ಆಂಟೋನಿಗೆ ಮತ್ತೆ ಆರು ತಿಂಗಳು ಸಿಕ್ಕಿದೆ, ಪಾಲಿಕೆ ಖುಷ್!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ತಂದವರು ಯಾರು? ಸಂಶಯವೇ ಇಲ್ಲ. ಕಾಂಗ್ರೆಸ್ಸಿನವರು. ಎಂಟು ವರ್ಷದ ಹಿಂದೆ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ಎಂಬ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಮಾಡುವ ಸಂಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಲಿಡಲು ಬಿಟ್ಟಿದ್ದು ಕಾಂಗ್ರೆಸ್ ಆಡಳಿತ. ಆಂಟೋನಿ ವೇಸ್ಟ್ ಎಂಬ ಕಂಪೆನಿ ವೇಸ್ಟ್ ಎಂದು ತಿಳಿಯಲು ಪಾಲಿಕೆಗೆ ತಡವಾಗಲಿಲ್ಲ. ಆರಂಭದಲ್ಲಿ ಮಾಡಿಕೊಂಡಿದ್ದ ಕರಾರುಗಳಲ್ಲಿ ಆಂಟೋನಿ ಆವತ್ತಿನಿಂದ ಇವತ್ತಿನ ತನಕ ಏನನ್ನು ಮಾಡುತ್ತಲೇ ಇರಲಿಲ್ಲ. ಆದರೆ ಕೆಲಸ ಮಾಡುವುದಿಲ್ಲವಾದರೆ ನಡಿ ಎಂದು ಹೇಳಲು ಸಾಧ್ಯವಿರಲಿಲ್ಲ. ಯಾಕೆಂದರೆ ಏಳು ವರ್ಷದ ಒಪ್ಪಂದ ಮಾಡಿಯೇ ಅದಕ್ಕೆ ಕೆಂಪುಗಂಬಳಿ ಹಾಸಿ ಅದನ್ನು ಕರೆಸಿಕೊಂಡಾಗಿತ್ತು. ಮಧ್ಯದಲ್ಲಿ ಬೇಡಾ ಎಂದರೆ ಅವರು ಕೋರ್ಟಿಗೆ ಹೋಗುತ್ತಾರೆ ಎನ್ನುವ ಕಾರಣಕ್ಕೆ ಮತ್ತು ಆಂಟೋನಿ ಕಡೆಯಿಂದ ಬರುತ್ತಿದ್ದ ಕವರುಗಳಿಗೆ ಅನುಗುಣವಾಗಿ ಕಾಂಗ್ರೆಸ್ಸಿಗರು ಕೂಡ ಮೌನವಾಗಿ ದಿನದೂಡುತ್ತಿದ್ದರು. ಕೊನೆಗೆ ಪಾಲಿಕೆಗೆ ಚುನಾವಣೆ ಬಂದಾಗ ತ್ಯಾಜ್ಯದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಮಂಗಳೂರನ್ನು ಸ್ವಚ್ಚ, ಸುಂದರೀಕರಣ ಮಾಡುವಲ್ಲಿ ಯಾವ ರಾಜಿಯೂ ಇಲ್ಲ ಎಂದು ಭಾರತೀಯ ಜನತಾ ಪಾರ್ಟಿ ಗುಡುಗಿತು. ನೆಟ್ಟಗೆ 60 ವಾರ್ಡುಗಳ ಕಸ ಸಂಗ್ರಹ ಮಾಡದ, ರಸ್ತೆ, ಡಿವೈಡರ್ ಗಳನ್ನು ಗುಡಿಸದ, ಒಂದು ಮೀಟರ್ ಅಗಲದ ತೋಡುಗಳ ಹೂಳುಗಳನ್ನು ತೆಗೆಯದ ಆದರೆ ಸರಿಯಾಗಿ ತಿಂಗಳಿಗೆ ಒಂದೂವರೆ ಕೋಟಿ ರೂಪಾಯಿಯನ್ನು ಎಣಿಸುವ ಸಂಸ್ಥೆಯನ್ನು ಮುಂದುವರೆಸುವುದು ಬೇಕಾ ಎಂದು ಬಿಜೆಪಿಗರು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೆ ಎಂದು ಜನ ಭಾವಿಸಿದರು. ಚುನಾವಣೆ ಆಯಿತು. ಜನ ಬಿಜೆಪಿಯನ್ನು ಗೆಲ್ಲಿಸಿದರು. ಎರಡು ವರ್ಷದ ಬಳಿಕ ಆಂಟೋನಿಯವರ ಗುತ್ತಿಗೆ ಅವಧಿ ಕೂಡ ಮುಗಿಯುತ್ತಾ ಬಂತು.
