ಆಂಟೋನಿಯ ಎಂಜಿಲಿಗೆ ಪಾಲಿಕೆಯಿಂದ 6 ತಿಂಗಳ ವ್ಯಾಲಿಡಿಟಿ!
ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ಎನ್ನುವ ಕಲ್ಲಿನ ಮೇಲೆ ಎಷ್ಟು ನೀರು ಹಾಕಿದರೂ ಅಷ್ಟೇ. ಅದಕ್ಕೆ ಏನೂ ಪರಿಣಾಮ ಆಗುವುದಿಲ್ಲ. ಅದು ಈ ಹಿಂದೆ ಕನಿಷ್ಟ 50 ಶೇಕಡಾ ಕೆಲಸವನ್ನಾದರೂ ಮಾಡುತ್ತಿತ್ತು. ಈಗ 70% ಕೆಲಸವನ್ನು ಕೂಡ ಮಾಡುತ್ತಿಲ್ಲ. ಇಷ್ಟಾಗಿಯೂ ಮಂಗಳೂರು ಮಹಾನಗರ ಪಾಲಿಕೆ ಸುಮ್ಮನೆ ನಮ್ಮ ಕೋಟ್ಯಾಂತರ ರೂಪಾಯಿ ತೆರಿಗೆಯ ಹಣವನ್ನು ಅದಕ್ಕೆ ನೀಡಿ ತಾನು ಮಾತ್ರ ಸೋಬಗನಂತೆ ಸುಮ್ಮನೆ ಕುಳಿತಿದೆ. ಆದ್ದರಿಂದ ಆರು ತಿಂಗಳು ಮತ್ತೆ ಆಂಟೋನಿಗೆ ಅವಕಾಶ ಸಿಕ್ಕಿದೆ. ಆರಂಭದಲ್ಲಿ ನಮ್ಮನ್ನು ಲೂಟಲು ಏಳು ವರ್ಷ ಅವಕಾಶ ನೀಡಲಾಗಿತ್ತು. ಅದರ ನಂತರ ಒಂದು ವರ್ಷ ಹೆಚ್ಚುವರಿ ಅವಕಾಶ ನೀಡಲಾಯಿತು. ಹೆಚ್ಚುವರಿ ಅವಕಾಶ ನೀಡಿದ್ದು ಅವರು ಮಂಗಳೂರನ್ನು ಬಹಳ ಕ್ಲೀನಾಗಿ ಇಡುತ್ತಾರೆ ಎಂದಲ್ಲ. ಅವರು ನಮ್ಮ ಪಾಲಿಕೆಯ ಸದಸ್ಯರನ್ನು ಮತ್ತು ಪಾಲಿಕೆಯ ಅಧಿಕಾರಿಗಳನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಅವಕಾಶ ದೊರಕಿತ್ತು. ಯಾರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ಎನ್ನುವುದು ಪಾಲಿಕೆ ನಡೆಸಿಕೊಂಡು ಬಂದ ಸಂಪ್ರದಾಯ. ಅದೇ ಈಗ ಆಂಟೋನಿ ವಿಷಯದಲ್ಲಿ ನಡೆದುಕೊಂಡು ಬಂದಿದೆ. ಎಂಟು ವರ್ಷ ಅವಕಾಶ ಸಿಕ್ಕಿದ ನಂತರ ಮತ್ತೆ ಆಂಟೋನಿಗೆ ಇನ್ನೊಂದು ಆರು ವರ್ಷ ಅವಕಾಶ ಸಿಕ್ಕಿತು. ಅಂದರೆ ಅವರು ಸುಧಾರಿಸಿ ಒಳ್ಳೆಯ ಕೆಲಸ ಮಾಡಲು ಆರಂಭಿಸಿದರು ಎನ್ನುವ ಕಾರಣಕ್ಕೆ ಅವಕಾಶ ಕೊಟ್ಟಿದ್ದಲ್ಲ. ಅವರು ನಮ್ಮನ್ನು ಕೈ ಬಿಟ್ಟು ಹೋದರೆ ನಮ್ಮ ತಟ್ಟೆಗೆ ಅನ್ನ ಹಾಕುವವರು ಯಾರು ಎನ್ನುವ ಹೆದರಿಕೆ ಪಾಲಿಕೆಗೆ ಇದ್ದ ಕಾರಣ ಅವರನ್ನು ಬಿಟ್ಟು ಬಿಡಲು ಪಾಲಿಕೆ ಸಿದ್ಧವಿಲ್ಲ. ಹೇಗೂ ಹೋದರೆ ಜನರ ಹಣ. ಅದೇ ಬಂದರೆ ನಮ್ಮ ಜೋಬಿಗೆ ಎನ್ನುವುದು ಪಾಲಿಕೆಗೆ ಗೊತ್ತು.
