ಯಾವ ದಾರಿಯಲ್ಲಿ ಹೋದರೆ ಸೌಜನ್ಯ ಪ್ರಕರಣಕ್ಕೆ ನ್ಯಾಯ?
ಎಲ್ಲಾ ಪ್ರಕರಣಗಳಲ್ಲಿಯೂ ಕ್ರೈಂ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಥವಾ ಸಿಬಿಐ ಮಾಡುವ ತನಿಖೆಯಲ್ಲಿ ನೈಜ ಆರೋಪಿಗಳನ್ನೇ ಹಿಡಿಯಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಿಬಿಐ ಎಂದರೆ ಅವರೇನೂ ಸೂಪರ್ ಪವರ್ ಗಳಲ್ಲ. ಪೊಲೀಸ್ ಇಲಾಖೆಯಲ್ಲಿಯೇ ಕೆಲವು ಅಧಿಕಾರಿಗಳನ್ನು ಅದಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಭಟ್ಕಳದ ಭಾರತೀಯ ಜನತಾ ಪಾರ್ಟಿಯ ಮುಖಂಡ, ವೈದ್ಯ, ಶಾಸಕ ಡಾ.ಚಿತ್ತರಂಜನ್ ಅವರಿಂದ ಹಿಡಿದು ಬೆಳ್ತಂಗಡಿಯ ಸೌಜನ್ಯ ತನಕ ಸಿಬಿಐ ಕರ್ನಾಟಕದಲ್ಲಿ ಹಲವು ಪ್ರಕರಣಗಳನ್ನು ಎತ್ತಿಕೊಂಡಿದೆ. ಆದರೆ ಎಲ್ಲದರಲ್ಲಿಯೂ ಆರೋಪಿಗಳ ಪತ್ತೆಯಾಗಿ ಕೇಸ್ ದಡ ಸೇರಿದೆ ಎಂದಲ್ಲ. 1996 ರಲ್ಲಿ ಡಾ. ಚಿತ್ತರಂಜನ್ ಅವರನ್ನು ಅವರದ್ದೇ ಮನೆಯ ಒಳಗೆ ಶೂಟೌಟ್ ಮಾಡಿದ ಪ್ರಕರಣದ ಆರೋಪಿ ಇಲ್ಲಿಯತನಕ ಹೇಗೆ ಸಿಗಲಿಲ್ಲವೋ ಹಾಗೇ 11 ವರ್ಷಗಳ ಹಿಂದೆ ಅತ್ಯಾಚಾರ ಆಗಿ ಕೊಲೆಯಾದಂತಹ ಸೌಜನ್ಯ ಪ್ರಕರಣದ ಆರೋಪಿ ಯಾರೆಂದು ಇಲ್ಲಿಯ ತನಕ ಯಾರಿಗೂ ಗೊತ್ತಾಗಿಲ್ಲ. ಹಾಗಾದರೆ ಸಿಬಿಐ ತನ್ನ ತನಿಖೆಯಲ್ಲಿ ಎಡವಿತಾ? 2013 ನವೆಂಬರ್ ನಲ್ಲಿ ಈ ಪ್ರಕರಣವನ್ನು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರೇ ಸಿಬಿಐಗೆ ನೀಡಿದ್ದರು. ಸಿಬಿಐಗೆ ಕೊಡಬೇಕು ಎನ್ನುವ ಹೋರಾಟ ತಾರಕಕ್ಕೆ ಏರಿದಾಗ ಅವರು ಸಿಬಿಐಗೆ ನೀಡಿ ತನಿಖೆಗೆ ಸೂಚಿಸಿದ್ದಾರೆ. ಅದರ ನಂತರ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಇತಿಹಾಸ ಪುನರಾವರ್ತನೆಯಾಗಿದೆ. ಸಿದ್ಧರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಈಗ ಮತ್ತೆ ಸೌಜನ್ಯ ಪ್ರಕರಣ ಮುನ್ನಲೆಗೆ ಬಂದಿದೆ. ಮರು ತನಿಖೆ ಮಾಡಲು ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದೆ.
ಹಾಗಾದರೆ ಈಗ ಸಿದ್ಧರಾಮಯ್ಯನವರು ವಿಶೇಷ ತನಿಖಾ ದಳಕ್ಕೆ ಪ್ರಕರಣ ಕೊಡಬೇಕಾಗುತ್ತದೆಯಾ?
