ಮೂರು ವರ್ಷವೂ ಒಂದೇ ಒಂದು ಅಕ್ಷರ ಕೂಡ ಸರಕಾರ ಅಂದಿಲ್ಲ!
ಅನೇಕ ಕಡೆ ಸರಕಾರ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುತ್ತದೆ. ಆದರೆ ಅದರ ಸ್ಥಿತಿಗತಿ, ನಿರ್ವಹಣೆ ಬಗ್ಗೆ ನಿರ್ಲಕ್ಷ್ಯವಹಿಸುತ್ತದೆ. ಒಮ್ಮೆ ಕಟ್ಟಿ ಮುಗಿದರೆ ಆಯಿತು, ನಂತರ ಹೇಳುವವರು, ಕೇಳುವವರು ಯಾರೂ ಇರುವುದಿಲ್ಲ. ಶೌಚಾಲಯದ ಒಳಗೆ ಕಾಲಿಡುವುದೇ ಬೇಡಾ ಎಂದು ಅನಿಸುತ್ತದೆ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಮೂತ್ರದಲ್ಲಿ ಕಲ್ಲು ಹುಟ್ಟಬಹುದು ಎಂದು ಹೆದರಿಕೆಯಿಂದ ಹೋಗುತ್ತೇವೆ. ಒಳಗೆ ಮೂಗು ಮುಚ್ಚಿ ಮೂತ್ರ ಮಾಡಲು ಹೋಗುತ್ತೇವೆ. ಈ ಬಗ್ಗೆ ನಾವೇ ಎಷ್ಟೇ ಸಲ ನಮಷ್ಟಕ್ಕೆ ಗೊಣಗಿಕೊಂಡು ಪ್ರಕೃತಿ ಕರೆಯನ್ನು ಮುಗಿಸಿಕೊಂಡು ಬರುತ್ತೇವೆ. ನಮ್ಮ ಕೂಗು ಸರಕಾರಕ್ಕೆ ಎಲ್ಲಿ ಕೇಳಿಸುತ್ತದೆ ಎಂದು ನಾವೇ ಮನಸ್ಸಿನಲ್ಲಿ ಯಾರಿಗೋ ಬೈದು ಹೊರಗೆ ಬರುತ್ತೇವೆ. ಆದರೆ ಈ ವಿಷಯದಲ್ಲಿ ನಮ್ಮ ಕೂಗು ಬಿಡಿ, ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆಯನ್ನು ಕೂಡ ರಾಜ್ಯ ಸರಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದರೆ ಸರಕಾರಿ ವ್ಯವಸ್ಥೆಗೆ ಅದೆಂತಹ ಜಡ್ಡು ಹಿಡಿದಿದೆ ಎನ್ನುವುದು ಅರ್ಥವಾಗುತ್ತದೆ.
ಮೂರು ವರ್ಷವೂ ಒಂದೇ ಒಂದು ಅಕ್ಷರ ಕೂಡ ಸರಕಾರ ಅಂದಿಲ್ಲ!
