ಖಾಸಗಿ ಆಸ್ಪತ್ರೆಯ ಯಡವಟ್ಟು: ತನಿಖೆಗೆ ಆದೇಶ
ಪುಟ್ಟ ಕಂದಮ್ಮಳ ಜೀವಕ್ಕೆ ಸಂಚಕಾರ ತರುವಂತಹ ತಪ್ಪು ವರದಿ ನೀಡಿ ಪೋಷಕರ ಆತಂಕಕ್ಕೆ ಕಾರಣವಾಗಿದ್ದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯ ವಿರುದ್ಧ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಸುರತ್ಕಲ್ ಸಸಿಹಿತ್ಲುವಿನ ರಾಮ ಸಾಲ್ಯಾನ್ ಎಂಬ ವ್ಯಕ್ತಿ ತಮ್ಮ 4 ತಿಂಗಳ ಪುಟ್ಟ ಮಗುವಿಗೆ ಚುಚ್ಚುಮದ್ದು ನೀಡಿಸಲೆಂದು ಪತ್ನಿ ಸಮೇತ ಮಂಗಳೂರಿನ ಹೊರವಲಯದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಥೈರಾಯಿಡ್ ಲಕ್ಷಣಗಳ ಪರಿಶೀಲನೆಗೆ ಲ್ಯಾಬ್ ಗೆ ಬರೆದುಕೊಟ್ಟಿದ್ದರು. ಪರೀಕ್ಷೆ ನಡೆಸಿದ ಲ್ಯಾಬ್ ಸಿಬ್ಬಂದಿಗಳು ಮಗುವಿಗೆ ಥೈರಾಯಿಡ್ ಸಮಸ್ಯೆ ಇರುವುದಾಗಿ ವರದಿ ನೀಡಿದ್ದು, ವೈದ್ಯರು ಅದಕ್ಕೆ ಮೂರು ತಿಂಗಳುಗಳ ಕಾಲ ನಿರಂತರವಾಗಿ ಔಷಧಿ ನೀಡಬೇಕೆಂದು ಬರೆದುಕೊಟ್ಟಿದ್ದರು.!!
ಇದರಿಂದಾಗಿ ಮಗುವಿನ ಆರೋಗ್ಯದ ಬಗ್ಗೆ ಆತಂಕಕ್ಕೀಡಾದ ಪೋಷಕರು ಮನೆಗೆ ಬಂದು ನೆರೆಹೊರೆಯವರಲ್ಲಿ ನೋವು ತೋಡಿಕೊಂಡಾಗ ಅದರಲ್ಲೊಬ್ಬರು “ಆ ಆಸ್ಪತ್ರೆಯ ವರದಿಗಳು ಅನೇಕ ಬಾರಿ ತಪ್ಪು ತಪ್ಪಾಗಿರುತ್ತವೆ. ಈ ಬಗ್ಗೆ ತಮಗೂ ಅನೇಕ ಬಾರಿ ಅನುಭವವಾಗಿದೆ ಎಂದು ಹೇಳಿದ ಕಾರಣ, ಮರುದಿನ ಮಗುವಿನ ಪೋಷಕರು ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ದು ಮತ್ತೆ ಥೈರಾಯಿಡ್ ಟೆಸ್ಟ್ ಮಾಡಿಸಿದ್ದಾರೆ.
ಆಗ ಅಲ್ಲಿನ ಲ್ಯಾಬ್ ವರದಿಗಳು ಮಗುವಿನ ಥೈರಾಯಿಡ್ ನಾರ್ಮಲ್ ಆಗಿದೆ ಎಂದು ವರದಿ ನೀಡಲಾಗಿ, ಮಗುವಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ವೈದ್ಯರು ಖಚಿತಪಡಿಸಿರುತ್ತಾರೆ.
ಈ ಬಗ್ಗೆ ಮಗುವಿನ ಪೋಷಕರು ಮತ್ತೆ ನೇರವಾಗಿ ಎಜೆ ಆಸ್ಪತ್ರೆಯಿಂದ ಮೊದಲು ತೆರಳಿದ್ದ ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಅಲ್ಲಿನ ವೈದ್ಯ “ಇದು ನನ್ನ ತಪ್ಪಲ್ಲ ಲ್ಯಾಬ್ ಸಿಬ್ಬಂದಿಯ ತಪ್ಪು” ಎಂದಿದ್ದು, ಲ್ಯಾಬ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ “ಇದು ನನ್ನ ತಪ್ಪಲ್ಲ ಥೈರಾಯಿಡ್ ಪರೀಕ್ಷಿಸುವ ಸಾಧನದ ತಪ್ಪು” ಎಂದು ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಪೋಷಕರು ಎಲ್ಲಾ ವೈದ್ಯಕೀಯ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಾಗ ಹೆದರಿದ ಆಸ್ಪತ್ರೆಯವರು ವಿಷಯವನ್ನು ಇಲ್ಲಿಯೇ ಸರಿಪಡಿಸಿ ಬಿಡೋಣ, ದಯವಿಟ್ಟು ಹೊರಗಡೆ ತಿಳಿಸಬೇಡಿ ಎಂದು ಮನವಿ ಮಾಡಿ ಮತ್ತೊಮ್ಮೆ ಮಗುವಿನ ರಕ್ತದ ಮಾದರಿಯನ್ನು ಸಂಗ್ರಹಿಸಿ ಥೈರಾಯಿಡ್ ಪರೀಕ್ಷೆ ನಡೆಸಿ ಎಲ್ಲವೂ ಸಹಜ ಸ್ಥಿತಿಯಲ್ಲೇ ಇರುವುದಾಗಿ ವರದಿ ನೀಡಿ ಕೈ ತೊಳೆದುಕೊಂಡಿದ್ದಾರೆ.
ಈ ಬಗ್ಗೆ ಮಗುವಿನ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪು ವರದಿ ನೀಡಿ ಮಗುವಿನ ಜೀವಕ್ಕೆ ಸಂಚಕಾರ ತರಲಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಖಾಸಗಿ ಆಸ್ಪತ್ರೆ ವಿರುದ್ಧ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಕ್ತ ತನಿಖೆಗೆ ಆದೇಶಿಸಿದ್ದಾರೆ.
Leave A Reply