ವೈನ್ ಶಾಪಿಗೆ ನುಗ್ಗಿದ ಕಳ್ಳ ಬಿಟ್ಟಿ ಕುಡಿದು ಮಾಡಿದ್ದೇನು?
ಅವನು ಕಳ್ಳ. ತೆಲಂಗಾಣ ರಾಜ್ಯದ ಮೇದಕ ಜಿಲ್ಲೆಯಲ್ಲಿ ಕಳ್ಳತನಕ್ಕೆ ಇಳಿದಿದ್ದ. ಅಲ್ಲಿ ಆವತ್ತು ಕಳ್ಳತನ ಮಾಡಲು ಅವನು ಆಯ್ಕೆ ಮಾಡಿದ್ದು ವೈನ್ ಶಾಪ್ ಅನ್ನು. ವೈನ್ ಶಾಪ್ ಹೆಸರು ಕನಕದುರ್ಗಾ. ಬಹಳ ಕಷ್ಟಪಟ್ಟು ಅಂಗಡಿಯ ನೆತ್ತಿಯ ಮಾರ್ಬಲ್ ಗಳನ್ನು ಕಳಚಿ ಬಹಳ ಜಾಗರೂಕನಾಗಿ ಅಂಗಡಿಯೊಳಗೆ ಇಳಿದ. ಇಳಿಯುವಾಗ ಮುಖಕ್ಕೆ ಒಂದಿಷ್ಟು ಪರಚಿದ ಗಾಯಗಳಾದವು. ಆದರೆ ಹೇಗೋ ಕೆಳಗೆ ಇಳಿದುಬಿಟ್ಟ, ನಂತರ ಅಂಗಡಿಯೊಳಗಿದ್ದ ಸಿಸಿಟಿವಿಗಳನ್ನು ಆಫ್ ಮಾಡಿಬಿಟ್ಟ. ಇನ್ನು ಏನೂ ಸಮಸ್ಯೆ ಇಲ್ಲ. ಸೀದಾ ಕಳ್ಳತನ ಮಾಡೋದು ಮತ್ತು ಎಸ್ಕೇಪ್ ಆಗೋದು ಎಂದು ನಿರ್ಧರಿಸಿಬಿಟ್ಟ.
ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನು ಬ್ಯಾಗಿಗೆ ತುಂಬಿಸಿಕೊಂಡ. ಇನ್ನೇನೂ ಹಿಂದಿರುಗಬೇಕು. ಅಲ್ಲಿದ್ದ ತರಹೇವಾರಿ ಮದ್ಯದ ಬಾಟಲುಗಳನ್ನು ನೋಡಿ ಆಸೆಗೆ ಬಿದ್ದುಬಿಟ್ಟ. ಎಲ್ಲವನ್ನು ತೆಗೆದುಕೊಂಡು ಹೋಗಲು ಕಷ್ಟಸಾಧ್ಯ. ಆದ್ದರಿಂದ ಪ್ರತಿಯೊಂದರ ಒಂದಿಷ್ಟು ರುಚಿ ನೋಡಿಬಿಡಲೇ ಎನ್ನುವ ಬಯಕೆ ಚಿಗುರು ಒಡೆದಿತು. ಸ್ವಲ್ಪ ಸ್ವಲ್ಪ ಎಲ್ಲ ಬಾಟಲಿಗಳಲ್ಲಿದ್ದ ಮದ್ಯಗಳನ್ನು ಬಾಯಿಗೆ ಹಾಕುತ್ತಾ ಬಂದ. ಬಯಕೆ ಈಡೇರಿಲ್ಲ. ಇನ್ನು ಚೂರು ಚೂರು ಎಂದು ಕುಡಿಯುತ್ತಾ ಹೋದವನಿಗೆ ಯಾವಾಗ ಲಿಮಿಟ್ ತಪ್ಪಿತ್ತೋ ಗೊತ್ತಿಲ್ಲ. ಅಲ್ಲಿಯೇ ಟೈ ಆಗಿ ಬಿದ್ದುಬಿಟ್ಟಿದ್ದಾನೆ.
ಬಿದ್ದವನಿಗೆ ಲೋಕ ಇಲ್ಲ. ಬೆಳಿಗ್ಗೆ ಅಂಗಡಿಯ ಸಿಬ್ಬಂದಿಗಳು ಹತ್ತು ಗಂಟೆಗೆ ಅಂಗಡಿ ತೆರೆದು ನೋಡಿದರೆ ಒಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಅವನ ಸುತ್ತಲೂ ಹಣದ ನೋಟುಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿವೆ. ಡ್ರಾವರ್ ನಲ್ಲಿರುವ ಹಣ ಇರಬೇಕಾದ ಕಡೆ ಇಲ್ಲ. ವಾತಾವರಣ ನೋಡಿದಾಗ ಸಂಶಯವೇ ಇಲ್ಲ, ಕಳ್ಳ ಕುಡಿದು ಮೂರ್ಚೆ ಬಿದ್ದಿದ್ದಾನೆ.
ನಂತರ ಪೊಲೀಸರು ಅವನನ್ನು ಎತ್ತಾಕಿಕೊಂಡು ಆಸ್ಪತ್ರೆಗೆ ಸೇರಿಸಿ ಅವನು ಪ್ರಜ್ಞೆಗೆ ಮರಳುವುದನ್ನು ಕಾಯುತ್ತಿದ್ದಾರೆ. ಆದರೆ ಅವನು ಯಾವ ಊರಿನ ಕಳ್ಳ, ಹೆಸರೇನು, ಹಿನ್ನಲೆ ಏನು ಎಂದು ಗೊತ್ತಾಗಲು ಅವನಿಗೆ ಪ್ರಜ್ಞೆ ಬರಬೇಕು.
Leave A Reply