ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದು ಮೀಟಿಂಗ್ ಮಾಡಲಾಗುತ್ತದೆ. ಮೇಯರ್, ಸಚೇತಕರು, ಕೆಲವು ಕಾರ್ಪೋರೇಟರ್ ಗಳು ಸೇರಿ ಮಂಗಳೂರು ನಗರಕ್ಕೆ ನೀರಿನ ಕೊರತೆ ಆಗುತ್ತಿರುವ ಬಗ್ಗೆ ಚರ್ಚಿಸುತ್ತಾರೆ. ಐದೈದು ಬಾರಿ ಗೆದ್ದಿರುವ ಈಗಿನ ಸಚೇತಕರು, ದಶಕಗಳಿಂದ ಪಾಲಿಕೆಯ ಒಳಹೊರ ಬಲ್ಲ ಈಗಿನ ಮೇಯರ್, ಹಿಂದೆ ಉಪಮೇಯರ್ ಆಗಿದ್ದು ಈಗ ಕಾರ್ಪೋರೇಟರ್ ಆಗಿರುವವರು ಎಲ್ಲರೂ ಎಷ್ಟು ಹೊತ್ತು ಮೀಟಿಂಗ್ ಮಾಡಿದರೂ ಕರೆಂಟ್, ಕಾಫಿ, ತಿಂಡಿ ವೇಸ್ಟ್ ಆಗುವುದು ಬಿಟ್ಟರೆ ಇವರಿಂದ ನೀರಿನ ಸಮಸ್ಯೆಯ ವಿಷಯದಲ್ಲಿ ಒಂದು ಹುಲ್ಲುಕಡ್ಡಿ ಅಲ್ಲಾಡಿಸಲು ಸಾಧ್ಯವಿಲ್ಲ. ಇಂತಹ ನಾಟಕಗಳನ್ನು ಪಾಲಿಕೆಯ ಅಂಗಳ ತುಂಬಾ ಕಂಡಿದೆ. ಅದಕ್ಕೆ ಯಾವ ರಾಜಕೀಯ ಪಕ್ಷದ ಪಾತ್ರಧಾರಿಗಳು ಕೂಡ ಹೊರತಲ್ಲ.
ಮಂಗಳೂರು ನಗರಕ್ಕೆ ನೀರಿಲ್ಲ ಎಂದರೆ ಅದರ ಹಿಂದಿರುವ ಕಥೆಯನ್ನು ನಾನು ಐದಾರು ವರ್ಷಗಳ ಹಿಂದೆನೆ ಇಂತಹುದೇ ಘಟನೆಗಳು ಆದಾಗ ಇದೇ ಜಾಗೃತ ಅಂಕಣದಲ್ಲಿ ಬರೆದಿದ್ದೆ. ಆ ಸಮಸ್ಯೆ ಈಗಲೂ ಇದೆ. ಹಾಗಿದ್ದ ಮೇಲೆ ಸಮಸ್ಯೆ ಪರಿಹಾರವಾಗುವುದು ಎಲ್ಲಿಂದ? ಇವರ ಬಳಿ ಕೇಳಿದ್ರೆ ನೀರು ಬರುವ ಪೈಪ್ ದಾರಿಯಲ್ಲಿ ಒಡೆದಿದೆ ಅಥವಾ ತುಂಬೆಯಲ್ಲಿ ಕರೆಂಟ್ ಇಲ್ಲ ಎನ್ನುತ್ತಾರೆ. ಪೈಪ್ ಒಡೆದು ಹೋದರೆ ಅದು ತಕ್ಷಣ ರಿಪೇರಿ ಮಾಡುವುದು ಅಷ್ಟು ಸುಲಭವಲ್ಲ. ಹಾಗಾದರೆ ಪೈಪ್ ಒಡೆಯದೇ ಇರಲು ಏನು ಮಾಡಬೇಕು? ಅದನ್ನು ಮೊದಲು ನೋಡೋಣ. ಮೊದಲನೇಯದಾಗಿ ಪೈಪು ಒಡೆದರೂ ಎಲ್ಲಿ ಒಡೆದಿದೆ ಎಂದು ಇವರಿಗೆ ಗೊತ್ತಾಗಲು ಸಾಕಷ್ಟು ಕಾಲಾವಕಾಶ ಹಿಡಿಯುತ್ತೆ. ತುಂಬೆಯಿಂದ ಪಡೀಲ್ ತನಕ ನೀರಿನ ಪೈಪ್ ಇರುವ ಜಾಗಗಳನ್ನು ಪಾಲಿಕೆ ಒತ್ತುವರಿ ಮಾಡಿಕೊಂಡಿದೆ. ಆದರೆ ರಸ್ತೆಯ ಬದಿಯಲ್ಲಿರುವ ಈ ಬೃಹತ್ ಪೈಪುಗಳ ಮತ್ತೊಂದು ಮಗ್ಗುಲಿನಲ್ಲಿ ಅನೇಕ ಖಾಸಗಿ ಜಾಗಗಳು ಇವೆ. ರಸ್ತೆಯಿಂದ ಆ ಜಾಗಗಳಿಗೆ ಲಾರಿ, ಟಿಪ್ಪರ್ ಗಳು ಹೋಗಬೇಕಾದರೆ ಈ ಪೈಪುಗಳನ್ನು ಹಾದು ಹೋಗಬೇಕು. ಅದಕ್ಕಾಗಿ ಈ ಪೈಪುಗಳ ಮೇಲೆ ಮಣ್ಣು ಹಾಕಿ ಅದನ್ನು ಮುಚ್ಚಲಾಗುತ್ತೆ. ಈಗ ಸರಾಸರಿ 25 ಟನ್ ಭಾರ ಇರುವ ಟಿಪ್ಪರ್ ಗಳು ನಿತ್ಯ ಆ ಪೈಪುಗಳ ಮೇಲೆ ಹೋದರೆ ಏನಾಗುತ್ತದೆ? ಆ ಪೈಪುಗಳಿಗೆ ಬಿರುಕು ಬೀಳುತ್ತದೆ. ಆಗ ನೀರು ಪೋಲಾಗಲು ಶುರುವಾಗುತ್ತದೆ. ಹೆಚ್ಚೆಚ್ಚು ನೀರು ಪೈಪುಗಳಿಂದ ಲೀಕ್ ಆಗುತ್ತಾ ಹೋದರೆ ಮಂಗಳೂರಿಗೆ ಬರುವ ನೀರಿನ ಸಂಗ್ರಹ ಕಡಿಮೆಯಾಗುತ್ತದೆ. ಯಾವಾಗ ಪಣಂಬೂರು, ಪಡೀಲ್, ಬೆಂದೂರ್ ನಲ್ಲಿರುವ ಪಂಪ್ ಹೌಸ್ ಗಳಿಗೆ ನೀರು ಬರುವುದು ಕಡಿಮೆಯಾಗುತ್ತೋ ಅಲ್ಲಿಂದ ಸುರತ್ಕಲ್, ಕಾವೂರು, ಕುಳೂರು, ಉರ್ವಾ ಸ್ಟೋರ್, ಲೇಡಿಹಿಲ್, ಲಾಲ್ ಭಾಗ್, ಪುರಭವನದ ಬಳಿ ಇರುವ ಬೃಹತ್ ನೀರಿನ ಸಂಗ್ರಹಗಾರಗಳಿಗೆ ನೀರು ಬರುವುದು ನಿಂತು ಹೋಗುತ್ತದೆ. ಇದರಿಂದ ಮಂಗಳೂರಿನಲ್ಲಿ ನೀರಿಲ್ಲ ಎನ್ನುವ ಪತ್ರಿಕಾ ಪ್ರಕಟನೆಯನ್ನು ನಾವು ಓದಿ ಸುಮ್ಮನಾಗಬೇಕಾಗುತ್ತದೆ.
ಹಾಗಾದರೆ ಇದಕ್ಕೆ ಪರಿಹಾರ ಏನು? ಮೊದಲನೇಯದಾಗಿ ಎಲ್ಲೆಲ್ಲಿ ನಮ್ಮ ಸರಕಾರಿ ನೀರಿನ ಪೈಪುಗಳ ಮೇಲೆ ಮಣ್ಣಿನ ರಾಶಿ ಹಾಕಿ ಮುಚ್ಚಿ ಅದರ ಮೇಲೆ ಟಿಪ್ಪರ್ ಓಡಾಡುವಂತಹ ಕೆಲಸ ಎಲ್ಲಿ ಆಗಿದೆಯೋ ಅಂತಹ ಜಮೀನಿನ ಮಾಲೀಕರಿಗೆ ಪಾಲಿಕೆ ಕಡೆಯಿಂದ ನೋಟಿಸು ಕೊಡಬೇಕು. ಅವರಿಗೆ ಮಣ್ಣು ತೆಗೆಸಿ ನಿಮ್ಮ ಜಮೀನಿಗೆ ಹೋಗಲು ರಸ್ತೆಯಿಂದ ಒಂದು ಕಿರು ಕಾಂಕ್ರೀಟ್ ಸೇತುವೆಯನ್ನು ಕಟ್ಟಲು ಸೂಚಿಸಬೇಕು. ಹಾಗಾದರೆ ಇಂತಹ ಪ್ರಯತ್ನ ಇಲ್ಲಿಯ ತನಕ ಆಗಿಲ್ವಾ? ಆಗಿದೆ. ಹಿಂದೆ ಒಬ್ಬ ಮಹಿಳಾ ಅಧಿಕಾರಿ ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ರು. ಅವರ ಹೆಸರು ಪ್ರಮೀಳಾ. ಸಹಾಯಕ ಕಂದಾಯ ಆಯುಕ್ತರಾಗಿ ಸೇವೆಯಲ್ಲಿದ್ರು. ಇವರು ಪ್ರಭಾವಿಗಳಿಗೆ ನೋಟಿಸು ನೀಡಿ ಮಣ್ಣು ತೆಗೆಸಲು ಸೂಚಿಸಿದ್ದರು. ಆದರೆ ಆಗಿನ ಕಾಂಗ್ರೆಸ್ ನೇತೃತ್ವದ ಪಾಲಿಕೆ ಆಡಳಿತ ಅವರನ್ನು ಅದರ ಬಳಿಕ ತುಂಬಾ ದಿನ ಮಂಗಳೂರಿನಲ್ಲಿ ಇರಲು ಬಿಡಲಿಲ್ಲ. ಅವರನ್ನು ಹಟಾತ್ತನೆ ವರ್ಗಾಯಿಸಲಾಗಿತ್ತು. ನಂತರ ಯಾರೂ ಅಂತಹ ಸಾಹಸಕ್ಕೆ ಕೈ ಹಾಕಲಿಲ್ಲ. ನಿಮಗೆ ನೀರು, ಶುದ್ಧ ಗಾಳಿ ಇಲ್ಲದ ಸ್ಥಳಕ್ಕೆ ಟ್ರಾನ್ಸಫರ್ ಬೇಕಾದ್ರೆ ಮಾತ್ರ ಹೀಗೆ ಮಾಡಿ ಎನ್ನುವ ಸಂದೇಶ ರವಾನೆ ಮಾಡಲಾಗಿತ್ತು. ಈ ಖಾಸಗಿ ಜಮೀನಿನ ಮಾಲೀಕರು ಎಷ್ಟು ಪ್ರಭಾವಿಗಳು ಎಂದು ಗೊತ್ತಿದ್ದ ಅಧಿಕಾರಿಗಳು ಮಂಗಳೂರಿನ ಜನ ನೀರು ಇಲ್ಲದೆ ಬೇಕಾದರೂ ಸಾಯಲಿ, ಆದರೆ ನಾವು ಏನೂ ಮಾಡುವದು ಬೇಡಾ ಎಂದು ತೆಪ್ಪಗೆ ಕುಳಿತುಕೊಂಡಿದ್ದಾರೆ. ಜನಪ್ರತಿನಿಧಿಗಳು ಮೀಟಿಂಗ್ ಮಾಡುತ್ತಾ ಯೋಚಿಸುತ್ತಿದ್ದಾರೆ. ಅಷ್ಟರಲ್ಲಿ ಮತ್ತೊಂದು ಪೈಪ್ ಬಿರುಕು ಬೀಡುತ್ತದೆ. ಪಾಲಿಕೆಯಲ್ಲಿ ಎಲ್ಲರ ಮುಖದಲ್ಲಿ ಸಣ್ಣನೆ ನಗು ಸುಳಿಯುತ್ತದೆ. ಯಾಕೆಂದರೆ ನಗರಕ್ಕೆ ನೀರಿಲ್ಲ ಎಂದ ಕೂಡಲೇ ಸೀದಾ ಟ್ಯಾಂಕರಿಗೆ ಫೋನ್ ಮಾಡಿ ಇಂತಿಷ್ಟು ನೀರು ಹಾಕಿಸಲು ಹೊರಡಿ ಎಂದು ಹೇಳಲಾಗುತ್ತದೆ. ಈ ಟ್ಯಾಂಕರಿದ್ದು ಮತ್ತೊಂದು ದಂಧೆ. ಇಲ್ಲಿ ನಾಲ್ಕು ನೀರಿನ ಟ್ಯಾಂಕರ್ ಹೋದರೆ ನಲ್ವತ್ತು ಹೋಯಿತು ಎನ್ನುವವರಿದ್ದಾರೆ. ಆದ್ದರಿಂದ ನಗರಕ್ಕೆ ನೀರಿಲ್ಲ ಎನ್ನುವುದೇ ಹಲವರ ಪಾಲಿಗೆ ಲಾಭದಾಯಕ ಸಂತಸ. ಒಟ್ಟಿನಲ್ಲಿ ಇವರು ನೀರಿನ ಪೈಪುಗಳ ಮಣ್ಣು ತೆಗೆಯಲ್ಲ ಎನ್ನುವುದು ಯಾಕೆಂದು ಅರ್ಥವಾಯಿತಲ್ಲ!
Leave A Reply