ಇನ್ನೇನು ಬಿಜೆಪಿ ಆಡಳಿತ ಆಂಟೋನಿ ವೇಸ್ಟ್ ಸಂಸ್ಥೆಯ ಕತ್ತನ್ನು ಹಿಡಿದು ಮಂಗಳೂರಿನಿಂದ ಹೊರಗೆ ನೂಕುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇನ್ನೇನೂ ಗುತ್ತಿಗೆ ಅವಧಿ ಮುಗಿಯಲು ಬಂದಾಗ ಪಾಲಿಕೆಯ ಬಿಜೆಪಿಯ ಆಡಳಿತ ನಿದ್ರೆಯಿಂದ ಎದ್ದು ಕೂತುಕೊಂಡು ಬಿಟ್ಟಿತ್ತು. ಓ, ಅವರ ಗುತ್ತಿಗೆ ಮುಗಿಯಿತಾ? ಏನು ಮಾಡುವುದು ಎಂದು ಯೋಚಿಸಿದವರೇ ಹಾಗಾದರೆ ಬೇರೆಯವರಿಗೆ ಕೊಡುವುದು ಒಳ್ಳೆಯದು ಎಂದು ಒಂದು ಕ್ಷಣ ಯೋಚಿಸಿ ಯಾರಿಗೆ ಕೊಡುವುದು ಎಂದು ಸಮಾಲೋಚನೆ ನಡೆಸಲಾಯಿತು. ಆದರೆ ಒಂದು ನಗರದ ತ್ಯಾಜ್ಯ ಗುತ್ತಿಗೆ ವಹಿಸಿಕೊಳ್ಳುವುದು ಎಂದರೆ ಅದು ಕಡ್ಲೆ ಬಜಿಲ್ ತಿಂದ ಹಾಗೆ ಅಲ್ಲ. ಇದಕ್ಕಾಗಿ ಪಾಲಿಕೆ ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಬೇಕು. ನಂತರ ರಾಜ್ಯ ಸರಕಾರದಿಂದ ಟೆಂಡರ್ ಕರೆಯಬೇಕು. ಅದಕ್ಕೆ ಬೇಕಾದ ಕರಾರುಗಳನ್ನು ಹಾಕಬೇಕು. ಟೆಂಡರ್ ನಲ್ಲಿ ಭಾಗವಹಿಸಿದವರಿಗೆ ಈ ಬಗ್ಗೆ ಹಿಂದಿನ ಅನುಭವ ಇದೆಯಾ, ಅವರು ಸಮರ್ಪಕವಾಗಿ ಕೆಲಸ ನಿರ್ವಹಿಸಬಲ್ಲರಾ ಎಂದು ನೋಡಬೇಕು. ಕೊಡುವಾಗ ಅವರು ಯಾವ ರೇಟಿಗೆ ಅದನ್ನು ಮಾಡುತ್ತಾರೆ ಎನ್ನುವುದನ್ನು ನೋಡುವುದರ ಜೊತೆ ಅವರ ಬಳಿ ಇರುವ ಕೆಲಸಗಾರರು, ವಾಹನಗಳು ಎಲ್ಲವನ್ನು ಗಮನಿಸಿ ಅರವತ್ತು ವಾರ್ಡಿನ ಜವಾಬ್ದಾರಿಯನ್ನು ಅವರಿಗೆ ವಹಿಸಬೇಕು. ಇನ್ನು ಆಂಟೋನಿಗೆ ಆವತ್ತು ಹಾಕಿದ್ದ ಕಂಡಿಶನ್ ಗಳನ್ನು ಅವರು ಪಾಲಿಸದೇ ಹಾಗೆ ಬಿಡಲಾಗಿತ್ತು. ಅದನ್ನು ಹೊಸ ಕಂಪೆನಿ ಹೇಗೆ ನಿರ್ವಹಿಸುತ್ತದೆ ಎನ್ನುವುದನ್ನು ಕೂಡ ಪರಿಶೀಲಿಸಿ ನಂತರ ನಗರಾಭಿವೃದ್ಧಿ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ನಂತರ ಅವರಿಗೆ ಗುತ್ತಿಗೆ ನೀಡಲಾಗುತ್ತದೆ.
