ನಿಯಮ, ವಾಸ್ತವ ಮತ್ತು ನಂಬಿಕೆಯ ನಡುವೆ ಯಕ್ಷಗಾನ ನಿಂತಿದೆ!!
ಕರಾವಳಿಯಲ್ಲಿ ಯಕ್ಷಗಾನಕ್ಕೆ ವಿಶೇಷವಾದ ಮಹತ್ವವಿದೆ. ಅದು ಮನೋರಂಜನಾ ವಿಷಯ ಅಲ್ಲ. ಅದಕ್ಕೆ ಧಾರ್ಮಿಕ ತಳಹದಿ ಇದೆ. ಪೌರಾಣಿಕ ಹಿನ್ನಲೆ ಇದೆ. ದೇವರ ಉಪಾಸನೆ ಇದೆ. ದಾನಧರ್ಮದ ಹಿನ್ನಲೆ ಇದೆ. ಆದ್ದರಿಂದ ಯಕ್ಷಗಾನ ಎನ್ನುವುದು ನಮ್ಮ ಪಾಲಿಗೆ ದೇವರ ಪೂಜೆಗೆ ಸಮ. ದೇವರ ಪೂಜೆಯನ್ನು ದಿನದ ಇಂತಿಷ್ಟೇ ಸಮಯದಲ್ಲಿ ಮಾಡಬೇಕು ಎನ್ನುವುದು ನಾವು ಶತಮಾನಗಳಿಂದ ಪಾಲಿಸಿಕೊಂಡು ಬಂದಿದ್ದೇವೆ. ಒಂದು ಯಕ್ಷಗಾನ ಯಾವ ಸಮಯಕ್ಕೆ ಆರಂಭವಾಗುತ್ತದೆ ಮತ್ತು ಯಾವ ಸಮಯಕ್ಕೆ ಉಚ್ಛಾಯ ಸ್ಥಿತಿಗೆ ತಲುಪುತ್ತದೆ ಮತ್ತು ಎಷ್ಟೊತ್ತಿಗೆ ಸಮಾಪನೆಗೊಳ್ಳುತ್ತದೆ ಎನ್ನುವುದನ್ನು ಕರಾವಳಿಯ ಪ್ರತಿ ಮಗುವಿಗೂ ಗೊತ್ತು. ಹಾಗಿರುವಾಗ ಇನ್ನು ಮುಂದೆ ಯಕ್ಷಗಾನ ರಾತ್ರಿ ಹತ್ತು -ಹತ್ತೂವರೆಗೆ ಮುಗಿಯುತ್ತದೆ ಎಂದು ಗೊತ್ತಾದರೆ ಯಕ್ಷಗಾನ ಪ್ರಿಯರಿಗೆ ಹೇಗಾಗಬೇಡಾ. ಯಾಕೆಂದರೆ ಯಕ್ಷಗಾನ ಪೀಕ್ ಗೆ ಹೋಗುವುದು ಮಧ್ಯರಾತ್ರಿ ಕಳೆದ ಮೇಲೆ. ಅದೇ ಯಕ್ಷಗಾನ ರಾತ್ರಿ ಊಟದ ಸಮಯಕ್ಕೆ ಮುಗಿಯಲಿದೆ ಎಂದು ಕೇಳುವಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ರಾಜ್ಯ ಸರಕಾರ ರಾತ್ರಿ ಹತ್ತೂವರೆಯ ನಂತರ ಕಟ್ಟುನಿಟ್ಟಾಗಿ ಶಬ್ದ ಮಾಲಿನ್ಯ ತಡೆ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಿರುವುದರಿಂದ ಅದು ಯಕ್ಷಗಾನದ ಮೂಲ ರೂಪುರೇಶೆಗೆ ದಕ್ಕೆ ತರುವಂತೆ ಕಾಣುತ್ತಿದೆ. ಸರಕಾರದ ನಿಯಮವನ್ನು ಜಾರಿಗೆ ತರಲು ಯಕ್ಷಗಾನ ಮೇಳಗಳಲ್ಲಿ ಮುಖ್ಯವಾಗಿರುವ ಕಟೀಲು ಮೇಳ ತೀರ್ಮಾನಿಸಿದಂತೆ ಕಾಣುತ್ತದೆ. ಆದರೆ ದೇವಿಯ ಭಕ್ತರಿಗೆ ಇದು ಸರಿ ಎನಿಸುತ್ತಿಲ್ಲ. ಇದನ್ನು ವಿರೋಧಿಸಿ ಮಂಗಳೂರಿನಲ್ಲಿ ಪಾದಯಾತ್ರೆಯನ್ನು ನಡೆಸಲಾಗಿದೆ.
