4 ವರ್ಷದ ಮಗನಿಗೆ ಪತ್ರ ಬರೆದು 2038 ರಲ್ಲಿ ತೆರೆಯಲು ಹೇಳಿ ತಂದೆ ಆತ್ಮಹತ್ಯೆ!
ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದ ಅತುಲ್ ಸುಭಾಷ್ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಾಕಿ ಇರುವ ಎಲ್ಲಾ ಕಾರ್ಯಗಳನ್ನು ವ್ಯವಸ್ಥಿತವಾಗಿ ಮಾಡಿ ಮುಗಿಸಿ ನಂತರ ಬದುಕನ್ನು ಅಂತ್ಯಗೊಳಿಸಿರುವುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಅದರಲ್ಲಿ ಬಹಳ ಭಾವನಾತ್ಮಕವಾಗಿರುವ ಸಂಗತಿ ಏನೆಂದರೆ ಆತ ತನ್ನ ಮಗನಿಗಾಗಿ ಒಂದು ಕವರ್ ತೆಗೆದಿಟ್ಟು ಅದನ್ನು 2038 ರಲ್ಲಿ ತೆರೆಯುವಂತೆ ಬರೆದಿದ್ದಾರೆ. ಅವರ ಮಗನಿಗೆ ಈಗ ವಯಸ್ಸು ನಾಲ್ಕು ವರ್ಷ. 2038 ರಲ್ಲಿ 18 ವರ್ಷ ತುಂಬುತ್ತದೆ. ಆಗ ಮಗ ಪ್ರಾಪ್ತ ವಯಸ್ಸಿಗೆ ಬರಲಿದ್ದಾನೆ. ಆಗ ಮಗ ತೆರೆಯಲಿ ಮತ್ತು ಅದರಲ್ಲಿರುವ ಸಂಗತಿ ಅರಿಯಲಿ ಎಂದು ಹೇಳಿರುವುದು ಕುತೂಹಲಕಾರಿ ಸಂಗತಿಯಾಗಿದೆ.
ತಾನು ತನ್ನ ಪತ್ನಿ ಹಾಗೂ ಆಕೆಯ ಹೆತ್ತವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಪ್ರಾಣ ತ್ಯಜಿಸುತ್ತಿದ್ದೇನೆ ಎಂದು 26 ಪುಟಗಳ ಪತ್ರ ಬರೆದಿರುವ ಅತುಲ್ ಸುಭಾಷ್ ಕೌಟುಂಬಿಕ ನ್ಯಾಯಾಲಯದಲ್ಲಿಯೂ ತನಗೆ ನ್ಯಾಯ ಸಿಗುವ ಲಕ್ಷಣ ಕಾಣಲಿಲ್ಲ. ಒಂದು ವೇಳೆ ತನ್ನ ಸಾವಿನ ಬಳಿಕವೂ ತನಗೆ ಹಿಂಸೆ ನೀಡಿದವರಿಗೆ ಶಿಕ್ಷೆ ಆಗದಿದ್ದರೆ ತನ್ನ ಅಸ್ಥಿಯನ್ನು ದಯವಿಟ್ಟು ನ್ಯಾಯಾಲಯದ ಮುಂದಿರುವ ಚರಂಡಿಯಲ್ಲಿ ಸುರಿಯಿರಿ. ಒಂದು ವೇಳೆ ನ್ಯಾಯ ಸಿಕ್ಕಿದರೆ ಮಾತ್ರ ಗಂಗಾನದಿಯಲ್ಲಿ ಹಾಕಿರಿ ಎಂದು ಹೇಳಿರುವುದು ಆತ ಯಾವ ಮಟ್ಟದಲ್ಲಿ ಮಾನಸಿಕ ಕ್ಷೊಭೆಗೆ ಒಳಗಾಗಿದ್ದ ಎನ್ನುವುದನ್ನು ತಿಳಿಸುತ್ತದೆ. ಉತ್ತರ ಪ್ರದೇಶದ ಜಾನ್ ಪುರದ ನ್ಯಾಯಾಲಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 120 ಸಲ ಹಾಜರಾಗಬೇಕಾದ ಬಂದಿದ್ದು, ಬೆಂಗಳೂರಿನಿಂದ ಹೋಗಿ ಬರಲು ಆಗುತ್ತಿದ್ದ ಸಮಯ ಮತ್ತು ಶ್ರಮದ ಬಗ್ಗೆ ಆತ ಸಾವಿನ ಮೊದಲು ಹೇಳಿಕೊಂಡಿದ್ದಾನೆ.
ಅತುಲ್ ಸುಭಾಷ್ ಗೆ ಇದ್ದ ತಿಂಗಳ ಸಂಬಳ 88000. ಅದರಲ್ಲಿ ತಿಂಗಳಿಗೆ ಮಗುವನ್ನು ನೋಡಿಕೊಳ್ಳಲು ಪತ್ನಿಗೆ ನೀಡಬೇಕಾಗಿದ್ದ ಮೊತ್ತ 40000. ಇದರಿಂದ ಉಳಿಯುತ್ತಿದ್ದ ಹಣ 44000. ಅದರಲ್ಲಿ ಅವನು ಬೆಂಗಳೂರಿನ ಬಾಡಿಗೆ ಮನೆ, ತನ್ನ ನಿತ್ಯ ಖರ್ಚು ಎಲ್ಲವನ್ನು ಸರಿದೂಗಿಸಿ ಉತ್ತರ ಪ್ರದೇಶಕ್ಕೆ ಹೋಗಿ ನ್ಯಾಯಾಲಯಕ್ಕೆ ಹಾಜರಾಗಿ ಬರುವ ಖರ್ಚು, ವಕೀಲರ ಫೀಸ್ ಎಲ್ಲವನ್ನು ಭರಿಸಬೇಕಿತ್ತು.
ಪತ್ನಿ ಇತನ ಮೇಲೆ ವರದಕ್ಷಿಣೆ ಪೀಡನೆ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಸಹಿತ ಹಲವು ಆರೋಪಗಳನ್ನು ಮಾಡಿದ್ದಳು. ಅದನ್ನು ಸೆಟಲ್ ಮೆಂಟ್ ಗಾಗಿ ಮೂರು ಕೋಟಿಯ ಡಿಮ್ಯಾಂಡ್ ಮಾಡಿದ್ದಳು ಎನ್ನಲಾಗಿದೆ. ಇನ್ನು 40 ಸಾವಿರ ಸಾಕಾಗುವುದಿಲ್ಲ. 2 ಲಕ್ಷ ರೂಪಾಯಿ ಹಣ ಒತ್ತಾಯ ಮಾಡಿದ್ದಳು ಎಂದು ಆರೋಪಿಸಲಾಗಿದೆ. ಇದರಿಂದ ಎಲ್ಲಾ ನೊಂದಿರುವ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
Leave A Reply