ಕಾಂಗ್ರೆಸ್ಸಿನಲ್ಲಿ ಶೆಟ್ಟರ್ 9 ತಿಂಗಳು!
ಕಾಂಗ್ರೆಸ್ಸಿನಲ್ಲಿ ಶೆಟ್ಟರ್ 9 ತಿಂಗಳು!
ನೀವು ಸುದ್ದಿ ವಾಹಿನಿಗಳಲ್ಲಿ ನಿರೂಪಕರು ಒಂದು ಚಾನೆಲ್ ನಿಂದ ಮತ್ತೊಂದು ವಾಹಿನಿಗೆ ಜಂಪ್ ಆಗುತ್ತಾ ಇರುವುದನ್ನು ಗಮನಿಸಿರಬಹುದು. ಒಂದಿಷ್ಟು ಕಾಲದ ಬಳಿಕ ಆ ನಿರೂಪಕ ಮತ್ತೆ ತನ್ನ ಹಿಂದಿನ ವಾಹಿನಿಗೆ ಮರಳಿರುವುದು ಕೂಡ ಇದೆ. ಬಟ್ಟೆ ಬದಲಾಯಿಸಿದಂತೆ ನಿರೂಪಕರು ಚಾನೆಲ್ ಬದಲಾಯಿಸಿದ ಹಾಗೆ ರಾಜಕೀಯದಲ್ಲಿ ಇರುವವರು ಹಾಗೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ರಾಜಕೀಯ ಎನ್ನುವುದು ಸಿದ್ಧಾಂತದ ಭದ್ರ ಬುನಾದಿಯ ಮೇಲೆ ನಿಂತಿರುವುದು. ಒಬ್ಬ ವ್ಯಕ್ತಿ ಒಂದು ಸಿದ್ಧಾಂತವನ್ನು ಒಪ್ಪಿದರೆ ಆತ ಅದಕ್ಕೆ ಬದ್ಧನಾಗಿರಬೇಕಾಗುತ್ತದೆ. ಅದರಲ್ಲಿಯೂ ಆತ ಒಂದು ಪಕ್ಷದಿಂದ ಜನಪ್ರತಿನಿಧಿಯಾಗಿ ಗೆದ್ದ ಬಳಿಕ ಆ ಪಕ್ಷದಲ್ಲಿ ಅಧಿಕಾರವನ್ನು ಅನುಭವಿಸಿದ ಬಳಿಕ ಅದರಲ್ಲಿಯೂ ಮುಖ್ಯಮಂತ್ರಿಯಾಗಿ ರಾಜ್ಯದ ಸರ್ವೋಚ್ಚ ಸ್ಥಾನಕ್ಕೆ ತಲುಪಿದ ಬಳಿಕ ತಾನು ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ಆ ಪಕ್ಷದಿಂದ ಹೊರನಡೆಯುವುದೇ ಆಶ್ಚರ್ಯ. ಅದರೊಂದಿಗೆ ಜೀವಮಾನವೀಡಿ ತಾನು ವಿರೋಧಿಸಿದವರನ್ನು ಅಪ್ಪಿಕೊಂಡು ಅವರನ್ನು ಕೊಂಡಾಡಿ ತಾನು ಹಿಂದೆ ಉಂಡಿದ್ದ ಮನೆಗೆ ಕಲ್ಲು ಬಿಸಾಡುವುದು ಇದೆಯಲ್ಲ, ಅದು ಪರಮ ಅಸಹ್ಯ.
ಶೆಟ್ಟರ್ ಅವರಿಗೆ ಕಾಂಗ್ರೆಸ್ ಮೋಸ ಮಾಡಿರಲಿಲ್ಲ!
