ಬಿಬಿಸಿಗೆ ಬಿಸಿ ಮುಟ್ಟಿಸಲು ಕಾರಣ ಇತ್ತು!
ಅಂತರಾಷ್ಟ್ರೀಯ ವಾಹಿನಿ ಬ್ರಿಟಿಷ್ ಬ್ರಾಡಕಾಸ್ಟಿಂಗ್ ಕಾರ್ಪೋರೇಶನ್ ಅಥವಾ ಚಿಕ್ಕದಾಗಿ ಬಿಬಿಸಿ ಎಂದು ಕರೆಯಲ್ಪಡುವ ವಾಹಿನಿಯ ಮುಂಬೈ ಮತ್ತು ದೆಹಲಿ ಕಚೇರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅನೇಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಇದನ್ನು ಕಾಂಗ್ರೆಸ್ಸಿಗರು ದಾಳಿ ಎಂದಿದ್ದರೆ, ಐಟಿ ಅಧಿಕಾರಿಗಳು ಸರ್ವೇ ಎಂದಿದ್ದಾರೆ. ಕಾಂಗ್ರೆಸ್ಸಿಗರು ಇದು ವಿನಾಶಕಾಲೇ ವಿಪರೀತ ಬುದ್ಧಿ ಎಂದರೆ ಭಾರತೀಯ ಜನತಾ ಪಾರ್ಟಿಯವರು ಕಾಂಗ್ರೆಸ್ಸಿಗೆ ಹಾಗೆ ಹೇಳುವ ನೈತಿಕತೆ ಇಲ್ಲ ಎಂದಿದ್ದಾರೆ. ಇದು ರೇಡ್ ಅಥವಾ ಸರ್ವೇ ಅಥವಾ ಹೀಗೆ ಭೇಟಿ ಏನೇ ಇರಲಿ ತಾವು ತಪ್ಪೇ ಮಾಡದಿದ್ರೆ ಬಿಬಿಸಿಯವರು ಹೆದರಿಕೊಳ್ಳುವ ಆತಂಕ ಇಲ್ಲ. ಒಂದು ವೇಳೆ ಇದು ದಾಳಿಯೇ ಎಂದಾಗಿದ್ದರೂ ಕಾಂಗ್ರೆಸ್ಸಿನ ಜೈರಾಮ್ ರಮೇಶ್ ಅವರು ರಾಹುಲ್ ಗಾಂಧಿಯ ಗಡ್ಡಕ್ಕೆ ಬೆಂಕಿ ಬಿದ್ದಂತೆ ವರ್ತಿಸಬೇಕಾಗಿಲ್ಲ. ಇದು ಆದಾಯ ಇಲಾಖೆಯ ದಿನನಿತ್ಯದ ಕರ್ತವ್ಯಗಳಲ್ಲಿ ಹತ್ತರಲ್ಲಿ ಒಂದು ಎಂದು ಅಂದುಕೊಳ್ಳಬೇಕೆ ವಿನ: ಇದಕ್ಕೆ ವಿಪರೀತ ಅರ್ಥ ಕೊಡುವ ಅಗತ್ಯ ಇಲ್ಲ. ಆದರೆ ಏನೇ ಇದ್ದರೂ ಐಟಿ ಅಧಿಕಾರಿಗಳು ಬಿಬಿಸಿ ಕಚೇರಿಯ ಒಳಗೆ ಕಾಲಿಟ್ಟ ಸಮಯ ಮಾತ್ರ ಇಷ್ಟೆಲ್ಲಾ ಆವಾಂತರಕ್ಕೆ ಕಾರಣವಾಗಿದೆ ಎನ್ನುವುದು ಮಾತ್ರ ನಿಜ.
ಸದ್ಯ ಬಿಬಿಸಿಯವರು ಮೋದಿಯವರ ವಿರುದ್ಧ ಅಪಪ್ರಚಾರ ಮಾಡಲು ಉದ್ದೇಶಿಸಿದಂತೆ ಮೇಲ್ನೋಟಕ್ಕೆ ಸ್ಪಷ್ಟವಾಗಿರುವ ಗೋಧ್ರಾ ನಂತರದ ಗುಜರಾತ್ ಘಟನೆಗಳನ್ನು ಕ್ರೋಢಿಕರಿಸಿ ಒಂದು ಡಾಕ್ಯುಮೆಂಟರಿ ಬಿಡುಗಡೆಗೊಳಿಸಿದ್ದರು. ಇದು ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಹೊಸ ಅಸ್ತ್ರದಂತೆ ಕಾಣಿಸಿದ್ದು ನಿಜ. ಆ ಬಳಿಕ ಬಿಬಿಸಿಯನ್ನು ತಮ್ಮ ಮನೆಯ ಚಾನೆಲ್ ಎಂದೇ ಕಾಂಗ್ರೆಸ್ಸಿಗರು ಪರಿಗಣಿಸಿದ್ದರು. ಹೀಗಿರುವಾಗಲೇ ಐಟಿ ಸರ್ವೇ, ದಾಳಿ, ಭೇಟಿಯಾಗಿರುವುದು ಕಾಂಗ್ರೆಸ್ಸಿಗರಿಗೆ ಮಾತನಾಡಲು ಒಂದು ಹೊಸ ವಿಷಯ ಸಿಕ್ಕಂತೆ ಆಗಿದೆ. ಅಷ್ಟಕ್ಕೂ ಐಟಿ ಮತ್ತು ಬಿಬಿಸಿಗೆ ಸಂಬಂಧ ಏನು?
