ಕೇಜ್ರಿವಾಲ್ ಕುಳಿತಿದ್ದ ಚೇರಿನಲ್ಲಿ ಕುಳಿತುಕೊಳ್ಳಲು ಒಪ್ಪದ ಆತಿಶಿ!
ದೆಹಲಿ ರಾಜ್ಯದ ವಿಧಾನಸಭಾ ಚುನಾವಣೆಗೆ ಇನ್ನು ನಾಲ್ಕು ತಿಂಗಳು ಬಾಕಿ ಇರುವಾಗ ನೂತನ ಮುಖ್ಯಮಂತ್ರಿಯಾಗಿ ನೇಮಕವಾಗಿರುವ ಆತಿಶಿ ಮಾರ್ಲೆನಾ ಸಿಂಗ್ ಅವರು ಹೊಸ ವರಸೆಯೊಂದನ್ನು ಆರಂಭಿಸಿದ್ದಾರೆ. ತಾವು ಅರವಿಂದ್ ಕೇಜ್ರಿವಾಲ್ ಸಿಎಂ ಆಗಿದ್ದಾಗ ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ. ಅಷ್ಟಕ್ಕೂ ಆತಿಶಿ ಯಾಕೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದರೆ ಅಲ್ಲಿ ಅವರಿಗೆ ಕೇಜ್ರಿವಾಲ್ ಅವರ ಮೇಲಿರುವ ಭಕ್ತಿಯೇ ಮುಖ್ಯವಾಗಿ ಕಾಣಿಸುತ್ತಿದೆ. ಆತಿಶಿ ಕೇಜ್ರಿವಾಲ್ ಅವರನ್ನು ಭಗವಂತ ಶ್ರೀರಾಮನಿಗೆ ಹೋಲಿಸಿದರೆ ತಮ್ಮನ್ನು ತಾವು ಭರತನಿಗೆ ಹೋಲಿಸಿದ್ದಾರೆ. ರಾಮ ವನವಾಸಕ್ಕೆ ಹೋಗುವಾಗ ಭರತ ರಾಮನ ಸಿಂಹಾಸನದಲ್ಲಿ ಕುಳಿತುಕೊಳ್ಳದೇ, ರಾಮ ವನವಾಸ ಮುಗಿಸಿ ಬಂದ ಬಳಿಕ ಅದನ್ನು ಹಾಗೇ ಬಿಟ್ಟುಕೊಟ್ಟಂತೆ ತಾನು ಹಾಗೇ ನಡೆದುಕೊಳ್ಳುವುದಾಗಿ ಆತಿಶಿ ತಿಳಿಸಿದ್ದಾರೆ. ಖಾಲಿ ಕುರ್ಚಿಯನ್ನು ಹಾಗೆಯೇ ಬಿಟ್ಟುಕೊಡುವ ಉದ್ದೇಶ ಆ ಕುರ್ಚಿಯ ಮೇಲೆ ಶೀಘ್ರದಲ್ಲಿ ಸಿಎಂ ಆಗಿ ಅರವಿಂದ ಕೇಜ್ರಿವಾಲ್ ಕುಳಿತುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಆತಿಶಿ ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರನ್ನು ರಾಮನಿಗೆ ಹೋಲಿಸಿದ್ದಕ್ಕೆ ಭಾರತೀಯ ಜನತಾ ಪಾರ್ಟಿ ತೀವ್ರ ಆಕ್ಷೇಪ ಎತ್ತಿದೆ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರನ್ನು ರಾಮನಿಗೆ ಹೋಲಿಸಿರುವುದನ್ನು ಖಂಡಿಸಿದೆ. ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳದಿರುವುದು ರಾಜಕೀಯ ಸ್ಟಂಟ್ ಎಂದು ಬಿಜೆಪಿ ಮುಖಂಡರು ಬಣ್ಣಿಸಿದ್ದಾರೆ. ಇಂತಹ ನಾಟಕವನ್ನು ದೆಹಲಿಯ ಜನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಆದರೆ ಆತಿಶಿ ಮಾತ್ರ ಯಾವ ರೀತಿಯಲ್ಲಿ ಪ್ರಚಾರದಲ್ಲಿ ಸದಾ ಇರಬೇಕೆಂದು ನಿರ್ಧರಿಸಿದಂತೆ ಕಾಣುತ್ತದೆ.
Leave A Reply