ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
ನಾವು ನಿಮ್ಮ ಡಿಬೇಟ್ ಗಳಿಗೆ ನಮ್ಮ ಪಕ್ಷದ ಪ್ರತಿನಿಧಿಗಳನ್ನು ಕಳುಹಿಸಿಕೊಡುವುದಿಲ್ಲ ಎನ್ನುವ ವಾಕ್ಯವನ್ನು ನಾನು ನನ್ನ 16 ವರ್ಷ 8 ತಿಂಗಳ ನಮ್ಮ ಟಿವಿಯ ಡಿಬೇಟ್ ಗಳ ನಿರೂಪಕನಾಗಿ/ ಕಾರ್ಯಕ್ರಮ ಸಂಯೋಜಕನಾಗಿದ್ದಾಗಲೂ ಒಂದೆರಡು ಸಲ ಕೇಳಬೇಕಾಗಿ ಬಂದಿದೆ. ಈಗ ಇ.0.ಡಿ.ಯಾ ಎಂಬ ವಿಪಕ್ಷಗಳ ಮೈತ್ರಿಕೂಟ ಟಿವಿ ವಾಹಿನಿಗಳ ಡಿಬೇಟಿಗಳಲ್ಲಿ ಕೆಲವು ನಿರೂಪಕರು ಇರುವ ಕಾರ್ಯಕ್ರಮಕ್ಕೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡುವುದಿಲ್ಲ ಎಂದು ಫರ್ಮಾನ್ ಹೊರಡಿಸಿರುವಾಗ ಅದು ನೆನಪಾಯಿತು. ಅರ್ನಬ್ ಗೋಸ್ವಾಮಿಯಿಂದ ಹಿಡಿದು ಡಿಡಿ ನ್ಯೂಸ್ ನಿರೂಪಕರನ್ನು ಸೇರಿಸಿ 14 ನಿರೂಪಕರ ಪಟ್ಟಿಯನ್ನು ಮೈತ್ರಿಕೂಟದ ಸಮನ್ವಯ ಸಮಿತಿ ಬಿಡುಗಡೆಗೊಳಿಸಿದೆ.
ಹಾಗಾದರೆ ಇದರ ಹಿಂದಿನ ಉದ್ದೇಶ ಏನು?
ಟಿವಿ ವಾಹಿನಿಗಳಲ್ಲಿ ಈ ಡಿಬೇಟ್ ಗಳು ಹೇಗೆ ಪ್ಲಾನ್ ಆಗುತ್ತದೆ ಎನ್ನುವುದನ್ನು ನೋಡೋಣ. ಯಾವಾಗ 24*7 ನ್ಯೂಸ್ ವಾಹಿನಿಗಳು ಆರಂಭವಾದವೋ ಅದರ ನಂತರ ಈ ಡಿಬೇಟ್ ಎನ್ನುವುದು ಬಹುತೇಕ ವಾಹಿನಿಗಳ ಅವಿಭಾಜ್ಯ ಅಂಗಗಳಾಗಿ ಹೋದವು. ಆಯಾ ದಿನದ ಹಾಟ್ ಟಾಪಿಕ್ ಹಿಡಿದುಕೊಂಡು ಒಂದು ಗಂಟೆ ಡಿಬೇಟ್ ಮಾಡಿ ಜನರನ್ನು ತಮ್ಮ ವಾಹಿನಿಯತ್ತ ಹಿಡಿದುಕೊಳ್ಳೋಣ ಎನ್ನುವುದು ಇದರ ಮೂಲ ಉದ್ದೇಶ. ವಾಹಿನಿಯಲ್ಲಿ ಡಿಬೇಟ್ ಮಾಡುವ ನಿರೂಪಕರು ಯಾವ ಟಾಪಿಕ್ ಆವತ್ತು ಜನರನ್ನು ಸೆಳೆಯಬಹುದು ಎನ್ನುವುದನ್ನೇ ಮೊದಲಿಗೆ ಯೋಚಿಸುತ್ತಾ ಇರುತ್ತಾರೆ. ಕೆಲವು ಟಾಪಿಕ್ ಗಳು ಬೆಳಿಗ್ಗೆಯೇ ಹುಟ್ಟಿಕೊಳ್ಳುತ್ತವೆ ಮತ್ತು ಕೆಲವು ಸಂಜೆ ಹೊತ್ತಿಗೆ ಅಚಾನಕ್ ಆಗಿ ಜನ್ಮತಾಳುತ್ತವೆ. ಯಾವ ಟಾಪಿಕ್ ಆದರೂ ಅದು ಅಂದು ರಾತ್ರಿ ಪ್ರೈಮ್ ಟೈಮ್ (ಸಂಜೆ 6 ರಿಂದ 10 ಗಂಟೆಯ ತನಕ) ತನಕ ಜೀವ ಇಟ್ಟುಕೊಂಡಿರುತ್ತದೆಯಾ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಆ ವಿಷಯವನ್ನು ಚರ್ಚೆಗೆ ಇಟ್ಟುಕೊಳ್ಳೋಣ ಎನ್ನುವ ನಿರ್ಧಾರ ನಿರೂಪಕ ಮತ್ತು ಸಂಪಾದಕೀಯ ಮಂಡಳಿಯಲ್ಲಿ ಆಗುತ್ತೆ. ಸ್ಥಳೀಯ ವಾಹಿನಿಗಳಲ್ಲಿ ಬಹುತೇಕ ಇದನ್ನು ನಿರೂಪಕರೇ ನಿರ್ಧರಿಸಿಬಿಡುತ್ತಾರೆ. ನಂತರ ಅದನ್ನು ರಾಜಕೀಯ ದೃಷ್ಟಿಕೋನದಲ್ಲಿ ನೋಡಬೇಕಾ, ಸಾಮಾಜಿಕ ದೃಷ್ಟಿಕೋನದಲ್ಲಿ ನೋಡಬೇಕಾ, ಜನಸಾಮಾನ್ಯರ ದೃಷ್ಟಿಕೋನದಲ್ಲಿ ನೋಡಬೇಕಾ ಅಥವಾ ಎಲ್ಲವನ್ನು ಮಿಕ್ಸ್ ಮಾಡಿ ನೋಡಬೇಕಾ ಎನ್ನುವ ನಿರ್ಧಾರವನ್ನು ನಿರೂಪಕರು ತಕ್ಷಣ ಮಾಡಬೇಕಾಗುತ್ತದೆ. ಯಾಕೆಂದರೆ ಕೆಲವೊಮ್ಮೆ ರಾತ್ರಿ 8 ಗಂಟೆಯ ಶೋಗೆ ಸಂಜೆ ನಾಲ್ಕು ಗಂಟೆಯಾದರೂ ವಿಷಯವೇ ಸಿಕ್ಕಿರುವುದಿಲ್ಲ. ಸಿಕ್ಕಿರುವ ಒಂದೆರಡು ವಿಷಯಗಳು ಒಂದು ಗಂಟೆ ಎಳೆಯುವಷ್ಟು ದೊಡ್ಡದಾಗಿರುವುದಿಲ್ಲ. ಇನ್ನು ಇದು ವಾರದಲ್ಲಿ ಐದಾರು ದಿನ ನಡೆಯುವುದರಿಂದ ಇವತ್ತಿನದ್ದು ಆಯಿತು, ನಾಳೆ ಏನು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಕೊನೆಗೆ ಎಲ್ಲವನ್ನು ಮಿಕ್ಸ್ ಮಾಡಿ ಡಿಬೇಟ್ ಮಾಡುವುದು ಎಂದಾದರೆ ಎರಡ್ಮೂರು ಪಕ್ಷದ ರಾಜಕೀಯ ನಾಯಕರು, ಒಬ್ಬ ಹಿರಿಯ ಪತ್ರಕರ್ತ, ಒಬ್ಬರು ಸಾಮಾಜಿಕ ಹೋರಾಟಗಾರರನ್ನು ಕರೆಯುವ ಚಿಂತನೆಯಾಗುತ್ತದೆ.
ಯಾವುದೇ ಕಠಿಣ ಪ್ರಶ್ನೆಗೂ ಉತ್ತರ ಕೊಡಬಲ್ಲ ವಕ್ತಾರ ಸಿಗಲಿ ಎಂದೇ ನಿರೂಪಕನ ಬಯಕೆ!