ನಿಮಗೆ ಇದನ್ನು ಸುಲಭವಾದ ಉದಾಹರಣೆಯ ಮೂಲಕ ತಿಳಿಸಲು ಪ್ರಯತ್ನಿಸುತ್ತೇನೆ. ಎ ಮತ್ತು ಬಿ ಎಂಬ ಇಬ್ಬರು ಒಂದು ಉದ್ದಿಮೆಯನ್ನು ನಡೆಸುತ್ತಿದ್ದಾರೆ. ಅದರಲ್ಲಿ ಎ ಹಾಂಕಾಂಗ್ ನಲ್ಲಿ ಕುಳಿತು ಒಂದು ಗಡಿಯಾರವನ್ನು ತಯಾರಿಸುತ್ತಾನೆ. ಅದನ್ನು ಮಲೇಶಿಯಾದಲ್ಲಿ ಕುಳಿತು ಬಿ ಒಂದು ನಿರ್ದಿಷ್ಟ ಮೊತ್ತಕ್ಕೆ ಮಾರುತ್ತಾನೆ. ಇವರಿಬ್ಬರ ಮೇಲಾಧಿಕಾರಿ ಸಿ ಎಂಬುವನು ಚೀನಾದಲ್ಲಿ ಕುಳಿತಿದ್ದಾನೆ. ಅವನಿಗೆ ಎ ಎಷ್ಟು ಮೊತ್ತಕ್ಕೆ ಬಿ ಗೆ ವಸ್ತು ಮಾರಿದ್ದಾನೆ ಅಥವಾ ಬಿ ಎಷ್ಟು ರೇಟಿಗೆ ಅದನ್ನು ಖರೀದಿಸಿ ಎಷ್ಟು ಲಾಭ ಇಟ್ಟು ಜನರಿಗೆ ಮಾರಿದ್ದಾನೆ ಎನ್ನುವುದು ಮುಖ್ಯವಾಗಿರುವುದಿಲ್ಲ. ಒಂದು ವೇಳೆ ಎ ಒಂದು ಗಡಿಯಾರವನ್ನು ಒಂದು ಸಾವಿರಕ್ಕೆ ಬಿ ಗೆ ನೀಡಿ ಬಿ ಅದನ್ನು ಎರಡು ಸಾವಿರಕ್ಕೆ ಮಾರಿದರೆ ಬಿ ಗೆ ಒಂದು ಸಾವಿರ ಲಾಭ. ಅದೇ ಎ ಒಂದು ಗಡಿಯಾರವನ್ನು ಬಿ ಗೆ ಎಂಟು ನೂರಕ್ಕೆ ಮಾಡಿ ಬಿ ಅದನ್ನು ಒಂದೂವರೆ ಸಾವಿರಕ್ಕೆ ಮಾರಿದರೆ ಬಿ ಗೆ ಅಲ್ಲಿ ಎಳು ನೂರು ರೂಪಾಯಿ ಲಾಭ. ಎ ಕಡಿಮೆಗೆ ನೀಡಿ ಬಿ ಅದನ್ನು ಹೆಚ್ಚಿಗೆ ಮಾರಿದರೆ ಬಿ ಹೆಚ್ಚು ಲಾಭ ಮಾಡಿದರೂ ಅಥವಾ ಎ ಹೆಚ್ಚಿಗೆ ನೀಡಿ ಬಿ ಅದನ್ನು ಕಡಿಮೆಗೆ ಮಾರಿದರೆ ಆಗ ಎ ಗೆ ಲಾಭ ಆದರೂ ಕೊನೆಗೆ ಸಿ ಗೆ ಅದು ಏನೂ ವ್ಯತ್ಯಾಸವಾಗುವುದಿಲ್ಲ. ಅದೇ ಸಿ ಯಾವ ದೇಶದಲ್ಲಿ ಎಷ್ಟು ಟ್ಯಾಕ್ಸ್ ಉಳಿಸಲು ಏನು ಮಾಡಬೇಕು ಎಂದು ಯೋಚಿಸಿ ಉತ್ಪಾದನಾ ಸ್ಥಳ ಇರುವ ದೇಶದಲ್ಲಿ ಟ್ಯಾಕ್ಸ್ ಕಡಿಮೆ ಇದ್ದರೆ ಅಲ್ಲಿ ಉತ್ಪಾದನೆಯನ್ನು ಹೆಚ್ಚು ಮಾಡಿ ಮಾರುವ ದೇಶದಲ್ಲಿ ಮಾರುವ ಟ್ಯಾಕ್ಸ್ ಹೆಚ್ಚಿದ್ದರೆ ಅಲ್ಲಿ ಟ್ಯಾಕ್ಸ್ ಉಳಿಸಲು ಏನು ಮಾಡಬೇಕು ಎಂದು ಯೋಚಿಸಿ ಟ್ಯಾಕ್ಸ್ ಉಳಿಸಲು ವಾಮಮಾರ್ಗ ಹಿಡಿದರೆ ಆಗ ಅದನ್ನು ಟ್ರಾನ್ಸಫರ್ ಪ್ರೈಸಿಂಗ್ ಎನ್ನುತ್ತಾರೆ. ಅಂದರೆ ಇಲ್ಲಿ ಕೊಡಬೇಕಾದ ತೆರಿಗೆಯನ್ನು ಉಳಿಸಿ ಅದನ್ನು ಬೇರೆ ದೇಶಕ್ಕೆ ವರ್ಗಾಯಿಸುವುದು. ಇಲ್ಲಿನ ಎಲ್ಲವನ್ನು ಬಳಸುವುದು ಮತ್ತು ತೆರಿಗೆಯನ್ನು ಉಳಿಸಲು ಏನು ಮಾಡಬೇಕೋ ಅದನ್ನು ಮಾಡುವುದು. ಹೀಗೆ ಬಿಬಿಸಿ ಮಾಡುತ್ತಿತ್ತಾ ಎಂದು ಪರಿಶೀಲಿಸಲು ಐಟಿ ಅಧಿಕಾರಿಗಳು ಅಲ್ಲಿ ತೆರಳಿದ್ದಾರೆ. ಅಲ್ಲಿನ ಸಿಬ್ಬಂದಿಗಳ ಫೋನುಗಳನ್ನು ವಶಪಡಿಸಿ ಮುಂದುವರೆದಿರುವುದರಿಂದ ಇದನ್ನು ದಾಳಿ ಎಂದು ಬಿಂಬಿಸಲಾಗಿದೆ. ಈಗ ನಮ್ಮ ದೇಶಕ್ಕೆ ಬರುವ ಆದಾಯ ಸೋರಿ ಹೋಗುತ್ತಿದ್ದರೆ ಅದನ್ನು ತಡೆಯಬೇಕಾಗಿರುವುದು ಆದಾಯ ತೆರಿಗೆ ಇಲಾಖೆಯ ಆದ್ಯ ಕರ್ತವ್ಯ. ಅದನ್ನು ಅವರು ಮಾಡಿದ್ದಾರೆ. ಅದನ್ನು ತಪ್ಪು ಎಂದು ಕಾಂಗ್ರೆಸ್ ಯಾಕೆ ಮತ್ತು ಹೇಗೆ ಹೇಳಲು ಸಾಧ್ಯ?
ಇನ್ನು ಸೈದ್ಧಾಂತಿಕ ವಿಷಯಕ್ಕೆ ಬರೋಣ. ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಇದೇ ಬಿಬಿಸಿಯನ್ನು ಅವರು ಬ್ಯಾನ್ ಮಾಡಿದ್ದರು. ಅದಕ್ಕೆ ಕಾರಣಗಳು ಏನೇ ಇರಬಹುದು. ಅದು ಬಿಡಿ, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಇಂದಿರಾಗಾಂಧಿಯವರು ಹೇಗೆ ಮಾಧ್ಯಮಗಳನ್ನು ನಡೆಸಿಕೊಂಡರು ಎನ್ನುವುದನ್ನು ಪ್ರಪಂಚ ನೋಡಿದೆ. ಇಂದಿರಾ ಗಾಂಧಿ ಬಿಬಿಸಿಯ ವಿರುದ್ಧ ಕ್ರಮ ತೆಗೆದುಕೊಂಡರೆ ಪರವಾಗಿಲ್ವಾ? ಐಟಿ ಅಧಿಕಾರಿಗಳು ಹೋಗಿ ಪರಿಶೀಲನೆ ಮಾಡಿದರೆ ಅದು ಅಪರಾಧವೇ?
ಇಲ್ಲಿ ಈಗ ಮೋದಿ ವಿರುದ್ಧ ಅಪಪ್ರಚಾರದ ಡಾಕ್ಯುಮೆಂಟರಿ ಮಾಡಿರುವ ವಿಷಯದಲ್ಲಿ ಕೇಂದ್ರ ಸರಕಾರ ದ್ವೇಷದ ಆಟ ಆಡಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಅದರ ಸಮಾನ ಮನಸ್ಕ ಪಕ್ಷಗಳು ಬಿಂಬಿಸುತ್ತಿರುವುದನ್ನು ಒಂದಿಷ್ಟು ಜನ ನಿಜವೆಂದು ನಂಬಬಹುದು. ಹಾಗಾದರೆ ಬಿಬಿಸಿ ತೆರಿಗೆಯ ವಂಚನೆ ಮಾಡುವುದನ್ನು ಹಾಗೆ ಬಿಟ್ಟು ಬಿಡಬೇಕು ಎಂದು ಅವರ ಮಾತಿನ ಅರ್ಥವೇ?
Leave A Reply