ಬಿಜೆಪಿ ವಿರುದ್ಧ 40% ಆರೋಪ ಮಾಡಿದ್ದ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಇನ್ನಿಲ್ಲ!
ಭಾರತೀಯ ಜನತಾ ಪಾರ್ಟಿಯ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಸಚಿವರು, ಶಾಸಕರು 40% ಕಮೀಷನ್ ಕೇಳ್ತಾರೆ ಎಂದು ಆರೋಪ ಮಾಡಿ ನಿರಂತರವಾಗಿ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದ ಡಿ ಕೆಂಪಣ್ಣ ಇಹಲೋಕ ತ್ಯಜಿಸಿದ್ದಾರೆ. ಕೆಂಪಣ್ಣ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದರು. ಕೆಂಪಣ್ಣ ಅವರು ಇಡೀ ರಾಜ್ಯ ಸರಕಾರವನ್ನೇ ಎದುರು ಹಾಕಿಕೊಂಡು ಹೋರಾಟ ನಡೆಸಿದ್ದರು. ಆದರೆ ಅವರ ಹೋರಾಟದಿಂದ ಸತ್ಯ ಹೊರಗೆ ಬಂತೋ ಇಲ್ವೋ ಅಂತಿಮವಾಗಿ ಜನರ ಮನಸ್ಸಿನಲ್ಲಿ ಸರಕಾರದ ವಿರುದ್ಧ ನಕರಾತ್ಮಕ ವಿಷಯ ಗಟ್ಟಿಯಾಗಿ ಬಿಜೆಪಿ ನಂತರದ ಚುನಾವಣೆಯಲ್ಲಿ ಸೋಲು ಕಾಣುವಂತಾಯಿತು. ಕೆಂಪಣ್ಣನವರ ಆರೋಪವನ್ನು ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ 2023 ರ ಚುನಾವಣೆಯಲ್ಲಿ ಅಭೂತಪೂರ್ವ ರೀತಿಯಲ್ಲಿ ಅಧಿಕಾರಕ್ಕೆ ಬಂದು ಈಗ ಒಂದೂಕಾಲು ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದಿದೆ.
ಈಗಲೂ ರಾಜ್ಯದ ಗುತ್ತಿಗೆದಾರರು ಆಗಾಗ ಹಣ ಬಿಡುಗಡೆಗಾಗಿ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆವತ್ತು ಕೆಂಪಣ್ಣನವರು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದರು. ಕೆಂಪಣ್ಣನವರ ಹೇಳಿಕೆಗಳು, ಧೈರ್ಯ ಮತ್ತು ಹೋರಾಟದ ಕಿಚ್ಚನ್ನು ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಅದನ್ನು ಸಮರ್ಪಕವಾಗಿ ಬಳಸಿತ್ತು. ಆಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಪೇ ಸಿಎಂ ಅಭಿಯಾನವನ್ನು ಕೂಡ ನಡೆಸಿದ ಕಾಂಗ್ರೆಸ್ಸಿಗರಿಗೆ ಅದು ಹೆಚ್ಚಿನ ಲಾಭವನ್ನು ತಂದುಕೊಟ್ಟಿತ್ತು. ಕೆಂಪಣ್ಣನವರು ತಮ್ಮ 83 ನೇ ವಯಸ್ಸಿನಲ್ಲಿ ಬೆಂಗಳೂರಿನ ತಮ್ಮ ನಿವಾಸದಿಂದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Leave A Reply