ಕಾಂಗ್ರೆಸ್ ಸರಕಾರ ಪತನವಾಗುವುದೇ ಆದರೆ ಹೇಗೆ? ಇಲ್ಲಿದೆ ಒಂದೇ ದಾರಿ!
ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಿದ್ದು ಹೋಗುತ್ತದೆ ಎಂಬ ವಿಷಯ ಈಗ ರಾಜಕೀಯ ಪಡಸಾಲೆಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕರು ಈ ಬಗ್ಗೆ ಏನೂ ಹೇಳಲು ಹೋಗುತ್ತಿಲ್ಲವಾದರೂ ಬಿಜೆಪಿಯೊಂದಿಗೆ ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರ ನಡೆಸುತ್ತಿರುವ ಶಿವಸೇನೆಯ ಮುಖಂಡ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿಯೂ ಸರಕಾರ ಬದಲಾಗಲಿದೆ ಎಂದು ಘೋಷಿಸಿದ್ದಾರೆ.
ಅಷ್ಟು ಸುಲಭವಾಗಿ ಕಾಂಗ್ರೆಸ್ ಸರಕಾರ ಬೀಳುತ್ತಾ?
ಮೊದಲನೇಯದಾಗಿ ಕರ್ನಾಟಕಕ್ಕೂ, ಮಹಾರಾಷ್ಟ್ರ ರಾಜಕೀಯಕ್ಕೂ ಇರುವ ವ್ಯತ್ಯಾಸ ಏನು?
ಮಹಾರಾಷ್ಟ್ರದಲ್ಲಿ 2109 ರಲ್ಲಿ ಬಿಜೆಪಿ ಮತ್ತು ಶಿವಸೇನೆ ಜಂಟಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. ಆದರೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚೌಕಾಶಿಯಲ್ಲಿ ಫಲಿತಾಂಶದ ನಂತರ ಮೈತ್ರಿ ವಿಫಲವಾಯಿತು. ತಲಾ 2.5 ವರ್ಷ ಮೈತ್ರಿ ಮಾಡೋಣ ಮತ್ತು ಮೊದಲ ಅವಧಿ ತಮಗೆ ನೀಡಬೇಕು ಎಂದು ಉದ್ದವ್ ಠಾಕ್ರೆ ಹಟಕ್ಕೆ ಕುಳಿತ ಕಾರಣ ಸರಕಾರ ರಚನೆ ಆಗದೇ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂತು. ಈ ಹಂತದಲ್ಲಿ ಅಜಿತ್ ಪವಾರ್ ತಮ್ಮೊಂದಿಗೆ ಒಂದಿಷ್ಟು ಶಾಸಕರನ್ನು ಕರೆದುಕೊಂಡು ಬರುವುದಾಗಿ ಭರವಸೆ ನೀಡಿ ಹೊಸ ಮೈತ್ರಿ ಸರಕಾರದ ಅಸ್ತಿತ್ವಕ್ಕೆ ಕಾರಣರಾದರು. ಆದರೆ ಅದು ಕೂಡ ವಿಫಲವಾಯಿತು. ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದರಾದರೂ ಅದು ಬೆರಳೆಣಿಕೆಯ ದಿನಗಳಿಗೆ ಸೀಮಿತವಾಯಿತು. ಅದರ ನಂತರ ಹೊಸ ಮೈತ್ರಿ ಉದಯವಾಯಿತು. ಅದು ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಗಳ ಮೈತ್ರಿಯಿಂದ ರಚಿತವಾದ ಸರಕಾರ.
ಈ ಸರಕಾರ ಹೆಚ್ಚು ದಿನ ಬಾಳುವುದೇ ಸಂಶಯವಾಗಿತ್ತು. ಏಕೆಂದರೆ ಶಿವಸೇನೆಯ ಹಿಂದೂತ್ವದ ಸಿದ್ಧಾಂತ ಮತ್ತು ಕಾಂಗ್ರೆಸ್ಸಿನಿಂದ ಸಿಡಿದು ಬೇರ್ಪಟ್ಟ ಎನ್ ಸಿಪಿಯ ಸಿದ್ಧಾಂತದ ನಡುವೆ ಕಾಂಗ್ರೆಸ್ ತನ್ನ ಮೂಲ ಸಿದ್ಧಾಂತದ ಜೊತೆಗೆ ಮುಂದುವರೆಯುವುದೇ ಒಂದು ದೊಡ್ಡ ಆಶ್ಚರ್ಯದ ವಿಷಯವಾಗಿತ್ತು.
ಶಿವಸೇನೆಯ ಕೆಲವು ಶಾಸಕರು ಈ ಸಿದ್ಧಾಂತವಿಲ್ಲದ ಸರಕಾರದ ಭಾಗವಾಗಲು ಇಷ್ಟಪಡಲೇ ಇಲ್ಲ. ಅದರೊಂದಿಗೆ ಕೋವಿಡ್ ಅವಧಿಯಲ್ಲಿ ಉದ್ದವ್ ಠಾಕ್ರೆ ಸಿಎಂ ಆಗಿದ್ದರೂ ಏನೂ ಆಕ್ಟಿವ್ ಆಗಿಲ್ಲದೇ ಇದ್ದದ್ದು, ಎಲ್ಲವೂ ಸೇರಿ ಏಕನಾಥ್ ಶಿಂಧೆ ಅವರ ನಾಯಕತ್ವದಲ್ಲಿ ಬಂಡಾಯ ಏಳಲು ಶಿವಸೇನೆಯ ಶಾಸಕರು ತಯಾರಾಗಿದ್ದರು. ಅದರಿಂದ ಹೊಸ ಸರಕಾರ ರಚನೆಯಾಗಲು ಅದು ದಾರಿಯಾಯಿತು. ಅಜಿತ್ ಪವಾರ್ ಬಣ ಕೂಡ ಈ ಹೊಸ ಮೈತ್ರಿಯಲ್ಲಿ ಸೇರಿ ಈಗ ಮಹಾರಾಷ್ಟ್ರದಲ್ಲಿ ಸರಕಾರ ನಡೆಯುತ್ತಿದೆ.
ಆದರೆ ಕರ್ನಾಟಕದ ರಾಜಕೀಯ ಚಿತ್ರಣವೇ ಬೇರೆ ಇದೆ. ಇಲ್ಲಿ ಮೈತ್ರಿ ಸರಕಾರ ಅಸ್ತಿತ್ವದಲ್ಲಿ ಇಲ್ಲ. ಒಂದೇ ಪಕ್ಷದ ಸುಭದ್ರ ಸರಕಾರದ ಆಳ್ವಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಬಹುಮತಕ್ಕೆ ಬೇಕಾಗಿರುವುದು 113 ಶಾಸಕರು. ಕಾಂಗ್ರೆಸ್ ಬಳಿ 136 ಶಾಸಕರು ಇದ್ದಾರೆ. ಅಗತ್ಯಕ್ಕಿಂತ 23 ಶಾಸಕರು ಇದ್ದಾರೆ. ಇನ್ನು ಒಳಗೊಳಗೆ ಅನುದಾನದ ಕೊರತೆ, ಮಂತ್ರಿಗಿರಿ ಸಿಕ್ಕಿಲ್ಲ, ಸಿಎಂ ಬದಲಾವಣೆ ತರಹದ ಬೇಗುದಿ ಇದೆಯಾದರೂ ಅಲ್ಲಿ ಈ ಬಾರಿ ಅದು ಒಗ್ಗೂಡಿದಂತೆ ಕಾಣುತ್ತಿಲ್ಲ. ಕಳೆದ ಬಾರಿ ಆಪರೇಶನ್ ಕಮಲದಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹೋಗಿದ್ದ ಕೆಲವರು ಈ ಬಾರಿ ಗೆದ್ದಿಲ್ಲ. ಗೆದ್ದಿರುವ ಇಬ್ಬರು ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ.
ಇನ್ನು ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ 15 ಸ್ಥಾನಗಳಿಗಿಂತ ಕಡಿಮೆ ಗೆದ್ದರೆ ಸಿದ್ಧರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗಿಳಿದು ಡಿಕೆಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಾಗಬಹುದಾ? ಒಂದು ವೇಳೆ ಹಾಗೆ ಆದರೆ ಸರಕಾರ ಹೇಗೆ ಬೀಳುತ್ತದೆ ಎನ್ನುವುದನ್ನು ನೋಡೋಣ. ಡಿಕೆಶಿ ಸಿಎಂ ಆಗುವುದು ಸಿದ್ಧರಾಮಯ್ಯ ಬಣದ ಶಾಸಕರಿಗೆ ಇಷ್ಟವಿಲ್ಲ. ಪಕ್ಷದ ಒಳಗೆ ಆಂತರಿಕವಾಗಿ ವೋಟಿಂಗ್ ಆದರೆ ಡಿಕೆಶಿ ಹೆಸರಲ್ಲಿ ಬಹುಮತ ಬರುವ ಸಾಧ್ಯತೆ ಇಲ್ಲ. ಇಷ್ಟಿದ್ದೂ ಶಾಸಕರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಂಡು ಡಿಕೆಶಿಯವರನ್ನೇ ಸಿಎಂ ಮಾಡಿದರೆ ಆಗ ಸಿದ್ದು ಬಣದ ಶಾಸಕರು ಸತೀಶ್ ಜಾರಕಿಹೊಳಿ ನಾಯಕತ್ವದಲ್ಲಿ ಒಂದಾಗಬಹುದು. ಆಗ ಅಲ್ಲಿ 30 ಶಾಸಕರು ಒಗ್ಗಟ್ಟಾದರೆ ಆಗ ಒಂದು ಚಾನ್ಸ್ ಇರುತ್ತದೆ. ಆದರೆ ಸತೀಶ್ ಜಾರಕಿಹೊಳಿ ಆ ಜವಾಬ್ದಾರಿ ತೆಗೆದುಕೊಳ್ಳುತ್ತಾರಾ? ಮೇಲ್ನೋಟಕ್ಕೆ ಅಷ್ಟು ಸುಲಭ ಅಲ್ಲ ಎಂದು ಅನಿಸಿದರೂ ರಾಜಕೀಯದಲ್ಲಿ ಏನೂ ಆಗಬಹುದು ಎನ್ನುವುದು ಸದ್ಯದ ಬಿಜೆಪಿ ಕಾರ್ಯಕರ್ತರ ಅನಿಸಿಕೆ.
Leave A Reply