ಒಂದು ವೇಳೆ ಜಾತ್ಯಾತೀತ ಜನತಾದಳದವರು ಕಾಂಗ್ರೆಸ್ಸಿಗೆ ಹೋದರೂ ಅದನ್ನು ಸ್ವಲ್ಪಮಟ್ಟಿಗೆ ಒಪ್ಪಬಹುದು. ಆದರೆ ಭಾರತೀಯ ಜನತಾ ಪಾರ್ಟಿಯಿಂದ ಏಕಾಏಕಿ ಕಾಂಗ್ರೆಸ್ಸಿಗೆ ಹೋಗಿ ಶಾಲು ಹಾಕಿಸಿಕೊಳ್ಳುವುದು ಇದೆಯಲ್ಲ, ಅದನ್ನು ಜಗದೀಶ್ ಶೆಟ್ಟರ್ ಅಂತವರು ಹೇಗೆ ಕಲ್ಪಿಸಿಕೊಂಡರು ಎನ್ನುವುದೇ ಪರಮ ಸೋಜಿಗ. ತಮಗೆ ವಿಧಾನಸಭೆಗೆ ಟಿಕೆಟ್ ಕೊಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ತಮ್ಮನ್ನು ಮುಖ್ಯಮಂತ್ರಿ ಮಾಡಿದ ಪಕ್ಷಕ್ಕೆ ದ್ರೋಹ ಬಗೆದು ಕಾಂಗ್ರೆಸ್ ಕಚೇರಿಯ ಮೆಟ್ಟಿಲು ತುಳಿಯುವುದಕ್ಕೆ ಅದೇಗೆ ಮನಸ್ಸು ಬಂತೋ ಎನ್ನುವುದನ್ನು ಅವರು, ಅವರ ಕುಟುಂಬದವರು, ಆತ್ಮೀಯರೇ ಹೇಳಬೇಕು. ಯಾಕೆಂದರೆ ಜಗದೀಶ್ ಶೆಟ್ಟರ್ ತಮ್ಮ ರಾಜಕೀಯ ಬದುಕನ್ನು ಭದ್ರಗೊಳಿಸಿದ್ದೇ ಕಾಂಗ್ರೆಸ್ಸನ್ನು ವಿರೋಧಿಸಿಕೊಂಡು ಎನ್ನುವುದನ್ನು ಹುಬ್ಬಳ್ಳಿ – ಧಾರವಾಡ ಕಲ್ಲು ಕಲ್ಲುಗಳು ಕೂಡ ಹೇಳುತ್ತವೆ. ನಂತರ ಕಾಂಗ್ರೆಸ್ಸಿಗೆ ಹೋದ ಶೆಟ್ಟರ್ ಅವರಿಗೆ ಕಾಂಗ್ರೆಸ್ಸಿಗರು ಮೋಸ ಮಾಡಲಿಲ್ಲ. ಶೆಟ್ಟರ್ ವಲಸೆ ಕಾಂಗ್ರೆಸ್ಸಿಗೆ ಸಹಜವಾಗಿ ಉತ್ತರ ಕರ್ನಾಟಕದ ಹಲವು ಕಡೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಲಾಭ ನೀಡಿದೆ. ಕಾಂಗ್ರೆಸ್ ವಿಧಾನಸಭೆಗೆ ಶೆಟ್ಟರ್ ಅವರಿಗೆ ಟಿಕೆಟ್ ನೀಡಿದರೂ ಶೆಟ್ಟರ್ ಗೆಲುವು ಸಾಧಿಸಲು ಆಗಲಿಲ್ಲ. ಆದರೆ ಕಾಂಗ್ರೆಸ್ಸಿಗರು ಅವರಿಗೆ ಅವಮಾನ ಆಗಲು ಬಿಡಲಿಲ್ಲ. ತಕ್ಷಣ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದರು.
9 ತಿಂಗಳು ಟೀಕೆ, ಈಗ ಅಪ್ಪುಗೆ!
