ಇನ್ನು ಪ್ರಕರಣಗಳು ಕಾಲಮಿತಿಯೊಳಗೆ ಇತ್ಯರ್ಥವಾಗಲಿದೆ!
ಇಂಡಿಯನ್ ಪಿನಲ್ ಕೋಡ್ ಇನ್ನು ಮುಂದೆ ಭಾರತೀಯ ನ್ಯಾಯ ಸಂಹಿತೆ ಮಸೂದೆ 2023 ಮತ್ತು ಕ್ರಿಮಿನಲ್ ಪ್ರೋಸಿಜರ್ ಕೋಡ್ ಇನ್ನು ಮುಂದೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಎವಿಡೆನ್ಸ್ ಆಕ್ಟ್ ಇನ್ನು ಮುಂದೆ ಭಾರತೀಯ ಸಾಕ್ಷ್ಯ ಬಿಲ್ 2023 ಎಂದು ಹೆಸರು ಬದಲಾಗುವುದರೊಂದಿಗೆ ಕೆಲವು ಅಗತ್ಯ ಮಾರ್ಪಾಡುಗಳನ್ನು ಮಾಡಲು ಕೇಂದ್ರ ಸರಕಾರ ಮುಂದಾಗಿದೆ.
ಇನ್ನು ಮುಂದೆ ಪ್ರತಿ ಪ್ರಕರಣಗಳು ಇಂತಿಷ್ಟೇ ಸಮಯದ ಒಳಗೆ ಇತ್ಯರ್ಥವಾಗಬೇಕು ಎನ್ನುವ ನಿಯಮವನ್ನು ಹೊಸ ಕಾನೂನಿನಲ್ಲಿ ತರಲು ಇದರಲ್ಲಿ ಚಿಂತನೆ ನಡೆದಿದೆ. ಇಲ್ಲಿ ತನಕ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬ್ರಿಟಿಷರು ಅಂದು ಬಿಟ್ಟು ಹೋಗಿದ್ದ ಮೆಕಾಲೆ ಕಾನೂನುಗಳನ್ನೇ ಪಾಲಿಸಿಕೊಂಡು ಬರಲಾಗುತ್ತಿತ್ತು. ಇದರಿಂದ ಒಂದೊಂದು ಪ್ರಕರಣ ಕೂಡ ಹತ್ತಾರು ವರ್ಷಗಳ ತನಕ ಇತ್ಯರ್ಥವಾಗದೇ ವಾದಿ, ಪ್ರತಿವಾದಿ, ನ್ಯಾಯಾಲಯ ಎಲ್ಲರ ಸಮಯ ವ್ಯರ್ಥವಾಗುತ್ತಿತ್ತು. ಇತ್ತ ಯಾರು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದರೋ ಅವರಿಗೆ ನ್ಯಾಯ ಮರೀಚಿಕೆ ಅನಿಸುತ್ತಿತ್ತು. ಯಾವುದೇ ಪ್ರಕರಣ ಮುಗಿಯಲು ಸಮಯದ ಚೌಕಟ್ಟು ಇರಲಿಲ್ಲ. ಇಂದು ಮುಗಿಯುತ್ತೆ, ನಾಳೆ ಮುಗಿಯುತ್ತೆ ಎಂದುಕೊಂಡವರು ಕೊನೆಗೆ ಎಂದು ಮುಗಿಯುತ್ತೆ ಎನ್ನುವ ಯಕ್ಷ ಪ್ರಶ್ನೆಯನ್ನು ತಮ್ಮೊಳಗೆ ಕೇಳಬೇಕಾಗುತ್ತಿತ್ತು. ಕೊನೆಗೂ ಈಗ ಕೇಂದ್ರ ಸರಕಾರ ಮಂಡಿಸಿರುವ ಕರಡು ಮಸೂದೆಯಲ್ಲಿ ಪ್ರಕರಣಗಳು ನಿರ್ದಿಷ್ಟ
ಅವಧಿಯೊಳಗೆ ಮುಗಿಸುವ ಕಾನೂನನ್ನು ಕೂಡ ಅಳವಡಿಸಲಾಗಿದೆ. ಇದರಿಂದ ನ್ಯಾಯ ಇಂತಿಷ್ಟೇ ಕಾಲದೊಳಗೆ ಸಿಗುತ್ತದೆ ಎನ್ನುವ ಆಶಾವಾದ ಎಲ್ಲರಲ್ಲಿ ಮೊಳಗಲಿದೆ. ಆದರೆ ಯಾವ ರೀತಿಯ ಪ್ರಕರಣ ಎಷ್ಟು ಕಾಲದೊಳಗೆ ಮುಗಿಸಬೇಕು ಎನ್ನುವ ಕಾಲಮಿತಿಯ ಬಗ್ಗೆ ಸ್ಥಾಯಿ ಸಮಿತಿ ಚರ್ಚೆ ನಡೆಸಿ ನಂತರ ಕೊನೆಗೆ ಅಂತಿಮ ನಿರ್ಧಾರಕ್ಕೆ ಬರಲಿದೆ. ಅದಕ್ಕೆ ಕಾನೂನು ತಜ್ಞರ ಸಲಹೆ ಕೂಡ ಪಡೆಯುವ ಅವಶ್ಯಕತೆ ಇದೆ. ಇಲ್ಲಿಯ ತನಕ ಎಷ್ಟೋ ಪ್ರಕರಣಗಳ ತೀರ್ಪು ಹೊರಗೆ ಬರುವಾಗ ನ್ಯಾಯವನ್ನು ಅಪೇಕ್ಷಿಸುತ್ತಿದ್ದವರೇ ವಯೋಸಹಜ ಕಾರಣದಿಂದ ಈ ಪ್ರಪಂಚದಲ್ಲಿ ಬದುಕಿ ಉಳಿಯುತ್ತಿರಲಿಲ್ಲ. ಹೊಸ ಕಾನೂನು ಜಾರಿಗೆ ಬಂದ ನಂತರ ಪರಿಸ್ಥಿತಿ ಬದಲಾಗಲಿದೆ.
Leave A Reply