ಸರಕಾರದ ವಿರುದ್ಧ ಮೌನ ಅಸಮಾಧಾನವನ್ನು ಹೊರಹಾಕಲಾಗಿದೆ. ಯಕ್ಷಗಾನದ ಮೂಲ ಸ್ವರೂಪವನ್ನು ಕೆಡಿಸುವಂತಹ ಕೃತ್ಯಕ್ಕೆ ತಮ್ಮ ಸಮ್ಮತಿ ಇಲ್ಲ ಎಂದು ಯಕ್ಷಗಾನ ಪ್ರೇಮಿಗಳು ಹೇಳುತ್ತಿದ್ದಾರೆ. ಅಷ್ಟಕ್ಕೂ ಯಕ್ಷಗಾನವನ್ನು ರಾತ್ರಿ ಅಷ್ಟು ಬೇಗ ನಿಲ್ಲಿಸುವ ಉದ್ದೇಶ ಏನು? ಅದರಿಂದ ಹೊರ ಬರುವ ಡೆಸಿಬಲ್ ರಾತ್ರಿ ಮಲಗಿದವರ ನಿದ್ರೆ ಹಾಳು ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಈ ವಿಷಯ ಈಗ ಯಾಕೆ ಜಾರಿಗೆ ಬಂತು ಎಂದು ಹೇಳುವುದಾದರೆ ಕೆಲವು ಸಮಯದ ಹಿಂದೆ ಮಸೀದಿಗಳಲ್ಲಿ ಕೂಗುವ ಅಜಾನ್ ಸದ್ದಿನ ವಿರುದ್ಧ ಕೇಸರಿ ಸಂಘಟನೆಗಳು ಮೊಳಗಿಸಿದ ಆಕ್ರೋಶ. ಬೆಳಿಗ್ಗೆ 4.30 ಕ್ಕೆ ಅಜಾನ್ ಕೂಗುವುದರಿಂದ ಸಿಹಿನಿದ್ರೆಯಲ್ಲಿರುವ ಎಷ್ಟೋ ಜನರ ನಿದ್ರೆ ಹಾಳಾಗುತ್ತಿರುವುದರಿಂದ ಮಸೀದಿಗಳಲ್ಲಿ ಬೆಳಿಗ್ಗೆ ಸೌಂಡ್ ಸಿಸ್ಟಮ್ ಬಳಸುವುದಕ್ಕೆ ರಾಜ್ಯ ಸರಕಾರ ನಿರ್ಭಂಧ ವಿಧಿಸಿದೆ. ಅದಕ್ಕೆ ಸುಪ್ರೀಂಕೋರ್ಟ್ ಆದೇಶವೂ ಕಾರಣ. ಸೌಂಡ್ ಸಿಸ್ಟಮ್ ಬಳಸುವುದಕ್ಕೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಲಿಖಿತ ಅನುಮತಿ ಕೇಳಬೇಕೆಂಬ ಷರತ್ತು ಇದೆ. ಈಗಾಗಲೇ ರಾಜ್ಯದ 5000 ಕ್ಕೂ ಹೆಚ್ಚು ವಿವಿಧ ಧಾರ್ಮಿಕ ಕೇಂದ್ರಗಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಹಾಗಂತ ಬಹುತೇಕ ಮಸೀದಿಗಳಲ್ಲಿ ಈಗಲೂ ಅಜಾನ್ ಮೈಕ್ ನಲ್ಲಿ ಕೂಗುವುದನ್ನು ಮುಂದುವರೆಸಲಾಗಿದೆ. ಅದನ್ನು ಹೋಗಿ ಚೆಕ್ ಮಾಡುವವರು ಯಾರು? ಪೊಲೀಸರಾ, ಮಾಲಿನ್ಯ ನಿಯಂತ್ರಣಾ ಅಧಿಕಾರಿಗಳಾ? ಯಾರು? ಹಾಗಿರುವಾಗ ಈ ನಿಯಮ ಕೇವಲ ಯಕ್ಷಗಾನಕ್ಕೆ ಮಾತ್ರ ಸೀಮಿತವಾಗುತ್ತಾ? ಹಿಂದೂಗಳು ಮಾತ್ರ ಸರಕಾರದ ನಿಯಮವನ್ನು ಪಾಲಿಸಬೇಕಾ? ಒಂದು