ಹತ್ತು ವರ್ಷಗಳ ಹಿಂದಿನಿಂದ ಹೇಗೆ ನಡೆದುಕೊಂಡು ಬಂದಿದೆ ಎಂದರೆ ಪ್ಯಾನಲಿಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಕರೆಯುವಾಗ ಅವರಿಗೆ ಕರೆ ಮಾಡಿ ನಿರೂಪಕರು/ಕಾರ್ಯಕ್ರಮ ಸಂಯೋಜಕರು “ತಮಗೆ ಇಂತಿಂತಹ ಹೊತ್ತಿಗೆ ಇವತ್ತು ವಾಹಿನಿಗೆ ಬರಲು ಸಾಧ್ಯವಿದೆಯೇ” ಎಂದು ಕೇಳುತ್ತಾರೆ. ಅವರು ಸಬ್ಜೆಕ್ಟ್ ಎಲ್ಲಾ ಕೇಳಿ, ವಿಪಕ್ಷದಿಂದ ಯಾರು ಎಂದು ವಿಚಾರಿಸಿ ತಮಗೆ ಆ ಸಬ್ಜೆಕ್ಟ್ ಮೇಲೆ ಹಿಡಿತ ಮತ್ತು ವಿಪಕ್ಷದ ಪ್ರತಿನಿಧಿ ವೀಕ್ ಇದೆ ಎಂದು ಅನಿಸಿದರೆ ಮಾತ್ರ ಬರುತ್ತೇನೆ ಎಂದು ಒಪ್ಪಿಗೆ ಕೊಡುತ್ತಾರೆ. ಒಂದು ವೇಳೆ ಅವರು ಬರುವುದಿಲ್ಲ ಎಂದಾದರೆ ಅಲ್ಲಿ ಹತ್ತು ನಿಮಿಷ ವೇಸ್ಟ್. ಕೆಲವೊಮ್ಮೆ ಅವರು ಅರ್ಧ ಗಂಟೆ ಬಿಟ್ಟು ಹೇಳುತ್ತೇನೆ ಎಂದರೆ ಬೇರೆಯವರಿಗೆ ಕರೆ ಮಾಡಿ ಹೇಳುವುದಕ್ಕೂ ಅಲ್ಲ, ಬಿಡುವುದಕ್ಕೂ ಅಲ್ಲ ಎನ್ನುವಂತಹ ಪರಿಸ್ಥಿತಿ. ಅರ್ಧ ಗಂಟೆಯ ಬಳಿಕ ಅವರು ನಾನು ಅರ್ಜೆಂಟಾಗಿ ಬೇರೆಡೆ ಹೋಗಲಿದೆ ಎಂದರೆ ನೀವು ಆರಂಭದಿಂದ ಬೇರೆಯವರನ್ನು ಹುಡುಕಬೇಕು. ಹೀಗೆ ಮಾಡಿ ಕೊನೆಗೆ ಸಮರ್ಥ ಪ್ಯಾನಲಿಸ್ಟ್ ಗಳು ಸಿಕ್ಕಾಗ ನಿಟ್ಟುಸಿರುಬಿಡುವಷ್ಟು ಮಾನಸಿಕವಾಗಿ ಸುಸ್ತಾಗಿರುತ್ತದೆ. ಇತ್ತೀಚೆಗೆ ಕೆಲವು ವರ್ಷಗಳಿಂದ ಪಕ್ಷಗಳು ತಮ್ಮ ಕಡೆಯಿಂದ ವಕ್ತಾರರನ್ನು ಕಳುಹಿಸಲು ನಿಗದಿತ ವ್ಯಕ್ತಿಯೊಬ್ಬರನ್ನು ಗೊತ್ತು ಮಾಡುವ ಕ್ರಮ ಆರಂಭವಾಗಿದೆ. ಈ ಮಧ್ಯೆ ನಿರೂಪಕ ಆ ಸಬ್ಜೆಕ್ಟಿಗೆ ಅಗತ್ಯವಿರುವಷ್ಟು ಮಾಹಿತಿಗಳನ್ನು ಕೂಡ ಕಲೆ ಹಾಕಿ ಪ್ರಶ್ನೆಗಳನ್ನು ತಯಾರು ಮಾಡಿ ತಾನು ಕೂಡ ವೀಕ್ಷಕರನ್ನು ಎಷ್ಟು ಇಂಪ್ರೆಸ್ ಮಾಡಲು ಸಾಧ್ಯ ಎನ್ನುವುದನ್ನು ನೋಡಬೇಕಾಗುತ್ತದೆ. ಇನ್ನು ಪ್ರಬಲ ಪ್ಯಾನಲಿಸ್ಟ್ ಗಳೇ ಸಿಗಲಿ ಎಂದೇ ಪ್ರತಿ ನಿರೂಪಕ ಬಯಸುತ್ತಾರೆ. ಯಾಕೆಂದರೆ ಉತ್ತಮ ಪ್ಯಾನಲಿಸ್ಟ್ ಗಳು ಸಿಕ್ಕಿದಷ್ಟು ಕಠಿಣ ಪ್ರಶ್ನೆಗಳನ್ನು ಕೇಳಬಹುದು. ಅಂತಿಮವಾಗಿ ಕಾರ್ಯಕ್ರಮ ಗೆಲ್ಲಬೇಕು.