ವಿಷಯ ಆಗಿರುವುದು ಏನೆಂದರೆ ಮಾನ್ಯ ಹೈಕೋರ್ಟ್ ಮುಂದೆ ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಹಾಗೂ ನಿರ್ವಹಣೆ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಿತ್ತು. ಈ ಕುರಿತು ವಿವರವಾದ ಆಕ್ಷೇಪಣೆಯನ್ನು ಸಲ್ಲಿಸುವಂತೆ ಮೂರು ವರ್ಷಗಳ ಹಿಂದೆನೆ ರಾಜ್ಯ ಹೈಕೋರ್ಟ್ ಸರಕಾರಕ್ಕೆ ಸೂಚಿಸಿತ್ತು. ಆದರೆ ಸರಕಾರದ್ದು ದಿವ್ಯ ಮೌನ. ಯಾವ ವಿಚಾರಣೆಗೂ ಸರಕಾರ ಕಡೆಯಿಂದ ಏನೂ ಮಾಹಿತಿ ಇಲ್ಲದೆ ಸರಕಾರಿ ವಕೀಲರು ಕೂಡ ಏನೂ ಮಾಡುವಂತಿರಲಿಲ್ಲ. ಕೊನೆಗೆ ಅಗಸ್ಟ್ 8, 2023 ರಂದು ಮೂರು ವಾರಗಳ ಗಡುವು ನೀಡಲಾಗಿತ್ತು. ಆದರೆ ರಾಜ್ಯ ಸರಕಾರದಿಂದ ಒಂದೇ ಒಂದು ಹೇಳಿಕೆಯ ದಾಖಲೆ, ವರದಿ, ಪ್ರಮಾಣ ಪತ್ರ, ಆಕ್ಷೇಪಣೆ ಯಾವುದೂ ಬಂದೇ ಇಲ್ಲ. ಇದರಿಂದ ಅಸಮಾಧಾನಗೊಂಡಿರುವ ಹೈಕೋರ್ಟ್ ನ್ಯಾಯಮೂರ್ತಿಗಳು ಐದು ಲಕ್ಷ ರೂಪಾಯಿ ದಂಡವನ್ನು ರಾಜ್ಯ ಸರಕಾರಕ್ಕೆ ವಿಧಿಸಿದ್ದಾರೆ. ಯಾವಾಗ ದಂಡ ವಿಧಿಸಲಾಯಿತೋ ಸರಕಾರದ ವಕೀಲರು ಈ ಬಗ್ಗೆ ಮನವಿ ಮಾಡಿಕೊಂಡು ದಂಡದ ಮೊತ್ತ ಕಡಿಮೆ ಮಾಡುವಂತೆ ವಿನಂತಿಸಿದ್ದಾರೆ. ಅದಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಸರಕಾರದ ಈ ನಡೆಗೆ ನನ್ನ ಪ್ರಕಾರ 25 ಲಕ್ಷ ರೂಪಾಯಿ ದಂಡ ವಿಧಿಸಬೇಕು. ಆದರೆ ಮುಖ್ಯ ನ್ಯಾಯಮೂರ್ತಿಗಳು ಕರುಣೆ ತೋರಿ 5 ಲಕ್ಷ ರೂ ಮಾತ್ರ ದಂಡ ವಿಧಿಸಿದ್ದಾರೆ. ಸರಕಾರ ಮತ್ತು ಅಧಿಕಾರಿಗಳಿಗೆ ಇಂತಹುದೇ ಭಾಷೆ ಅರ್ಥವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಮಂಗಳೂರಿಗೆ ಇದು ಬೇಕಾ?
ಮಂಗಳೂರಿನಲ್ಲಿ ಕೂಡ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇದೆ. ಮಂಗಳೂರು ನಗರದಲ್ಲಿಯೂ ಅನೇಕ ಕಡೆ ಸಾರ್ವಜನಿಕ ಶೌಚಾಲಯಗಳಿವೆ. ಪಾಲಿಕೆ ವ್ಯಾಪ್ತಿಯ ಸ್ವಚ್ಚತೆಯ ಗುತ್ತಿಗೆಯನ್ನು ಆಂಟೋನಿಗೆ ವಹಿಸಿಕೊಡುವಾಗ ಈ ಸಾರ್ವಜನಿಕ ಶೌಚಾಲಯಗಳ ಗುತ್ತಿಗೆಯ ಸ್ವಚ್ಚತೆಯನ್ನು