ಈ ಬಾರಿ ನಿರೀಕ್ಷೆ ಜಾಸ್ತಿಯಾಗಿತ್ತು. ಬಿಜೆಪಿಯವರು ಅರ್ಜಿ ಹಾಕದೇ ಶ್ರೇಷ್ಟರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುತ್ತಾರಾ? ಗೊತ್ತಿದ್ದವರಿಗೆ ಗೊತ್ತಿದೆ!
Leave A Reply