ಆದರೆ ಆಂಟೋನಿ ವೇಸ್ಟ್ ಇದರ ಏಳು ವರ್ಷದ ಗುತ್ತಿಗೆ ಮುಗಿಯುವ ತನಕ ಏನೂ ಮಾಡದ ಪಾಲಿಕೆ ಮುಗಿಯುವ ಹೊತ್ತಿಗೆ ಏನೂ ಮಾಡದೇ ಮಲಗಿದ್ದ ಪರಿಣಾಮ ಏನು ನಿರ್ಧಾರ ಮಾಡಿತು ಎಂದರೆ ಇದೇ ಸಂಸ್ಥೆಗೆ ಒಂದು ವರ್ಷದ ಗುತ್ತಿಗೆಯನ್ನು ನವೀಕರಣ ಮಾಡುವುದು. ಓಕೆ. ಒಂದು ವರ್ಷ ಗುತ್ತಿಗೆ ನವೀಕರಣ ಆಯಿತು. ಒಂದು ವರ್ಷ ಅಂದರೆ 365 ದಿನಗಳು. ಇನ್ನು ಒಂದು ವರ್ಷ ಇದೆಯಲ್ಲ ಎಂದು ಪಾಲಿಕೆಯ ಬಿಜೆಪಿ ಆಡಳಿತ ಮತ್ತೆ ನಿದ್ರೆಗೆ ಜಾರಿತು. ಇನ್ನೇನೂ ಗುತ್ತಿಗೆಯ ನವೀಕರಣದ ಒಂದು ವರ್ಷದ ಅವಧಿ ಮುಗಿಯುತ್ತಾ ಬರುತ್ತಿದ್ದಂತೆ ಮತ್ತೆ ಎದ್ದು ಕುಳಿತಿರುವ ಪಾಲಿಕೆ ಈಗ ಪುನ: ಆರು ತಿಂಗಳು ಗುತ್ತಿಗೆ ಅವಧಿ ವಿಸ್ತರಿಸಿದೆ. ಇನ್ನು ಮತ್ತೆ ಏಳುವುದು ಆರು ತಿಂಗಳು ಬಿಟ್ಟು. ಆಂಟೋನಿ ವೇಸ್ಟ್ ಏನೂ ಕೆಲಸ ಮಾಡದೇ ತಮ್ಮ ವಾರ್ಡುಗಳಲ್ಲಿ ತ್ಯಾಜ್ಯ ಹಾಗೆ ಬಿದ್ದಿದ್ದರೂ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅರವತ್ತು ವಾರ್ಡಿನ ಒಬ್ಬ ಕಾರ್ಪೋರೇಟರ್ ಕೂಡ ಲಿಖಿತವಾಗಿ ಆಯುಕ್ತರಿಗೆ ಅಥವಾ ಮೇಯರ್ ಅವರಿಗೆ ದೂರು ಕೊಟ್ಟಿಲ್ಲ. ಇವರು ಕೊಡುವುದು ಕೂಡ ಇಲ್ಲ. ಯಾಕೆಂದರೆ ಆಂಟೋನಿ ವೇಸ್ಟ್ ಬದಲಾಗುವುದು ಯಾವ ಕಾರ್ಪೋರೇಟರ್, ಅಧಿಕಾರಿಗೂ ಇಷ್ಟ ಇಲ್ಲ. ಯಾಕೆಂದರೆ ಎಲ್ಲರಿಗೂ ಸಿಗುವ ಪ್ರಸಾದ ಸಿಗುತ್ತಲೇ ಇದೆ!
Leave A Reply