ಚೈತ್ರಾ ಕುಂದಾಪುರ ಬಂಧನದ ಹಿಂದಿನ ಕಥೆ ಏನು?

ಹಿಂದೂತ್ವದ ಪ್ರಖರ ಭಾಷಣಗಳಿಂದ ಕಟ್ಟರ್ ಹಿಂದೂತ್ವವಾದಿ ಯುವ ಸಮುದಾಯದ ಅಭಿಮಾನವನ್ನು ಗಳಿಸಿಕೊಂಡಿದ್ದ ಯುವತಿಯೊಬ್ಬಳು ವಂಚನೆಯ ಕೇಸಿನಲ್ಲಿ ಪೊಲೀಸರ ಅತಿಥಿಯಾಗಿದ್ದಾಳೆ. ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಲು ಉದ್ಯಮಿ, ದಾನಿ ಗೋವಿಂದ ಬಾಬು ಪೂಜಾರಿ ಪ್ರಬಲ ಆಕಾಂಕ್ಷಿಯಾಗಿದ್ದರು. ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದರು. ಇತ್ತ ಚೈತ್ರ ಕುಂದಾಪುರ ಅವರು ಹಿಂದೂ ಸಮಾವೇಶಗಳಲ್ಲಿ, ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ತನ್ನ ಖಡಕ್ ಭಾಷಣಗಳಿಂದ ಮಿಂಚುತ್ತಿದ್ದರು. ಹೀಗಿರುವಾಗಲೇ ಒಬ್ಬರಿಗೊಬ್ಬರು ಪರಿಚಯವಾಗಿದ್ದಾರೆ. ಗೋವಿಂದ ಬಾಬು ಪೂಜಾರಿಯವರ ಬಳಿ ಸಾಕಷ್ಟು ಹಣ ಇದೆ ಮತ್ತು ಅವರು ಟಿಕೆಟ್ ಆಕಾಂಕ್ಷಿ ಎಂದು ಚೈತ್ರ ಕುಂದಾಪುರಳಿಗೆ ಗೊತ್ತಾಗಿದೆ. ಗೋವಿಂದ ಪೂಜಾರಿಯವರು ಕೂಡ ತಮಗೆ ಟಿಕೆಟ್ ಕೊಡಿಸಲು ಏನಾದರೂ ಸಹಾಯ ಮಾಡಬಹುದಾ ಎಂದು ಚೈತ್ರಳಲ್ಲಿ ಕೇಳಿದ್ದಾರೆ.
ಈ ಬಗ್ಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ ಚೈತ್ರ ಚಿಕ್ಕಮಗಳೂರಿಗೆ ಕರೆಸಿದ್ದಾಳೆ. ಅಲ್ಲಿ ನಾಲ್ಕು ಜನರನ್ನು ಗೋವಿಂದ ಬಾಬು ಪೂಜಾರಿಯವರಿಗೆ ಪರಿಚಯಿಸಿ ಇವರು ಬಿಜೆಪಿ ಹೈಕಮಾಂಡ್ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ. ನೀವು ನಾಲ್ಕು ಕೋಟಿ ರೂಪಾಯಿ ವ್ಯವಸ್ಥೆ ಮಾಡಿ ಎಂದು ತಿಳಿಸಿದ್ದಾಳೆ. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಕಬಾಬ್ ಮಾರುತ್ತಿದ್ದವನಿಗೆ ಬಿಜೆಪಿ ಮುಖಂಡ ಎನ್ನುವ ಪಾತ್ರ ಮಾಡಲು ಹೇಳಿದ್ದು, ಅದಕ್ಕಾಗಿ 93 ಸಾವಿರ ರೂಪಾಯಿ ಕೂಡ ಚೈತ್ರಾ ಬಳಗ ನೀಡಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಾಗಿದೆ. ಇನ್ನು ಧನರಾಜ್ ಹಾಗೂ ರಮೇಶ್ ಎಂಬುವವರನ್ನು ಆರ್ ಎಸ್ ಎಸ್ ಮುಖಂಡರ ಪಾತ್ರ ಮಾಡಲು ಸೆಲೂನ್ ಗೆ ಕರೆದುಕೊಂಡು ಹೋಗಿ ಮೇಕಪ್ ಕೂಡ ಮಾಡಿಸಿದ್ದಾರೆ ಎಂದು ಕೂಡ ಎಫ್ ಐ ಆರ್ ನಲ್ಲಿ ದಾಖಲಾಗಿದೆ. ಚೈತ್ರಳನ್ನು ನಂಬಿದ ಪೂಜಾರಿಯವರು ಹಣದ ವ್ಯವಸ್ಥೆ ಮಾಡಿದ್ದಾರೆ.
ನಂತರ ಟಿಕೆಟ್ ಘೋಷಣೆಯಾದಾಗ ತಾವು ಮೋಸ ಹೋಗಿರುವುದು ಗೋವಿಂದ ಪೂಜಾರಿಯವರಿಗೆ ಗೊತ್ತಾಗಿದೆ. ಅವರು ಹಣ ಹಿಂದಿರುಗಿಸಲು ಚೈತ್ರಾಳಿಗೆ ಒತ್ತಾಯಿಸಿದ್ದಾರೆ. ತುಂಬಾ ಒತ್ತಾಯ ಮಾಡಿದರೆ ಆತ್ಮಹತ್ಯೆ ಮಾಡುವುದಾಗಿ ಚೈತ್ರಾ ಹೆದರಿಸಿದ್ದಾಳೆ. ಅಲ್ಲಿಂದ ಚೈತ್ರಾ ತಲೆಮರೆಸಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಪೂಜಾರಿಯವರು ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಪೊಲೀಸರು ಚೈತ್ರಾಳನ್ನು ಹುಡುಕುತ್ತಿದ್ದರು. ಕೊನೆಗೂ ಉಡುಪಿ ಕೃಷ್ಣಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಹಣ ನೀಡಿದರೆ ಬಿಜೆಪಿಯಲ್ಲಿ ಟಿಕೆಟ್ ಸಿಗುತ್ತೆ ಎಂದು ನಂಬಿದ ಗೋಪಾಲ ಬಾಬು ಪೂಜಾರಿಯಂತವರು ಇರುವ ತನಕ ಚೈತ್ರಾ ಕುಂದಾಪುರ ತರದವರು ಕೂಡ ಇದ್ದೇ ಇರುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ
Leave A Reply