ನೋಡಿಕೊಳ್ಳುವ ಕಂಡೀಷನ್ ಹಾಕಿರಲಿಲ್ಲ. ಅದನ್ನು ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಟೆಂಡರ್ ಕರೆದು ಕೊಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಟಾಯ್ಲೆಟ್ ಕ್ಲೀನಿಂಗ್ ಗುತ್ತಿಗೆ ತೆಗೆದುಕೊಳ್ಳುವವರು ಎಲ್ಲಿ ಒಳ್ಳೆಯ ಆಮದನಿ ಇರುತ್ತೋ ಅಲ್ಲಿ ಮಾತ್ರ ಗುತ್ತಿಗೆ ಪಡೆದುಕೊಳ್ಳುವ ಆಸಕ್ತಿ ಹೊಂದಿರುತ್ತಾರೆ. ಪೇ ಅಂಡ್ ಯೂಸ್ ಅಷ್ಟೇನೂ ಇಲ್ಲದ ಕಡೆ ಅಂತಹ ಆಸಕ್ತಿ ಗುತ್ತಿಗೆದಾರರಿಗೆ ಇರುವುದಿಲ್ಲ. ಆದ್ದರಿಂದ ಗುತ್ತಿಗೆ ಕೊಡುವಾಗ ಪಾಲಿಕೆ ಏನು ಮಾಡಬೇಕು ಎಂದರೆ ಒಂದು ಒಳ್ಳೆಯ ಕಲೆಕ್ಷನ್ ಇರುವ ಸುಲಭ ಶೌಚಾಲಯ ಜೊತೆಗೆ ಒಂದು ಇತರ ಸಾರ್ವಜನಿಕ ಶೌಚಾಲಯ ಕೂಡ ಗುತ್ತಿಗೆ ಕೊಡಬೇಕು. ಉದಾಹರಣೆಗೆ ಮಂಗಳೂರಿನ ಬಸ್ ಸ್ಟ್ಯಾಂಡಿನ ಶೌಚಾಲಯ ಸ್ವಚ್ಚತೆಯ ಗುತ್ತಿಗೆ ಪಡೆದುಕೊಂಡವರು ಬಿಜೆಪಿ ಜಿಲ್ಲಾ ಕೇಂದ್ರ ಕಚೇರಿಯ ಎದುರಿಗಿರುವ ಸಾರ್ವಜನಿಕ ಶೌಚಾಲಯ ಕೂಡ ಗುತ್ತಿಗೆ ಪಡೆದುಕೊಳ್ಳಬೇಕು. ಆಗ ಎರಡೂ ಸ್ವಚ್ಚ ಇಟ್ಟುಕೊಳ್ಳಲು ಆಗುತ್ತದೆ. ಬೇಕಾದರೆ ಬಲ್ಮಠದಲ್ಲಿರುವ ಮಹಿಳಾ ಕಾಲೇಜಿನ ಸನಿಹದ ಶೌಚಾಲಯವನ್ನೇ ತೆಗೆದುಕೊಳ್ಳಿ. ಅದನ್ನು ನಿರ್ವಹಿಸುವವರು ಇಲ್ಲದೇ ಅದು ಬೀಗ ಹಾಕಲ್ಪಟ್ಟಿದೆ. ಸರಿಯಾಗಿ ನೋಡಿದರೆ ಅದು ಅತೀ ಬಿಝಿ ಏರಿಯಾ. ಅದನ್ನು ಯಾವಾಗಲೂ ತೆರೆದಿಡಬೇಕಾಗಿತ್ತು. ಗಂಡಸರಾದರೆ ಏನಾದರೂ ರಸ್ತೆ ಬದಿ ದಾಹ ತೀರಿಸಿಕೊಳ್ಳಲೂಬಹುದು. ಆದರೆ ಪಾಪ, ಹೆಣ್ಣುಮಕ್ಕಳ ಪರಿಸ್ಥಿತಿ. ಇದನ್ನೆಲ್ಲಾ ಜನಪರ ಆಡಳಿತ ಇರುವ ಸರಕಾರಗಳು ನೋಡಿಕೊಳ್ಳಬೇಕು. ಇನ್ನು ಹಲವು ಕಡೆ ಜನರೇ ಕಡಿಮೆ ಬರುವ ಕಡೆ ಲೇಡಿಸ್ ಟಾಯ್ಲೆಟ್ ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಐದು ಲಕ್ಷ ರೂಪಾಯಿ ದಂಡ ಒಂದು ಸರಕಾರಕ್ಕೆ ದೊಡ್ಡದಲ್ಲದಿರಬಹುದು. ಆದರೆ ನ್ಯಾಯಾಲಯದ ಚಾಟಿ ಏಟು ಮಾತ್ರ ಬಿಸಿ ಮುಟ್ಟಿಸಿದೆ. ಅದು ಮಂಗಳೂರು ನಗರಕ್ಕೂ ಬೇಕಾ?
Leave A Reply