ಈಗಂತೂ ಕಸದ ರಾಶಿ ಎಷ್ಟರಮಟ್ಟಿಗೆ ನಮ್ಮ ವಾರ್ಡುಗಳಲ್ಲಿ ಬಿದ್ದಿರುತ್ತದೆ ಎಂದರೆ ನಮ್ಮಲ್ಲಿ ಒಂದು ಆರೋಗ್ಯ ವಿಭಾಗ ಇದೆ ಎನ್ನುವುದು ನಂಬಬೇಕಾ, ಬಿಡಬೇಕಾ ಎನ್ನುವುದು ಗೊತ್ತಾಗುತ್ತಿಲ್ಲ. ಯಾಕೆಂದರೆ ಆ ವಿಭಾಗಕ್ಕೂ ಕೆಲವು ಅಧಿಕಾರಿಗಳಿದ್ದಾರೆ. ಅವರಿಗೂ ಕೈ ತುಂಬಾ ಸಂಬಳ ಇದೆ. ಅವರು ಕೂಡ ಬೇಕಾದಷ್ಟು “ದುಡಿಯು”ತ್ತಾರೆ. ಆದರೆ ನಮ್ಮ ವಾರ್ಡುಗಳ ಕಸ ಮಾತ್ರ ನಿತ್ಯ ಹೆಚ್ಚಾಗುತ್ತಿದೆ. ಮಣ್ಣಗುಡ್ಡೆ ವಾರ್ಡ್ ನಲ್ಲಿ ಕೆನರಾ ಉರ್ವಾ ಹೈಸ್ಕೂಲ್ ಇದೆ. ಅಲ್ಲಿ ಸುತ್ತಲೂ ಒಣ ಕಸ ತುಂಬಿ ತುಳುಕುತ್ತಾ ಇರುತ್ತದೆ. ಒಬ್ಬ ಕುರುಡ ಕೂಡ ಆ ದಾರಿಯಲ್ಲಿ ನಡೆದುಕೊಂಡು ಹೋದರೂ ಅಲ್ಲಲ್ಲಿ ಕಾಲಿಗೆ ತೊಡಗುವಷ್ಟು ಕಸ ಬಿದ್ದಿದೆ ಎಂದು ಆರಾಮವಾಗಿ ಹೇಳಬಲ್ಲ. ಆ ರಸ್ತೆಯನ್ನು ಆಂಟೋನಿಯವರು ತಿಂಗಳಿಗೆ ಒಮ್ಮೆ ಗುಡಿಸಿದರೂ ಅದು ಬಹಳ ದೊಡ್ಡ ವಿಷಯ. ತಿಂಗಳ ನಂತರ ಗುಡಿಸಿದರೂ ಅಲ್ಲಿ ಕಸದ ರಾಶಿಯನ್ನು ಅವರು ಒಟ್ಟು ಮಾಡಿ ತೆಗೆದುಕೊಂಡು ಹೋಗುವುದು ಮತ್ತೆ ಹತ್ತು ದಿನಗಳ ನಂತರ. ಹೀಗೆ ಆಗುವಾಗ ಆ ಒಟ್ಟು ಮಾಡಿದ ಕಸ ಮತ್ತೆ ಅಲ್ಲಲ್ಲಿ ಹರಡಿ ಹೊಟ್ಟೆ ಉರಿಯುತ್ತದೆ. ಯಾಕೆಂದರೆ ಇವರು ಮಾಡುವುದು ಏನೂ ಸಮಾಜ ಸೇವೆಯಲ್ಲ. ಇದಕ್ಕಾಗಿ ಒಂದೂವರೆ ಕೋಟಿ ರೂಪಾಯಿಯನ್ನು ಈ ಸಂಸ್ಥೆಗೆ ಪ್ರತಿ ತಿಂಗಳು ತೆಗೆದುಕೊಳ್ಳುತ್ತದೆ. ಆದರೆ ಈ ರಸ್ತೆಯಲ್ಲಿ ಡ್ಯೂಟಿ ಇರುವ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡೆಯುವುದರಿಂದ ಅವರ ಕಣ್ಣಿಗೆ ಇದೆಲ್ಲ ಬೀಳುವ ಚಾನ್ಸೆ ಇಲ್ಲ. ಒಂದು ವೇಳೆ ಬಿದ್ದರೂ ಅವರಿಗೆ ಒಂದೊಂದು ಎಲೆ ಕೂಡ ಒಂದೊಂದು ಐದು ನೂರು ರೂಪಾಯಿ ನೋಟಿನಂತೆ ಕಾಣುತ್ತದೆ. ಆದ್ದರಿಂದ ಅಧಿಕಾರಿಗಳು ಪ್ರೀತಿಯಿಂದ ತ್ಯಾಜ್ಯವನ್ನು ನೆಲದಿಂದ ಎತ್ತಿ ಕಣ್ಣಿಗೆ ಒತ್ತಿಕೊಳ್ಳುತ್ತಾರೆ. ಡಿವೈಡರ್ ನಲ್ಲಿರುವ ಧೂಳನ್ನು ನೋಡುವ ಅಧಿಕಾರಿಗಳು ಅದನ್ನು ಧೂಳು ಎಂದು ಅಂದುಕೊಳ್ಳುವುದಿಲ್ಲ. ಅದನ್ನು ತೆಗೆದು ಹಣೆಗೆ ಹಚ್ಚಿಕೊಳ್ಳುತ್ತಾರೆ. ಯಾಕೆಂದರೆ ಧೂಳಿನಲ್ಲಿ ಇವರಿಗೆ ಹಣ ಕಾಣುತ್ತದೆ!
Leave A Reply