ಏಕನಾಥ ಶೆಟ್ಟಿ ಇದ್ದ ಸೇನಾ ವಿಮಾನ ಏಳೂವರೆ ವರ್ಷಗಳ ಬಳಿಕ ಪತ್ತೆ!
ಅವರ ಹೆಸರು ಏಕನಾಥ ಶೆಟ್ಟಿ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅದು 2016 ರ ಜುಲೈ ತಿಂಗಳ 22 ನೇ ದಿನ. ನಮ್ಮ ಹೆಮ್ಮೆಯ ಯೋಧ ಏಕನಾಥ ಶೆಟ್ಟಿ ಸೇರಿ 29 ಯೋಧರಿದ್ದ ಭಾರತೀಯ ವಾಯುಸೇನೆಯ ಎಎನ್ 37 ವಿಮಾನ ಚೆನೈನ ತಾಂಬರಂ ವಾಯುನೆಲೆಯಿಂದ ಆಗಸಕ್ಕೆ ನೆಗೆದಿತ್ತು. ಅದು ಅಂಡಮಾನ್ ನ ಫೋರ್ಟ್ ಬ್ಲೇರ್ ಗೆ ತೆರಳಬೇಕಿತ್ತು. ಆದರೆ ವಿಧಿಯ ಕ್ರೂರ ಅಟ್ಟಹಾಸ. ಏಕನಾಥ್ ಶೆಟ್ಟಿ ಇದ್ದ ಆ ವಿಮಾನ ನಾಪತ್ತೆಯಾಗಿ ಹೋಗಿತ್ತು.
ವಾಯುಸೇನೆ, ನೌಕಾ ಸೇನೆ ಮತ್ತು ಭೂಸೇನೆಯ ಸತತ ಪ್ರಯತ್ನ, ಶೋಧದ ನಂತರವೂ ವಿಮಾನ ಎಲ್ಲಿ ನಾಪತ್ತೆಯಾಯಿತು ಎಂದು ಗೊತ್ತಾಗಲೇ ಇಲ್ಲ.
ತುರ್ತು ಪರಿಹಾರ ಎಂದು ಆಗಿನ ಸರಕಾರ ಐದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡಿತು. ಈಗ ಇದೆಲ್ಲಾ ಆಗಿ ಏಳೂವರೆ ವರ್ಷಗಳು ಕಳೆದಿವೆ. ಆವತ್ತು ಕಣ್ಮರೆಯಾಗಿದ್ದ ವಿಮಾನ ಈಗ ಪತ್ತೆಯಾಗಿದೆ. ಆದರೆ ಪತ್ತೆಯಾಗಿರುವುದು ಬಂಗಾಳ ಕೊಲ್ಲಿಯ ತಳಭಾಗದಲ್ಲಿ 140 ನಾಟಿಕಲ್ ಮೈಲ್ ಕೆಳಗೆ ಅಂದರೆ ಸುಮಾರು 310 ಕಿ.ಮೀ ದೂರದಲ್ಲಿ.
ಚೆನೈಯಿಂದ ಹೊರಟ ವಿಮಾನ ಆವತ್ತು ಪತನಗೊಂಡು ಬಂಗಾಳಕೊಲ್ಲಿಯಲ್ಲಿ ಬಿದ್ದಿರಬಹುದು. ಈಗ ತಳಭಾಗದಲ್ಲಿ ಅದರ ಅವಶೇಷಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನೆಲೆಸಿರುವ ಏಕನಾಥ ಶೆಟ್ಟಿ ಕುಟುಂಬ ತಮ್ಮ ಮನೆಯ ಯಜಮಾನ ಈಗಲೂ ಬದುಕುಳಿದಿರಬಹುದು ಎಂಬ ನಿರೀಕ್ಷೆಯಲ್ಲಿದೆ. ಎಲ್ಲಿಯಾದರೂ ದೇಶಸೇವೆ ಮಾಡುತ್ತಿರಬಹುದು ಎಂಬ ಆಶಾಭಾವನೆಯಲ್ಲಿದೆ. ಆದರೆ ಸರಕಾರಗಳು ಮಾತ್ರ ಈ ವೀರಯೋಧನ ತ್ಯಾಗವನ್ನು, ಬಲಿದಾನವನ್ನು ಮರೆತು ಸರಕಾರಿ ಉದ್ಯೋಗ, ನೀಡಬೇಕಾಗಿದ್ದ ನಿವೇಶನವನ್ನು ನೀಡದೇ ಮರೆತಿರುವುದು ಮಾತ್ರ ದುರಂತ…
Leave A Reply