ಯುದ್ಧವೇ ಮಾಡದಿದ್ದರೆ ಅದು ಪುಕ್ಕಲುತನ!
ಆದರೆ ಕೆಲವು ದಿನ ಸಿಗುವ ಸಬ್ಜೆಕ್ಟ್ ಗಳು ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ವಿರುದ್ಧವಾಗಿದ್ದರೆ ಆ ಪಕ್ಷದಿಂದ ಯಾರೂ ಪ್ರತಿನಿಧಿಗಳು ಪ್ಯಾನಲಿಗೆ ಬರುವುದು ಡೌಟು. ಇನ್ನು ಕೆಲವೊಮ್ಮೆ ಬರುವ ಪ್ಯಾನಲಿಸ್ಟ್ ಗಳು ತುಂಬಾ ಕಠಿಣ ಪ್ರಶ್ನೆಗಳನ್ನು ನಮಗೆ ಕೇಳಬೇಡಿ ಎನ್ನುವ ಕಂಡೀಶನ್ ಹಾಕಿಯೇ ಬರುತ್ತಾರೆ. ಕೆಲವರು ನಿಗದಿತ ಸಮಯವನ್ನು ತಪ್ಪಿಸಿ ಲೇಟ್ ಆಗಿ ಬರುತ್ತಾರೆ. ಆಗ ಅವರ ಕುರ್ಚಿ ಖಾಲಿ ಬಿಡಬೇಕಾಗುತ್ತದೆ. ಇನ್ನು ಒಬ್ಬ ನಿರೂಪಕ ರಾಜಕೀಯ ಪಕ್ಷದ ವಕ್ತಾರರಿಗೆ ಕಠಿಣ ಪ್ರಶ್ನೆ ಕೇಳಿದರೆ ಅದರಿಂದ ಸಮರ್ಪಕ ಉತ್ತರ ಹೇಳಲು ಅವಕಾಶ ಸಿಕ್ಕಿತು ಎಂದೇ ಪ್ಯಾನಲಿಸ್ಟ್ ಅಂದುಕೊಳ್ಳಬೇಕು. ಅದು ಬಿಟ್ಟು ನಿರೂಪಕ ತನ್ನ ವಿರುದ್ಧ ಇದ್ದಾನೆ ಎಂದು ವಕ್ತಾರರು ನಿರ್ಧರಿಸಿಬಿಟ್ಟರೆ ಅದು ಅವನ ತಪ್ಪು. ಯಾಕೆಂದರೆ ತನಗೆ ಅನುಕೂಲವಾದ ಪ್ರಶ್ನೆಗಳನ್ನು ನಿರೂಪಕ ಕೇಳಲಿ ಎಂದು ಪ್ಯಾನಲಿಸ್ಟ್ ಬಯಸಿದರೆ ಆ ಹೊತ್ತಿಗೆ ಸೇಫ್ ಆಗಬಹುದು. ಆದರೆ ಜನ ಇಬ್ಬರನ್ನೂ ತೂಕಕ್ಕೆ ಹಾಕಿಬಿಡುತ್ತಾರೆ. ಅದರೊಂದಿಗೆ ತನಗೆ ವಿರುದ್ಧ ಪ್ರಶ್ನೆಗಳನ್ನು ಕೇಳುವ ಟಿವಿ ಶೋಗಳಿಗೆ ಹೋಗುವುದಿಲ್ಲ ಎಂದು ನಿರ್ಧರಿಸುವುದು ಅಂಜುಬುರುಕತನ. ಯುದ್ಧರಂಗದಲ್ಲಿ ಸೋತರೂ, ಗೆದ್ದರೂ ಅದು ವೀರತ್ವ. ಯುದ್ಧವೇ ಮಾಡದಿದ್ದರೆ ಅದು ಪುಕ್ಕಲುತನ!
Leave A Reply