ವೇಳೆ ಸರಕಾರದ ನಿಯಮವನ್ನು ಯಕ್ಷಗಾನ ಮೇಳಗಳು ಅನುಷ್ಟಾನಕ್ಕೆ ತಂದರೆ ಏನಾಗುತ್ತದೆ? ಯಕ್ಷಗಾನ ಬೇಗ ಶುರು ಮಾಡಬೇಕಾಗುತ್ತದೆ. ಅದರಿಂದ ಕೆಲಸ ಮುಗಿಸಿ ಬರುವ ಯಕ್ಷಗಾನದ ಅಭಿಮಾನಿಗಳಿಗೆ ತೊಂದರೆಯಾಗುತ್ತದೆ. ಆದರೆ ಮಸೀದಿಗಳಿಗೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರದೇ ಕೇವಲ ಯಕ್ಷಗಾನಕ್ಕೆ ಮಾತ್ರ ತರಲು ಹೋದರೆ ಭಾರತೀಯ ಜನತಾ ಪಾರ್ಟಿಯ ಸರಕಾರದ ಮೇಲಿನ ವಿಶ್ವಾಸ ಕಡಿಮೆಯಾಗುತ್ತಾ ಹೋಗುತ್ತದೆ. ಇವರಿಗೆ ಮಸೀದಿಗಳ ಸೌಂಡ್ ಸಿಸ್ಟಮ್ ಮೇಲೆ ಕ್ರಮ ಜರುಗಿಸಲು ಆಗಲ್ಲ. ಇವರದ್ದೇನಿದ್ದರೂ ಹಿಂದೂಗಳ ಮೇಲೆ ಮಾತ್ರ ನಡೆಯುವುದು ಎಂದು ಹಿಂದೂಗಳು ಬೇಸರ ವ್ಯಕ್ತಪಡಿಸುತ್ತಾರೆ.
ಆದರೆ ಕಟೀಲು ಮೇಳದವರು ರಾತ್ರಿ ಹತ್ತೂವರೆಯ ಒಳಗೆ ಯಕ್ಷಗಾನವನ್ನು ಮುಗಿಸಲು ಸಿದ್ಧತೆ ನಡೆಸುವಂತೆ ತೋರುತ್ತಿದೆ. ಕಾರಣ ತಡರಾತ್ರಿಯ ಬಳಿಕ ಜನರು ವಿರಳವಾಗಿ ಹೋಗುತ್ತಾ ಕೊನೆಕೊನೆಗೆ ವೀಕ್ಷಕರ ಸಂಖ್ಯೆ ಗೌಣವಾಗುತ್ತಾ ಹೋಗುತ್ತದೆ. ಅದರ ಬದಲಿಗೆ ಬೇಗ ಮುಗಿಸಿದರೆ ಉತ್ತಮ ಎನ್ನುವ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸೇವಾರ್ಥಿಗಳು ಕೂಡ ರಾತ್ರಿ ನಿದ್ದೆಗೆಟ್ಟು ನೋಡುವ ಅನಿವಾರ್ಯತೆಯಿಂದ ತಪ್ಪಿಸಬಹುದು ಎನ್ನುವುದು ಕಟೀಲು ಅಸ್ರಣ್ಣರ ಅಭಿಪ್ರಾಯ. ಎಲ್ಲಿಯ ತನಕ ಸೇವಾರ್ಥಿಗಳು ಬೆಳಗ್ಗೆ ಪ್ರಸಾದ ಸ್ವೀಕರಿಸುವುದಕ್ಕಾಗಿ ಬರುವಾಗ ರಾತ್ರಿ ಮಲಗಿದರೆ ಬೆಳಿಗ್ಗೆ ಸ್ನಾನಕ್ಕೆ ಹೋಗುತ್ತಾರೆ. ಆದ್ದರಿಂದ ಮನೆಯವರು ಕೂಡ ಇಲ್ಲದೆ ಕಲಾವಿದರಿಗೆ ಪ್ರದರ್ಶನ ನೀಡಲು ಕೂಡ ಉಮ್ಮೇದು ಬರುವುದಿಲ್ಲ ಎನ್ನುವ ಅಭಿಪ್ರಾಯ ಇದೆ. ಒಟ್ಟಿನಲ್ಲಿ ವಾಸ್ತವ ಮತ್ತು ನಿಯಮದ ನಡುವೆ ಯಕ್ಷಗಾನ ನಿಂತಿದೆ!
Leave A Reply