ಅದರ ಬಳಿಕ ಆ ಋಣ ಜಗದೀಶ್ ಶೆಟ್ಟರ್ ಮೇಲೆ ಇತ್ತಲ್ಲ, ಅವರು ಬಿಜೆಪಿ ವಿರುದ್ಧವೇ ಮಾತನಾಡಲು ಶುರು ಮಾಡಿದರು. ಅವರು ಬಿಜೆಪಿ ವಿರುದ್ಧ ಮಾತನಾಡಿದ ವಿಷಯಗಳನ್ನೇ ದಿನಪತ್ರಿಕೆಯೊಂದು ಸಂಗ್ರಹಿಸಿ ಸ್ಟೋರಿ ಮಾಡಿದೆ. ಶೆಟ್ಟರ್ ಬಿಜೆಪಿ ವಿರುದ್ಧ ಟೀಕಿಸದ ವಿಷಯಗಳೇ ಇರಲಿಲ್ಲ. ಪಕ್ಷದ ಕಾರ್ಯಕರ್ತರ ವಿರುದ್ಧದ ಹೇಳಿಕೆಗಳನ್ನು ಸೇರಿಸಿ ಬಿಜೆಪಿಯ ಸಿದ್ಧಾಂತವನ್ನು ಒಳಗೊಂಡು ಅಯೋಧ್ಯೆಯ ರಾಮ ಮಂದಿರದ ತನಕವೂ ತಮ್ಮ ಅಸಮಾಧಾನ ಹೊರಹಾಕಿದರು. ಕೊನೆಗೆ ಈಗ ಎಲ್ಲವನ್ನು ಮರೆತವರಂತೆ ಮತ್ತೆ ಬಿಜೆಪಿ ಶಾಲನ್ನು ಹಾಕಿ ಮನೆಗೆ ಹಿಂತಿರುಗಿದ್ದೇನೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಈ ಉತ್ತರ ಕರ್ನಾಟಕದ ಕಡೆ ಪ್ರೋಫೆಶನಲ್ ನಾಟಕ ಮಂಡಳಿಗಳಲ್ಲಿ ಕಲಾವಿದರು ಬೇರೆ ಬೇರೆ ನಾಟಕಗಳನ್ನು ಮಾಡುತ್ತಾ ಅದೇ ಕಾಯಂ ಕಲಾವಿದರು ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಾ ಇರುತ್ತಾರೆ. ಅದನ್ನೇ ಆ ಭಾಗದ ಶೆಟ್ಟರ್ ಆಡಿದ್ದಾರೆ. ಈಗ ಕೇಳಿದರೆ ಬೆಂಬಲಿಗರ ಮಾತುಗಳನ್ನು ಕೇಳಿದೆ ಎನ್ನುತ್ತಿದ್ದಾರೆ. ಯಡ್ಡಿಜಿ ಕೈಹಿಡಿದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷಾಂತರ ಮಾಡಿ ಶೆಟ್ಟರ್ ಬಹುತೇಕ ಯಾವುದಾದರೂ ಕ್ಷೇತ್ರದಿಂದ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಆಗಲಿದ್ದಾರೆ. ಒಟ್ಟಿನಲ್ಲಿ ಸಿದ್ಧಾಂತ, ನಿಷ್ಟೆ, ಪಕ್ಷವೇ ತಾಯಿ, ಪಕ್ಷಕ್ಕಿಂತ ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ ಎನ್ನುವ ಶಬ್ದಗಳು ಕೇವಲ ಭಾಷಣಕ್ಕೆ ಮಾತ್ರ ಚೆಂದ ಅಲ್ವಾ ಶೆಟ್ಟರ್.
ಇನ್ನು ಪಕ್ಕಾ ಕಂಪೆನಿಯೊಂದರ ಸಿಇಒ ತರಹ ಆಡುತ್ತಿರುವ ನಿತೀಶು ಒಂದು ಕಂಪೆನಿಯ ಮಾಲು ಇಷ್ಟವಾಗಿಲ್ಲದಿದ್ದರೆ ಆ ಕಂಪೆನಿಯಿಂದ ಖರೀದಿ ನಿಲ್ಲಿಸಿ ಬೇರೆ ಕಂಪೆನಿಯೊಂದಿಗೆ ಡೀಲ್ ಕುದುರಿಸುವ ಪ್ರೋಫೆಶನಲ್ ಅಡ್ಮಿನಿಸ್ಟ್ರೇಟರ್ ತರಹ ವರ್ತಿಸುತ್ತಿದ್ದಾರೆ. ಆರ್ ಜೆಡಿ ಜೊತೆ ಸ್ವಲ್ಪ ದಿನ ನೆಂಟಸ್ತಿಕೆ, ಬಿಜೆಪಿ ಜೊತೆ ಕೆಲವು ದಿನ ಲವ್ ಮಾಡುತ್ತಾ ಬಿಹಾರದಲ್ಲಿ ಬೆಳಿಗ್ಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಂಜೆ ಮತ್ತೆ ಸಿಎಂ ಆಗುವ ಅವರ ರಾಜಕೀಯದಲ್ಲಿ ಸಿದ್ಧಾಂತವೂ ಇಲ್ಲ, ಉಪ್ಪು, ಖಾರವೂ ಇಲ್ಲ!!
Leave A Reply