ದಕ್ಷಿಣ ಕನ್ನಡದಲ್ಲಿ ವಿವಾದ ಸೃಷ್ಟಿಸಲಿದೆಯಾ ಸರಕಾರದ ಹೊಸ ಸುತ್ತೋಲೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶೋತ್ಸವ, ಕೃಷ್ಣಾಷ್ಟಮಿಗೆ ವಿಶೇಷವಾದ ಮಹತ್ವವಿದೆ. ಅನೇಕ ಸಂಘ, ಸಂಸ್ಥೆಗಳು, ಯುವಕ ಮಂಡಲಗಳು ಸಂಭ್ರಮ, ಸಡಗರದಿಂದ ಇದನ್ನು ಎಷ್ಟೋ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿವೆ. ಕೆಲವು ಕಡೆ ಒಂದು ದಿನ ಕಾರ್ಯಕ್ರಮ ಇದ್ದರೆ, ಕೆಲವು ಏಳು ದಿನವೂ ಇಟ್ಟು ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸಿ ಸಂಭ್ರಮಿಸಲಾಗುತ್ತದೆ. ಅನೇಕ ಕಡೆ ಸಂಘಟನೆಗಳಿಗೆ ಈ ಗಣೇಶೋತ್ಸವ, ಅಷ್ಟಮಿ ಆಚರಣೆಗೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸ್ಥಳಾವಕಾಶದ ಅಡಚಣೆ ಇರುವುದರಿಂದ ಆಗ ಸಮೀಪದ ಶಾಲೆಗಳಲ್ಲಿ ಇದನ್ನು ನಡೆಸಿಕೊಂಡು ಬರಲಾಗುತ್ತದೆ.
ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರು ಶಾಲಾ ಮೈದಾನ, ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ- ಉದ್ದೇಶಗಳಿಗೆ ಬಳಸಬಾರದು ಎಂದು ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಪ್ರಸ್ತಾಪನೆಗಳನ್ನು ಸಲ್ಲಿಸಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. ಇದು ಸಹಜವಾಗಿ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಡಿಡಿಪಿಐ ಸುತ್ತೋಲೆಯಲ್ಲಿ ಏನಿದೆ?
ಶೈಕ್ಷಣಿಕವಾದ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಥರೇ ಹೊಣೆಗಾರರಾಗುತ್ತಾರೆ ಎಂದು ದಕ್ಷಿಣ ಕನ್ನಡ ಡಿಡಿಪಿಐ ಹೇಳಿರುವುದರಿಂದ ಶಾಲಾ ಮುಖ್ಯಸ್ಥರು ಅನುಮತಿ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಗ್ರಾಮದ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ನಡೆಸಿಕೊಂಡು ಬರುತ್ತಿರುವ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ಎಲ್ಲಿ ನಡೆಸುವುದು ಎನ್ನುವ ಪ್ರಶ್ನೆ ಮೂಡಿದೆ.
ಈ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡದ ಶಾಸಕರು ಧ್ವನಿ ಎತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಈಗ ಏಕಾಏಕಿ ಇಂತಹ ನಿಯಮಗಳ ಮೂಲಕ ಮುರಿಯಲು ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ಹಿಂದೂ ಮುಖಂಡರು ಹೇಳಿದ್ದಾರೆ.
ಸದ್ಯ ಸುತ್ತೋಲೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದು ರಾಜಕೀಯ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ.
Leave A Reply