ಭಾರತೀಯ ಕಾನೂನಿನಲ್ಲಿ ವಿಷಯ ಹೇಗಿದೆ ಎಂದರೆ ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪರವಾಗಿಲ್ಲ, ಒಬ್ಬ ನಿರ್ದೋಷಿಗೆ ಶಿಕ್ಷೆಯಾಗಬಾರದು. ಇದು ಇದರಲ್ಲಿಯೂ ಮುಂದುವರೆದಿದೆ. ಹಾಗಾದರೆ ಈ ಪ್ರಕರಣ ನೈಜ ಆರೋಪಿಗಳು ತಪ್ಪಿಸಿಕೊಂಡರಾ ಅಥವಾ ನಿರ್ದೋಷಿ ಎಂದು ಬಿಡುಗಡೆಯಾಗಿರುವ ಆರೋಪಿ ಮೇಲಿನ ಆರೋಪಗಳು ಸಾಬೀತುಪಡಿಸಲು ಸಾಧ್ಯವಾಗಲಿಲ್ಲವಾ? ಅಥವಾ ಆ ಹೆಣ್ಣುಮಗಳ ಪೋಷಕರು ಆರೋಪಿಸುವ ವ್ಯಕ್ತಿಗಳ ಮೇಲೆ ಆರೋಪ ಧೃಡವಾಗಿಲ್ಲವಾ? ನಮ್ಮ ಕಾನೂನು ಹೇಗಿದೆ ಎಂದರೆ ಇಂತಿಂತಹ ವ್ಯಕ್ತಿಯೇ ಇಂತಿಂತಹ ದುಷ್ಕತ್ಯ ಮಾಡಿದ್ದಾನೆ ಎಂದು ಎಲ್ಲವೂ ಗೊತ್ತಾದರೂ ನ್ಯಾಯಾಲಯ ಒಪ್ಪತಕ್ಕಂತಹ ಸಾಕ್ಷಿಗಳು ಇರದೇ ಇದ್ದ ಪಕ್ಷದಲ್ಲಿ ಆ ಆರೋಪಿಗೂ ಶಿಕ್ಷೆ ಆಗಲ್ಲ. ಇಲ್ಲಿ ಕೂಡ ಸಂತೋಷ್ ರಾವ್ ತಾನು ಕೃತ್ಯ ಮಾಡಿಲ್ಲ ಎಂದು ಹೇಳಿಲ್ಲ. ಆದರೂ ಆತನ ವಿರುದ್ಧ ಆರೋಪ ಸಾಬೀತುಪಡಿಸುವಂತಹ ಸಾಕ್ಷ್ಯ ಸಿಕ್ಕಿಲ್ಲ. ಹಾಗಾದರೆ 11 ವರ್ಷಗಳ ಬಳಿಕ ಆ ಪ್ರಕರಣದಲ್ಲಿ ಎಲ್ಲಿಂದ ತನಿಖೆ ನಡೆಸಿದರೆ ನೈಜ ಆರೋಪಿಗಳ ಪತ್ತೆಯಾಗುತ್ತದೆ ಎನ್ನುವುದು ಈಗ ಸರಕಾರದ ಮುಂದಿರುವ ಸವಾಲು.
ಸಿಂಪಲ್. ಮಹೇಶ್ ತಿಮರೋಡಿಯವರ ಬಳಿ ಎಲ್ಲಿಂದ ತನಿಖೆ ಆರಂಭಿಸಿ ಯಾವ ರೂಟ್ ನಲ್ಲಿ ಹೋಗಿ ಎಲ್ಲಿ ತಲುಪಿದರೆ ಆರೋಪಿಗಳು ಸಿಗುತ್ತಾರೆ ಎನ್ನುವ ಬಗ್ಗೆ ಸ್ಪಷ್ಟತೆ ಇದೆ. ಮರುತನಿಖೆ ಆಗುವಾಗ ಪೊಲೀಸರ ಹೊಸ ತಂಡ ಅವರನ್ನು ಕರೆಸಿ ವಿಚಾರಣೆ ಮಾಡಿದರೆ ಉತ್ತಮ. ಹಾಗಂತ ಅವರು ಬೊಟ್ಟು ಮಾಡಿದವರನ್ನೆಲ್ಲಾ ಇವರ ಮುಂದೆನೆ ಕರೆಸಿ ವಿಚಾರಣೆ ಮಾಡಲು ಆಗುತ್ತಾ? ಸಾಧ್ಯವಿಲ್ಲ. ಯಾಕೆಂದರೆ ತಿಮರೋಡಿ ತನಿಖಾಧಿಕಾರಿಯಲ್ಲ. ಇನ್ನು ನ್ಯಾಯ ಬೇಕು ಎಂದು ಹೋರಾಡುವ ಪ್ರತಿಯೊಬ್ಬರಿಗೂ ತನಿಖೆ ತಾವು ಹೇಳಿದ ರೀತಿಯಲ್ಲಿ ಆದರೆ ಮಾತ್ರ ನ್ಯಾಯ ಸಿಗುತ್ತದೆ ಎಂಬ ಅಭಿಪ್ರಾಯ ಇದೆ. ಒಂದು ಹೋರಾಟದಲ್ಲಿ ಸಾವಿರ ಜನರಿದ್ದರೆ ಅದರಲ್ಲಿ ಕನಿಷ್ಟ ನೂರು ವಿವಿಧ ರೀತಿಯ ತನಿಖಾಭಿಪ್ರಾಯಗಳು ಇದ್ದೇ ಇರುತ್ತವೆ. ಇದರಲ್ಲಿಯೂ ಹಾಗೆ ಇದೆ.
ಮೂರು ಗುಂಪು, ನೂರು ಧ್ವನಿ!
ಈ ನಡುವೆ ಸೌಜನ್ಯ ಪ್ರಕರಣದಲ್ಲಿ ಸ್ಪಷ್ಟವಾಗಿ ಮೂರು ಗುಂಪುಗಳಾಗಿವೆ. ಒಂದು ಇಂತಿಂತವರೇ ಆರೋಪಿಗಳು, ಸಂಶಯವೇ ಇಲ್ಲ ಎಂದು ನೇರ ಬೆರಳು ತೋರಿಸಿ ಹೇಳುವವರು. ಇನ್ನೊಂದು ಗುಂಪು ಇಂತಿಂತವರಲ್ಲವೇ ಅಲ್ಲ, ಸುಮ್ಮನೆ ಅವರನ್ನು ಎಳೆದು ತರುವುದು ಪೂರ್ವದ್ವೇಶ ಎನ್ನುವವರು. ಮೂರನೇ ಗುಂಪು ಯಾರೆಂದು ಗೊತ್ತಿಲ್ಲ. ಯಾರಾದರೂ ಆಗಿರಲೇಬೇಕು. ತನಿಖೆ ಮಾಡಿ ಎಂದು ಆಗ್ರಹಿಸುವವರು. ಪರ ಹಾಗೂ ವಿರೋಧ ಪ್ರತಿಭಟನೆಯಲ್ಲಿ ಭಾಗವಹಿಸುವ ಎಲ್ಲರಿಗೂ ಸೌಜನ್ಯ ಎನ್ನುವ ಆ ಅಮಾಯಕ ಮಗುವಿನ ಸಾವಿಗೆ ನ್ಯಾಯ ಸಿಗಬೇಕು ಎನ್ನುವ ಆಶಾಭಾವನೆ ಇದೆ. ಆದರೆ ಹೇಗೆ ಎನ್ನುವುದೇ ಈಗ ಉಳಿದಿರುವ ಪ್ರಶ್ನೆ. ಒಂದಂತೂ ನಿಜ, ತುಳುನಾಡಿನ ದೈವಗಳಿಗೆ ಭಕ್ತರು ಮೊರೆ ಹೋಗಿದ್ದಾರೆ. ಆದ್ದರಿಂದ ಶಿಕ್ಷೆಯಾಗುವುದು ಪಕ್ಕಾ. ಅದು ನ್ಯಾಯಾಲಯದಲ್ಲಿ ಆಗುತ್ತಾ ಹೊರಗೆ ಆಗುತ್ತಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ. ಒಂದು ವೇಳೆ ದೇವರ ನ್ಯಾಯಾಲಯದಲ್ಲಿ ಶಿಕ್ಷೆ ಆಗಿದ್ದರೆ ಅದನ್ನು ಅನುಭವಿಸುತ್ತಿರುವವರಿಗೆ ಅದು ಅರಿವಿಗೆ ಬಂದಿರಬಹುದು!
Leave A Reply